ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ )ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು, ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.
16 ಕೃತಿ:ಮಲರೋಗ
ಕರ್ತೃ: ಡಾ.ಆರ್.ಸಿ.ಅಗಡಿ
ಈ ಪುಸ್ತಕವೂ ಸೇರಿದಂತೆ ಇದುವರೆಗೆ ಒಟ್ಟು ಏಳು ವೈದ್ಯಕೀಯ ಕೃತಿಗಳನ್ನು ಬರೆದಿರುವ ಡಾ.ಅಗಡಿಯವರು, ಈಗ ಮಲರೋಗ (EPILEPSY) ಬಗ್ಗೆ ಇಂಥದ್ದೊಂದು ಉತ್ತಮ ಹೊತ್ತಗೆ ರಚಿಸುವ ಮೂಲಕ ಸಂಬಂಧಪಟ್ಟ ರೋಗಿಗೆ ಮಾತ್ರವಲ್ಲದೆ ಸಾಮಾನ್ಯ ಪ್ರಜೆಗೂ ಉಪಯೋಗ ಆಗುವಂತೆ ಬರೆದಿದ್ದಾರೆ. ಹೈದ್ರಾಬಾದ್ ಕರ್ನಾಟಕದ ಖ್ಯಾತವೈದ್ಯರೂ ಅನುಭವಿಯೂ ಆದ ಅಗಡಿಯವರು ಸ್ವಾಸ್ಥ್ಯ ಮತ್ತು ಆರೋಗ್ಯ ಪೂರ್ಣ ಸಮಾಜಕ್ಕೆ ಈ ಅಮೂಲ್ಯ ಕೊಡುಗೆ ನೀಡುವ ಮೂಲಕ ಮತ್ತೊಮ್ಮೆ ಪ್ರಾಮಾಣಿಕ ವಿವೇಚನೆ ಸಹಿತ ಉಪಕಾರ ಮಾಡಿದ್ದಾರೆ!
“ಪ್ರಸ್ತಾವನೆ” ಪುಟದಿಂದ ಮೊದಲ್ಗೊಂಡು “ನಾಟಿವೈದ್ಯ ಮತ್ತು ತಪ್ಪುತಿಳುವಳಿಕೆಯ ದುಷ್ಪರಿಣಾಮಗಳು” ಪುಟದ ವರೆಗೆ ಒಟ್ಟು 15ಅಧ್ಯಾಯಗಳಲ್ಲಿ ಮಲರೋಗದ ಬಗ್ಗೆ ಒಂದು ಕಿರುಚರಿತ್ರೆಯನ್ನೆ ಬರೆದಿದ್ದಾರೆ. ಮಕ್ಕಳೂ ಸೇರಿದಂತೆ ಪ್ರತಿಯೊಬ್ಬರು ಓದಬಹುದಾದ ಸರಳ ಭಾಷೆಯಲ್ಲಿರುವ ಪ್ರಯೋಜನಕಾರಿ ಪುಸ್ತಕ! ಮುಗ್ಧ ಜನರು ನಂಬಿರುವಂತೆ ಮಲರೋಗವು ದೇವರಶಾಪ, ಭೂತದಕಾಟ, ಹಿಂದಿನಜನ್ಮದ ಪಾಪ, ಇತ್ಯಾದಿ ಅವೈಜ್ಜಾನಿಕ ಕಾರಣದಿಂದ ಬರುವಂಥದ್ದಲ್ಲ ಎಂಬುದನ್ನ ಸಾರಾಸಗಟಾಗಿ ಅಲ್ಲಗಳೆವಂತಹ ಹಾಗೂ ಮಾರಕವಾಗುವಂಥ ಮೂಢನಂಬಿಕೆಗಳ ವಿರುದ್ಧ ಪರಿಹಾರ ಸೂಚಿಸುವಂತಿದೆ. ಅಲ್ಲದೆ ಜನಸಾಮಾನ್ಯರಲ್ಲಿ ಮನೆಮಾಡಿರುವ ಭಯ, ತಪ್ಪುತಿಳುವಳಿಕೆ, ಅನುಮಾನ, ಅಂಜಿಕೆ, ಮುಂತಾದ ಅನಿಷ್ಟಗಳನ್ನು ಹೋಗಲಾಡಿಸಿ ಜ್ಞಾನವನ್ನೂ, ಧೈರ್ಯವನ್ನೂ, ತುಂಬುವ ರೀತಿ ಬರೆಯಲಾಗಿದೆ.
ಪುಸ್ತಕವನ್ನು ಓದಿದ ನಂತರ ಮಲರೋಗ ಮತ್ತು ಮಲರೋಗಿಯ ಬಗ್ಗೆ ಇರುವ ಅರೆಬರೆ ತಿಳುವಳಿಕೆ ಮೌಢ್ಯತೆ ಅಜ್ಞಾನ ಇತ್ಯಾದಿಗಳನ್ನು ಕ್ರಮೇಣ ಹೋಗಲಾಡಿಸುವಂತೆ ಇದೆ. ಸತ್ಯದ ವಿಚಾರಗಳನ್ನು ವೈದ್ಯಕೀಯ ವಿಜ್ಞಾನದ ಆಧಾರದ ಮೇಲೆ ನಿರ್ಭೀತವಾಗಿ ಮತ್ತು ವಿವರವಾಗಿ ತಿಳಿಸುತ್ತದೆ. ಶ್ರೀಸಾಮಾನ್ಯರನ್ನು ತಪ್ಪುದಾರಿಯಿಂದ ಸರಿದಾರಿಗೆ ಕೊಂಡೊಯ್ವ, ಇಂತಹ ಆರೋಗ್ಯ ಸಂಬಂಧಿತ ಪುಸ್ತಕಗಳು ಸರ್ವ ರೀತಿಯಲ್ಲು ಸ್ವಾಗತಾರ್ಹ, ಹೀಗಾಗಿ ಡಾ.ಆರ್.ಸಿ.ಅಗಡಿಯಂಥ ಲೇಖಕರು ವಂದನಾರ್ಹರು.
(ಮೈವಿವಿ, ಮಾನಸಗಂಗೋತ್ರಿ, ಮೈಸೂರು ಗ್ರಂಥಲೋಕ, ಡಿಸೆಂಬರ್-1982 ಪ್ರಕಟಿತ)
17 (ಬಿಹಾರಿ ಮೂಲದ ನಿರುದ್ಯೋಗ)
ಕನ್ನಡ ಅನುವಾದಕ : ಏಕಲವ್ಯ
28 ಪುಟಗಳ ಈ ಪುಟ್ಟ ಪುಸ್ತಕವು ಮೂಲತಃ ಬಿಹಾರಿ ಭಾಷೆಯಿಂದ ತೆಗೆದು, ಕನ್ನಡಕ್ಕೆ ಏಕಲವ್ಯ ಕಾವ್ಯನಾಮದ ಸಾಹಿತಿಯೊಬ್ಬರಿಂದ ಅನುವಾದ ಮಾಡಲಾಗಿದೆ. ಬಿಹಾರದ ಸಮಾಜವಾದಿ ಚಿಂತಕ ಹಾಗು ಬಿಹಾರಿ ಸಾಹಿತ್ಯದ ಖ್ಯಾತ ಲೇಖಕ ಪ್ರೊ.ಕಿಶನ್ ಪಟ್ನಾಯಕ್ ತಮ್ಮ ರಾಜ್ಯಾದ್ಯಂತ ಅಧ್ಯಯನ ಶಿಬಿರಗಳಲ್ಲಿ ಮಾಡಿದ ವಿವಿಧ ಭಾಷಣಗಳದ್ದೇ ಬರಹವುಳ್ಳ ವಿಶೇಷ ಸಾಹಿತ್ಯ ಪ್ರಾಕಾರ. ಇದರಲ್ಲಿರುವ ಪ್ರಮುಖ ಟಾಪಿಕ್ಸ್: ಸ್ತ್ರೀ-ಪುರುಷ, ಉದ್ಯೋಗಿ, ಅರೆ ಉದ್ಯೋಗಿ, ನಿರುದ್ಯೋಗಿ, ಇವುಗಳ ಬಗ್ಗೆ ವಿಶ್ಲೇಷಣೆ ಜತೆಗೆ ವಿಭಿನ್ನ ಶೈಲಿಯ ವಿಮರ್ಶಾತ್ಮಕ ತುಲನೆಯು ಪ್ರಾಮಾಣಿಕವಾಗಿ ನಡೆದಿದೆ.
(ಅ)ವಿದ್ಯಾವಂತ-ಅವಿದ್ಯಾವಂತರ ನಿರುದ್ಯೋಗ
(ಆ)ಕಾರ್ಖಾನೆಗಳಲ್ಲಿ ಉದ್ಯೋಗ
(ಇ)ನಿರುದ್ಯೋಗ ವೇತನ ಹಾಗೂ
(ಈ)ಉದ್ಯೋಗಕ್ಕಾಗಿ ಆಂದೋಲನ; ಎಂಬ ಹಲವಾರು ಶೀರ್ಷಿಕೆಗಳಡಿಯಲ್ಲಿ ಹತ್ತಾರು ಗಂಭೀರ ವಿಷಯಗಳನ್ನು ಅದಮ್ಯ ಚೇತನದ ವಿಶಿಷ್ಟ ಶಿಸ್ತಿನಿಂದ ಮೂಡಿಸಿದ್ದಾರೆ. ಬೊಜ್ಜುಗಾರ ಭೂ-ಮಾಲೀಕ ಮತ್ತು ಬೆವರೊರೆಸಿ ದುಡಿಯುವ ಭೂಮಿ ಜೀತಗಾರ ಇವರಿಬ್ಬರ ನಡುವಿನ ಅವಾಸ್ತವಿಕ ಅಂತಸ್ತುಗಳ ವ್ಯತ್ಯಾಸ, ಪರಿಣಾಮ, ಉಪಶಮನ, ಇತ್ಯಾದಿಗಳ ಬಗ್ಗೆ ಅತ್ಯಂತ ಖಾರವಾಗಿ ಬರೆದಿದ್ದಾರೆ.
ಕೃಷಿ, ಕಾರ್ಖಾನೆ, ಮುಂತಾದ ಕ್ಷೇತ್ರಗಳಲ್ಲಿ ಕಂಡುಬರುವ ಏರುಪೇರು, ಕಷ್ಟನಷ್ಟ ಇತ್ಯಾದಿಗಳ ಬಗ್ಗೆ ಪ್ರಮುಖ ಅಂಕಿ-ಅಂಶ ದಿಂದ ಕೂಡಿರುವ ಈ ಅನುವಾದಿತ ಪುಸ್ತಕ ನಿಜಕ್ಕೂ ಉಪಯುಕ್ತ. ಎಲ್ಲಕ್ಕಿಂತ ಮುಖ್ಯವಾಗಿ ಯಾರಿಗೂ ಬೇಡವಾದ ಕೇವಲ ಅನುಪಯುಕ್ತ ಭಾಷಣ, ಮುದ್ರಣ, ಪ್ರಣಾಳಿಕೆ, ಕರಪತ್ರ, ಆಶ್ವಾಸನೆ, ಶೋಷಣೆ, ಮೋಸ, ವಂಚನೆ, ಮಾಡುತ್ತಿರುವ ಘನತೆವೆತ್ತ ಸರ್ಕಾರಕ್ಕೆ ಮತ್ತು ರಾಜಕಾರಣಿಗಳಿಗೆ ಈ ಕಿರು ಪುಸ್ತಕವು ಒಳ್ಳೆಯ ಪಾಠ ಎನಿಸುತ್ತದೆ?!
(ಮೈವಿವಿ, ಮಾನಸಗಂಗೋತ್ರಿ, ಮೈಸೂರು, ಡಿಸೆಂಬರ್ 1982, ಗ್ರಂಥಲೋಕ)
18 ಕೃತಿ: ನೀತಿಕಥಾಮಾಲೆ
ಕರ್ತೃ: ವೆಲ್ಲಾಲ ಸತ್ಯಂ
ಹತ್ತು ನೀತಿಕಥೆಗಳ ಒಂದು ಗೊಂಚಲು ಈ ಕೃತಿ, ಇದರ ಸೃಷ್ಟಿಕರ್ತ ವೆಳ್ಳಾಲಸತ್ಯಂ ಶೀರ್ಷಿಕೆಗೆ ತಕ್ಕಂತೆ ನೀತಿಯನ್ನು ಕೇಂದ್ರ ವಸ್ತುವನ್ನಾಗಿಸಿ ಕತೆಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇದು ಟೀಕೆ-ಟಿಪ್ಪಣಿ ಮಾಡುವಷ್ಟು ಸುಲಭದ ಮಾತಲ್ಲ. ಆದರೆ ಭಾರತದಂಥ ನಾಡಿನಲ್ಲಿ ಸನಾತನ ಪರಂಪರೆಯ ದೇಶದಲ್ಲಿ ಪೌರಾಣಿಕ ಐಸಿಹಾಸಿಕ ಸಾಮಾಜಿಕ ಘಟನೆಗಳಲ್ಲಿ ನೀತಿಸೂಚ್ಯ ಕಥಾವಸ್ತು ಯಥೇಚ್ಛವಾಗಿ ತುಂಬಿಕೊಂಡಿದೆ. ಆದ್ದರಿಂದ ಸ್ವಲ್ಪ ಕಷ್ಟಪಟ್ಟರೆ ಹೆಚ್ಚು ಇಷ್ಟಪಟ್ಟರೆ, ಆಗಾಗ್ಗೆ ಇನ್ನಷ್ಟು ನೀತಿ ಕಥಾಮಾಲೆಯಂಥ ಕೃತಿಗಳನ್ನ ಲೋಕಾರ್ಪಣೆ ಗೊಳಿಸಿವುದು ಅಸಾಧ್ಯವೇನಲ್ಲ?!
ಕಿರಿಯರು ಯುವಕರು ಹಿರಿಯರು ಹೇಳಿಕೊಡುವಂತೆ ಅಥವ ಸ್ವಯಂಅವರೇ ಓದುವಂತೆ ಇದ್ದು; ಹೇಳಿದ, ಕೇಳಿದ, ಓದಿದ ನಂತರ ಪ್ರತಿಯೊಂದು ಕತೆಯಲ್ಲಿರುವ ನೀತಿಯನ್ನು ತಿಳಿದುಕೊಳ್ಳುವ ರೀತಿ ಪುಸ್ತಕವನ್ನು ಬರೆಯಲಾಗಿದೆ. ಕ್ಷಣಕ್ಷಣಕ್ಕೂ ಆಸಕ್ತಿ ಹೆಚ್ಚಿಸುವಂತೆ ವೆಲ್ಲಾಲ ಸತ್ಯಂ ಬರೆದಿರುವ “ನೀತಿಕಥಾಮಾಲೆ” ಕೃತಿಯು ಮಕ್ಕಳ ಮೆದುಳನ್ನು ವಿಕಾಸ ಗೊಳಿಸುವಲ್ಲಿ ಯಶಸ್ವಿ ಆಗುತ್ತದೆ.
10 ಕತೆಗಳ ಶೀರ್ಷಿಕೆ ಇಲ್ಲಿದೆ:-
*ವಂದನೆಯ ಸ್ವೀಕರಿಸಿ ಪರಮ ಗುರುವೆ
*ಕಹಿ ಕುಂಬಳ
*ಎಲ್ಲಾರೂ ಜಾಣರಲ್ಲ-ನೀನುಮಾತ್ರ ದಡ್ಡನಲ್ಲ
*ಸುನೀತ
*ಮಲ್ಲಿನಾಥ
*ಡ್ಯಾಮ್… ಡ್ಯಾಮ್… ಡ್ಯಾಮ್….
*ಬಾ ತಾಯಿ ಒಳಕ್ಕೆ ಬಾ
*ವಿವೇಕವಾಣಿ
*ಗೌರಿ-ಗಂಗೆ , ಹಾಗೂ *?????????
ಈ ಮೇಲ್ಕಂಡ ಎಲ್ಲಾ ಕತೆಗಳ 48 ಪುಟಗಳನ್ನ ಒಮ್ಮೆಲೆ ಓದುವಂತೆ, ಕುತೂಹಲ ಮೂಡುವಂತೆ ಆಕರ್ಷಕವಾಗಿ ಬರೆದಿದ್ದಾರೆ. ಆಬಾಲವೃದ್ಧರಾದಿಯಾಗಿ ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬ ಓದುಗನು ಸಹ ತಾನು ಓದಿದ ನಂತರ ಹುಬ್ಬೇರಿಸಿ ಉದ್ಗರಿಸ ಬಹುದು: “ಒಂದೊಂದು ಕಥೆಯು ತುಂಬ ಸೊಗಸಾಗಿದೆ…..” ಎಂದು! ಭಾರತೀಯ ಸಂಸ್ಕೃತಿ-ಸಂಸ್ಕಾರದ ಭಂಡಾರ ವಾಗಿದ್ದ ಮಹಾತ್ಮರ ಬಗ್ಗೆ ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯರಿಗೂ ತಿಳಿಹೇಳುವ ಇಂತಹ ಪುಸ್ತಕಗಳು ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರಬೇಕು. ಈ ಪರಿಯ ಕೃತಿಗಳ ಬರಹಗಾರ, ಪ್ರಕಾಶಕ, ಮಾರಾಟಗಾರ, ವಿಮರ್ಶಕ, ಪ್ರತಿಯೊಬ್ಬರಿಗು ಅನಂತಾನಂತ ಧನ್ಯವಾದಗಳು?
(ಮೈವಿವಿ,ಮಾನಸಗಂಗೋತ್ರಿ, ಮೈಸೂರು, ಮಾರ್ಚ್1980 ,ಗ್ರಂಥಲೋಕ-ಮಾಸಪತ್ರಿಕೆ)
19 ಕೃತಿ: ಬಣ್ಣದಚೆಂಡು
ಸಂ: ಭೀಮಣ್ಣ ಬೋನಹಾಳ
ವಿವಿಧ ಸಾಹಿತಿಗಳು ಅಥವಾ ಕವಿಗಳು ಮಕ್ಕಳಿಗಾಗಿಯೇ ಬರೆಯಲಾದ ಒಟ್ಟು ಇಪ್ಪತ್ತು ಮಕ್ಕಳ ಪದ್ಯಗಳು ಇದರಲ್ಲಿದೆ. ಕನ್ನಡ ಸಾಹಿತ್ಯ ಸಾಮ್ರಾಜ್ಯಕ್ಕೆ ಅಷ್ಟೇನು ಪರಿಚಿತರಲ್ಲದ ಆದರೆ ಸಾಹಿತ್ಯಾಸಕ್ತರಾದ ಶ್ರೀ ಭೀಮಣ್ಣ ಬೋನ್ಹಾಳ ಶ್ರಮವಹಿಸಿ ಸಂಪಾದಿಸಿದ್ದಾರೆ. ಹಲವರ ಅನಿಸಿಕೆಯಂತೆ ಯಾವುದೇ ಕೃತಿಯ ಸಂಪಾದಕನ ಕಾಯಕ ಅಷ್ಟು ಸುಲಭದ ಮಾತಲ್ಲ, ಅದೇ ವೇಳೆ ಅಸಾಧ್ಯವೂ ಅಲ್ಲ. ಆದರೆ ಜವಾಬ್ಧಾರಿಯುತ ಆಗಿದೆ ಎಂಬುದರಲ್ಲಿ ಲವಲೇಶ ಸಂಶಯವಿಲ್ಲ ಈ ಕಾರಣಕ್ಕಾಗಿ “ಬಣ್ಣದಚೆಂಡು” ಮಕ್ಕಳ ಪುಸ್ತಕದ ಸಂಪಾದಕರು ಶ್ಲಾಘನೆಗೆ ಅರ್ಹರು.
“ಬಣ್ಣದ ಚೆಂಡು” ಮಕ್ಕಳ ಪುಸ್ತಕದ ಹಲವು ಪದ್ಯಗಳು ನೀತಿಯುತವಾಗಿದ್ದರೆ ಇನ್ನು ಕೆಲವು ಮನರಂಜನೀಯವಾಗಿದೆ. ಉದಾ:- ‘ಶೆಟ್ಟರಗೋಳು’ ಕವಿತೆಯು ಸುದೀರ್ಘವಾಗಿದ್ದು ಎಳೆಯಮಕ್ಕಳಿಗೆ ತುಸು ಬೇಸರ ತರಿಸಿದರೆ, ಕೆಲವೆ ಸಾಲುಗಳ ‘ಮಲ್ಲಕ್ಕ’ ಪದ್ಯವು ಓದುಗರ ಮನಸ್ಸನ್ನು ಗೆಲ್ಲುತ್ತದೆ. ‘ನಮ್ಮಜಿಲ್ಲೆಗಳು’ ಪದ್ಯ, ಕರ್ನಾಟಕ ರಾಜ್ಯದ ೧೯ ಜಿಲ್ಲೆಗಳ ಹೆಸರನ್ನೂ, ಅವುಗಳ ಪ್ರಮುಖ ಲಕ್ಷಣಗಳನ್ನೂ ತಿಳಿಸುವ ಬೋಧನಾಪ್ರದ ಕವಿತೆ. ಕಡೆಯದಾಗಿ ಉಲ್ಲೇಖಿಸುವುದಾದರೆ;
“ಎನಿತು ಪುಣ್ಯವಂತ ನಾನು
ನಿನ್ನ ಒಡಲೊಳುದಿಸಿಹೆ
ನಿನ್ನ ಒಲುಮೆಲತೆಗೆ ಸೋತು
ಪುಷ್ಪವಾಗಿ ಅರಳಿಹೆ”
ಎಂಬುವ ಸಾಲುಗಳು ಗಟ್ಟಿತನದ ಸಾಹಿತ್ಯ
ಪದಗಳು. ಒಟ್ಟಾರೆ ಬಹುತೇಕ ಪದ್ಯಗಳು
ಬಹುಜನರ ಪ್ರಶಂಸೆ ಗಳಿಸಬಹುದು?!
(ಮೈವಿವಿ ಮಾನಸಗಂಗೋತ್ರಿ, ಮೈಸೂರು, ಮಾರ್ಚ್ 1980, ಗ್ರಂಥಲೋಕ-ಮಾಸಿಕ)
20 ಕೃತಿ : ಚಂದಮಾಮನ ಅಳಿಯ
ಕರ್ತೃ : ಮ.ಸು.ಕೃಷ್ಣಮೂರ್ತಿ
ಕೃತಿಯ ಶೀರ್ಷಿಕೆಯೇ ತಿಳಿಸುವಂತೆ ಇದೊಂದು ಮಕ್ಕಳ ಪುಸ್ತಕ. ಪೌರಾಣಿಕ ಚಂದ್ರನ ಕತೆ ಆಧಾರಿಸಿ ಎಳೆಯರಿಗೆ ಸುಲಭವಾಗಿ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆಯಲಾಗಿದೆ. ಆದಷ್ಟು ಕಡಿಮೆ ಅವಧಿಯಲ್ಲಿ ಓದಿ ಮುಗಿಸುವಂತೆ ಮುಕ್ತಾಯ ಮಾಡಿರುವುದು ನಿಜಕ್ಕು ಮೆಚ್ಚುವಂತದ್ದು. ಹಲವು ಪುರಾಣದೇವತೆಗಳ ಬಗ್ಗೆ ಬೋರ್ ಹೊಡೆಸದಂತೆ ಹಿತಮಿತವಾಗಿ ಪರಿಚಯ ಮಾಡಲಾಗಿದೆ. ಇಪ್ಪತ್ತೈದು ಪುಟಗಳ ಕಿರು ಹೊತ್ತಗೆಯಲ್ಲಿ ಅವಶ್ಯವಾದ ವಿವರಗಳು ಸಂಕ್ಷಿಪ್ತವಾಗಿ ಅಡಗಿದೆ.
ಶ್ರೀಮನ್ನಾರಾಯಣ, ಲಕ್ಷ್ಮೀದೇವಿ, ಚಂದ್ರ, ರತಿ-ಮನ್ಮಥ, ಸಮುದ್ರರಾಜ, ಮುಂತಾದ ದೇವತೆಗಳ ಬಗ್ಗೆ ತಿಳಿಸುವಾಗ ಓದುಗರ, ವಿಶೇಷವಾಗಿ ಮಕ್ಕಳ ಸಂಶಯಕ್ಕೆಡೆ ಮಾಡದಂತೆ ಪ್ರತಿಯೊಬ್ಬರಿಗೂ ಮನವರಿಕೆ ಆಗುವಂತೆ ಕತೆಯನ್ನು ಸಂಪನ್ನ ಗೊಳಿಸಲಾಗಿದೆ. ಚಂದ್ರನ ಅಳಿಯ ಮದನನು ತನ್ನ ಸೋದರಮಾವ ಚಂದಮಾಮನನ್ನು ಸಂಕಷ್ಟದಿಂದ ಬಿಡುಗಡೆ ಮಾಡಿಸುವ ಸಲುವಾಗಿ ಪರಮೇಶ್ವರನ ತಪಸ್ಸನ್ನು ಭಂಗಮಾಡಿ ತ್ರಿನೇತ್ರನ ಕೋಪಕ್ಕೆ ಬಲಿಯಾಗುವ ಮತ್ತು ಶಿವರುದ್ರನ ಮೂರನೇ ಕಣ್ಣಿನಿಂದ ಭಸ್ಮವಾಗುವ ಹಾಗು ರತಿಮನ್ಮಥ ಶಾಪ ವಿಮೋಚನೆಗೊಳ್ಳುವ ಸಂದರ್ಭಗಳನ್ನು ಪರಿಣಾಮ ಕಾರಿಯಾಗಿ ಬರೆದಿದ್ದಾರೆ.
ಇದೆಲ್ಲದರ ಪರಿಣಾಮದಿಂದ ಶಿವ- ಪಾರ್ವತಿಯರ ಜೇಷ್ಠ ಪುತ್ರನಾಗಿ ಶಿವಕುಮಾರ/ಸುಬ್ರಮಣಿಯ ಜನನ. ನಂತರ ತಾರಕಾಸುರ ರಾಕ್ಷಸನ ವಧೆ, ಭೂಲೋಕ ಇಂದ್ರಲೋಕ ಚಂದ್ರಲೋಕ ಪ್ರಜೆಗಳಿಗೆ ನೆಮ್ಮದಿ ದೊರಕುವ ಸುಖಾಂತ್ಯ ಕತೆಯನ್ನು ಸೊಗಸಾಗಿ ವರ್ಣಿಸಿದ್ದಾರೆ. ಹೀಗಾಗಿ, ಮ.ಸು. ಕೃಷ್ಣಮೂರ್ತಿ ಬರೆದಿರುವ “ಚಂದಮಾಮನ ಅಳಿಯ” ಕಥಾ ಪುಸ್ತಕವು ಮಕ್ಕಳಿಗೆ ತುಸು ಆಸಕ್ತಿ ಕೆರಳಿಸುವಂತಿದೆ!
(ಮೈವಿವಿ,ಮಾನಸಗಂಗೋತ್ರಿ ಮೈಸೂರು, ಮಾರ್ಚ್ 1980, ಗ್ರಂಥಲೋಕ ಮಾಸಪತ್ರಿಕೆ)

ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ಐದು ಕೃತಿಗಳ ಪರಿಚಯ.. ಭಾಗ-3









ಎಲ್ಲರಿಗೂ ವಂದನೆಗಳು ಸರ್, ಅವಲೋಕನ 3ನೇ ಭಾಗದ ನಂತರ ಬಹಳ ದಿನ ಕಳೆದರೂ 4ನೇ (ಭಾಗದ)ಕಂತು ಇನ್ನು ಏಕೆ ಬರಲಿಲ್ಲ ಎಂದು ಚಿಂತೆ ಆಗಿತ್ತು ಸರ್ ಸಧ್ಯ… ಈಗ ವಾಟ್ಸಾಪ್ ಮೂಲಕ ನೋಡಿ ಸಮಾಧಾನವಾಯಿತು. ಬಹುಶಃ ಪ್ರತಿ ವಾರವೂ ಐದು/ಆರು ಪುಸ್ತಕಗಳ ವಿಮರ್ಶೆಯು ಬರುತ್ತದೆ ಎನಿಸಿ ಬಹಳ ಆನಂದವಾಗಿದೆ. ಸ್ನಾತಕಪೂರ್ವ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ
ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಂದ ಧನ್ಯವಾದಗಳು. ನಿಮ್ಮ ಪತ್ರಿಕೆಯ ಮೂಲಕ ನಮ್ಮಂಥ ಅನೇಕ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿದೆ. ಮತ್ತೊಮ್ಮೆ ಪ್ರಕಾಶಕರಿಗೂ ಲೇಖಕರಿಗೂ ತುಂಬುಹೃದಯದ ಕೃತಜ್ಞತೆಗಳು ಸರ್,
-ಕರ್ನಾಟಕ ವಿವಿ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ಪರವಾಗಿ, ಉಮೇಶ್ ಕುಲಕರ್ಣಿ, ಸಂಶೋಧನಾ ವಿದ್ಯಾರ್ಥಿ
ಎಲ್ಲರಿಗೂ ವಂದನೆಗಳು ಸರ್, ಅವಲೋಕನ 3ನೇ ಭಾಗದ ನಂತರ ಬಹಳ ದಿನ ಕಳೆದರೂ 4ನೇ (ಭಾಗದ)ಕಂತು ಇನ್ನು ಏಕೆ ಬರಲಿಲ್ಲ ಎಂದು ಚಿಂತೆ ಆಗಿತ್ತು ಸರ್ ಸಧ್ಯ… ಈಗ ವಾಟ್ಸಾಪ್ ಮೂಲಕ ನೋಡಿ ಸಮಾಧಾನವಾಯಿತು. ಬಹುಶಃ ಪ್ರತಿ ವಾರವೂ ಐದು/ಆರು ಪುಸ್ತಕಗಳ ವಿಮರ್ಶೆಯು ಬರುತ್ತದೆ ಎನಿಸಿ ಬಹಳ ಆನಂದವಾಗಿದೆ. ಸ್ನಾತಕಪೂರ್ವ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಂದ ಧನ್ಯವಾದಗಳು. ನಿಮ್ಮ ಪತ್ರಿಕೆಯ ಮೂಲಕ ನಮ್ಮಂಥ ಅನೇಕ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿದೆ. ಮತ್ತೊಮ್ಮೆ ಪ್ರಕಾಶಕರಿಗೂ ಲೇಖಕರಿಗೂ ತುಂಬುಹೃದಯದ ಕೃತಜ್ಞತೆಗಳು ಸರ್,
-ಕರ್ನಾಟಕ ವಿವಿ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ಪರವಾಗಿ, ಉಮೇಶ್ ಕುಲಕರ್ಣಿ, ಸಂಶೋಧನಾ ವಿದ್ಯಾರ್ಥಿ
ಕ.ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಸಂಶೋಧನಾರ್ಥಿ ಉಮೇಶ ಕುಲಕರ್ಣಿ ಯವರ ಕಾಮೆಂಟ್ ಸರಿಯಾಗಿದೆ. ನನ್ನದೂ ಸಹ ಇದೇ ಅನಿಸಿಕೆ ಮತ್ತು ಒಟ್ಟಾರೆ ಸದಭಿಪ್ರಾಯವೂ ಆಗಿದೆ. ಜನಮನ ಪತ್ರಿಕೆಯ ಸರ್ವರಿಗೂ ಅನಂತಾನಂತ ಧನ್ಯವಾದಗಳು. ಡಾ.ಸೋಮಶೇಖರ್ ಆರಾಧ್ಯ, ಕನ್ನಡ ಪ್ರಾಧ್ಯಾಪಕ(ನಿವೃತ್ತ) ರೇಣುಕಾಚಾರ್ಯ ವಿದ್ಯಾಸಂಸ್ಥೆ, ಮಧುಗಿರಿ, ತುಮಕೂರು ಜಿಲ್ಲೆ.
ನಮಸ್ಕಾರ ಜನಮನ ಕನ್ನಡ ಪತ್ರಿಕೆ, ಈಗತಾನೆ ಅವಲೋಕನ ಪುಸ್ತಕ ವಿಮರ್ಶೆ (4ನೇ ಭಾಗ) ಅಂಕಣದ ಲೇಖನ ತಲುಪಿದೆ. ಆಸಕ್ತಿಯಿಂದ ನಾನು ಓದಿದ ನಂತರ ನನ್ನ ಇಡೀ ಗೆಳೆಯರ ಬಳಗಕ್ಕೆ ಶೇರ್ ಮಾಡಿದ್ದೇನೆ. ಧನ್ಯವಾದ ಸರ್. ಲೋಕೇಶ್ ಗೌಡ, ಪ್ರಥಮ ಸೆಮ್ ಎಂ..ಎ.(ಕನ್ನಡ ಸಾಹಿತ್ಯ) ವಿದ್ಯಾರ್ಥಿ, ಸ್ನಾತಕೋತ್ತರ ಅಧ್ಯಯನ ವಿಭಾಗ, ಬೆಂ.ವಿ.ವಿ., ಜ್ಞಾನಭಾರತಿ, ಬೆಂಗಳೂರು.