LatestLife style

ಚಿನ್ನದೊಂದಿಗೆ ಬೆರೆತಿರುವ ತಾಮ್ರಕ್ಕೂ ನಾವು ಚಿನ್ನದ ಬೆಲೆಯನ್ನೇ ಕೊಡ್ತಿವಾ? ಏನಿದು ಗೊಂದಲ?

 ಹೂವಿನ ಜತೆಗೆ ನಾರು ಸ್ವರ್ಗ ಸೇರಿತು ಎನ್ನುವ ಹಾಗೆ ಚಿನ್ನದ ಜತೆಗೆ ಬೆರೆಸಲ್ಪಡುವ ತಾಮ್ರಕ್ಕೂ ಚಿನ್ನದ ಬೆಲೆ ನೀಡುವಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಿನ್ನದಲ್ಲಿ ತಾಮ್ರದ ಪಾತ್ರವೇನು? ಇದರ ಬಳಕೆ ಹೇಗೆ? ಇತ್ಯಾದಿ ವಿಚಾರಗಳು ಗ್ರಾಹಕರಿಗೆ ಅರಿವಾಗಬೇಕಾಗಿದೆ. ಇದರ ಬಗ್ಗೆ ಮಾಹಿತಿ ಇದ್ದವರು ಅದನ್ನು ಹೊರಗೆಡವಿದರೆ ಈ ವಿಚಾರದಲ್ಲಿರುವ ಗೊಂದಲಗಳಿಗೆ ತೆರೆ ಬೀಳಬಹುದೇನೋ?

ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಚಿನ್ನದ ಮೇಲೆ ಬಂಡವಾಳ ಹಾಕಿದವರ ಮುಖದಲ್ಲಿ ಮಂದಹಾಸ ಮಿನುಗುತ್ತಿದ್ದರೆ, ಕಳೆದುಕೊಂಡವರು ತಲೆಚೆಚ್ಚಿಕೊಳ್ಳುತ್ತಿದ್ದಾರೆ.. ಖರೀದಿಸಬೇಕೆನ್ನುವವರಲ್ಲಿ ಆತಂಕ ಮನೆ ಮಾಡಿದೆ. ಒಟ್ಟಾರೆ ಚಿನ್ನ ಎಲ್ಲರ ಮನದಲ್ಲಿಯೂ ಗೊಂದಲವನ್ನುಂಟು ಮಾಡಿರುವುದಂತು ನಿಜ.. ಇನ್ನು ಒಂದು ವರ್ಷಗಳ ಕಾಲ ಚಿನ್ನವನ್ನು ಖರೀದಿಸಬೇಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯ ನಂತರ ಚಿನ್ನದ ಬೆಲೆ ಹೆಚ್ಚಾಗಿದೆ.. ಮದುವೆ ಇನ್ನಿತರ ಕಾರ್ಯಗಳಿಗೆ ಚಿನ್ನ ಖರೀದಿ ಅನಿವಾರ್ಯವಾದವರ ಕಣ್ಣಂಚಿನಲ್ಲಿ ನೀರು ಜಿನುಗಲಾರಂಭಿಸಿದೆ..

ಇಷ್ಟಕ್ಕೂ ನಿತ್ಯದ ಬದುಕಿಗೆ ಚಿನ್ನ ಅನಿವಾರ್ಯ ಅಲ್ಲದಿರಬಹುದು. ಆದರೆ ಮಗಳನ್ನು ಮದುವೆ ಮಾಡಿಕೊಡುವ ವೇಳೆ ಹೆಣ್ಣುಹೆತ್ತವರು ಅನಿವಾರ್ಯವಾಗಿ ಚಿನ್ನಾಭರಣಗಳನ್ನು ನೀಡಲೇ ಬೇಕಾಗಿರುವುದರಿಂದ ಸಾಲ ಮಾಡಿಯಾದರೂ ಚಿನ್ನ ಖರೀದಿಸಲೇ ಬೇಕಾಗಿದೆ. ನಿಮ್ಮ ಮಗಳಿಗೆ ಎಷ್ಟು ಗ್ರಾಂನ ಚಿನ್ನದ ಒಡವೆಗಳನ್ನು ಹಾಕ್ತೀರಾ? ಎಂಬ ಪ್ರಶ್ನೆಯಿಂದಲೇ ಮದುವೆ ಮಾತುಕತೆಗಳು ಶುರುವಾಗುವುದರಿಂದಾಗಿ ಕಷ್ಟನೋ ಸುಖನೋ? ಬೆಲೆ ಕಡಿಮೆ ಇರಲಿ ಹೆಚ್ಚಿರಲಿ ಚಿನ್ನಾಭರಣದ ಅಂಗಡಿಗೆ ಹೆಜ್ಜೆ ಹಾಕಲೇ ಬೇಕಾಗಿದೆ.

ಇವತ್ತು ಚಿನ್ನದ ವ್ಯಾಪಾರಿಗಳು ಶ್ರೀಮಂತರಾಗುತ್ತಿದ್ದಾರೆ.. ಒಂದು ಮಳಿಗೆಯಿಂದ ಮತ್ತೊಂದು ಮಳಿಗೆ ತೆರೆಯುವ ತನಕ ಅವರ ವ್ಯಾಪಾರ ವೃದ್ಧಿಯಾಗುತ್ತಿದೆ. ಆದರೆ  ಇತ್ತ ಮಾನ, ಮರ್ಯಾದೆ, ಅನಿವಾರ್ಯತೆಗೆ ಸಿಕ್ಕಿದ ಜನ ಸಾಮಾನ್ಯರು, ಬಡವರು ಶಕ್ತಿ ಮೀರಿ ಒಡವೆ ಖರೀದಿ ಮಾಡಿ ಮಗಳು ಅಳಿಯನಿಗೆ ನೀಡಿ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟುವುದರಲ್ಲಿ ತಮ್ಮ ಜೀವನವನ್ನು ಸವೆಸಿ ಬಿಡುತ್ತಾರೆ. ಇಷ್ಟಕ್ಕೂ ಚಿನ್ನದ ಒಡವೆಗಳಿಲ್ಲದೆ ಮದುವೆ ಸಾಧ್ಯವಾಗುವುದಿಲ್ಲವೆ? ಅಥವಾ ಗಂಡಿನ ಮನೆಯವರ ಬೇಡಿಕೆಗೆ ಮಣಿದು ಚಿನ್ನಾಭರಣ ನೀಡುವ ಅನಿವಾರ್ಯತೆಯಿಂದ ಹೊರಬರಲು ಸಾಧ್ಯವಿಲ್ಲವೆ? ಈ ಪ್ರಶ್ನೆಗಳಿಗೆ ಉತ್ತರ ಕಷ್ಟವೇ..

ಅದು ಏನೇ ಇರಲಿ ಇಷ್ಟಕ್ಕೂ ನಾವು ಖರೀದಿಸುವ ಚಿನ್ನ ನಿಜಕ್ಕೂ ಅಪರಂಜಿನಾ ಎಂಬ ಪ್ರಶ್ನೆಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ್ಗೆ ಚರ್ಚೆಗೆ ಬರುತ್ತಿರುತ್ತವೆ. ಮೂಲಗಳ ಪ್ರಕಾರ ಎಂಟು ಗ್ರಾಂ(ಒಂದು ಪವನ್) ಚಿನ್ನದ ಸರ ತಯಾರಿಸಲು 1.5 ಗ್ರಾಂನಷ್ಟು ತಾಮ್ರ ಬೇಕಾಗುತ್ತದೆಯಂತೆ. ಹಾಗಾದರೆ ನಮ್ಮ ಚಿನ್ನದ ಸರದಲ್ಲಿ ನಿಜವಾಗಿಯೂ ಇರುವ ಚಿನ್ನದ ಅಂಶ 6.5 ಗ್ರಾಂ ಎಂದಾಯಿತು. ಅಂದರೆ ನಾವು 1.5 ಗ್ರಾಂ ತಾಮ್ರಕ್ಕೆ ಚಿನ್ನದ ಬೆಲೆಯನ್ನೇ ನೀಡುತ್ತಿದ್ದೇವೆಯಾ? ಎಂಬುದು ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆಯಾಗಿದೆ.

ದೊಡ್ಡ ದೊಡ್ಡ ಅಂಗಡಿಯವರು ನಮ್ಮಲ್ಲಿ ಚಿನ್ನಕ್ಕೆ ಕೂಲಿ, ವೆಸ್ಟೇಜ್ ಇಲ್ಲ ಎನ್ನುತ್ತಾ ಗ್ರಾಹಕರನ್ನು ಮರಳು ಮಾಡುತ್ತಾರೆ. ಆ ಮೂಲಕವೇ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಾರೆ ಎನ್ನುವುದು ಅವರ ವಾದವಾಗಿದೆ. ಈ ಕುರಿತಂತೆ ಕೆಲವರು ಒಂದಷ್ಟು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಅವರು ಹೇಳುವಂತೆ ಎಂಟು ಗ್ರಾಂ ನ ಚಿನ್ನದ ಸರಕ್ಕೆ ತಾಮ್ರವನ್ನು ಸೇರಿಸುವುದರ ಮೂಲಕ  ಆಭರಣವನ್ನು ತಯಾರಿಸಲಾಗುತ್ತದೆ. ಅಂದರೆ  8 ಗ್ರಾಂ ಚಿನ್ನದ ಸರ  ತಯಾರಿಸಲು 1.5 ಗ್ರಾಂ ತಾಮ್ರ ಮತ್ತು 6.5 ಗ್ರಾಂ ಚಿನ್ನವನ್ನು ಸೇರಿಸಲಾಗುತ್ತದೆ. ಆ  ಮೂಲಕ ಚಿನ್ನದ ಸರ ತಯಾರಾಗುತ್ತದೆ.

ಇಲ್ಲಿ  ಒಬ್ಬ ಗ್ರಾಹಕ  ಚಿನ್ನವನ್ನು ಖರೀದಿಸುವಾಗ ಆತನಿಗೆ 6.5 ಚಿನ್ನ + 1.5 ತಾಮ್ರ  ಒಟ್ಟಿಗೆ 8 ಗ್ರಾಂ ಚಿನ್ನವನ್ನು ಬಿಲ್ಲಿನಲ್ಲಿ  ಹಾಕಲಾಗುತ್ತದೆ.  ಜತೆಗೆ ತಾವು ಸೇರಿಸಿದ ತಾಮ್ರಕ್ಕೆ ಚಿನ್ನದ ಬೆಲೆಯನ್ನೇ ಪಡೆಯಲಾಗುತ್ತದೆ. ಬಹಳಷ್ಟು ಮಾರಾಟಗಾರರು ಇದನ್ನು (1.5 ಗ್ರಾಂ ತಾಮ್ರವನ್ನು) ವೆಸ್ಟೇಜ್ ಎಂದು ತೋರಿಸುವುದರ ಮೂಲಕ ಹಣ ಪಡೆಯುತ್ತಾರೆ ಎನ್ನುವುದು ಕೆಲವರ ಆರೋಪವಾಗಿದೆ.

ಚಿನ್ನದ ವಿಚಾರದಲ್ಲಿ ಸಾಮಾನ್ಯ ಜನರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಹೀಗಾಗಿ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ಒಂದಷ್ಟು ವಿಚಾರಗಳು ಚರ್ಚೆಯಾಗುವುದರೊಂದಿಗೆ ಚಿನ್ನ ಖರೀದಿಯಲ್ಲಿ ಗ್ರಾಹಕನಿಗೆ ಆಗುವ ಒಂದಷ್ಟು ನಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ತಜ್ಞರು ಮಾಡುವುದರೊಂದಿಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕಾಗಿದೆ. ಚಿನ್ನವನ್ನು ಹಣವಿದ್ದವರು ಮಾತ್ರ ಖರೀದಿಸುತ್ತಿಲ್ಲ. ಬಡವರೂ ಖರೀದಿಸುತ್ತಾರೆ. ಹೀಗಿರುವಾಗ ಗಗನಕ್ಕೇರುತ್ತಿರುವ ಬೆಲೆಯ ಬಿಸಿಯಲ್ಲಿ ಸಣ್ಣ ಸಣ್ಣ ಉಳಿತಾಯ ಕೂಡ ತಂಪು ನೀಡಬಹುದಲ್ಲವೆ?

ಈ ಬಗ್ಗೆ ಚರ್ಚೆಗಳಾಗಬೇಕು. ನಿಜವಾಗಲೂ ಚಿನ್ನದ ಖರೀದಿ ವಿಚಾರದಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆಯಾ? ಈ ಬಗ್ಗೆ ತಿಳಿದವರು ಜನರ ಮುಂದೆ ಇಡಬೇಕಾಗುತ್ತದೆ. ಇಲ್ಲದೆ ಹೋದರೆ ಸುಮ್ಮನೆ ಅಂತೆಕಂತೆಗಳ ಸುದ್ದಿಗಳು ಹರಿದಾಡಿ ಅಸಲಿ ವಿಷಯಗಳು ಗೌಣವಾಗುತ್ತವೆ. ಅಷ್ಟೇ ಅಲ್ಲದೆ ಚಿನ್ನದಲ್ಲಿ ತಾಮ್ರ ಬಳಕೆಯಾಗುವುದಾದರೂ ಹೇಗೆ ಎಂಬುದು ಕೂಡ ಗೊತ್ತಾಗಬೇಕಾಗಿದೆ. ಈ ಬಗ್ಗೆ ಮಾಹಿತಿ ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿದರೆ ಜನರಿಗೂ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಏನಂತಿರಾ?

 

B M Lavakumar

admin
the authoradmin

Leave a Reply

Translate to any language you want