CrimeLatestMysore

ದುಬಾರೆಯಲ್ಲಿ ಸಾಕಾನೆಗಳ ಕಾಳಗಕ್ಕೆ  ಪ್ರವಾಸಿ ಮಹಿಳೆ ಬಲಿ… ಇಷ್ಟಕ್ಕೂ ಆಗಿದ್ದೇನು?

ದುಬಾರೆ: ಕಾವೇರಿ ನದಿಯಲ್ಲಿ ಸಾಕಾನೆಗಳಿಗೆ ಸ್ನಾನ ಮಾಡಿಸುತ್ತಿದ್ದ ಸಂದರ್ಭ ಸಾಕಾನೆಗಳ ನಡುವೆ ಕಾಳಗ ನಡೆದಿದ್ದು ಈ ವೇಳೆ ಬಿದ್ದ ಆನೆಯ ಅಡಿಯಲ್ಲಿ ಸಿಲುಕಿ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಕೊಡಗಿನ ಕುಶಾಲನಗರ ಬಳಿಯ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ.

ಮೃತಪಟ್ಟ ಪ್ರವಾಸಿ ಮಹಿಳೆಯನ್ನು ಚೆನ್ನೈ ಮೂಲದ ಜಿನ್ನು(33) ಎಂದು ಗುರುತಿಸಲಾಗಿದ್ದು, ಸದ್ಯ ಮೃತದೇಹವನ್ನು ಕುಶಾಲನಗರದ ಸೈರಸ್ ಖಾಸಗಿ ಆಸ್ಪತ್ರೆಯಲ್ಲಿಡಲಾಗಿದೆ.

ದುಬಾರೆಯಲ್ಲಿ ಗಜಮಜ್ಜನ ಹೆಸರುವಾಸಿಯಾಗಿದ್ದು, ಇದನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ. ಬೆಳಗ್ಗಿನ ಸಮಯದಲ್ಲಿ ಸಾಕಾನೆಗಳನ್ನು ಕರೆತಂದು ಕಾವೇರಿ ನದಿಯಲ್ಲಿ ಅವುಗಳಿಗೆ ಮಾವುತರು ಮತ್ತು ಕಾವಡಿಗಳು ಸ್ನಾನ ಮಾಡಿಸುತ್ತಾರೆ. ಈ ವೇಳೆ ಸಾಕಾನೆಗಳ ತುಂಟಾಟ ನೋಡುವುದೇ ಮಜಾ.. ಸೊಂಡಿಲಿನಲ್ಲಿ ನೀರು ತುಂಬಿ ಮೈಮೇಲೆ ಹಾರಿಸಿಕೊಳ್ಳುವ ದೃಶ್ಯ ಖುಷಿ ಕೊಡುತ್ತದೆ.

ಮಾವುತರು ಹೇಳಿದಂತೆ ಕೇಳುತ್ತಾ ಸ್ನಾನ ಮಾಡಿಸಲು ಸಹಕರಿಸುವುದನ್ನು ನೋಡುವುದೇ ಸಂಭ್ರಮ.. ಈ ಕಾರಣಕ್ಕಾಗಿಯೇ ಗಜಮಜ್ಜನ ವೇಳೆ ಪ್ರವಾಸಿಗರು ನೆರೆಯುತ್ತಾರೆ. ಅದರಂತೆ ಕುಟುಂಬ ಸಮೇತ ಬಂದಿದ್ದ ಜಿನ್ನು ಮತ್ತು ಆಕೆಯ ಪತಿ ಜೋಯಲ್ ಸೇರಿದಂತೆ ಹಲವರು ನದಿ ಬಳಿ ನಿಂತು ದೃಶ್ಯವನ್ನು ವೀಕ್ಷಿಸುತ್ತಿದ್ದರು. ಈ ವೇಳೆ  ಸಾಕಾನೆಯೊಂದು ಇನ್ನೊಂದು ಸಾಕಾನೆ ಮೇಲೆ ದಾಳಿ ನಡೆಸಿದ ಪರಿಣಾಮ ಅದು ನೆಲಕ್ಕೆ ಬಿದ್ದಿದೆ.

ಈ ವೇಳೆ ಅಲ್ಲಿಯೇ ಇದ್ದ ಜಿನ್ನು ಅದರಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಈ ಘಟನೆ ನಡೆದು ಹೋಗಿತ್ತು. ಅವರ ಪತಿ ಜೋಯಲ್ ಪತ್ನಿಯನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ.  ಸಾಕಾನೆಗಳಾದ ಕಂಚನ್ ಮತ್ತು ಮಾರ್ತಾಂಡ ಆನೆಗಳು ಸ್ನಾನ ಮಾಡಿಸುತ್ತಿದ್ದ ವೇಳೆ ಪರಸ್ಪರ ಕಾದಾಟ ನಡೆಸಿದ್ದು, ಮಾವುತರು ನಿಯಂತ್ರಿಸುತ್ತಿದ್ದರೂ ಮುನ್ನುಗ್ಗಿದ ಕಂಜನ್ ಆನೆ, ಮಾರ್ತಾಂಡ ಆನೆಗೆ ಗುದ್ದಿದ್ದು, ಮಾರ್ತಾಂಡ ಆಯ ತಪ್ಪಿ ಕೆಳಗೆ ಬಿದ್ದಾಗ, ಈ ಮಹಿಳೆ ಆನೆಯ ಕೆಳಗೆ ಸಿಲುಕಿ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

admin
the authoradmin

Leave a Reply

Translate to any language you want