
ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ )ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು, ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.
21 ಕೃತಿ : ಚಿನ್ನದಂಥ ಮಾತುಗಳು
ಕರ್ತೃ : ಎಸ್.ಚನ್ನಪ್ಪ
ಪ್ರಪಂಚದ ಪ್ರಸಿದ್ಧ ಮಹಾಪುರುಷರ ಶ್ರೇಷ್ಠ ನುಡಿಮುತ್ತುಗಳನ್ನ ಸುಂದರವಾಗಿ ಪೋಣಿಸಿ ಈ ಒಂದು ಪುಸ್ತಕದ ಹಾರವನ್ನಾಗಿಸಿ ಲೋಕಾರ್ಪಣೆ ಮಾಡಿದ್ದಾರೆ ನಮ್ಮ ನಾಡಿನ ಹಿರಿಯ ಲೇಖಕರಲ್ಲಿ ಒಬ್ಬರಾದ ಎಸ್. ಚನ್ನಪ್ಪನವರು.
ಅಪರೂಪ ಎನ್ನಬಹುದಾದ ಗಣ್ಯಾತಿಗಣ್ಯರ ನಾಣ್ಣುಡಿಗಳನ್ನು ಬಹಳ ಎಚ್ಚರಿಕೆಯಿಂದ ಆಯ್ದುಕೊಂಡು ಬಲು ಸರಳ ಮತ್ತು ಸುಲಭವಾಗಿ ಸಂಗ್ರಹಿಸಿದ್ದಾರೆ. ಲೇಖಕರ ಪಾಲಿಗೆ ಹೆಚ್ಚಿನ ಪರಿ- ಶ್ರಮ ಇಲ್ಲದ ಇದೊಂದು ಸಂಪಾದಿತ ಕೃತಿ ಹೌದು. ಹಾಗಾಗಿ ಈ ಬಗೆಯ ಪುಸ್ತಕ ಬರೆಯುವುದು ಅಥವ ಬರೆದ ನಂತರ ಪ್ರಕಟಿಸು ವುದು ಹೊಗಳಿಕೊಳ್ಳುವಂಥ ಒಂದು ಮಹತ್ತರ ಸಾಧನೆ ಏನೂ ಆಗುವುದಿಲ್ಲ ಎಂದು ಧಾರಾಳವಾಗಿ ಹೇಳಬಹುದು.
ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೆ ಸರಳ ಜ್ಞಾನಾರ್ಜನೆಗೆ ಬೇಕಾದ ಹಾಗೂ ಸಾಮಾನ್ಯ ತಿಳುವಳಿಕೆಗೆ ಅಗತ್ಯವಿರುವ ಅಥವ ಬೌದ್ಧಿಕ ಬೆಳವಣಿಗೆಗೆ ನೆರವಾಗ ಬಹುದಾದ ಅನುತ್ತಮವಲ್ಲದ(ಉತ್ತಮವಾದ) ಒಂದು ಪ್ರಯೋಜನಕಾರಿ ಸಂಕಲನ ಈ ಕೃತಿ
(ಮೈ.ವಿ.ವಿ.ಮಾನಸಗಂಗೋತ್ರಿ, ಮೈಸೂರು, ಆಗಸ್ಟ್ 1979 ಗ್ರಂಥಲೋಕ)
22 ಕೃತಿ:ಪ್ರಕೃತಿ ಚಿಕಿತ್ಸಾಚಾರ್ಯ ಕೆ.ಲಕ್ಷ್ಮಣಶರ್ಮ
ಕರ್ತೃ:ಹೊ.ಶ್ರೀನಿವಾಸಯ್ಯ
ಪ್ರೊಫೆಶನಲೀ ಎಂಜಿನಿಯರ್ ಉದ್ಯೋಗದಲ್ಲಿರುವ ಹೊ.ಶ್ರೀನಿವಾಸಯ್ಯ, ಈ ಹಿಂದೆ ಬರೆದ “ನಾ ಕಂಡ ಜರ್ಮನಿ” ಎಂಬ ಅನುಭಾವಿಕ ಗ್ರಂಥಕ್ಕೆ ಕರ್ನಾಟಕ ರಾಜ್ಯದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಲಭಿಸಿದೆ, ಇದಕ್ಕಾಗಿ ಅಭಿನಂದನೆಗಳು. ಇಂತಹ ಖ್ಯಾತ ಲೇಖಕರಿಂದ ಪ್ರಸಕ್ತ ಸಾಲಿನ ಮತ್ತೊಂದು ಪುಸ್ತಕ “ಪ್ರಕೃತಿ ಚಿಕಿತ್ಸಾಚಾರ್ಯ ಕೆ.ಲಕ್ಷ್ಮಣ ಶರ್ಮ”ಎಂಬ ಪ್ರಯೋಜನಕಾರಿ ಕೃತಿ ಪ್ರಕಟವಾಗಿದೆ, ಇದು ಮೆಚ್ಚುವಂತದ್ದು.
ದ.ಭಾರತದ “ಪ್ರಸಿದ್ಧ ಪ್ರಕೃತಿ ಚಿಕಿತ್ಸೆ ಗುರುವರೇಣ್ಯ” ಎಂದು ಹೊಗಳಿಸಿಕೊಳ್ಳುವ Institute of Natural Therapeutics ಸಂಸ್ಥಾಪಕ, The Life Natural ಪತ್ರಿಕೆಯ ಸಂಸ್ಥಾಪಕ- ಸಂಪಾದಕ ಹಾಗೂ ಹೆಸರಾಂತ ವಕೀಲ-ಕಮ್-ವೇದಿಕ್ ಸ್ಕಾಲರ್ ಲಕ್ಷ್ಮಣಶರ್ಮ ಜೀವನ ಚರಿತ್ರೆ ಕುರಿತಾದ ಪುಸ್ತಕ ಇದಾಗಿದೆ. ಶರ್ಮರವರ ಬಗ್ಗೆ ಆಳ ಅಧ್ಯಯನ ನಡೆಸಿ, ಅಗತ್ಯ ಮಾಹಿತಿ ಸಂಗ್ರಹಿಸಿ, ಪ್ರಸ್ತುತ ಕೃತಿಯನ್ನು ಪ್ರಕಟಿಸಿದ್ದಾರೆ.
ಲೇಖಕರು ಸರಿಯಾದ್ದೆಲ್ಲವನ್ನು ತಮಗೆ ಬೇಕಾದಂತೆ ತಮ್ಮದೇ ಅನುಭವೀ ಭಾಷೆಯಲ್ಲಿ ಭಟ್ಟಿ ಇಳಿಸಿ ವಿಶಿಷ್ಟ ಶೈಲಿಯ ವಾಕ್ಯ ಗಳನ್ನು ಉಪಯುಕ್ತ ರೀತಿಯ ಪ್ಯಾರಾಗಳಾಗಿಸಿ ಅಚ್ಚುಕಟ್ಟಾಗಿ ಅಳವಡಿಸಿ ಪುಸ್ತಕ ರೂಪದಲ್ಲಿ ಬೆಳಕಿಗೆ ತಂದಿದ್ದಾರೆ. ದಿವಂಗತ ಲಕ್ಷ್ಮಣಶರ್ಮ ಆಗಿನ ಬ್ರಿಟಿಷ್ ಕಾಲದಲ್ಲಿ ಪ್ರಾರಂಭಿಸಿದ್ದ ಪ್ರತಿಷ್ಠಿತ “ದಿ ಲೈಫ್ ನ್ಯಾಚುರಲ್” ಪತ್ರಿಕೆಯು ಅವರ ನಿಧನದ ನಂತರ ಅವರ ಪುತ್ರ ತ್ಯಾಗರಾಜಶರ್ಮ ನೇತೃತ್ವದಲ್ಲಿ ಈಗಲೂ ಪ್ರಕಟ ವಾಗುತ್ತಿದೆ ಎಂಬುದನ್ನು ಪುಸ್ತಕದಲ್ಲಿ ತಿಳಿಸಿದ್ದಾರೆ.
1879ರ ಡಿಸೆಂಬರ್ ಮಾಹೆಯ ಒಂದಿನ ತಮಿಳುನಾಡಿನ ಪುದುಕೋಟೆಯಲ್ಲಿ ಜನಿಸಿದ ಲಕ್ಷ್ಮಣಶರ್ಮ ವರ್ಷಗಟ್ಟಲೆ ಪ್ರಕೃತಿ ಮತ್ತು ಮನುಷ್ಯರ ಸೇವೆಯನ್ನು ಹಲವಾರು ರೀತಿಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕೈಗೊಂಡು 1965 ಮೇ 3ರಂದು ಅಸು ನೀಗಿದರು ಎಂಬ ಮಾಹಿತಿ ಇದರಲ್ಲಿದೆ.
ಇಂಥ ಶ್ರೇಷ್ಠ ಪ್ರಕೃತಿ ಜೀವಿಯ *ಬಾಲ್ಯ, *ಯಔವ್ವನ, *ಪ್ರಕೃತಿ ಚಿಕಿತ್ಸೆಯ ಪ್ರಯೋಗ, *ಬರವಣಿಗೆ, *ಸಂಸ್ಥೆಗಳ ಸೇವೆ, *ಪ್ರಚಾರಕ-ಗುರು, *ಸ್ವಾಧೀನಸ್ವಾಸ್ಥ್ಯ, *ಮಹಾವಿದ್ಯಾ, *ಅಂತ್ಯಕಾಲ, *ಗುರು-ಶಿಷ್ಯರು, *ನುಡಿಮುತ್ತು ಎಂಬುವ 11 ಶಿರೋನಾಮೆ ಅಡಿಯಲ್ಲಿ ಪ್ರಕೃತಿ ಚಿಕಿತ್ಸ ಪಿತಾಮಹನ ಜೀವನ ಚಿತ್ರಣವನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಇವುಗಳ ಪೈಕಿ (1)ಪ್ರಕೃತಿ ಚಿಕಿತ್ಸೆಯ ಪ್ರಯೋಗ (2)ಪ್ರಚಾರಕ-ಗುರು
ಎಂಬ ಈ ಎರಡು ಅಧ್ಯಾಯಗಳು ಸಮಾಜ ಸುಧಾರಣಾ ಬದುಕಿನ ಬಗ್ಗೆ ವಿಶೇಷ ಅರಿವು ಮೂಡಿಸುತ್ತವೆ. *ಸ್ವಾಧೀನಸ್ವಾಸ್ಥ್ಯ, *ಮಹಾವಿದ್ಯಾ, *ಅಂತ್ಯಕಾಲ, *ನುಡಿಮುತ್ತು, ಎಂಬ ಅಧ್ಯಾಯಗಳು ಮೌಲ್ಯಯುತವಾಗಿವೆ. ಅನಾರೋಗ್ಯ ಮತ್ತು ಆರೋಗ್ಯ ಇವೆರಡರ ಸಂಬಂಧಿತವಾಗಿದ್ದು, ರೋಗವು ಹೇಗೆ ಹುಟ್ಟುತ್ತದೆ? ಇದರ ನಿವಾರಣೆ ಹೇಗೆ? ಎಂಬುದರ ಬಗ್ಗೆ ಅರಿವು ಮೂಡಿಸುತ್ತವೆ.
“ಪ್ರಕೃತಿ ಚಿಕಿತ್ಸಾಚಾರ್ಯ ಕೆ.ಲಕ್ಷ್ಮಣಶರ್ಮ” ಎಂಬ ಈ ಕೃತಿಯು ಓರ್ವ ಉತ್ತಮ ವ್ಯಕ್ತಿಯ ಜೀವನ ಚರಿತ್ರೆ ಆಗಿರುವುದರಿಂದ ಪ್ರತಿಯೊಬ್ಬ ಓದುಗನಿಗೂ ಉಪಯುಕ್ತ ಮಾಹಿತಿ ಪುಸ್ತಕ ಆಗಬಹುದು.
(ಮೈವಿವಿ, ಮಾನಸಗಂಗೋತ್ರಿ ಮೈಸೂರು, 1979-ಗ್ರಂಥಲೋಕ)
23 ಕೃತಿ: ಮಕ್ಕಳ ಮೆಂಡಲ್
ಕರ್ತೃ: ಎಮ್ಮೆಸ್.ವೆಂಕಟರಾಮಯ್ಯ (ಹರಿಚರಣ)
ಹರಿಚರಣ ಎಂಬ ಕಾವ್ಯನಾಮದಿಂದ ಕನ್ನಡ ವಿಜ್ಞಾನ ಸಾರಸ್ವತ ಲೋಕಕ್ಕೆ ಚಿರಪರಿಚಿತ ಲೇಖಕರು ಎಂ.ಎಸ್.ವೆಂಕಟರಾಮಯ್ಯ. ವಿಶೇಷವಾಗಿ ಮಕ್ಕಳ ವಿಜ್ಞಾನ ಸಾಹಿತ್ಯಕ್ಕೆ ಇವರ ಕೊಡುಗೆಯೂ ಅಪಾರ. ತಳಿಶಾಸ್ತ್ರ ಅಧ್ಯಯನಕ್ಕೆ ಬುನಾದಿ ಹಾಕಿದವರಲ್ಲಿ ಅಥವ ತಳಿಶಾಸ್ತ್ರ ಜ್ಞಾನಕ್ಕೆ – ಸಂಶೋಧನೆಗೆ ರೂವಾರಿ ಎನಿಸಿದ ಮತ್ತು ಪ್ರಪಂಚದ ತಳಿಶಾಸ್ತ್ರ ವಿಜ್ಞಾನಿಗಳಲ್ಲಿ ಅಗ್ರ ಗಣ್ಯರಾದ ವಿಖ್ಯಾತ ತಳಿಶಾಸ್ತ್ರಜ್ಞ ಪ್ರೊಫೆಸರ್ ಮೆಂಡಲ್ ಕುರಿತು ಬರೆದ ಕೃತಿ ಇದು.
ಹರಿಚರಣರವರು ಶಾಲಾ-ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ಎಳೆಯ ಹಾಗೂ ಯುವ ವಿದ್ಯಾರ್ಥಿಗಳನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ರಚಿಸಿರುವ ವೈಜ್ಞಾನಿಕ ಪುಸ್ತಕ ಎನಿಸಿದರೂ ಸಹ ಸರಳ ವಿಜ್ಞಾನ ತಿಳಿದುಕೊಳ್ಳುವ ಸಾಮಾನ್ಯ ಜ್ಞಾನ ಆಸಕ್ತರಿಗೂ ಈ ಪುಸ್ತಕವು ಪ್ರಯೋಜನ ಆಗುವಂತಿದೆ!
ಲೇಖಕರು ಬುದ್ಧಿವಂತಿಕೆಯಿಂದ ತಳಿಶಾಸ್ತ್ರ ವಿಜ್ಞಾನಿ ಮೆಂಡಲ್ ರವರ ಜೀವನ ಚರಿತ್ರೆ ಜತೆಗೇ ಅವರ ವೈಜ್ಞಾನಿಕ ಸಂಶೋಧನೆ, ಸಾರ್ಥಕ ಸಾಧನೆ ಹಾಗು ಮತ್ತಿತರ ಮುಖ್ಯ ಅಂಕಿ-ಅಂಶವನ್ನೂ ಚಿತ್ರಗಳ ಸಮೇತ ಅಂದರೆ ಸಚಿತ್ರವಾಗಿ ಮಕ್ಕಳಿಗೆ ತಕ್ಕುದಾದ ರೀತಿಯಲ್ಲಿ ಅವರಿಗೆ ಅರ್ಥವಾಗುವಂತೆ ಬರೆದಿದ್ದಾರೆ.
ಈ ಪುಸ್ತಕವನ್ನು ಕೊಂಡು ಓದುವವರ ಹಣಕ್ಕೆ ಮೋಸವಾಗದಂತೆ ಸಾಮಾನ್ಯ ಓದುಗರಿಗೆ ನಿರಾಸೆ ಆಗದಂತೆ ರಚಿಸಲಾಗಿದೆ. ಎಲ್ಲ ವರ್ಗದ ಮಕ್ಕಳಿಗೆ ಅರ್ಥವಾಗುವಂತೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ಮನವರಿಕೆ ಆಗುವಂಥ ಸರಳ ಕನ್ನಡ ಭಾಷೆಯಲ್ಲಿ ಮೆಂಡಲ್ ವಿಜ್ಞಾನಿಯ ಬಗ್ಗೆ ಸಂಕ್ಷಿಪ್ತವಾಗಿ ಸ್ವಾರಸ್ಯಕರವಾಗಿ ಪರಿಚಯ ಮಾಡಿ ಕೊಡುತ್ತದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬೌದ್ಧಿಕವಾಗಿ ಬೆಳೆಯಲು ಈ ತರಹದ ಮಕ್ಕಳ ಜ್ಞಾನ-ವಿಜ್ಞಾನ ಸಾಹಿತ್ಯಕೃಷಿ ಇವತ್ತಿನ ಮಕ್ಕಳ ಪ್ರಪಂಚಕ್ಕೆ ಅಗತ್ಯ ಇದೆ. ಇಂತಹ ವೈಜ್ಞಾನಿಕ ಲೇಖಕರಿಗೆ ಓದುಗರಿಂದ ಹೆಚ್ಚಿನ ಪ್ರೋತ್ಸಾಹ ದೊರಕಿದರೆ ಅನುಕೂಲವೂ ಇದೆ.
(ಮೈವಿವಿ,ಮಾನಸಗಂಗೋತ್ರಿ, ಮೈಸೂರು,ಡಿಸೆಂಬರ್ 1981,ಗ್ರಂಥಲೋಕ)
24 ಕೃತಿ : ಕನ್ನಡಹುಲಿ
ಕರ್ತೃ : ಕೊತ್ತಲ ಮಹಾದೇವಪ್ಪ
ಆಧುನಿಕ ಕರ್ನಾಟಕದ ನಿರ್ಮಾಪಕರಲ್ಲಿ ಆದಿ ಪುರುಷರಾದ ಡೆಪ್ಯುಟಿ ಚೆನ್ನಬಸಪ್ಪನವರ ಪುಣ್ಯ ಸ್ಮರಣೆಯ ಶತಮಾನೋತ್ಸವ ಆಚರಿಸುವಂಥ ಈ ಶುಭ ಸಂದರ್ಭದಲ್ಲಿ ಮಹನೀಯರನ್ನು ಸ್ಮರಿಸುವ ಕಾರ್ಯ ಮಾಡಿದ್ದಾರೆ ಕನ್ನಡಹುಲಿ ಪುಸ್ತಕದ ಲೇಖಕ ಕೊತ್ತಲ ಮಹಾದೇವಪ್ಪ. ಇಂದಿನ ಯುವ ಜನಾಂಗಕ್ಕೆ ಚೆನ್ನಬಸಪ್ಪನವರ ಸಾಹಸಮಯ ಸಾಧನೆಗಳನ್ನೂ ಸಾರ್ಥಕವಾದ ಜೀವನಶೈಲಿಗಳನ್ನೂ ಸರಿಯಾದ ರೀತಿಯಲ್ಲಿ ವಿವರಿಸಲಾಗಿದೆ.
ಭಾರತದ ಸ್ವಾತಂತ್ರ್ಯ ದಿನಗಳ ಪ್ರಾರಂಭದಲ್ಲಿ ಕನ್ನಡನಾಡಿನ ಸ್ಥಿತಿಗತಿ, ಅಭಿವೃದ್ಧಿ ಯೋಜನೆ, ಮಾದರಿ ರಾಜ್ಯದ ಪುನರುತ್ಥಾನ ಮುಂತಾದವುಗಳ ಅನುಷ್ಠಾನಕ್ಕೆ ಅಗತ್ಯವಿದ್ದ ತನು ಮನ ಧನ ಸರ್ವಸ್ವ ಮುಡಿಪಾಗಿಟ್ಟು ಬಾಳಿದ ನಿಸ್ವಾರ್ಥ ಕನ್ನಡ ಹುಲಿಗಳು ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ್ದರು. ಈ ಸತ್ಯವನ್ನು ಕೃತಿ ಮೂಲಕ ನೆನಪಿಸುತ್ತಾರೆ.ಡೆಪ್ಯುಟಿಚೆನ್ನಬಸಪ್ಪ ನವರಂತಹ ಮಹಾಚೇತನದ ಜೀವನವನ್ನು ಸ್ಥೂಲವಾಗಿ ಪರಿಚಯ ಮಾಡಿರುವುದು ಶ್ಲಾಘನೀಯ. ಈ ದಿಸೆಯಲ್ಲಿ ಈ ಪುಟ್ಟ ಪುಸ್ತಕದ ತಿರುಳು ಮತ್ತು ಲೇಖಕನ ಬರಹಶಕ್ತಿ ಅಪೂರ್ವ ರೀತಿಯಲ್ಲಿ ಇರುವುದಲ್ಲದೇ ಸಕಾಲದಲ್ಲಿ ಬಿಡುಗಡೆಯೂ ಆಗಿದೆ.
ಡೆಪ್ಯುಟಿ ಚೆನ್ನಬಸಪ್ಪನವರ ವ್ಯಕ್ತಿತ್ವದ ಕಿರುಪರಿಚಯ ಮಾಡಿರುವ ಲೇಖಕ ಮಹದೇವಪ್ಪ ಪುಸ್ತಕದ ಕೊನೆಯಲ್ಲಿ ಮಾತ್ರ ತಮ್ಮ ಕವನಗಳನ್ನೂಸಹ ಕ್ರೋಢೀಕರಿಸಿದ್ದಾರೆ ಆದರೆ ಅಂದಿನ ಕಾಲದ ಇಂತಹ ಧೀರನನ್ನು ಕುರಿತು ಬರೆದ ಇನ್ನಿತರರ ಕವನಗಳನ್ನೂ ಸಹ ಪುಸ್ತಕದ ಎರಡನೇ ಭಾಗದಲ್ಲಿ ಅಳವಡಿಸಿದ್ದರೆ ಇನ್ನಷ್ಟು ಅಮೋಘವಾಗಿ ರೂಪುಗೊಳ್ಳುತ್ತಿತ್ತು. ಕೈಗೆ ಎಟಕುವ ಬೆಲೆಗೆ ಕೊಳ್ಳಬಹುದಾದ “ಕನ್ನಡಹುಲಿ” ಪುಸ್ತಕದ ಮುಖಪುಟ ಒಂಥರಾ ಆಕರ್ಷಕವಾಗಿದೆ.
(ಮೈವಿವಿ, ಮಾನಸಗಂಗೋತ್ರಿ ಮೈಸೂರು ಡಿಸೆಂಬರ್1981 ಗ್ರಂಥಲೋಕ ಮಾಸಪತ್ರಿಕೆ)
25 ಕೃತಿ : ಕಡಲಾಚೆ ಕನ್ನಡದ ತೇರು
ಕರ್ತೃ : ಪ್ರೊ.ಸಿ.ರಾಮಸ್ವಾಮಿ
ವಿಶ್ವಮಾನ್ಯ ಪ್ರಶಸ್ತಿ ವಿಜೇತ ಪ್ರೊ.ಸಿ.ರಾಮಸ್ವಾಮಿಯವರ “ಕಡಲಾಚೆ ಕನ್ನಡದ ತೇರು” ಕೃತಿಯು ಸೃಜನೇತರ ಸಾಹಿತ್ಯ ಪ್ರಪಂಚದಲ್ಲಿ ತನ್ನದೆ ಆದ ಒಂದು ವಿಶಿಷ್ಟ ಛಾಪು ಮೂಡಿಸು ವಂತಿದೆ. ಹೀಗಾಗಿ ಇದನ್ನು ಕತೆ, ಕಾದಂಬರಿಯಂತೆ ವಿಮರ್ಶೆ ಮಾಡುವುದೆಂದರೆ ಅದೊಂದು ದುಸ್ಸಾಹಸವೆ ಸರಿ! ಏಕೆಂದರೆ, ಸಾಗರ ವನ್ನಾಗಲೀ ಪರ್ವತ ವನ್ನಾಗಲೀ ಅಂದವಾಗಿ ಬಣ್ಣಿಸ ಬಹುದೆ ಹೊರತು ಹಗುರವಾಗಿ ಟೀಕೆ-ಟಿಪ್ಪಣಿ ಮಾಡಲು ಸಾಧ್ಯವೆ? ಸಹೃದಯವಂತಿಕೆ ಯಿಂದ ವಿಮರ್ಶಿಸಿದಾಗ ಖಂಡಿತವಾಗಿ ಈ ಕೃತಿಯು ಇತ್ತೀಚಿಗೆ ಪ್ರಕಟವಾಗುತ್ತಿರುವ ಕನ್ನಡ ಪುಸ್ತಕಗಳಲ್ಲಿ ಹೊಸ ದಾಖಲೆ ನಿರ್ಮಿಸುವಂತಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ದಿಟ ಕನ್ನಡಿಗನ ಕರ್ತವ್ಯ, ಜವಾಬ್ಧಾರಿ, ನಿರ್ವಹಣೆ ಎಂದರೆ ಯಾವುವು? ಕನ್ನಡಾಭಿಮಾನ? ನಿರಭಿಮಾನ? ಕನ್ನಡ ತನ ಮತ್ತು ಕನ್ನಡ ಸೇವೆ ಎಂದರೇನು? ಮುಂತಾದ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರಕಲು ಪ್ರೊ.ರಾಮಸ್ವಾಮಿಯವರ “ಕಡಲಾಚೆ ಕನ್ನಡದ ತೇರು” ಪುಸ್ತಕವನ್ನು ಓದಿ ತಿಳಿದುಕೊಳ್ಳಬಹುದು! ಕನ್ನಡನಾಡನ್ನು, ಕನ್ನಡತಾಯನ್ನು ಹಾಗೂ ಕನ್ನಡದ ಉತ್ಸವಗಳನ್ನು ವಿಜೃಂಭಿಸುತ್ತೇವೆಂಬ ಕುಂಟುನೆಪದಲ್ಲಿ ಅವರವರ ಸ್ವಾರ್ಥಕ್ಕೆ ತಮ್ಮ ವೃತ್ತಿ-ಪ್ರವೃತ್ತಿಯನ್ನಾಗಿಸಿಕೊಂಡವರೇ ಹೆಚ್ಚು! ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಸ್ವಯಂಘೋಷಿತ ಅಗ್ರ ವ್ಯಗ್ರ ಉಗ್ರ ಚಳುವಳಿ ನೇತಾರ,(ದೊಣ್ಣೆ?)ನಾಯಕ ಎಂದು ಮುಂತಾಗಿ ತಮ್ಮದೇ ಹಣದಿಂದ ಹಣೆಪಟ್ಟಿ ಹಚ್ಚಿಸಿಕೊಳ್ಳುವರೇ ಹೆಚ್ಚಾಗಿದ್ದಾರೆ.
ಕನ್ನಡ ಸಂಘ-ಸಂಸ್ಥೆಗಳ ಸಂಸ್ಥಾಪಕ ಗೌರವಾಧ್ಯಕ್ಷ, ಕಾರ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಂಚಾಲಕ, ಎಂದೆಲ್ಲಾ ಸ್ವಯಂಘೋಷಿತ ಬೊಗಳೆ, ಓಳುಗಳ ಸ್ವಪ್ರತಿಷ್ಟೆ ಉಳ್ಳವರು ದಿನೇ ದಿನೇ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ?! ಆದರೆ, ಈ ಕೃತಿಯ ಲೇಖಕರು ಅಂಥ ಢೋಂಗಿ ಗುಂಪಿಗೆ ಸೇರಿದವರಲ್ಲ. ಲೇಖಕರು ತಮ್ಮ ಜೀವನದ ಹಾದಿಯಲ್ಲಿ ಎದುರಾದ ಕನ್ನಡದ ಮತ್ತು ಕನ್ನಡಿಗರ ಬಗ್ಗೆ ಸ್ವಯಂ ಅನುಭವಿಸಿದ ಅನುಭವಗಳನ್ನು ಮಾತ್ರ ಓದುಗರಿಗೆ ಉಣಬಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ವಿಶ್ವದಲ್ಲೆ ಘನತೆವೆತ್ತ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದು ಜನಪ್ರಿಯ ಅಧ್ಯಾಪಕರೂ ಎನಿಸಿದ್ದಾರೆ ಪ್ರೊ.ರಾಮಸ್ವಾಮಿ. ಇದೆಲ್ಲದರ ಜತೆಗೆ ಇವರು ಹವ್ಯಾಸಿ ನಟ, ಕಲಾವಿದ, ಗಾಯಕ ಮುಂತಾದ ಬಹುಮುಖ ಪ್ರತಿಭೆಯುಳ್ಳ ಕಲಾಪೂರ್ಣರು. ಇಂಥವರೊಬ್ಬರು ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆಯನ್ನು ನೀಡುವ ಮೂಲಕ ಎಲ್ಲರಂತಲ್ಲ ತಾವು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಪ್ರಚಾರ ಪ್ರಿಯರಾಗದೆ ವಿಚಾರ ಪ್ರಿಯರಾಗಿ ಪ್ರಾಮಾಣಿಕತೆಯಿಂದ ಕನ್ನಡಮ್ಮನ ಸೇವೆ ಮಾಡುವ ಹಾದಿಯಲ್ಲಿ ಮುನ್ನುಗ್ಗಿ ಗೆಲುವು ಸಾಧಿಸಿದ್ದಾರೆ.
‘ಕಡಲಾಚೆ ಕನ್ನಡದ ತೇರು” ಹೊತ್ತಗೆಯು ಕನ್ನಡ ನಾಡು-ನುಡಿ ಬಗ್ಗೆ ಅಷ್ಟೆ ಅಲ್ಲದೆ, ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ನಾಟಕ, ಚಲನಚಿತ್ರ, ಕ್ರೀಡೆ, ಉತ್ಸವ, ಇತ್ಯಾದಿಗಳ ಬಗ್ಗೆ ಅನೇಕ ಮಾಹಿತಿಯನ್ನು ನೀಡುವಂತಿದೆ. ಏಕೆಂದರೆ, ಕಥಾಸಂಕಲನ ಅಥವ ಕವನ ಸಂಕಲನ, ಕಾದಂಬರಿ, ಪ್ರವಾಸಕಥನ ಇತ್ಯಾದಿ ಯಾವುದೂ ಅಲ್ಲದ ಈ ಕೃತಿಯು ಕನ್ನಡಿಗರ ಮನೋಭಿಲಾಷೆ, ಕನ್ನಡ ನಾಡಿನ ಉತ್ಸವ, ಕನ್ನಡ ತನದ ಇತಿಹಾಸ ಇವುಗಳ ಬಗ್ಗೆ ಹೊಸಬೆಳಕು ಚೆಲ್ಲುತ್ತದೆ. ಕನ್ನಡಿಗನು ಯಾವಾಗ? ಎಲ್ಲಿ? ಹೇಗೆ? ಏನು? ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ತಿಳಿಸಿ ಹೇಳುವ ಸ್ವಂತಿಕೆಯುಳ್ಳ ವಿಶೇಷ ಕೃತಿ ಇದಾಗಿದೆ. ಇದು, ಕನ್ನಡ ಸಂಸ್ಕೃತಿ ಮತ್ತು ಇತಿಹಾಸದ ವರ್ಣನೆಯನ್ನು ಸಂಕ್ಷಿಪ್ತವಾಗಿ ಮತ್ತು ಸುಂದರವಾಗಿ ಬಿಡಿಸಿಡುವ “ಕೈಪಿಡಿ” ಎನ್ನಬಹುದು
ಕರ್ನಾಟಕದ ರಾಜಕೀಯ ಮುತ್ಸದ್ದಿಗಳು, ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳು, ಇನ್ನಿತರ ಗಣ್ಯಾತಿಗಣ್ಯರ ವಿವರಗಳುಳ್ಳ ಮಾಹಿತಿಸಂಗ್ರಹ ಯೋಗ್ಯವಾದ ಈ ಪುಸ್ತಕವನ್ನು ಪ್ರತಿಯೊಬ್ಬ ಕನ್ನಡಿಗರೂ ಕೊಂಡು ಓದಿದರೆ, ಲೇಖಕರ ಅಭಿಲಾಷೆ ಸಾರ್ಥಕವಾಗುತ್ತದೆ ಈ ಅಪರೂಪದ ಸಾಂಸ್ಕೃತಿಕ ದರ್ಪಣದಲ್ಲಿ ಕಂಡು ಬರುವ ಪ್ರಮುಖವಾದ ಪ್ರತಿಬಿಂಬಗಳೆಂದರೆ:
(1) ಕರ್ನಾಟಕ ಏಕೀಕರಣಕ್ಕಾಗಿ ದುಡಿದು ಮಡಿದ ಕನ್ನಡದ ಕಟ್ಟಾಳುಗಳೂ ಕ್ರಾಂತಿಕಾರಿ ರಾಜಕಾರಣಿಗಳೂ ಆಗಿದ್ದ: ಹುಯಿಲುಗೋಳ ನಾರಾಯಣರಾವ್, ಮ.ರಾಮಮೂರ್ತಿ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಟಿ.ಪಿ.ಕೈಲಾಸಂ. ಜಿ.ಪಿ.ರಾಜರತ್ನಂ, ಪಾಟೀಲಪುಟ್ಟಪ್ಪ(ಪಾಪು) ಡೆಪ್ಯುಟಿ ಚನ್ನಬಸಪ್ಪ, ಸರ್ ವಾಲ್ಟರ್, ಕೆಂಗಲ್ ಹನುಮಂತಯ್ಯ, ಕೆ.ಸಿ.ರೆಡ್ಡಿ, ಎಸ್.ನಿಜಲಿಂಗಪ್ಪ, ಡಿ.ದೇವರಾಜಅರಸು, ಮುಂತಾದ ಮಹನೀಯರ ಉಧಾಹರಣೆ ಇರುತ್ತದೆ!
(2) ಕನ್ನಡ-ತುಳು-ಕೊಂಕಣಿ-ಕೊಡವ ಭಾಷಾ ತೌಲನಿಕ ವಿಶ್ಲೇಷಣೆ ಬಹಳ ಸೊಗಸಾಗಿದೆ.
(3) ಕನ್ನಡ ನಾಡು-ನುಡಿಗೆ, ಕನ್ನಡೇತರ, ಕ್ರೈಸ್ತ, ಮುಸಲ್ಮಾನ, ಮುಂತಾದವರ ಕೊಡುಗೆ ಬಗ್ಗೆ ನಿದರ್ಶನಗಳಿವೆ.
(4) ದೇಶ-ವಿದೇಶಗಳಲ್ಲಿನ ಕನ್ನಡ ಸಂಸ್ಕೃತಿ, ಕಲೆ, ಸಾಹಿತ್ಯ, ಕನ್ನಡಿಗರ ಪರಿಸ್ಥಿತಿ, ಕನ್ನಡೋತ್ಸವದ ಸ್ಥಾನ ಮಾನ, ಸ್ಥಿತಿಗತಿ ಇವುಗಳ ಬಗ್ಗೆ ಸಂಕ್ಷಿಪ್ತ ವರದಿಗಳಿದೆ.
(5) ಕನ್ನಡ ಪ್ರಬುದ್ಥ ಕವಿಪುಂಗವರ, ಕಥೆ-ಕಾದಂಬರಿಕಾರರ, ಲೇಖಕರ ಮತ್ತು ಕಲಾವಿದರ ಬಗ್ಗೆ ಕಿರು ಪರಿಚಯವುಳ್ಳ
ಕೆಲವು ಪುಟಗಳಿದೆ.
(6) ರಾಷ್ಟ್ರೀಯ/ಅಂತರ್ರಾಷ್ಟ್ರೀಯ ಮಟ್ಟದ ಕನ್ನಡ ಕ್ರೀಡಾ ಪಟುಗಳ ಬಗ್ಗೆ ಸಾಕಷ್ಟು ಮಾಹಿತಿಪೂರ್ಣ ಲೇಖನವಿದೆ
(7) ಕನ್ನಡ ಪತ್ರಿಕೋದ್ಯಮ ಕ್ಷೇತ್ರದ ದಿಗ್ಗಜರ ಬಗ್ಗೆ ಶ್ಲಾಘನೀಯ ನುಡಿಮುತ್ತುಗಳಿವೆ.
(8) ಕನ್ನಡ ರಂಗಭೂಮಿ, ಚಲನಚಿತ್ರ, ಕಿರುತೆರೆ ವಿಭಾಗಗಳ ಕಲಾವಿದರ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಗಳಿವೆ!
(9) ಕನ್ನಡ ಜಾನಪದ ಕಲಾಕೋವಿದರ, ಯಕ್ಷಗಾನ, ಬಯಲಾಟ, ನೃತ್ಯ-ನಾಟಕ ಕಲಾವಿದರ ಬಗ್ಗೆ ತಿಳಿದುಕೊಳ್ಳಬಹುದಾದ ಬರವಣಿಗೆಯಿದೆ
(10) ಅನಿವಾಸಿ ಕನ್ನಡವರೇಣ್ಯರ ಸಾಧನೆಗಳ ಪ್ರತೀಕವೆನಿಸುವ ವಿಶ್ವಕನ್ನಡ ಸಮ್ಮೇಳನ, ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ, ವಿಚಾರ ಗೋಷ್ಠಿ, ವೈದ್ಯಕೀಯ ಗೋಷ್ಠಿ, ಉದ್ಯಮಿಗಳ ಗೋಷ್ಠಿ, ಪತ್ರಿಕಾಗೋಷ್ಠಿ ಹಾಗೂ ಇನ್ನಿತರ ಗೋಷ್ಠಿಗಳ ಬಗ್ಗೆ ಒಂದು ಸುಂದರ ROUND-UP ಇಲ್ಲಿದೆ.
ಅತ್ಯಾಕರ್ಷಕ ವರ್ಣರಂಜಿತ ಮುಖಪುಟ, ಅಚ್ಚುಕಟ್ಟಾದ ಹಿಂಪುಟ ರಕ್ಷಾ ಕವಚವುಳ್ಳ ಈ ಪುಸ್ತಕಕ್ಕೆ ವಿಖ್ಯಾತ ಲೇಖಕ, ಸಾಹಿತಿ, ಚಲನಚಿತ್ರ ನಿರ್ಮಾಪಕ-ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ರವರ ಮುನ್ನುಡಿ ಇದ್ದು, ಜಾನಪದ ವಿದ್ವಾಂಸ ಪ್ರೊ.ಪಿ.ಕೆ. ರಾಜಶೇಖರ ಅವರಿಂದ ಹಿನ್ನುಡಿ ಇದೆ. ಇಂಥ ಪುಸ್ತಕವನ್ನು ಓದಲು ಪ್ರಾರಂಭಿಸಿದಾಗ ಆದಿಯಿಂದ ಅಂತ್ಯದವರೆಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಒಟ್ಟು 116 ಪುಟಗಳ ಆಫ್‍ಸೆಟ್ ಕಲರ್ ಡಿ.ಟಿ.ಪಿ. ಮುದ್ರಣದಲ್ಲಿರುವ ಈ ಪುಸ್ತಕವು ಕೇವಲ ಸಾಹಿತ್ಯಪ್ರಿಯರಿಗಷ್ಟೆ ಅಲ್ಲದೆ ಕನ್ನಡಕ್ಕಾಗಿ ಬದುಕುವ ಮತ್ತು/ಹಾಗೂ ಬದುಕಿರುವ ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎನಿಸುತ್ತದೆ. ಓದುವ ಹಂಬಲದಿಂದ ನಿಧಾನವಾಗಿ ಪುಟ ತೆರೆದಂತೆ ಲೇಖಕರ ಸ್ವಪರಿಚಯದೊಂದಿಗೆ ಅವರ ಮಡದಿ, ಮಕ್ಕಳು, ತಂದೆ ತಾಯಿ ಹಾಗೂ ಕೃತಿಯನ್ನು ಅರ್ಪಣೆ ಮಾಡಿರುವ ದಿ!!ಪ್ರೊ.ವೈ.ಪಿ. ರುದ್ರಪ್ಪ, ವಿಶ್ರಾಂತ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ, ಇವರ ಭಾವಚಿತ್ರ ಯಥಾವತ್ತಾಗಿ ಮೂಡಿಬಂದಿದೆ. ಇವು ಲೇಖಕರ ಕೃತಜ್ಞತಾಭಾವವನ್ನ ಇಮ್ಮಡಿಗೊಳಿಸುತ್ತವೆ.
ಕೊನೆಯ ಪುಟಗಳು ಬಲು ಅಪರೂಪ ಎನಿಸುವ 72 ಕಲರ್ ಭಾವಚಿತ್ರಗಳಿಂದ ಕೂಡಿದ್ದು ನಯನ ಮನೋಹರವಾಗಿದೆ. ಇದಲ್ಲದೆ ಪುಟಗಳನ್ನು ತೆರೆದು ಮುಂದಕ್ಕೆ ಸರಿಯುತ್ತಿದ್ದಂತೆ ಸಂದರ್ಭೋಚಿತವಾದ ಸಚಿತ್ರ ಲೇಖನಗಳು ಕಾಣಿಸಿಕೊಂಡು ಎಲ್ಲರಿಗೂ ಅಪ್ಯಾಯಮಾನ ಆಗುವಂತಿದೆ. ಎಲ್ಲಕ್ಕು ಮಿಗಿಲಾಗಿ ಇವರ ಬರವಣಿಗೆಶೈಲಿ ಮತ್ತು ಭಾಷಾಪ್ರಯೋಗ ಎಂಥವರಿಗೂ ಅರ್ಥವಾಗುವಂತೆ ಸರಳವಾಗಿದೆ.
ಇಂತಹ ಬರವಣಿಗೆ ಮೂಲಕ ಕನ್ನಡದ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ತಮ್ಮ ನಿಸ್ವಾರ್ಥ ಸಾಧನೆಯನ್ನು ತಲುಪಿಸುವ ಸಲುವಾಗಿ, ಸ್ವಾರ್ಥ ಮತ್ತು ವ್ಯಾಪಾರಿ ಚಿಂತನೆಗಳನ್ನು ಬದಿಗೊತ್ತಿ ಕನ್ನಡ ಸೇವೆ ಮಾಡುವ ಏಕೈಕ ಮನೋಭಾವದಿಂದ ಮಾತ್ರ ಈ ಪುಸ್ತಕವನ್ನು ಪ್ರಕಟಪಡಿಸಿದ್ದಾರೆ. ಜತೆಗೆ ಇದು ಶ್ರೀಸಾಮಾನ್ಯನ ಕೈಗೆಟಕುವಂತೆ ಕಡಿಮೆ ಬೆಲೆಗೆ ದೊರಕುವ ಅಥವ ಕೊಳ್ಳುವ ಉತ್ತಮ ಅವಕಾಶ ದೊರಕಿಸಿ ಕೊಟ್ಟಿದ್ದಾರೆ.
ವಿಶ್ವದ ಎಲ್ಲೆಡೆ ಇರುವ ಪ್ರತಿಯೊಂದು ಕನ್ನಡ ಭಾಷೆಯ, ಕನ್ನಡ ಮಾಧ್ಯಮದ ಎಲ್ಲ ಶಾಲಾ-ಕಾಲೇಜು-ಗ್ರಂಥಾಲಯ ಇವುಗಳಿಗೆ ಮಾತ್ರವಲ್ಲದೆ ರಾಜ್ಯದ ಮತ್ತು ದೇಶದ ಪ್ರತಿಯೊಂದು ನಗರ, ಜಿಲ್ಲಾ, ಕೇಂದ್ರ ಗ್ರಂಥಾಲಯಗಳಿಗೂ ಸಗಟಾಗಿ ಅಥವ ಬಿಡಿಯಾಗಿ ಸರಬರಾಜು ಮಾಡಿದಲ್ಲಿ ಇಂತಹ ಶ್ರೇಷ್ಠ ಕೃತಿ ರಚಿಸಿದ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರಕಿದಂತಾಗುವುದು. ಲೇಖಕ ಮತ್ತು ಪ್ರಕಾಶಕರಿಗೂ ಸಾರ್ಥಕತೆ ದೊರೆಯುತ್ತದೆ. ತನ್ಮೂಲಕ ಕನ್ನಡತನವೂ ಉಳಿದು ಬೆಳೆಯುತ್ತದೆ. ಎಲ್ಲಕ್ಕು ಮಿಗಿಲಾಗಿ ಕನ್ನಡ ಪುಸ್ತಕಗಳು ದಿನೇದಿನೇ ಹೆಚ್ಚು ಸಂಖ್ಯೆಯಲ್ಲಿ ಪ್ರಕಟಗೊಂಡು ಕನ್ನಡದ ಕಹಳೆಯು ಎಲ್ಲೆಡೆ ಮೊಳಗುತ್ತದೆ.
ಕಡಲಾಚೆ ಕನ್ನಡದ ತೇರು ಎಂಬ ಒಂದು ಅಪರೂಪದ ಹಾಗೂ ಅಮೂಲ್ಯವಾದ ಪುಸ್ತಕ ವಿಮರ್ಶೆಯ ಕಾಯಕಲ್ಪದಿಂದ ಸಧ್ಯಕ್ಕೆ ವಿರಮಿಸುವ ಮುನ್ನ ನನ್ನ ಹಾರೈಕೆ ಮತ್ತು ಅಭಿಲಾಷೆ ಇಷ್ಟೆ : ಈ ಪರಿಯ ಸೊಬಗಿನ ಕನ್ನಡ ಪುಸ್ತಕದ ತೇರುಗಳು ಸಾಗುತಲಿರಲಿ ನಿತ್ಯ, ಕನ್ನಡ ಸರಸ್ವತಿಯ ಮೆರವಣಿಗೆ ಜಗತ್ತಿನಾದ್ಯಂತ ನಿರಂತರ ಜರುಗುತ್ತಲೆ ಇರಲಿ….ಜೈಕನ್ನಡಿಗ! ಜೈಕನ್ನಡಪುಸ್ತಕ!
ಪುಸ್ತಕವನ್ನು ಖರೀದಿಸಲು ಸಂಪರ್ಕಿಸಿ: *ಪ್ರೊ.ರಾಮಸ್ವಾಮಿ, ಮೈಸೂರು 9141028411 *ಎಕ್ಸಲೆಂಟ್ ಗ್ರಾಫಿಕ್ಸ್, ಮೈಸೂರು, 9844092200.
(ಅನನ್ಯ ಮಾಸಪತ್ರಿಕೆ ಜೂನ್ 2010 ಪ್ರಕಟಿತ)

ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ಐದು ಕೃತಿಗಳ ಪರಿಚಯ.. ಭಾಗ-4








