ಮನುಜ ಜನ್ಮ ಶ್ರೇಷ್ಟ ಜನ್ಮವಾಗಿದ್ದು, ಅದನ್ನು ಸಾರ್ಥಕಗೊಳಿಸುವುದು ನಮ್ಮ ಕರ್ತವ್ಯವಾಗಿದೆ.. ಹೀಗಿರುವಾಗ ನಮ್ಮ ಬದುಕು ಹೇಗಿರಬೇಕು? ಹೇಗಿದ್ದರೆ ಚೆಂದ? ಎಂಬಿತ್ಯಾದಿ ವಿಚಾರಗಳನ್ನು ಪ್ರಾಧ್ಯಾಪಕರೂ, ಲೇಖಕರೂ ಆಗಿರುವ ಪರಮೇಶ ಕೆ ಉತ್ತನಹಳ್ಳಿ ಅವರು ತೆರೆದಿಟ್ಟಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ…
ಮೂಡಣದ ಅರಮನೆಯಲ್ಲಿ ಹಗಲಿನ ಸಂಭ್ರಮ, ಅಂಬರದಲ್ಲಿ ಮೋಡಗಳೆಲ್ಲ ಚೈತನ್ಯಶೀಲದಿ ಸಂತೋಷಕೂಟದಲ್ಲಿ ಭಾಗವಹಿಸಲು ಓಡುತ್ತಿದ್ದವು ಹಕ್ಕಿಗಳು ಆಲಾಪಿಸುತ್ತಿದ್ದವು, ಗಿಡಮರಗಳು ತಲೆದೂಗುತ್ತಿದ್ದವು. ಬಳ್ಳಿಯಲ್ಲಿ ಬೆಳ್ಳಿಯಂತಹ ಮಲ್ಲಿಗೆ ಮೆಲ್ಲಗೆ ಪರಿಮಳದಿ ಸುಗಂಧವ ನಾಸಿಕಗಳಿಗೆ ಹಂಚುತ್ತಿದೆ, ಬಿಸಿಲು ಏರುತ್ತಿದೆ, ತಂಗಾಳಿ ಬೀಸುತ್ತಿದೆ, ಬೆಳಕು ಅರಳುತ್ತಿದೆ ಆದರೆ ನರಳುತ್ತಿರುವುದು ಬದುಕು ಎಂದೆ. ನೀನು ಈ ರೀತಿ ಯೋಚಿಸುತ್ತ ಕುಳಿತಿರುವುದಕ್ಕೆ ಇನ್ನೂ ಇದ್ದಲ್ಲೇ ಇರುವೆ “ಏಳು ಎದ್ದೇಳು ಬೆಳಕು ಬಯಲೆಲ್ಲ ಹಬ್ಬಿ ಹರಡಿದೆ, ಕಣ್ಣು ಮುಚ್ಚಿ ಕುಳಿತರೆ ಬೆಳಕಲ್ಲು ಬದುಕು ಕತ್ತಲಾಗುವುದು, ಕಣ್ಣು ತೆರೆದರೆ ಮಾತ್ರ ಕತ್ತಲಲ್ಲು ಬದುಕಿಗೆ ಬೆಳಕು ಗೋಚರವಾಗುವುದು ಒಂದು ಕ್ಷಣನನ್ನೊಳಗೆ ಎಚ್ಚರಿಕೆಯ ಕರೆಗಂಟೆ ಮೊಳಗಿದಂತಾಯಿತು ಅಷ್ಟೇ ಅಲ್ಲ ನಿಸರ್ಗವು ಕಪಾಳಮೋಕ್ಷ ಮಾಡಿದಂತೆ ಆಗಿ ಆಲಸ್ಯದಿಂದ ಎದ್ದು ಬದುಕನ್ನು ಓದಲು ಪುಸ್ತಕ ಹಿಡಿದೆ.

ಬದುಕೆಂದರೆ ಮೂರು ಅಕ್ಷರದ ಪದವಲ್ಲ ನೂರು ವರುಷ ಚೈತನ್ಯ ಶಾಲಿಯಾಗಿ ಬದುಕಿ ಸಾರ್ಥಕ ಕ್ಷಣಗಳ ಉಳಿಸಿ ಹೋಗಬೇಕಾದ ಪದಭೃಂಗ. ಅದು ಅನೇಕ ಅನುಭವಗಳ, ಭಾವನೆಗಳ, ಕನಸುಗಳ, ಹೋರಾಟಗಳ ಮತ್ತು ಸಾಧನೆಗಳ ಮಹಾಸಾಗರವಾಗಿದೆ. ಹುಟ್ಟಿನಿಂದ ಮರಣದವರೆಗೆ ಸಾಗುವ ಈ ಪಯಣದಲ್ಲಿ ಪ್ರತಿಯೊಬ್ಬರೂ ವಿಭಿನ್ನ ಅನುಭವಗಳನ್ನು ಎದುರಿಸುತ್ತಾರೆ. ಕೆಲ ಕ್ಷಣಗಳು ಸಂತೋಷದ ಹೊನಲು ಚೆಲ್ಲಿದರೆ, ಕೆಲವು ಸಂದರ್ಭಗಳು ದುಃಖದ ನೆರಳನ್ನು ಹರಡುತ್ತವೆ. ಆದರೂ ಜೀವನದ ಸಾರ್ಥಕತೆ ಎಂದರೆ ಪ್ರತಿಯೊಂದು ಅನುಭವದಿಂದ ಪಾಠ ಕಲಿದು ಮುಂದೆ ಸಾಗುವುದಲ್ಲದೆ ಮತ್ತೇನೂ ಅಲ್ಲ.
ಹಾಗೆಯೇ ಅದು ಆಶಯಗಳಿಗೆ ರೂಪ ಕೊಡುವ ಸಾಧನೆ, ಸಂಬಂಧಗಳಿಗೆ ಮೌಲ್ಯ ನೀಡುವ ಮಾನವೀಯತೆ, ಸಂಕಷ್ಟಗಳ ನಡುವೆ ಧೈರ್ಯದಿಂದ ನಿಲ್ಲುವ ಆತ್ಮವಿಶ್ವಾಸ. ಜೀವನದಲ್ಲಿ ಹಣ, ಹುದ್ದೆ, ವೈಭವ ಎಲ್ಲವೂ ಮುಖ್ಯವಾದರೂ, ಪ್ರೀತಿ, ಕರುಣೆ, ನಂಬಿಕೆ ಮತ್ತು ಸಂತೃಪ್ತಿಯೇ ಬದುಕಿನ ನಿಜವಾದ ಅರ್ಥವನ್ನು ತಿಳಿಸುತ್ತವೆ. ಆದ್ದರಿಂದ ಬದುಕನ್ನು ಕೇವಲ ದಿನಗಳ ಲೆಕ್ಕದಲ್ಲಿ ಅಳೆಯದೇ, ಮಾಡಿದ ಸತ್ಕಾರ್ಯಗಳ ಮತ್ತು ಉಳಿಸಿದ ಒಳ್ಳೆಯ ನೆನಪುಗಳ ಮೂಲಕ ಅಳೆಯಬೇಕು.ಮಾನವನು ಎಷ್ಟೇ ಸಂಕಟಗಳನ್ನು ಎದುರಿಸಿದರೂ ಬದುಕಿನ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ಏಕೆಂದರೆ ಪ್ರತಿಯೊಂದು ಕತ್ತಲೆಯ ನಂತರ ಬೆಳಕು ಬರುತ್ತದೆ. ಬದುಕಿದ್ದರೆ ಹೊಸ ಅವಕಾಶಗಳು, ಹೊಸ ಸಂಬಂಧಗಳು, ಹೊಸ ಸಂತೋಷಗಳು ನಮ್ಮನ್ನು ಎದುರು ನೋಡುತ್ತವೆ. ಆದ್ದರಿಂದಲೇ “ಬದುಕು ಕೇವಲ ಮೂರಕ್ಷರದ ಪದವಲ್ಲ ನೂರು ವರುಷ ಬದುಕುವ; ನೂರಾರು ವರುಷ ಇರುವ ಬೆಳಕು” ಎಂಬ ಮಾತು ಜೀವನದ ಮಹತ್ವವನ್ನು ಸಾರುವ ಶಾಶ್ವತ ಸತ್ಯವಾಗಿದೆ.

ಮಾನವನಿಗೆ ದೊರೆತಿರುವ ಅತ್ಯಮೂಲ್ಯವಾದ ವರವೆಂದರೆ ಬದುಕು. ಧನ, ಪದವಿ, ಸಂಪತ್ತು, ಕೀರ್ತಿ, ಅಧಿಕಾರ ಇವೆಲ್ಲವೂ ಬದುಕಿದ್ದಾಗ ಮಾತ್ರ ಅರ್ಥಪೂರ್ಣವಾಗುತ್ತವೆ. ಜೀವನವೆಂಬುದು ಕೇವಲ ಉಸಿರಾಟದ ಪ್ರಕ್ರಿಯೆಯಲ್ಲ; ಅದು ಕನಸುಗಳ ಸಾಗರ, ಅನುಭವಗಳ ಪಾಠಶಾಲೆ ಮತ್ತು ಸಾಧನೆಗಳ ಸುವರ್ಣಾವಕಾಶವಾಗಿದೆ. ಸುಖ–ದುಃಖ, ಜಯ–ಪರಾಜಯ, ನೋವು–ನಲಿವುಗಳ ಸಂಯೋಜನೆಯೇ ಬದುಕು. ಕೆಲವೊಮ್ಮೆ ಸಂಕಷ್ಟಗಳು ಎದುರಾದರೂ ಅವು ಬದುಕಿನ ಅಂತ್ಯವಲ್ಲ; ಅವು ಬದುಕನ್ನು ಮತ್ತಷ್ಟು ಗಟ್ಟಿಗೊಳಿಸುವಪಾಠಗಳಾಗಿವೆ.
“ಬದುಕು” ಎನ್ನುವುದು ಮೂರು ಅಕ್ಷರಗಳ ಸಣ್ಣ ಪದವಾದರೂ ಅದರ ಅರ್ಥ ಅನಂತ. ಮನುಷ್ಯನು ಎಷ್ಟು ವರ್ಷ ಬದುಕಿದನು ಎಂಬುದಕ್ಕಿಂತ ಹೇಗೆ ಬದುಕಿದನು ಎಂಬುದೇ ಮುಖ್ಯ. ಬದುಕಿರುವ ಪ್ರತಿಕ್ಷಣವನ್ನೂ ಸಾರ್ಥಕವಾಗಿಸಿ ಕೊಳ್ಳುವುದು, ನಮ್ಮಿಂದ ಮತ್ತೊಬ್ಬರಿಗೆ ಸಂತೋಷ ಸಿಗುವಂತೆ ನಡೆದುಕೊಳ್ಳುವುದು ಮತ್ತು ಮಾನವೀಯತೆಯನ್ನು ಉಳಿಸಿಕೊಂಡು ಸಾಗುವುದು ಬದುಕಿನ ನಿಜವಾದ ಮೌಲ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಪ್ರತಿಭಾವಂತರು ಅಕಾಲಿಕವಾಗಿ ನಮ್ಮನ್ನು ಅಗಲುತ್ತಿರುವುದು ಜನರಲ್ಲಿ ಬದುಕಿನ ಬಗ್ಗೆ ಹೊಸ ಚಿಂತನೆಗಳನ್ನು ಹುಟ್ಟಿಸಿದೆ. ಹೆಸರು, ಹಣ, ಆರೋಗ್ಯ, ಸೌಂದರ್ಯ, ವ್ಯಾಯಾಮ—ಎಲ್ಲವೂ ಇದ್ದರೂ ಬದುಕಿನ ಅವಧಿಯನ್ನು ಯಾರೂ ಖಚಿತಪಡಿಸಲು ಸಾಧ್ಯವಿಲ್ಲ ಎಂಬ ಸತ್ಯ ಎಲ್ಲರನ್ನೂ ಮೌನಗೊಳಿಸುತ್ತದೆ. ಹುಟ್ಟಿದವನು ಒಂದಲ್ಲೊಂದು ದಿನ ಹೋಗಲೇಬೇಕೆಂಬುದು ಪ್ರಕೃತಿಯ ನಿಯಮ. ಆದರೆ ಆ ನಡುವಿನ ಬದುಕು ಅರ್ಥಪೂರ್ಣವಾಗಿರಬೇಕು. ಇರುವಷ್ಟು ದಿನ ಸಂತೋಷದಿಂದ ಬದುಕುವುದರ ಜೊತೆಗೆ ಮತ್ತೊಬ್ಬರಿಗೆ ನೋವು ಕೊಡದಂತೆ, ಸಾಧ್ಯವಾದಷ್ಟು ಸಹಾಯ ಮಾಡುತ್ತಾ ಸಾಗುವುದೇ ನಿಜವಾದ ಬದುಕು.

ಇಂದಿನ ಸಮಾಜದಲ್ಲಿ ಸಂಬಂಧಗಳಿಗಿಂತ ಸ್ವಾರ್ಥಕ್ಕೆ ಹೆಚ್ಚಿನ ಮೌಲ್ಯ ಸಿಗುತ್ತಿರುವುದು ವಿಷಾದಕರ ಸಂಗತಿ. ಮನುಷ್ಯರು ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವ ಪರಿಸ್ಥಿತಿ ಹೆಚ್ಚಾಗಿದೆ. ಪ್ರೀತಿ, ಆತ್ಮೀಯತೆ, ವಿಶ್ವಾಸ ಇವು ನಿಧಾನವಾಗಿ ಕಡಿಮೆಯಾಗುತ್ತಿವೆ. ಆದರೆ ದ್ವೇಷದಿಂದ ಯಾರಿಗೂ ಶಾಂತಿ ಸಿಗುವುದಿಲ್ಲ. ನಾವು ಏನನ್ನು ಬಿತ್ತುತ್ತೇವೆಯೋ ಅದೇ ಫಲವಾಗಿ ಮರಳಿ ಬರುತ್ತದೆ. ಪ್ರೀತಿಯನ್ನು ಹಂಚಿದರೆ ಪ್ರೀತಿ ಸಿಗುತ್ತದೆ; ದ್ವೇಷವನ್ನು ಹರಡಿದರೆ ದ್ವೇಷವೇ ಮರಳಿ ಬರುತ್ತದೆ. ಆದ್ದರಿಂದ ಬದುಕಿರುವಾಗಲೇ ಪರಸ್ಪರ ಗೌರವಿಸುವುದು, ಒಬ್ಬರ ಭಾವನೆಗಳನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳುವುದು ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ.
ಒಳ್ಳೆಯ ಮಾತುಗಳ ಶಕ್ತಿ ಅಪಾರ. ಕೆಲವೊಮ್ಮೆ ಒಂದು ಪ್ರೋತ್ಸಾಹದ ಮಾತೇ ಒಬ್ಬನ ಬದುಕನ್ನು ಬದಲಾಯಿಸಬಹುದು. ಆದರೆ ಇಂದಿನ ಸಮಾಜದಲ್ಲಿ ಹೊಗಳುವುದಕ್ಕಿಂತ ಟೀಕಿಸುವವರೇ ಹೆಚ್ಚು. ಇನ್ನೊಬ್ಬರ ಸಾಧನೆಯನ್ನು ಕಂಡು ಸಂತೋಷಪಡುವ ಗುಣ ಕಡಿಮೆಯಾಗುತ್ತಿದೆ. ಯಾರಾದರೂ ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಅಭಿನಂದಿಸುವುದು, ಉತ್ತೇಜಿಸುವುದು ದೊಡ್ಡ ಮಾನವೀಯ ಗುಣ. ಪ್ರೋತ್ಸಾಹ ನೀಡಿದರೆ ಪ್ರತಿಭೆಗಳು ಅರಳುತ್ತವೆ; ನಿಂದನೆ ಮಾಡಿದರೆ ಕನಸುಗಳು ಮೊಳಕೆಯಲ್ಲಿಯೇ ಒಣಗುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಜನರಿಗೆ ಒಳ್ಳೆಯ ಮಾತುಗಳನ್ನು ಹೇಳುವ ಗುಣವನ್ನು ಬೆಳೆಸಿಕೊಳ್ಳಬೇಕು.

“ನಮ್ಮಂತೆ ಇತರರು” ಎಂಬ ಭಾವನೆ ಮನುಷ್ಯನಲ್ಲಿ ಬೆಳೆದಾಗ ಮಾತ್ರ ಸಮಾಜ ಸುಂದರವಾಗುತ್ತದೆ. ನಮಗೆ ನೋವಾದಂತೆ ಮತ್ತೊಬ್ಬರಿಗೂ ನೋವಾಗುತ್ತದೆ ಎಂಬ ಅರಿವು ಬಂದರೆ ದ್ವೇಷ, ಅಸೂಯೆ, ಕೋಪ ಇವು ಕಡಿಮೆಯಾಗುತ್ತವೆ. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣವೇ ಮಾನವೀಯತೆಯ ನಿಜವಾದ ಮುಖ. ಸಹಾನುಭೂತಿ ಇಲ್ಲದ ಬದುಕು ಆತ್ಮವಿಲ್ಲದ ದೇಹದಂತೆಯೇ ನಿರರ್ಥಕ.
ಇಂದಿನ ಮನಸ್ಸುಗಳಲ್ಲಿ “ಬಾಳಿರುವಷ್ಟು ದಿನಸಾಲದ ಸಜೆಯಾದರೂ ಸರಿಯೇ ಮೋಜು ಮಸ್ತಿಯಲ್ಲಿ ಮಜಾ ಮಾಡೋಣ” ಎಂಬ ಮನೋಭಾವ ಹೆಚ್ಚಾಗಿದೆ. ಸಂತೋಷವಾಗಿ ಬದುಕುವುದು ತಪ್ಪಲ್ಲ. ಆದರೆ ಅದರ ಜೊತೆಗೆ ಮುಂದಾಲೋಚನೆಯೂ ಅಗತ್ಯ. ದುಡಿಯುವಾಗ ಉಳಿತಾಯ ಮಾಡಬೇಕು, ಕುಟುಂಬದ ಭವಿಷ್ಯದ ಭದ್ರತೆಯನ್ನು ಯೋಚಿಸಬೇಕು. ನಮ್ಮನ್ನು ನಂಬಿಕೊಂಡಿರುವ ತಂದೆ-ತಾಯಿ, ಪತ್ನಿ, ಮಕ್ಕಳು ಸಂಕಷ್ಟಕ್ಕೆ ಸಿಲುಕದಂತೆ ಜೀವನದಲ್ಲಿ ಜವಾಬ್ದಾರಿಯುತ ನಡೆ ಅವಶ್ಯ. ಮನರಂಜನೆಗಿಂತ ಜೀವನದ ಭದ್ರತೆ ಮುಖ್ಯ ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು.

ಹಣ, ಆಸ್ತಿ, ಹುದ್ದೆ, ಗೌರವ—ಇವು ಕ್ಷಣಿಕ. ಕಾಲ ಬದಲಾಗುತ್ತಿದ್ದಂತೆ ಅವುಗಳೆಲ್ಲವೂ ಮರೆಯಾಗುತ್ತವೆ. ಆದರೆ ಕೊನೆಯವರೆಗೂ ಉಳಿಯುವುದು ಮನುಷ್ಯನ ವ್ಯಕ್ತಿತ್ವ ಮತ್ತು ಅವನು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ. ಅಹಂಕಾರ, ದ್ವೇಷ, ಹೊಟ್ಟೆಕಿಚ್ಚು ಇವು ಬದುಕನ್ನು ಕತ್ತಲೆಯತ್ತ ಕೊಂಡೊಯ್ಯುತ್ತವೆ. ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಮಾನವೀಯತೆ ಬದುಕನ್ನು ಪ್ರಕಾಶಮಾನವಾಗಿಸುತ್ತವೆ. ಆದ್ದರಿಂದ ಬದುಕು ಎಲ್ಲಕ್ಕಿಂತ ದೊಡ್ಡದು ಎಂಬ ಸತ್ಯವನ್ನು ಅರಿತು ಸಾಗಬೇಕು. ಬದುಕಿರುವಷ್ಟು ದಿನ ಪರಸ್ಪರ ಗೌರವದಿಂದ, ಪ್ರೀತಿಯಿಂದ, ಸಹಕಾರದಿಂದ ಬದುಕೋಣ. ನಮ್ಮ ಬದುಕು ನಮ್ಮಷ್ಟಕ್ಕೆ ಮಾತ್ರ ಸೀಮಿತವಾಗದೇ ಇತರರಿಗೂ ಬೆಳಕಾಗುವಂತಿರಲಿ. ಆಗ ಮಾತ್ರ ನಮ್ಮ ಜನ್ಮಕ್ಕೆ ಸಾರ್ಥಕತೆ ದೊರೆಯುತ್ತದೆ; ಸಾವಿನ ನಂತರವೂ ಜನಮನಗಳಲ್ಲಿ ನಮ್ಮ ನೆನಪು ಜೀವಂತವಾಗಿರುತ್ತದೆ.
ಜನನದಿಂದ ಮರಣದವರೆಗೆ ಸಾಗುವ ಈ ಪಯಣದಲ್ಲೇ ಮನುಷ್ಯನು ನಿಜವಾದ ಅರ್ಥವನ್ನು ಹುಡುಕುತ್ತಾನೆ. ಸುಖ–ದುಃಖ, ಸೋಲು–ಗೆಲುವು, ನಿರಾಸೆ–ಭರವಸೆ, ಕಣ್ಣೀರು–ನಗು ಇವೆಲ್ಲವೂ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಪ್ರತಿಯೊಂದು ಅನುಭವವೂ ಮನುಷ್ಯನನ್ನು ಪಕ್ವಗೊಳಿಸುತ್ತದೆ; ಪ್ರತಿಯೊಂದು ಕಷ್ಟವೂ ಅವನೊಳಗಿನ ಶಕ್ತಿಯನ್ನು ಹೊರತರುತ್ತದೆ.ಇಂದಿನ ಯಾಂತ್ರಿಕ ಬದುಕಿನಲ್ಲಿ ಅನೇಕರು ಬದುಕಿನ ನಿಜವಾದ ಅರ್ಥವನ್ನೇ ಮರೆತಿದ್ದಾರೆ.

ಹಣ, ಹುದ್ದೆ, ಹೆಸರುಗಳ ಬೆನ್ನಟ್ಟುತ್ತಾ ಮಾನವೀಯತೆ, ಪ್ರೀತಿ, ಸಂಬಂಧಗಳ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಆದರೆ ನಿಜವಾದ ಬದುಕು ಎಂದರೆ ಕೇವಲ ಉಸಿರಾಡುವುದಲ್ಲ; ಮನಸ್ಸಿಗೆ ಸಂತೋಷ ಕೊಡುವಂತೆ ಬದುಕುವುದು, ಇತರರ ಕಣ್ಣೀರನ್ನು ಒರೆಸುವುದು, ಸಮಾಜಕ್ಕೆ ಉಪಯುಕ್ತರಾಗುವುದು ಮತ್ತು ತಮ್ಮ ಅಸ್ತಿತ್ವಕ್ಕೆ ಅರ್ಥ ನೀಡುವಂತೆ ಜೀವನ ಸಾಗಿಸುವುದಾಗಿದೆ. ಬದುಕಿನ ಸಾರ್ಥಕತೆ ನಾವು ಎಷ್ಟು ವರ್ಷ ಬದುಕಿದ್ದೇವೆ ಎಂಬುದರಲ್ಲಿ ಅಲ್ಲ; ಬದುಕಿದ ವರ್ಷಗಳಲ್ಲಿ ಎಷ್ಟು ಜನರ ಹೃದಯ ಗೆದ್ದಿದ್ದೇವೆ ಎಂಬುದರಲ್ಲಿ ಇದೆ.
ಪ್ರತಿಯೊಬ್ಬ ಮನುಷ್ಯನ ಜೀವನವೂ ಒಂದು ಪಾಠಶಾಲೆಯಂತಿದೆ. ಬದುಕು ನಮಗೆ ತಾಳ್ಮೆ ಕಲಿಸುತ್ತದೆ, ಸಮಯದ ಮೌಲ್ಯ ತಿಳಿಸುತ್ತದೆ, ಸಂಬಂಧಗಳ ಅಗತ್ಯತೆಯನ್ನು ಅರಿವಿಗೆ ತರುತ್ತದೆ. ಕೆಲವೊಮ್ಮೆ ನೋವುಗಳು ನಮ್ಮನ್ನು ಕುಗ್ಗಿಸಿದರೂ, ಅವೇ ನಮ್ಮನ್ನು ಗಟ್ಟಿಗೊಳಿಸುತ್ತವೆ. ಆದ್ದರಿಂದ ಸಂಕಷ್ಟಗಳು ಬಂದಾಗ ಕುಗ್ಗದೆ, ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಬದುಕು ಎಂದರೆ ನಿರಂತರ ಹೋರಾಟ, ಆದರೆ ಅದೇ ಹೋರಾಟದಲ್ಲಿ ಯಶಸ್ಸಿನ ಸಿಹಿಯೂ ಅಡಗಿದೆ.

ಮನುಷ್ಯನು ಬದುಕಿರುವವರೆಗೆ ತನ್ನೊಳಗಿನ ಒಳ್ಳೆಯತನವನ್ನು ಬೆಳೆಸಿಕೊಂಡು, ಪ್ರೀತಿ– ಕರುಣೆ– ಸಹಾನುಭೂತಿಯೊಂದಿಗೆ ಬದುಕಬೇಕು. ಯಾಕೆಂದರೆ ಜೀವನ ನೀರಮೇಲಣಗುಳ್ಳೆಯಂತೆ ಕ್ಷಣಿಕವಾದುದು; ಆದರೆ ನಮ್ಮ ಸತ್ಕಾರ್ಯಗಳು ಮತ್ತು ಮಾನವೀಯ ಮೌಲ್ಯಗಳು ಶಾಶ್ವತವಾಗಿರುತ್ತವೆ. ಬದುಕನ್ನು ದ್ವೇಷಿಸುವುದಕ್ಕಿಂತ ಅದನ್ನು ಅರ್ಥಪೂರ್ಣವಾಗಿ ರೂಪಿಸುವುದು ಮುಖ್ಯ. ಪ್ರತಿದಿನವೂ ಹೊಸ ಅವಕಾಶವೆಂದು ಭಾವಿಸಿ, ಆಶಾವಾದದೊಂದಿಗೆ ಬದುಕಿದಾಗ ಮಾತ್ರ ಜೀವನ ಸುಂದರವಾಗುತ್ತದೆ.
ಅಂತಿಮರೂಪದಲ್ಲಿ ಬಾಳಿನಹೂರಣವು ಕಹಿಯೋ ಸಿಹಿಯೋ ಒಟ್ಟಿನಲ್ಲಿ ಅದ ಅನುಭವಿಸಿ ಹದವಾದ ಪದಕಟ್ಡಿ ಹಾಡಾಗಿಸಿ ಬದುಕುವ ಹೊಣೆ ನಮ್ಮದಾಗಬೇಕು. ಬದುಕೆಂದರೆ ಮೂರಕ್ಷರದ ಪದವಲ್ಲ” ಎಂಬುದು ಕೇವಲ ಒಂದು ವಾಕ್ಯವಲ್ಲ; ಅದು ಜೀವನದ ಆಳವಾದ ಸತ್ಯ. ಬದುಕು ಒಂದು ಅಮೂಲ್ಯ ವರ, ಅದನ್ನು ವ್ಯರ್ಥ ಮಾಡದೆ ಸಂತೋಷ, ಸೇವೆ, ಸಾಧನೆ ಮತ್ತು ಸತ್ಕಾರ್ಯಗಳಿಂದ ಅಲಂಕರಿಸಿದಾಗ ಮಾತ್ರ ಬದುಕಿನ ನಿಜವಾದ ಮೌಲ್ಯ ಅರಿವಾಗುತ್ತದೆ.

ಲೇಖಕ ಪರಮೇಶ್ ಕೆ ಉತ್ತನಹಳ್ಳಿ ಅವರು ಬರೆದಿರುವ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ








