CrimeLatest

ರೌಡಿಶೀಟರ್ ಸಾಹಿಲ್ ಅಲಿಯಾಸ್  ಚುವ್ವಾ ಶ್ರೀರಂಗಪಟ್ಟಣದಲ್ಲಿ ಖತಂ ಆಗಿದ್ದೇಗೆ?

ರೌಡಿಶಂ ಮಾಡಿದವರು ಯಾರೂ ನೆಮ್ಮದಿಯಾಗಿ ಬದುಕುಳಿದ ಉದಾಹರಣೆಗಳಿಲ್ಲ.. ಕೊಲೆ, ಸುಲಿಗೆ, ವಂಚನೆ ಮಾಡಿ ಸುಖವಾಗಿರುತ್ತೇನೆ ಎಂದು ಕೊಳ್ಳುವುದು ಅವರಿಗೆ ಅವರೇ ಮಾಡಿಕೊಳ್ಳುವ ವಂಚನೆಯಾಗುತ್ತದೆಯೇ ವಿನಃ ಅದೊಂದು ಬದುಕಾಗಲು ಸಾಧ್ಯವೇ ಇಲ್ಲ. ಏಕೆಂದರೆ ಮಾಡಿದ ಅಷ್ಟು ಪಾಪದ ಕೃತ್ಯಗಳಿಗೆ ಒಂದಲ್ಲ ಒಂದು ದಿನ ಕಂದಾಯ ಕಟ್ಟಲೇ ಬೇಕಾಗುತ್ತದೆ.. ಆ ದಿನ ಬಂದಾಗ ಇನ್ಯಾರಿಂದಲೋ ಬೀದಿ ಹೆಣವಾಗಿ ಹೋಗಬೇಕಾಗುತ್ತದೆ ಇವತ್ತು ಮಂಡ್ಯದ ಶ್ರೀರಂಗಪಟ್ಟಣ ಬಳಿಯ ಬೀದಿಯಲ್ಲಿ ಹೆಣವಾಗಿ ಹೋದ ರೌಡಿಶೀಟರ್ ಮಹಮದ್ ಸಾಹಿಲ್  ಅಲಮ್ ಅಲಿಯಾಸ್ ಚುವ್ವಾ(35) ಇದಕ್ಕೆ ಸಾಕ್ಷಿಯಾಗಿದ್ದಾನೆ.

ಅನ್ಯಾಯ ಮಾಡಿ ಹೆಚ್ಚು ದಿನ ಬದುಕೋದು ಕಷ್ಟವೇ.. ಮಾಡಿದ ಕರ್ಮಗಳು ತಿರುಗಿ ಬರುತ್ತವೆ ಎನ್ನುವುದು ಅಕ್ಷರಶಃ ಸತ್ಯ. ಹೀಗಿದ್ದರೂ ಕರ್ಮವನ್ನೇ ಮಾಡುತ್ತಾ ಹೋದರೆ ಅದಕ್ಕೊಂದು ದಿನ ಬೆಲೆ ತೆರಬೇಕಾಗುತ್ತದೆ. ಸಿನಿಮಾದಲ್ಲಿ ಮಚ್ಚು ಹಿಡಿದು ರೌಡಿಶಂ ಮಾಡಿದಂತೆ ನಿಜ ಜೀವನದಲ್ಲಿ ಸಾಧ್ಯವೇ ಇಲ್ಲ. ಅದರಲ್ಲೂ ಒಬ್ಬನ ಹೊಡೆದು ಬದುಕುತ್ತೇವೆ ಎನ್ನುವುದು ಅಸಾಧ್ಯದ ಮಾತು. ನ್ಯಾಯಯುತವಾಗಿ ಬದುಕುವವರಿಗೆ ಅನ್ನಕ್ಕೆ ತೊಂದರೆಯಾಗಲಾರದು. ಆದರೆ ಐಷಾರಾಮಿ ಬದುಕು ಸಿಗದೆ ಹೋಗಬಹುದಷ್ಟೆ.

ಇವತ್ತು ನ್ಯಾಯದ ಮಾರ್ಗ ಹೆಚ್ಚಿನವರಿಗೆ ರುಚಿಸುತ್ತಿಲ್ಲ. ಹೆದರಿಸಿ, ಬೆದರಿಸಿ, ವಂಚಿಸಿ ಕಾರು, ಬಂಗಲೆ ಖರೀದಿಸಿ ನೋಡುವವರಿಗೆ ಶ್ರೀಮಂತರಂತೆ ಬದುಕ ಬಹುದು ಆದರೆ ನೆಮ್ಮದಿಯಿಂದ ದಿನಗಳನ್ನು ಕಳೆಯಲು ಸಾಧ್ಯನಾ? ಶತ್ರುಗಳ, ಪೊಲೀಸರ ಭಯದಲ್ಲಿಯೇ ಬದುಕಬೇಕಾಗುತ್ತದೆ. ಅಂತಹದೊಂದು ಬದುಕು ನಿಜವಾಗಿಯೂ ಬೇಕಾ? ಬೀದಿಯಲ್ಲಿ ಯಾರದ್ದೋ ಕೈನಿಂದ ಸಾವನ್ನು ತಂದುಕೊಳ್ಳುವ ಜೀವನ ಬೇಕಾ? ಒಮ್ಮೆ ಕುಳಿತು ಯೋಚಿಸಿದರೆ ಅದನ್ನೆಲ್ಲ ಬಿಟ್ಟು ನ್ಯಾಯಯುತ ಬದುಕನ್ನು ಸವೆಸೋಣ ಎಂಬ ಆಲೋಚನೆ ಬಾರದಿರದು.

ರೌಡಿ ಹೆಂಡ್ತಿ ಯಾವತ್ತಿದ್ರೂ ವಿಧವೆನೇ… ಎಂಬ ಮಾತು ಸುಖ ಸುಮ್ಮನೆ ಬಂದಿದ್ದಲ್ಲ… ಪರಿಸ್ಥಿತಿಯನ್ನು ನೋಡಿಯೇ ಅದು ಚಾಲ್ತಿಗೆ ಬಂದಿದೆ. ಮೊದಲ ತಪ್ಪು ಮಾಡಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವಾಗಲೇ ವ್ಯಕ್ತಿಗೆ ಕಾನೂನು ಶಿಕ್ಷೆ ಜತೆಗೆ ಆತನನ್ನು ತಿದ್ದುವ ಕೆಲಸವೂ ಆಗಬೇಕಿದೆ. ಆಗ ಬಹುಶಃ ರೌಡಿಶಂ ತಡೆಯಬಹುದೇನೋ? ಕಠಿಣ ಕ್ರಮವಾಗದ ಹೊರತು ಅಲ್ಲಲ್ಲಿ ಪುಡಿ ರೌಡಿಗಳು ಹುಟ್ಟಿಕೊಳ್ಳುವುದು ಸಾಯುವುದು ಈ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ.

ಇದೀಗ ಹೆಣವಾಗಿ ಹೋದ ಪುಡಿ ರೌಡಿ ಮಹಮದ್ ಸಾಹಿಲ್  ಅಲಮ್ ಅಲಿಯಾಸ್ ಚುವ್ವಾ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದನು. ಆದರೆ ಪೊಲೀಸರ ಕೈಗೆ ಸಿಗುವ ಮುನ್ನವೇ ಪರಲೋಕ ಸೇರಿದ್ದಾನೆ.. ಈತನ ನಂಬಿದ ಕುಟುಂಬದ ಕಥೆ ಏನು? ಸತ್ತವನು ಹೋದ.. ಇದ್ದವರ ಕಥೆ ಏನು? ಯೋಚಿಸಿದರೆ ಭಯವಾಗುತ್ತದೆ. ಆದರೂ ಬುದ್ದಿ ಬಾರದೆ ಅಂತಹದ್ದೇ ಕೃತ್ಯಗಳಿಗೆ ಕೈ ಹಾಕುವುದು ನಿಜಕ್ಕೂ ದುರಂತವೇ…

ಇಷ್ಟಕ್ಕೂ ಯಾರು ಈ ಪುಡಿ ರೌಡಿ ಮಹಮದ್ ಸಾಹಿಲ್  ಅಲಮ್ ಅಲಿಯಾಸ್ ಚುವ್ವಾ? ಎಂದು ನೋಡುತ್ತಾ ಹೋದರೆ ಇವನೇನು ಮಹಾರೌಡಿ ಏನಲ್ಲ. ರೌಡಿಶೀಟರ್ ಆಗಿದ್ದ ಹೀಗಾಗಿ ಅಪರಾಧ ಕೃತ್ಯಗಳನ್ನು ಎಸಗುತ್ತಾ ನಾನು ರೌಡಿ ಏನು ಬೇಕಾದರೂ ಮಾಡುತ್ತೇನೆ ಎನ್ನುತ್ತಾ ಹೆದರಿಸುತ್ತಾ ಹವಾ ಸೃಷ್ಟಿಸಿದ್ದನು.  ಮೂಲತಃ ಮೈಸೂರಿನ ಮಂಡಿಮೊಹಲ್ಲಾದ ನಿವಾಸಿಯಾಗಿದ್ದ ಈತ ರಿಯಲ್ ಎಸ್ಟೇಟ್ ಮಾಡುತ್ತಿದ್ದನು. ಬೆಂಗಳೂರಲ್ಲಿ ನೆಲೆಸಿದ್ದ ಈತ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರಿಂದ ಹಲವು ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಈತ ತಲೆ ತಪ್ಪಿಸಿಕೊಂಡು ಮಂಡ್ಯ, ಶ್ರೀರಂಗಪಟ್ಟಣ, ಮೈಸೂರಿನಲ್ಲಿ ರಾತ್ರಿ ವೇಳೆಯಲ್ಲಿ ಓಡಾಡುತ್ತಿದ್ದನು.

ಕಳೆದ ಐದು ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದನು. ಈತನ ವ್ಯವಹಾರಗಳೆಲ್ಲವೂ ಕತ್ತಲೆಯಲ್ಲಿಯೇ ನಡೆಯುತ್ತಿತ್ತು. ರಿಯಲ್ ಎಸ್ಟೇಟ್ ಹೆಸರಲ್ಲಿ ವಂಚಿಸೋದು, ಬೆದರಿಸೋದು, ಹಣದ ವ್ಯವಹಾರ ಮಾಡೋದು, ಬೇರೆಯವರನ್ನು ಹೆದರಿಸಿ ಹಣ ಕೀಳೋದು, ಹಫ್ತಾವಸೂಲಿ ಈತನ ಜಾಯಮಾನವಾಗಿತ್ತು. ಹೀಗಾಗಿ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಮೈಸೂರಿನ ಉದಯಗಿರಿ, ಎನ್ ಆರ್ ಮೊಹಲ್ಲಾ, ವಿವಿಪುರಂ ಪೊಲೀಸ್ ಠಾಣೆಗಳಲ್ಲದೆ, ತುಮಕೂರು ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಹೀಗಿದ್ದರೂ ಪೊಲೀಸರಿಗೆ ಕಣ್ಣಿಗೆ ಬೀಳದಂತೆ ತನ್ನ ಕತ್ತಲಲೋಕದ ವ್ಯವಹಾರವನ್ನು ಮಾಡಿಕೊಂಡು ಹೋಗುತ್ತಿದ್ದನು. ಹೀಗಿದ್ದ ಸಾಹಿಲ್ ಹೆಣವಾಗಿ ಹೋಗುತ್ತಾನೆ ಎಂದು ಯಾರು ನಂಬಿರಲಿಲ್ಲ.

ಅವತ್ತು ಮೇ 6 ಶ್ರೀರಂಗಪಟ್ಟಣ ಸಮೀಪದ ಬೆಂಗಳೂರು ರಸ್ತೆಯ ಹಳ್ಳಿಮನೆ ಹೋಟೆಲ್ ಹಿಂಭಾಗದ ಪೊದೆಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ರಕ್ತ ಸಿಕ್ತವಾಗಿದ್ದ ಹೆಣವೊಂದು ಪತ್ತೆಯಾಗಿತ್ತು. ಕೊಲೆ ಮಾಡಿದವರು ಅದ್ಯಾವ ರೀತಿಯಲ್ಲಿ ಕೊಚ್ಚಿದ್ದರೆಂದರೆ ಥೇಟ್ ಸಿನಿಮಾ ಮಾದರಿಯಲ್ಲಿಯೇ ಅಟ್ಟಾಡಿಸಿ ಕೊಚ್ಚಿ ಹಾಕಿದ್ದರು. ಕೈ, ಕಾಲು, ತಲೆ, ಹೊಟ್ಟೆ ಹೀಗೆ ಎಲ್ಲೆಂದರಲ್ಲಿ ಮಚ್ಚು ಬೀಸಿದ್ದರು.

ಇನ್ನು ಬೀದಿ ಹೆಣವಾಗಿ ಹೋದವನು ಅಮಾಯಕನಲ್ಲ, ಅವನೊಬ್ಬ ರೌಡಿ, ಕ್ರಿಮಿನಲ್ ಎನ್ನುವುದು ನೋಡಿದ ತಕ್ಷಣವೇ ಗೊತ್ತಾಗುವಂತಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ಎಸ್ಪಿ ಶೋಭರಾಣಿ,  ಎಎಸ್ ಪಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಕುಮಾರ್, ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ಸಿಪಿಐ ಕುಮಾರ್, ಪಿಎಸ್ ಐ ವಿವೇಕಾನಂದ, ಆನಂದ್ ಮತ್ತು ಸಿಬ್ಬಂದಿ ದೌಡಾಯಿಸಿದರು. ಹೆಣವನ್ನು ನೋಡಿದ ತಕ್ಷಣವೇ ಆತ ರೌಡಿ ಶೀಟರ್ ಎಂಬುದು ಗೊತ್ತಾಗಿತ್ತು. ಅಲ್ಲದೆ ಅವನ ಜಾತಕವೂ ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ ಶವದ ಮಹಜರು ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಇದಾದ ನಂತರ ಮೃತ ಸಾಹಿಲ್ ಸಂಬಂಧಿ ಮುಜಾಮಿಲ್ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಮಂಡ್ಯ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಅವರ ಆದೇಶದ ಮೇರೆಗೆ ಪ್ರಕರಣ ಭೇದಿಸಲು ಅಡಿಷನಲ್ ಎಸ್ಪಿ ಸಿ.ಇ. ತಿಮ್ಮಯ್ಯ, ಡಿವೈಎಸ್ಪಿ ಎಸ್ ಇ ಗಂಗಾಧರಸ್ವಾಮಿ, ಯು ಡಿ ಕೃಷ್ಣಕುಮಾರ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆನಂದಕುಮಾರ್, ಹೆಚ್.ಆರ್.ವಿವೇಕಾನಂದ, ಶರತ್ ಹೆಚ್.ಪಿ ನೇತೃತ್ವದಲ್ಲಿ ಎಸ್ ಐ ವಿನೋದ್ ಕುಮಾರ್, ಎಎಸ್ ಐ ಕುಮಾರ್, ಲೋಕೇಶ್, ರವಿಕಿರಣ್, ಹಫೀಜ್ ಪಾಷ, ಮುಂಜುನಾಥ್, ದಿನೇಶ್, ರಾಜೇಶ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ರೌಡಿಶೀಟರ್ ಸಾಹಿಲ್ ನ ಜನ್ಮಜಾಲಾಡಿ ಅವನು ಯಾರೊಂದಿಗೆ ಸಂಪರ್ಕದಲ್ಲಿದ್ದ, ಅವತ್ತಿನ ಲೋಕೇಶನ್ ಎಲ್ಲವನ್ನೂ ಕಲೆ ಹಾಕಿತ್ತು. ಅಲ್ಲದೆ ಕೊಲೆ ಮಾಡಿದವರ ಬಗೆಗಿನ ಮಾಹಿತಿಯನ್ನು ಕಲೆ ಹಾಕಿತ್ತು. ಆದರೆ ಕೊಲೆ ಮಾಡಿದ ಬಳಿಕ ಹಂತಕರು ಭಯದಲ್ಲಿ ಜೊತೆಯಲ್ಲಿಯೇ ಓಡಾಡುತ್ತಿದ್ದರು. ಅಲ್ಲದೆ ನಮ್ಮ ಹಿಂದೆ ಪೊಲೀಸರು ಬಿದ್ದಿದ್ದಾರೆ ಎಂಬುದು ಗೊತ್ತಾಗಿತ್ತು. ಹೀಗಾಗಿ ತಲೆಮರೆಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಮಂಡ್ಯ ಸುತ್ತಮುತ್ತಲೇ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅವರು ಅಲ್ಲಿಂದಾಚೆಗೆ ಹೋಗಲಾಗದೆ ಚಡಪಡಿಸುತ್ತಿದ್ದರು.

ಹಂತಕರು ಮಂಡ್ಯ ಜಿಲ್ಲೆಯನ್ನು ಬಿಟ್ಟು ಆಚೆಗೆ ದಾಟಿಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿ ತನಿಖಾ ತಂಡ ಗಸ್ತು ತಿರುಗುತ್ತಾ ಹುಡುಕಾಟ ಆರಂಭಿಸಿದ್ದರು. ಕೊಲೆಯಾದ ಆರನೇ ದಿನಕ್ಕೆ ಅಂದರೆ ಮೇ.11ರಂದು ತನಿಖಾ ತಂಡ ಗಸ್ತಿನಲ್ಲಿದ್ದಾಗ ಆರೋಪಿಗಳು ಮಂಡ್ಯ ಮತ್ತು ನಗುವಿನ ಹಳ್ಳಿ ಅಂಡರ್ ಪಾಸ್ ಬಳಿ ಇದ್ದಾರೆ ಎಂಬ ಮಾಹಿತಿ ಗೊತ್ತಾಗಿತ್ತು. ಹೀಗಾಗಿ ಕಾರ್ಯಾಚರಣೆ ನಡೆಸಿದ ತನಿಖಾ ತಂಡ ರೌಡಿಶೀಟರ್ ಮಹಮದ್ ಸಾಹಿಲ್ ಆಲಮ್ ಅಲಿಯಾಸ್ ಚುವ್ವಾ ನನ್ನು ಕೊಲೆಗೈದ ಆರು ಮಂದಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಆ ನಂತರ ಬಂಧಿತರನ್ನು ವಿಚಾರಣೆ ನಡೆಸಿದಾಗ ಅವರೆಲ್ಲರೂ ಮೈಸೂರಿನವರೇ ಆಗಿದ್ದು, ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಮ್ಮದ್ ಅಪ್ಸರ್(38), ರಾಜೀವ್ ನಗರದ ನಿವಾಸಿಗಳಾದ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಲಾರಿ ಚಾಲಕ ಮಹಮ್ಮದ್ ಅಹಮದ್ ಖಾನ್(38), ಕಾರ್ ಡೀಲರ್ ಮುಜಾಹಿದ್ ಪಾಷಾ(37), ಎಲೆಕ್ಟ್ರೀಷಿಯನ್ ಸೈಯದ್ ಮುದಾಸೀರ್(27), ಕಲ್ಯಾಣಗಿರಿ ನಿವಾಸಿ ಯಾಸೀನ್ ಷರೀಪ್(31), ಶಾಂತಿ ನಗರದ ನಿವಾಸಿ ಮಹಮ್ಮದ್ ಅಜರ್(32) ಎಂಬುದು ತಿಳಿದು ಬಂದಿತ್ತು.

ಈ ಆರು ಮಂದಿ ಹಂತಕರಿಗೂ ರೌಡಿ ಸಾಹಿಲ್ ಗೂ ಹಿಂದಿನಿಂದಲೂ ಕಿರಿಕ್ ನಡೆಯುತ್ತಲೇ ಇತ್ತು. ಸಾಹಿಲ್ ಇವರಿಂದ ಹಫ್ತಾ ವಸೂಲಿ ಮಾಡುತ್ತಿದ್ದನು ಜತೆಗೆ 24ಲಕ್ಷ ರೂಪಾಯಿ ಸಾಲದ ವ್ಯವಹಾರಗಳಲ್ಲಿ ದ್ವೇಷವೂ ಹುಟ್ಟಿತ್ತು. ಈ ವಿಚಾರದಲ್ಲಿ ಸಾಹಿಲ್ ಸಿಕ್ಕಾಪಟ್ಟೆ ಹಿಂಸೆ ಕೊಡಲಾರಂಭಿಸಿದ್ದನು. ಹೀಗಾಗಿ ಸಾಹಿಲ್ ನ ಎತ್ತಿದರೆ ನಾವೆಲ್ಲರೂ ನೆಮ್ಮದಿಯಾಗಿರಬಹುದೆಂದು ಆರು ಮಂದಿ ಸ್ಕೆಚ್ ಹಾಕಿದ್ದರು. ಹೀಗಾಗಿಯೇ ಮೇ.5ರಂದು ಮಂಗಳವಾರ ಶ್ರೀರಂಗಪಟ್ಟಣ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯ ಹಳ್ಳಿಮನೆ ಹೋಟೆಲ್ ಹಿಂಭಾಗದ ಪಾಲಹಳ್ಳಿಗೆ ಹೋಗುವ ರಸ್ತೆ ಪಕ್ಕದ ಜಮೀನಿಗೆ ಸಂಜೆ 4.30ರ ವೇಳೆಗೆ ಕರೆಯಿಸಿಕೊಂಡಿದ್ದರು. ಅಲ್ಲಿಯೇ ಒಂದಷ್ಟು ಹೊತ್ತು ಮಾತುಕತೆಯನ್ನೂ ನಡೆಸಿದ್ದರು.

ಆ ನಂತರ ಹಂತಕರ ಪಡೆ ಮೊದಲೇ ಬರುವಾಗ ಸ್ಕೆಚ್ ಹಾಕಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದರಿಂದ ಮಾತಿಗೆ ಮಾತು ಬೆಳೆದು ತಮ್ಮ ಬಳಿಯಿಂದ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಮಚ್ಚು ಬೀಸಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಸಾಹಿಲ್ ರಕ್ತದ ಮಡುವಿನಲ್ಲಿ ಬಿದ್ದು ಉಸಿರುಚೆಲ್ಲಿದ್ದಾನೆ. ಆ ನಂತರ ಕೈಕಾಲು ಕಟ್ಟಿ ಪೊದೆಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದರು. ಇದೀಗ ಪೊಲೀಸರು ಹಂತಕರನ್ನು ಬಂಧಿಸಿದ್ದು ಅವರಿಂದ ಹತ್ಯೆಗೆ ಬಳಸಿದ ಮಾರಕಾಸ್ತ್ರ, ಮೊಬೈಲ್ ಮತ್ತು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಒಪ್ಪಿಸಿದ ಮೇರೆಗೆ ಆರೋಪಿಗಳಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಟ್ಟಾರೆ ಬೆಂಗಳೂರಿನಲ್ಲಿದ್ದುಕೊಂಡು ಮಂಡ್ಯ, ಮೈಸೂರಿನಲ್ಲಿ ಹವಾ ಸೃಷ್ಟಿಸಿದ್ದ ರೌಡಿಶೀಟರ್ ಮಹಮದ್ ಸಾಹಿಲ್  ಅಲಮ್ ಅಲಿಯಾಸ್ ಚುವ್ವಾ ತನ್ನ 35ನೇ ವರ್ಷಕ್ಕೆ ಬರಲಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ಅಲ್ಲಿಗೆ ಅವನ ಅಪರಾಧದ ಬದುಕು ಅಂತ್ಯಗೊಂಡಿದೆ.

ಕ್ರೈಂ ಸಂಬಂಧಿತ ಸುದ್ದಿ ಮತ್ತು ಸ್ಟೋರಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ….

 

-ಬಿ.ಎಂ.ಲವಕುಮಾರ್

 

admin
the authoradmin

Leave a Reply

Translate to any language you want