ಮೈಸೂರು: ಮಳೆಗಾಲದಲ್ಲಿ ಧುಮ್ಮಿಕ್ಕಿಹರಿಯುವ ಲಕ್ಷ್ಮಣತೀರ್ಥ ನದಿ ಬೇಸಿಗೆಯಲ್ಲಿ ಹುಣಸೂರಿನ ಹೃದಯಭಾಗದಲ್ಲಿ ಹರಿಯುವಾಗ ಹಸಿರಾಗುತ್ತದೆ. ಇದು ಅಚ್ಚರಿ ಎನಿಸಿದರೂ ಸತ್ಯ. ಇದು ಇವತ್ತು ನಿನ್ನೆಯಿಂದಲ್ಲ ಹಲವು ವರ್ಷಗಳಿಂದಲೂ ಹೀಗೆಯೇ ಆಗುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಹುಡುಕುತ್ತಾ ಹೋದರೆ ನದಿನೀರು ಕಡಿಮೆಯಾಗಿ ಪಟ್ಟಣದ ಕಲ್ಮಶ ನೀರು ಸೇರುವುದು, ಜನ ತ್ಯಾಜ್ಯಗಳನ್ನು ನದಿಗೆ ಎಸೆಯುವುದರಿಂದ ನದಿಯಲ್ಲಿರುವ ಜೊಂಡುಹುಲ್ಲು ಇದೆಲ್ಲವನ್ನು ಆಶ್ರಯಿಸಿ ಬೆಳೆಯುವುದರಿಂದ ಹಸಿರಾಗಿ ಮೈದಾನದಂತೆ ಕಾಣುತ್ತದೆ.

ಕೊಡಗಿನಲ್ಲಿ ಹುಟ್ಟಿ ನಾಗರಹೊಳೆ ಮೂಲಕ ಹರಿದು ಬರುವ ಲಕ್ಷ್ಮಣ ತೀರ್ಥ ನದಿ ಹುಣಸೂರು ಹೃದಯ ಭಾಗದಲ್ಲಿ ಹರಿದು ಹೋಗುವಾಗಿ ಸಮತಟ್ಟಾದ ಜಾಗವಾಗಿರುವುದರಿಂದ ನಿಧಾನಕ್ಕೆ ಹರಿಯುತ್ತದೆ. ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಇಲ್ಲಿ ಜೊಂಡು ಹುಲ್ಲುಗಳು ಇಡೀ ನದಿಯನ್ನು ಆವರಿಸಿ ಬೆಳೆಯುವುದರಿಂದ ಇಡೀ ನದಿ ಹಸಿರಾಗಿ ಕಾಣುತ್ತದೆ..
ಬೇಸಿಗೆಯಲ್ಲಿ ದೂರದಿಂದ ಬಂದವರು ಹುಣಸೂರಿನ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿರುವ ಸೇತುವೆಯನ್ನು ಹಾದು ಹೋಗುವಾಗ ನದಿಯತ್ತ ಕಣ್ಣು ಹಾಯಿಸಿ ಹಸಿರಾಗಿ ಮೈದಾನದಂತೆ ಕಾಣುವ ಅಪರೂಪದ ದೃಶ್ಯವನ್ನು ನೋಡಿ ಅಚ್ಚರಿಯ ನೋಟ ಬೀರುತ್ತಾರೆ. ಏಕೆಂದರೆ ಮೇಲ್ನೋಟಕ್ಕೆ ಇದನ್ನು ನದಿ ಎಂದು ಒಪ್ಪಿಕೊಳ್ಳುವುದೇ ಕಷ್ಟವಾಗುತ್ತದೆ. ಕಾರಣ ಇಡೀ ನದಿ ಕಲುಷಿತಗೊಂಡಿದ್ದು, ಅದರ ಮೇಲೆ ಜೊಂಡು ಹುಲ್ಲು ಬೆಳೆದು ಹಸಿರು ಕ್ರಾಂತಿ ಸೃಷ್ಟಿಯಾಗುತ್ತಿದೆ.

ದುರಂತ ಏನೆಂದರೆ ಈ ಬಗ್ಗೆ ಇದುವರೆಗೆ ಅಧಿಕಾರ ಅನುಭವಿಸಿದ ಶಾಸಕರಾಗಲೀ, ಸ್ಥಳೀಯ ಆಡಳಿತವಾಗಲೀ ನದಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಲೇ ಇಲ್ಲ. ಇದರಿಂದ ಮಳೆಗಾಲದಲ್ಲಿ ಮುಂಗಾರು ಚೇತರಿಕೆಯಾಗಿ ನದಿಯಲ್ಲಿ ಪ್ರವಾಹ ಕಾಣಿಸಿದ ಸಂದರ್ಭ ನದಿಯ ಕೊಳಚೆ ಮಾಯವಾಗಿ, ಜೊಂಡು ಹುಲ್ಲು, ಇನ್ನಿತರ ಜನ ಸಸ್ಯಗಳು ಕೊಚ್ಚಿಕೊಂಡು ಹೋಗಿ ಸ್ವಚ್ಛವಾಗುತ್ತದೆಯಾದರೂ ಬಳಿಕ ಬೇಸಿಗೆ ಬರುತ್ತಿದ್ದಂತೆಯೇ ಯಥಾ ಪ್ರಕಾರ ಕಲುಷಿತಗೊಳ್ಳುವುದು ಮಾಮೂಲಿಯಾಗಿದೆ.
ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಜನರ ನಿರ್ಲಕ್ಷ್ಯದಿಂದ ಪ್ರತಿದಿನವೂ ಪಟ್ಟಣದ ತ್ಯಾಜ್ಯ ನದಿಯನ್ನು ಸೇರುತ್ತಿದೆ. ಜತೆಗೆ ಪಾಚಿ, ಜೊಂಡು ಹುಲ್ಲು, ಜಲಸಸ್ಯಗಳು ಬೆಳೆದು ಇರುವ ನೀರು ಕಲುಷಿತವಾಗುತ್ತದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಅದೇ ನೀರನ್ನು ಅದೆಷ್ಟೋ ಮಂದಿ ಬಳಸುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಇದೆಲ್ಲದರ ನಡುವೆ ಕೊಡಗಿನ ಇರ್ಪುನಲ್ಲಿ ಹಾಲ್ನೊರೆಯಂತೆ ಉಕ್ಕುವ ನೀರು ಇದೇನಾ ಎಂಬ ಪ್ರಶ್ನೆ ಮೂಡದಿರದು.

ಹುಣಸೂರು ಮೂಲಕ ಹರಿದು ಮುಂದೆ ಮಂಡ್ಯದ ಕೆ.ಆರ್.ಪೇಟೆ ಬಳಿ ಕಾವೇರಿ ನದಿಯನ್ನು ಸೇರುವ ಲಕ್ಷ್ಮಣತೀರ್ಥ ನದಿ ಈ ಮಟ್ಟಿಗೆ ಕಲುಷಿತಗೊಂಡರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಇದಕ್ಕೊಂದು ಶಾಶ್ವತ ಪರಿಹಾರವನ್ನು ಸ್ಥಳೀಯ ಆಡಳಿತ ಅಥವಾ ಸರ್ಕಾರ ಮಾಡಬೇಕಿದೆ. ಇಲ್ಲದೆ ಹೋದರೆ ಪ್ರತಿರ್ವಷವೂ ಇದು ಪುನರಾವರ್ತನೆ ಆಗುತ್ತಲೇ ಇರುತ್ತದೆ. ಇನ್ನು ಈ ನೀರನ್ನು ಬಳಸುವವರನ್ನು ಆ ಲಕ್ಷ್ಮಣನೇ ಕಾಪಾಡಬೇಕಿದೆ…
B M Lavakumar








