ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಕರ್ನಾಟಕ ರಾಜ್ಯ ಬೀಜ ನಿಗಮದಿಂದ ರೈತರಿಗೆ ವಿತರಣೆಯಾದ ಪೂರ್ಣಿಮಾ-04 ಕೇರಳ ಸೀಡ್ಸ್ನ ಬಿತ್ತನೆ ಬೀಜ ಕಳಪೆಯಾಗಿದ್ದು, ಇದರಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವದ ಗೌರವಾಧ್ಯಕ್ಷ ಜೆ.ಎಂ. ಕುಮಾರ್ ಒತ್ತಾಯಿಸಿದರು.
ಪಣ್ಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ರೈತ ಪರ್ವ ರೈತ ಸಂಘದ ಸೇರ್ಪಡೆ ಹಾಗೂ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ 3,400 ದರ ನಿಗದಿಗೊಳಿಸಿ ನಿಗಮದ ವತಿಯಿಂದ 368 ರೈತರಿಗೆ ಬಿತ್ತನೆ ಬೀಜ ವಿತರಿಸಲಾಗಿದೆ. ಹವಾಮಾನ ವೈಪ-ರೀತ್ಯದಿಂದಾಗಿ 1 ಎಕರೆಗೆ 12ರಿಂದ 15 ಕ್ವಿಂಟಲ್ ಮಾತ್ರ ಭತ್ತದ ಇಳುವರಿ ಬಂದಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಕೂಡಲೇ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ಉಗ್ರಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯಾಧ್ಯಕ್ಷ ಟಿ.ವಿ.ಅರುಣ ಕುಮಾರ್ ಮಾತನಾಡಿ, ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ಬಗ್ಗೆ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪುನರಾರಂಭಿಸುವಂತೆ ಕಾರ್ಖಾನೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಪಟ್ಟಣ ದಿಂದ ಕಾರ್ಖಾನೆಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗುಡುಗಿದರು.
ಕರ್ನಾಟಕ ರಾಜ್ಯ ರೈತ ಪರ್ವ ರೈತ ಸಂಘದ 6ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನಲ್ಲಿ ಮೇ 24ರಂದು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರಲ್ಲದೆ, ಕರ್ನಾಟಕ ವಿಧಾನಸಭೆಯೊಳಗೆ ಕೆಲವು ರಾಜಕಾರಣಿಗಳು ತಮ್ಮ ಹೆಗಲ ಮೇಲೆ ಹಸಿರು ಟವಾಲನ್ನು ಹಾಕಿಕೊಂಡು ರೈತರ ನ್ಯಾಯಕೋಸ್ಕರ ಹೋರಾಟ ಮಾಡುತ್ತೇವೆ ಎಂದು ಬಿಂಬಿಸಿ ನಾಟಕೀಕರಣ ಮಾಡುವುದು ಅವರ ಕಾಯಕ ವೆಂದು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಅಬ್ದುಲ್ ಶುಕೂರ್ ಡೋಂಗಿ ರಾಜಕಾರಣಿಗಳ ವಿರುದ್ಧ ಕಿಡಿಕಾರಿದರು.
ನಾಲೆಯ ಕೊನೆಯ ಹಂತದವರಗೆ ಸರಿಯಾಗಿ ನೀರು ತುಲುಪುತ್ತಿಲ್ಲ. ಸಾಕಷ್ಟು ಖರ್ಚು ಮಾಡಿ ತಾಲ್ಲೂಕಿನಲ್ಲಿ ನಾಲಾ ಆಧುನೀಕರಣ ಮಾಡಲಾಯಿತು. ನಾಲಾ ಆಧುನೀಕರಣ ನಂತರ ಕೊನೆಯ ಹಂತದವರೆಗೆ ಅಲ್ಪಸ್ವಲ್ಪ ಬರುತ್ತಿದ್ದ ನೀರೂ ಬರುತ್ತಿಲ್ಲ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ರೈತರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಜಿಲ್ಲಾ ಅಧ್ಯಕ್ಷನಾಗೇಶ್ ಅಧಿಕಾರಿಗಳ ಬೇಜವಾಬ್ದರಿತನವೆಂದು ಆರೋಪಿಸಿದರು.

ಸಾಲಿಗ್ರಾಮ ತಾಲ್ಲೂಕು ಅಧ್ಯಕ್ಷ ಜಿ.ಪಿ.ಮಂಜು ಮಾತನಾಡಿ ಸರ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸರ್ವೆನೌಕರರು 4 ತಿಂಗಳುಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ವೆ ಇಲಾಖೆಯಲ್ಲಿನ ಖಾಯಂ ಸರ್ಕಾರಿ ನೌಕರರು ಕೂಡ ಸರ್ವೆ ಮಾಡುತ್ತಿಲ್ಲ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮುಖ್ಯಮಂತ್ರಿ ಸಂಬಂಧಿಸಿದ ಸಚಿವರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿಭಟನೆ ಮಾಡುತ್ತಿರುವ ನೌಕರರ ಬೇಡಿಕೆಗಳನ್ನು ಕೂಡಲೇ ಬಗೆಹರಿಸಿ ರೈತರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಸಾಯಿ ಚಾಮರಾಜ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ತಾರಾ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷೆ ರೇಣುಕಾ ಮುಕುಂದ, ಪುಟ್ಟರಾಮು, ಮಹೇಶ್, ಕೆಂಪೂಗೌಡ, ಹುಲ್ಯಾಳು ಮಹೇಶ್, ಕೆ.ಪಿ.ಶ್ರೀನಿವಾಸ್, ವೀಣಾ ಬಸವರಾಜು ಭಾಗವಹಿಸಿದ್ದರು








