ಕುಶಾಲನಗರ(ಆರ್ ಹೆಚ್) : ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕೊಡಗು ಅರಣ್ಯ ವೃತ್ತದ ವತಿಯಿಂದ ವನ್ಯಜೀವಿ ವಿಭಾಗ ಹಾಗೂ ವಿವಿಧ ಅರಣ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಸುಸ್ಥಿರ ಸಹಬಾಳ್ವೆಗಾಗಿ ಅರಣ್ಯಗಳು ಎಂಬ ಧ್ಯೇಯದೊಂದಿಗೆ ಬುಧವಾರ ಇಲ್ಲಿನ ಕಾವೇರಿ ನಿಸರ್ಗಧಾಮದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಮಾರಿ ಬಿಂದುಮಣಿ ಮಾತನಾಡಿ, ಆನೆಗಳ ಆವಾಸ ಸ್ಥಾನಗಳ ರಕ್ಷಣೆ, ಮಾನವ ಮತ್ತು ಆನೆ ಸಂಘರ್ಷ ನಿಯಂತ್ರಿಸುವುದು ಮತ್ತು ನಾಗರಿಕರು ಹಾಗೂ ಆನೆಗಳ ನಡುವೆ ಸೌಹಾರ್ದಯುತ ಸಹಬಾಳ್ವೆಯನ್ನು ಉತ್ತೇಜಿಸುವು ಇಂದಿನ ದಿನಗಳಲ್ಲಿ ತುಂಬ ಅಗತ್ಯವಾಗಿದೆ ಎಂದರು.

ಆನೆ ದಿನಾಚರಣೆಗೆ ಆಗಮಿಸಿದ್ದು ತುಂಬ ಸಂತೋಷವಾಗಿದೆ. ಅರಣ್ಯ ಇಲಾಖೆಯೊಂದಿಗೆ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿದೆ. ಆನೆ ಹಾಗೂ ಮಾನವ ಪ್ರಾಣ ಹಾನಿಯಾಗದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಆನೆ ಚಲನವಲನದ ಮೇಲೆ ಅರಣ್ಯ ಇಲಾಖೆ ಕಣ್ಗಾವಲು ಇಟ್ಟಿರುತ್ತದೆ. ಜೊತೆಗೆ ಸಾರ್ವಜನಿಕರು ಕೂಡ ಮಾಹಿತಿ ನೀಡುವ ಮೂಲಕ ಅನಾಹುತಗಳನ್ನು ತಪ್ಪಿಸಲು ಸಹಕಾರ ನೀಡಬೇಕು ಎಂದರು.
ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಆನೆ ಹಾಗೂ ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆಯ ಜತೆಗೆ ಸಮುದಾಯದ ಸಹಭಾಗಿತ್ವ ಅಗತ್ಯ.ಆನೆಗಳು ಕೇವಲ ಅರಣ್ಯ ಇಲಾಖೆಗೆ ಸೇರಿದ್ದಲ್ಲ. ಆನೆಗಳು ಎಲ್ಲಾ ಜನರಿಗೆ ಸೇರಿದ್ದು, ಇವುಗಳು ಈ ಪ್ರಕೃತಿಯೊಂದಿಗೆ ಅವಿನಭಾವ ಸಂಬಂಧ ಹೊಂದಿವೆ. ನಾವು ಆನೆಗಳೊಂದಿಗೆ ಸಹಬಾಳ್ವೆ ನಡೆಸುವ ಮೂಲಕ ಆನೆಗಳ ಸಂರಕ್ಷಣೆ ಸೇರಿದಂತೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ವಿಶ್ವ ಆನೆ ದಿನದ ಅಂಗವಾಗಿ ಆನೆ ಸಂರಕ್ಷಣೆ ಜಾಗೃತಿ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಸಿದ್ದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತಗೊಂಡವರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಅರಣ್ಯ ಇಲಾಖೆಯಲ್ಲಿ ವಿವಿಧ ವಲಯಗಳಲ್ಲಿ ಅರಣ್ಯ ಸಂರಕ್ಷಣೆಗಾಗಿ ವಿಶೇಷ ಸಾಧನೆ ಮಾಡಿದ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
ಜಾಥಾಕ್ಕೆ ಚಾಲನೆ : ಮಾದಾಪಟ್ಟಣ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿಯಿಂದ ಕಾವೇರಿ ನಿಸರ್ಗಧಾಮದ ತನಕ ಅನೆಗಳ ಸಂರಕ್ಷಣೆ ಕುರಿತಂತೆ ಶಾಲಾ ಮಕ್ಕಳಿಂದ ಏರ್ಪಡಿಸಿದ್ದ ಕಾಲ್ನಡಿಗೆ ಜಾಥಾಕ್ಕೆ ಕುಶಾಲನಗರ ಸಿವಿಲ್ ನ್ಯಾಯಾಧೀಶರಾದ ಚೈತ್ರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿ, ಮನುಷ್ಯರಂತೆ ಸಂಘಜೀವಿಯಾಗಿರುವ ಆನೆಗಳು ಇಡೀ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ನಾವೆಲ್ಲರೂ ಆನೆಗಳ ರಕ್ಷಣೆಯೊಂದಿಗೆ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವ ಮೂಲಕ ಪರಿಸರ ಸಮತೋಲನ ಕಾಪಾಡಲು ಪಣ ತೊಡಬೇಕು ಎಂದರು.

ಜ್ಞಾನಗಂಗಾ ವಸತಿ ಶಾಲೆ,ಉದ್ಯಮ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಅರಣ್ಯ ತರಬೇತಿ ಕೇಂದ್ರದ ಪ್ರಾಶಿಕ್ಷಾಣಾರ್ಥಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಶಾಲಾ ಮಕ್ಕಳು ಆನೆಗಳು, ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಘೋಷಣಾ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಜನರ ಗಮನ ಸೆಳೆದರು.
ಜಾಗೃತಿ ಜಾಥಾದ ನೇತೃತ್ವ ವಹಿಸಿದ್ದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳಿಗೆ ಆನೆಗಳು, ಅರಣ್ಯ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಅರಿವು ಮೂಡಿಸಿದರು.

ಈ ಸಂದರ್ಭ ಮಡಿಕೇರಿ ಪ್ರಾದೇಶಿಕ ಅರಣ್ಯ ವಿಭಾಗದ ಪ್ರೋಬೇಷನರಿ ಐ.ಎಫ್.ಎಫ್. ಅಧಿಕಾರಿಯಾದ ಎಸಿಎಫ್ ವಿ.ಸೆಂದಿಲ್ ಕುಮಾರ್ , ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನನ್ಯಕುಮಾರ್, ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ನವೀನ್ ಕುಮಾರ್, ವನ್ಯಜೀವಿ ವಿಭಾಗದ ವೈದ್ಯರಾದ ಡಾ.ಚಿಟ್ಟಿಯಪ್ಪ, ಡಾ.ಮುಜೀಬ್ ರೆಹಮಾನ್, ಜ್ಞಾನಗಂಗಾ ವಸತಿ ಶಾಲೆ ಕಾರ್ಯದರ್ಶಿ ನಿಂಗಪ್ಪ, ಸಂಪನ್ಮೂಲ ವ್ಯಕ್ತಿ ತಮ್ಮಯ್ಯ, ಭುವನೇಶ್ , ವಲಯ ಅರಣ್ಯಾಧಿಕಾರಿಗಳಾದ ರಕ್ಷಿತ್, ದಿನೇಶ್ ತ್ಯಾಗರಾಜ್ ಹಾಗೂ ಏಳನೇ ಹೊಸಕೋಟೆ ಪ್ರೌಢಶಾಲಾ ಶಿಕ್ಷಕಿ ಟಿ.ವಿ.ಶೈಲಾ, ಅರಣ್ಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ನ್ಯಾಚುರಲಿಸ್ಟ್ ಭುವನೇಶ್ ಕುಕ್ಕೆ ಅವರು ಸ್ಲೈಡ್ಸ್ ಪ್ರದರ್ಶನದ ಮೂಲಕ ಆನೆಗಳ ಜೀವನಕ್ರಮದ ಕುರಿತು ಮಾಹಿತಿ ನೀಡಿದರು.








