LatestMysore

ರೈತರು ರಾಸಾಯನಿಕ ಗೊಬ್ಬರದ ಬದಲಿಗೆ ವೈಜ್ಞಾನಿಕ ಪದ್ದತಿಯಲ್ಲಿ ಕೊಟ್ಟಿಗೆ ಗೊಬ್ಬರ ತಯಾರಿಸಿ

ಹಿರಿಯ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿ ಸಲಹೆ

ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು):ರೈತರು ರಾಸಾಯನಿಕ ಗೊಬ್ಬರ ಬದಲು ವೈಜ್ಞಾನಿಕ ಪದ್ದತಿಯಲ್ಲಿ ಸಾವಯವ ಗೊಬ್ಬರ ತಯಾರಿಸಲು ತೋಟಗಾರಿಕೆ ಇಲಾಖೆ ವತಿಯಿಂದ ಸಲಹೆ ನೀಡಲಾಗುವುದು ಎಂದು ಹಿರಿಯ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕೊಟ್ಟಿಗೆ ಗೊಬ್ಬರ ಸಾವಯವ ಗೊಬ್ಬರವಾಗಿದ್ದು,  ಸಸ್ಯ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಬಳಸಿ ತಯಾರಿಸಬಹುದಾಗಿದ್ದು, ಸಸ್ಯ ಮತ್ತು ಬೆಳೆಯ ತ್ಯಾಜ್ಯ ವಸ್ತು ದನಕರುಗಳ ಸಗಣಿ, ಗಂಜಲ, ಕೊಟ್ಟಿಗೆಯ ಬೂದಿ ಬಳಸಿ ತಯಾರಿಸಬಹುದಾಗಿದೆ, ಇದಕ್ಕಾಗಿ 2 ರಿಂದ 2.5 ಅಗಲ 1 ಮೀಟರ್ ಆಳ, (1 ಮೀಟರ್ ಆಳದಲ್ಲಿ ಸೂಕ್ಷ್ಮ ಜೀವಿಗಳ ಚಲನವಲನ ಅಧಿಕವಾಗಿರುತ್ತದೆ) 3 ಮೀಟರ್ ಉದ್ದದ ಗುಂಡಿಯನ್ನು ನಿರ್ಮಾಣ ಮಾಡಿ ಅದರಲ್ಲಿ ಮೇಲ್ಕಂಡ ಪದಾರ್ಥಗಳನ್ನು ತುಂಬಿ ಗೊಬ್ಬರ ತಯಾರಿಸಬಹುದಾಗಿದ್ದು,  ಆ ಗುಂಡಿಯ ಸುತ್ತಮುತ್ತ 30 ಅಡಿ ದೂರದಲ್ಲಿ ಮರಗಳ ನಾಟಿ ಇರುವುದು ಸೂಕ್ತ. ಗುಂಡಿಯಲ್ಲಿರುವ ಗೊಬ್ಬರದ ಪೋಷಕಾಂಶಗಳನ್ನು ವ್ಯರ್ಥವಾಗದಂತೆ ಮಳೆಯ ನೀರು ನಿಲ್ಲದಂತೆ ಬಿಸಿಲು ತಾಕದಂತೆ ಸಂರಕ್ಷಣೆಗೆ ಮೇಲ್ಚಾವಣಿಯ ನಿರ್ಮಾಣ ಮಾಡುವುದು,  ಹೊರಗಿನ ನೀರು ಗುಂಡಿಗೆ ಸೇರದಂತೆ ಹಾಗೂ ಗೊಬ್ಬರದ ಗುಂಡಿಯಲ್ಲಿರುವ ನೀರು, ಹೊರಹೋಗದಂತೆ ತಡೆ ನಿರ್ಮಾಣ ಮಾಡುವುದರಿಂದ ಉತ್ತಮ ಪೋಷಕಾಂಶಯುಕ್ತ ಕೊಟ್ಟಿಗೆ ಗೊಬ್ಬರ ಪಡೆಯಬಹುದಾಗಿದೆ.

ಹೀಗೆ ನಿರ್ವಹಣೆ ಮಾಡಿದ್ದಲ್ಲಿ 4 ತಿಂಗಳಿಗೆ ಉತ್ತಮವಾದ ಕೊಳೆತಿರುವ ಕೊಟ್ಟಿಗೆ ಗೊಬ್ಬರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿರುವ ಅವರು, ಪಿರಿಯಾಪಟ್ಟಣ ತೋಟಗಾರಿಕೆ ಕ್ಷೇತ್ರದಲ್ಲಿ ಸಪೋಟ ಮತ್ತು ಮಾವು ಕಸಿ ಸಸಿಗಳನ್ನು ಇಲಾಖಾ ದರದಲ್ಲಿ ನೀಡಲಾಗುತ್ತಿದ್ದು ಇದರ ಉಪಯೋಗವನ್ನು ರೈತ ಬಾಂಧವರು ಪಡೆದುಕೊಳ್ಳಬೇಕಾಗಿ ಕೋರಿದ್ದು, ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಸಹಾಯಕ ಸಿ.ಕೆ.ಶ್ರೀಧರ್ ಇವರ ಮೊಬೈಲ್ ನಂಬರ್ 9481188592 ಸಂಪರ್ಕಿಸುವಂತೆ ತಿಳಿಸಿದ್ದಾರೆ.

admin
the authoradmin

Leave a Reply

Translate to any language you want