LatestNews

ಚೂಡಾಮಣಿಯವರ ‘ಕಣ್ಣ ಸುಳಿಯೊಳಗೆ’ ಕವನ ಸಂಕಲನದಲ್ಲಿ ಮಾಗಿದ ಭಾವವಿದೆ:ಕೊಟ್ರೇಶ್ ಎಸ್. ಉಪ್ಪಾರ್

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ 40ನೇ ಸಾಹಿತ್ಯ ಪಯಣ ಹೆಜ್ಜೆ

ಹಾಸನ : ಕಣ್ಣ ಸುಳಿಯೊಳಗೆ ಕವನ ಸಂಕಲನದೊಳಗಿನ ಬಹುತೇಕ ಕವಿತೆಗಳಲ್ಲಿ ಪ್ರೀತಿ, ಪ್ರೇಮ, ವಿರಹ, ಉಲ್ಲಾಸ, ಸಡಗರ, ಹತಾಶೆ, ದಾಂಪತ್ಯ, ನೈತಿಕತೆ ಹೀಗೆ ಮಾನವೀಯ ಮೌಲ್ಯಗಳು ಗರ್ಭೀಕರಿಸಿಕೊಂಡಿವೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕ ಹಾಸನದ ಶಾಂತಿನಗರ ವೃತ್ತದ ಜೀವಿತ ಟ್ರೇರ್ಸ್ ಹಿಂಭಾಗದಲ್ಲಿರುವ ವೀರಶೆಟ್ಟಿಯವರ ಅನ್ನಪೂರ್ಣೇಶ್ವರಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕವಯಿತ್ರಿ ಎಚ್.ಬಿ.ಚೂಡಾಮಣಿಯವರ “ಕಣ್ಣ ಸುಳಿಯೊಳಗೆ” ಕವನ ಸಂಕಲನ ಅವಲೋಕನ ಹಾಗೂ 40ನೇ ಸಾಹಿತ್ಯ ಪಯಣ ಹೆಜ್ಜೆಯಲ್ಲಿ ಭಾಗಿಯಾಗಿ ಮಾತನಾಡಿ ಕಣ್ಣ ಸುಳಿಯೊಳಗೆ ಚೂಡಾಮಣಿಯವರ ಮಾಗಿದ ಭಾವವಿದೆ.

ಇವರ ಕವಿತೆಗಳನ್ನು ಓದುತ್ತಾ ಹೋದಂತೆಲ್ಲಾ ಪ್ರೇಮಕವಿ ಕೆ.ಎಸ್.ನರಸಿಂಹ ಸ್ವಾಮಿಯವರು ನೆನಪಾಗುತ್ತಾರೆ. 66ರ ವಯೋಮಾನದಲ್ಲೂ ಎಲ್ಲದರಲ್ಲೂ ಪ್ರೀತಿ, ಪ್ರೇಮವನ್ನು ಕಾಣುವುದು, ಬದುಕಿನ ಅನುಭಾವವನ್ನು ಅಕ್ಷರ ರೂಪದಲ್ಲಿ ನೀಡಿರುವುದು ಚೂಡಾಮಣಿಯವರ ವಿಶೇಷತೆ. ಮಿತಭಾಷಿ, ಸಹೃದಯಿ, ಮೃದುಸ್ವಭಾವದ ವ್ಯಕ್ತಿತ್ವದವರಾದ ಚೂಡಾಮಣಿಯವರ ಕವಿತೆಗಳಲ್ಲಿ ಜೀವನಾನುಭವವಿದೆ ಎಂದರು.

ಕವಯಿತ್ರಿ ರಾಣಿ ಸಿ. ಚರಾಶ್ರೀ ಕೃತಿ ಕುರಿತು ಮಾತನಾಡಿ ಕಾವ್ಯ ಮೊದಲೋ, ಕವಿ ಮೊದಲೋ ಎಂಬ ಪ್ರಶ್ನೆ ಬಂದಾಗ ಕಾವ್ಯವೇ ಮೊದಲಾಗುವುದು. ಕಾವ್ಯದಿಂದ ಕವಿ ಗುರುತಿಸಿಕೊಳ್ಳಬೇಕೇ ಹೊರತು ಕವಿಯಿಂದ ಕವಿತೆ ಗುರುತಿಸಿಕೊಳ್ಳಬಾರದು. ಚೂಡಾಮಣಿಯವರ ಕವಿತೆಗಳಲ್ಲಿ ಗಂಡು-ಹೆಣ್ಣಿನ ಪ್ರಣಯ, ಪ್ರೀತಿ, ಸೆಳೆತ, ವಿರಹ, ಮಿಲನಗಳನ್ನು ವರ್ಣನೆಯಿದೆ. ಪ್ರೀತಿಯ ಹತ್ತು ಹಲವು ಮುಖಗಳು ಇವರ ಕವಿತೆಗಳಲ್ಲಿ ಹೂವಾಗಿ ಅರಳಿವೆ. ಇವರ ಕವಿತೆಗಳನ್ನು ಓದಿದಂತೆಲ್ಲಾ ಕನ್ನಡ ಸಿನೆಮಾದ ಹಳೆಯ ಹಾಡುಗಳು ನೆನಪಾಗುತ್ತವೆ.

ಜಾನಪದ ನಮ್ಮ ಕಣ್ಮುಂದೆ ಸುಳಿಯುತ್ತದೆ. ದಾಸರ ಪದಗಳು ಸ್ಮರಣೆಗೆ ಬರುತ್ತವೆ. ವಯಸ್ಸು ಕೇವಲ ದೇಹಕ್ಕೆ ಮಾತ್ರ ಆದರೆ ಮನಸ್ಸಿಗಲ್ಲ. ಮನಸ್ಸು ಸದಾ ಯೌವನಭರಿತವಾಗಿರುತ್ತದೆ ಎನ್ನುವುದಕ್ಕೆ ಚೂಡಾಮಣಿಯವರ ಕವಿತೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ವಿಚ್ಛೇದನಕ್ಕೆ ಕೋರ್ಟಿಗೆ ಹೋಗಿ ಸಂಸಾರ ಹಾಳುಮಾಡಿಕೊಳ್ಳುವ ಸಂದರ್ಭದಲ್ಲಿ ವರ್ತಮಾನದ ಪ್ರತಿಯೊಬ್ಬರಿಗೂ ಚೂಡಾಮಣಿಯವರ ಕವಿತೆಗಳು ಜೀವನೋತ್ಸಾಹವನ್ನು ನೀಡುತ್ತವೆ. ನಮ್ಮ ಕಾವ್ಯ ಸಮಾಜಕ್ಕೆ ಸ್ಪಂದಿಸಿದಾಗ ಮಾತ್ರ ಕವಿ ಗೆಲ್ಲುತ್ತಾನೆ. ಕಣ್ಣ ಸುಳಿಯೊಳಗೆ ಕವನ ಸಂಕಲನ ದಾಂಪತ್ಯದೊಳಗಿನ ಪ್ರೀತಿಯ ಸುಳಿಯೊಳಗೆ ಬಂಧಿಯಾಗಿಸುವ ಆ ಮುಖೇನ ಸಮೃದ್ಧ ದಾಂಪತ್ಯ ಸಾಗಿಸುವ ಪರಿಯನ್ನು ಕಲಿಸುತ್ತದೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ.ಸಿ. ಗೀತಾ ಮಾತನಾಡಿ ಸಾಹಿತ್ಯ ವೇದಿಕೆ ಪ್ರಾರಂಭವಾದಾಗಿನಿಂದಲೂ ಚೂಡಾಮಣಿಯವರು ವೇದಿಕೆ ಜೊತೆ ನಿಂತಿದ್ದಾರೆ. ಅವರು ಈಗಾಗಲೇ “ಹೃದಯಗೀತೆ” ಎಂಬ ಕವನ ಸಂಕಲನವನ್ನು ಕೊಟ್ಟಿದ್ದು ಪ್ರಸ್ತುತ “ಕಣ್ಣ ಸುಳಿಯೊಳಗೆ” ಕವನ ಸಂಕಲನ ಅವರ ದ್ವಿತೀಯ ಕೃತಿಯಾಗಿದೆ. ಅತಿಥಿಗಳು ಹೇಳಿದ ಹಾಗೆ ಇವರ ಕವಿತೆಗಳು ಸಾಮಾಜಿಕ ಹಾಗೂ ಕೌಟುಂಬಿಕ ಮೌಲ್ಯಗಳು ಅಡಗಿವೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಬಹುಮುಖ್ಯ ಉದ್ಧೇಶವೇ ಹೊಸ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವುದು. ಈ ನಿಟ್ಟಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ವೇದಿಕೆ ಗುಣಾತ್ಮಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಕೃತಿಕತೃ ಎಚ್.ಬಿ.ಚೂಡಾಮಣಿ, ಹಾಸನ ಜಿಲ್ಲೆಯ ಕದಂಬ ಸೇನೆಯ ಜಿಲ್ಲಾಧ್ಯಕ್ಷ ಎ.ಎಚ್. ಗಣೇಶ್ ಅಂಕಪುರ, ಹಿರಿಯ ಸಾಹಿತಿ ಹಾಗೂ ರಾಜ್ಯ ಬರಹಗಾರರ ಬಳಗದ ಗೌರವಾಧ್ಯಕ್ಷ ಗೊರೂರು ಅನಂತರಾಜು, ಜನನಿ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷೆ ಎಚ್.ಎಸ್.ಭಾನುಮತಿ, ಹಿರಿಯ ಗೈಡರ್ ಎಚ್.ಜಿ.ಕಾಂಚನಮಾಲ, ಪ್ರಾಯೋಜಕರಾದ ಕೆ.ವೀರಶೆಟ್ಟಿ ಸೇರಿದಂತೆ ಹಲವರು ಮಾತನಾಡಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಗಿರಿಜಾ ನಿರ್ವಾಣಿ, ಪದ್ಮಾವತಿ ವೆಂಕಟೇಶ್, ಮಂಜುಳಾ ಪ್ರಸಾದ್, ಸರೋಜ ಟಿ.ಎಂ, ಚಂದ್ರಕಲಾ ಎಂ. ಆಲೂರು, ಸುಭದ್ರಾಬಾಯಿ, ಗೊರೂರು ಅನಂತರಾಜು, ನೀಲಮ್ಮ, ವೀರಶೆಟ್ಟಿ, ಸ್ವಾಮಿಗೌಡ ಸೇರಿದಂತೆ ಹಲವರು ವಾಚಿಸಿದರು. ಕವಯಿತ್ರಿ ಗಿರಿಜಾ ನಿರ್ವಾಣಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.

admin
the authoradmin

Leave a Reply

Translate to any language you want