ತಂದೆ ಇದ್ದರೂ ತಾಯಿ ಪರಪುರುಷನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಳೆಂಬ ಅನುಮಾನದಿಂದ ಮಗನೇ ತಾಯಿಯನ್ನು ಹತ್ಯೆ ಮಾಡಿದ್ದಲ್ಲದೆ, ತಂದೆ ಹಾಗೂ ಇತರ ಸಹಕಾರ ಪಡೆದು ಶವವನ್ನು ಸುಟ್ಟುಹಾಕಿದ ಘಟನೆ ಮೈಸೂರಿನ ಜಯಪುರ ಹೋಬಳಿಯ ಕೆ.ಮಾದಹಳ್ಳಿಯಲ್ಲಿ ನಡೆದಿದ್ದು, ಈ ಕೃತ್ಯ ಬಯಲಾಗುತ್ತಿದ್ದಂತೆಯೇ ಜನ ಎಂಥ ಕಲಿಯುಗ ಬಂತಪ್ಪಾ ಎಂದು ಬಾಯಿಬಡಿದುಕೊಳ್ಳುತ್ತಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಕೊಲೆಗಳು ನಡೆಯುತ್ತಿದ್ದು, ಜನ ಇಷ್ಟೊಂದು ಕ್ರೌರ್ಯ ಮೆರೆಯುತ್ತಿದ್ದಾರಾ? ಎಂದೆನಿಸದಿರದು, ಬಹಳಷ್ಟು ಪ್ರಕರಣಗಳಲ್ಲಿ ಕೊಲೆಗೆ ಕಾರಣಗಳೇ ಬೇಕಾಗುತ್ತಿಲ್ಲ. ಚಿಕ್ಕಪುಟ್ಟ ಕಾರಣಗಳಿಗೂ ಕೊಲೆಗಳಾಗುತ್ತಿವೆ. ಅದರಲ್ಲೂ ಅನೈತಿಕ ಸಂಬಂಧ, ಸೆಕ್ಸ್ ಧೋಖಾ ವಿಚಾರಗಳಿಗೆ ಸಂಬಂಧಿಸಿದಂತೆ ಕೊಲೆಗಳು ನಡೆಯುತ್ತಲೇ ಇವೆ. ಇದೆಲ್ಲವನ್ನು ನೋಡಿ, ತಿಳಿದ ಮೇಲೆಯೂ ಜನ ತಿದ್ದಿಕೊಳ್ಳದಿರುವುದು ನಿಜಕ್ಕೂ ದುರಂತವೇ ಸರಿ. ಯಾರನ್ನು ಕೊಲೆ ಮಾಡಿ ನಾವು ಸಾಧಿಸುವುದೇನಿಲ್ಲ. ತಾಳ್ಮೆ ವಹಿಸಿದರೆ ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಕೆಲವೊಮ್ಮೆ ಒಂದು ಕ್ಷಣದ ಕೋಪಕ್ಕೆ ಸಾಯುವ ತನಕ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಒಬ್ಬರನ್ನು ಕೊಂದು ನಾವೇನು ಶಾಶ್ವತವಾಗಿ ಭೂಮಿ ಮೇಲೆ ಉಳಿಯುವುದಿಲ್ಲ. ನಾವು ಮಾಡಿದ ಕರ್ಮಕ್ಕೆ ತಕ್ಕ ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ. ಇದನ್ನು ಅರಿಯದೆ ದುಡುಕಿನ ನಿರ್ಧಾರಗಳು ನಮ್ಮ ಬದುಕನ್ನೇ ಮುಗಿಸಿ ಬಿಡುತ್ತದೆ. ಅದರಲ್ಲೂ ಅನೈತಿಕ ಸಂಬಂಧ ಕ್ಷಣಿಕ ಸುಖವನ್ನು ನೀಡಬಹುದಷ್ಟೇ ಅದರಾಚೆಗೆ ದುಃಖವೇ ಜಾಸ್ತಿ. ಇದು ಗೊತ್ತಿದ್ದರೂ ಜನ ಅಂತಹದೊಂದು ವಿಷ ವರ್ತುಲದಲ್ಲಿ ಸಿಲುಕಿ ನರಳಾಡುತ್ತಾರೆ. ಅದೇ ಸಂಬಂಧದ ಬಗ್ಗೆ ಮಾತನಾಡುತ್ತಾ ಇನ್ನು ಕೆಲವರು ವಿಕೃತ ಖುಷಿ ಪಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಅನೈತಿಕ ಸಂಬಂಧ ಹೊಂದಿರುವ ಮಹಿಳೆಯಾಗಲೀ, ಪುರುಷನಾಗಲೀ ಆತನಿಗೆ ಬೇಕಾದವರಿಂದ ವಿರೋಧಗಳನ್ನು ಎದುರಿಸಬೇಕಾಗುತ್ತದೆ.ಕೆಲವೊಮ್ಮೆ ಮಿತಿ ದಾಟಿದಾಗ ಹೆಣಗಳು ಉರುಳಿದರೂ ಅಚ್ಚರಿಪಡಬೇಕಾಗಿಲ್ಲ.
ಶೀಲ ಶಂಕಿಸಿ ಹೆಂಡತಿಯನ್ನು ಕೊಲೆ ಮಾಡೋದು, ಪ್ರಿಯಕರನ ಜತೆ ಸೇರಿ ಗಂಡನ ಕೊಲೆ ಮಾಡೋದು ಇಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುತ್ತದೆ. ಆದರೆ ಮಗನೇ ತಾಯಿಯ ಶೀಲವನ್ನು ಶಂಕಿಸಿ ಕೊಲೆ ಮಾಡೋದು ಅಪರೂಪ.. ಆದರೆ ಇದೀಗ ವಯಸ್ಸಿಗೆ ಬಂದ ಮಗ ಹೆಂಡತಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಜೀವನ ಸಾಗಿಸಿಕೊಂಡು ಹೋಗುತ್ತಿದ್ದರೂ ಯಾರೋ ಹೇಳಿದರೆಂದು ತಾಯಿಯ ಶೀಲದ ಮೇಲೆ ಅನುಮಾನ ಪಟ್ಟು ದೊಣ್ಣೆಯಿಂದ ಹೊಡೆದು ಕೊಲೆ ಮಾಡುತ್ತಾನೆಂದರೆ ನಿಜಕ್ಕೂ ದುರ್ದೈವದ ಸಂಗತಿಯೇ.. ಆದರೆ ಇಂತಹದೊಂದು ಘಟನೆಯಿಂದ ಜನ ಬೆಚ್ಚಿ ಬಿದ್ದಿದಂತು ನಿಜ.

ಬರೀ ಕೊಲೆ ಮಾತ್ರವಲ್ಲದೆ, ಹೆಣವನ್ನು ಜಮೀನಿನಲ್ಲಿ ಸುಟ್ಟು ಸಾಕ್ಷಿ ನಾಶ ಮಾಡಲು ಹೊರಟಿರುವುದು ನಿಜಕ್ಕೂ ದುರಂತವೇ.. ಇಲ್ಲಿ ತಾಯಿಯನ್ನು ಕೊಂದ ಮಗನಿಗೆ ತಂದೆಯೂ ಸಹಕಾರ ನೀಡಿರುವುದು ಅನುಮಾನ ಮೂಡಿಸುತ್ತಿದೆ. ಅಂತು ಈ ಘಟನೆ ಬಳಿಕ ಜನ ಹೀಗೂ ನಡೆಯುತ್ತಾ? ಎಂದು ಪ್ರಶ್ನೆ ಕೇಳಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ಘಟನೆ ಹೇಗೆ ನಡೆಯಿತು? ಕೊಲೆಯಾದ ತಾಯಿ, ಕೊಲೆ ಮಾಡಿದ ಮಗ ಯಾರು? ಎಂಬುದನ್ನು ನೋಡುತ್ತಾ ಹೋದರೆ ಕ್ರೈಂ ಸ್ಟೋರಿ ತೆರೆದುಕೊಳ್ಳುತ್ತದೆ.
ಮೈಸೂರು ತಾಲೂಕಿನ ಕಣಿಯನಹುಂಡಿ ಬಳಿಯ ಮಾದಹಳ್ಳಿ ಗ್ರಾಮದ ನಿವಾಸಿ ನಂಜುಂಡಯ್ಯ(55) ಎಂಬುವರ ಪತ್ನಿ ಸುಧಾ(48) ಮಗನಿಂದ ಕೊಲೆಯಾದ ಮಹಿಳೆ. ಈಕೆಯ ಮಗ ಶಿವರುದ್ರಪ್ಪ (35)ನೇ ಹಂತಕ.. ಕಳೆದ ಮೂರೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಸುಧಾ ಮತ್ತು ನಂಜುಂಡಯ್ಯ ದಾಂಪತ್ಯ ಜೀವನ ನಡೆಸಿಕೊಂಡು ಬಂದಿದ್ದರು. ಹಳ್ಳಿಯಲ್ಲಿ ಜಮೀನು ಇದ್ದುದರಿಂದ ಕೃಷಿ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಈ ದಂಪತಿಯ ಮಗನೇ ಶಿವರುದ್ರಪ್ಪ.

ಈತ ತನ್ನ ಊರು ಬಿಟ್ಟು ಬಂದು ಮೈಸೂರಿನ ಜೆಪಿ ನಗರದಲ್ಲಿ ನೆಲೆಸಿದ್ದಲ್ಲದೆ, ಆಗೊಮ್ಮೆ ಈಗೊಮ್ಮೆ ಊರಿಗೆ ಹೋಗಿ ಬರುತ್ತಿದ್ದನು. ಅಲ್ಲಿ ಸುಧಾ ಮತ್ತು ನಂಜುಂಡಯ್ಯ ಜೀವನ ಸಾಗಿಸಿಕೊಂಡು ಹೋಗುತ್ತಿದ್ದರು. ಇಷ್ಟೇ ಆಗಿದ್ದರೆ ಎಲ್ಲವೂ ಸರಿಯಾಗಿರುತ್ತಿತ್ತೇನೋ? ಆದರೆ ಇತ್ತೀಚೆಗೆ ಸುಧಾಳ ನಡವಳಿಕೆಯನ್ನು ಅನುಮಾನದಿಂದ ನೋಡಲು ಮಗನೇ ಆರಂಭಿಸಿದ್ದನು. ಸಂಸಾರದಲ್ಲಿ ಅದೇನು ನಡೆದಿತ್ತೋ ಗೊತ್ತಿಲ್ಲ. ತಾಯಿ ಸುಧಾ ಅವರ ಮನೆ ಪಕ್ಕದಲ್ಲಿ ಅಜ್ಜಿ(ಸುಧಾ ತಾಯಿ) ಮನೆಯಿತ್ತು.
ಕಳೆದ ಮೂರು ತಿಂಗಳ ಹಿಂದೆ ಮಗ ಶಿವರುದ್ರಪ್ಪನಿಗೆ ಅವನ ಗೆಳೆಯನ್ಯಾವನೋ? ನಿಮ್ಮ ತಾಯಿ ಅದ್ಯಾವನದೋ ಬೈಕ್ ನಲ್ಲಿ ಸುತ್ತಾಡುತ್ತಿದ್ದಳು ಎಂದಷ್ಟೇ ಹೇಳದೆ ಅದನ್ನು ವೀಡಿಯೋ ಮಾಡಿ ಕಳುಹಿಸಿದ್ದನು. ಇದು ತಾಯಿಯ ಬಗ್ಗೆ ಅನುಮಾನ ಹೆಚ್ಚಾಗುವಂತೆ ಮಾಡಿತ್ತು. ಈ ವಿಚಾರದಲ್ಲಿ ಮನೆಯಲ್ಲಿ ಕಿರಿಕ್ ಗಳು ಆಗಿದ್ದವು. ಏನೇ ಆದರೂ ಯಾವ ಮಗನೂ ತನ್ನ ತಾಯಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜಗಳವಾಡುತ್ತಾನೆ ಹೇಳಿ? ಆದರೆ ಶಿವರುದ್ರಪ್ಪ ಅದನ್ನು ಮಾಡಿದ್ದನು.

ಮೊದಲೇ ತಾಯಿ ಬಗ್ಗೆ ಅಸಮಾಧಾನ, ಅನುಮಾನ ಹೊಂದಿದ್ದವನಿಗೆ ಮೂರು ತಿಂಗಳ ಹಿಂದಿನ ವೀಡಿಯೋ ಆಗಾಗ್ಗೆ ಅವನ ಕಣ್ಣಮುಂದೆ ಬರುತ್ತಿದ್ದರಿಂದ ಜಗಳಕ್ಕೆ ಕಾರಣವಾಗುತ್ತಿತ್ತು. ಇದು ಅವನಲ್ಲಿದ್ದ ಕೋಪ ಎಂಬ ಬೆಂಕಿಗೆ ತುಪ್ಪಸುರಿದಂತೆ ಆಗಿತ್ತು. ನನ್ನ ಗೆಳೆಯರೇ ನನ್ನ ತಾಯಿ ಬಗ್ಗೆ ಮಾತನಾಡಲು ಶುರು ಮಾಡಿಬಿಟ್ಟರಲ್ಲ ಎಂಬ ಅವಮಾನ ಕ್ರೋಧವನ್ನು ಹುಟ್ಟು ಹಾಕಿತ್ತು. ಎರಡರಲ್ಲಿ ಒಂದಾಗಬೇಕು ಒಂದೋ ಅವಳಿರಬೇಕು.. ಇಲ್ಲ ನಾನಿರಬೇಕು ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದನು.
ಅವತ್ತು ಭಾನುವಾರ ಮೇ.17, ಮನೆಯಲ್ಲಿದ್ದ ತಾಯಿ ಸುಧಾಳಿಗೆ ಮಗನೇ ಯಮನಾಗಿ ತನ್ನ ಬದುಕಿಗೆ ಬರುತ್ತಾನೆ ಎಂಬ ಚಿಕ್ಕ ಅನುಮಾನವೂ ಬಂದಿರಲಿಲ್ಲ. ಬೆಳಗ್ಗೆ ತಿಂಡಿ ಮಾಡಿಕೊಂಡು ಜಮೀನಿನ ಕಡೆಗೆ ತಂದೆ ನಂಜುಂಡಯ್ಯ ಹೋಗಿ ಅಲ್ಲಿಯೇ ಕೆಲಸ ಮಾಡುತ್ತಿದ್ದರೆ, ಇತ್ತ ಸುಧಾ ಮನೆ ಕೆಲಸದಲ್ಲಿ ನಿರತಳಾಗಿದ್ದಳು. ಇದೇ ವೇಳೆಗೆ ಮಗ ಶಿವರುದ್ರಪ್ಪ ಮನೆಗೆ ಎಂಟ್ರಿ ಕೊಟ್ಟಿದ್ದನು. ಮನೆ ಒಳಗೆ ಹೋಗುತ್ತಲೇ ತಾಯಿ ಮೇಲೆ ಕೂಗಾಡಿದ್ದನು. ಈ ವೇಳೆ ಸುಧಾ ನಿನಗೇನಾಗಿದೆ? ಏಕೆ ಹೀಗಾಡ್ತಿದ್ದೀಯಾ? ಎಂದಿದ್ದಾಳೆ.

ಅಷ್ಟರಲ್ಲಿಯೇ ರೌದ್ರಾವತಾರ ತಾಳಿ ಶಿವರುದ್ರಪ್ಪ ನೀನು ಯಾವನ ಜೊತೆಗೆ ಎಲ್ಲಿಗೆ ಹೋಗಿದ್ದೆ? ಎಲ್ಲವೂ ನನಗೆ ಗೊತ್ತಾಗಿದೆ ಎನ್ನುತ್ತಾ ಕೂಗಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಶಿವರುದ್ರಪ್ಪ ತನಗೆ ಜನ್ಮ ನೀಡಿದ ತಾಯಿ ಎಂಬುದನ್ನು ಮರೆತು ದೊಣ್ಣೆಯಿಂದ ಆಕೆಯ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿಬಿಟ್ಟನು. ಅವನು ಹೊಡೆದ ಏಟಿಗೆ ಗಾಯಗಳಾಗಿ ರಕ್ತ ಹೊರಹೊಮ್ಮಿತ್ತು. ಅಸ್ವಸ್ಥಗೊಂಡ ಆಕೆ ನೆಲಕ್ಕುರುಳಿದ್ದಳು. ಬೊಬ್ಬೆ ನರಳಾಟ ಕೇಳಿ ನೆರೆ ಮನೆಯಲ್ಲಿದ್ದ ಸುಧಾ ಅವರ ತಾಯಿ ಕೆಂಪಮ್ಮ ಮತ್ತು ಸಂಬಂಧಿಕರಾದ ಅಭಿ ಮತ್ತು ಆಕಾಶ್ ಅವರು ಅಲ್ಲಿಗೆ ಓಡಿ ಬಂದಿದ್ದಾರೆ. ಈ ವೇಳೆ ಹೆದರಿದ ಶಿವರುದ್ರಪ್ಪ ಅಲ್ಲಿಂದ ಪರಾರಿಯಾಗಿದ್ದನು.
ಸಂಪೂರ್ಣ ಅಸ್ವಸ್ಥಗೊಂಡಿದ್ದ ಸುಧಾಳನ್ನು ಆಸ್ಪತ್ರೆಗೆ ಕಾರಿನಲ್ಲಿ ಸಾಗಿಸುವ ಪ್ರಯತ್ನ ಮಾಡಿದರಾದರೂ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಕಾರಿನಲ್ಲಿಯೇ ಸುಧಾ ಸಾವನ್ನಪ್ಪಿದ್ದಳು. ಏನು ಮಾಡುವುದೆಂದು ಗೊತ್ತಾಗದ ಅಭಿ ಮತ್ತು ಆಕಾಶ್ ಆ ನಂತರ ಪರಾರಿಯಾಗಿದ್ದ ಶಿವರುದ್ರಪ್ಪನಿಗೆ ತಿಳಿಸಿದ್ದಾರೆ. ಈ ವೇಳೆ ವಿಚಾರವನ್ನು ಮಗ ಶಿವರುದ್ರಪ್ಪ ತಂದೆ ನಂಜುಂಡಯ್ಯನಿಗೆ ತಿಳಿಸಿದ್ದು, ಸುಧಾಳ ಶವವನ್ನು ಜಮೀನಿಗೆ ತರುವಂತೆ ಹೇಳಿದ್ದಾರೆ. ಅವರ ಮಾವಿನ ಮರವಿದ್ದ ಜಮೀನಿಗೆ ಹೆಣವನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಹಂತಕ ಶಿವರುದ್ರಪ್ಪನೂ ಬಂದಿದ್ದಾನೆ. ಎಲ್ಲರೂ ಸೇರಿ ಜಮೀನಿನಲ್ಲಿಯೇ ಸುಟ್ಟು ಹಾಕುವ ತೀರ್ಮಾನ ಮಾಡಿದ್ದಾರೆ.

ಕೂಡಲೇ ಟ್ರ್ಯಾಕ್ಟರ್ ನಲ್ಲಿ ಜಮೀನಿಗೆ ಸೌದೆ ತರಿಸಿಕೊಂಡಿದ್ದಾರೆ. ಬಳಿಕ ಆತುರ, ಆತುರದಲ್ಲಿ ಹೆಣವನ್ನು ಜಮೀನಿನಲ್ಲಿಯೇ ಸುಟ್ಟು ಕೈತೊಳೆದುಕೊಂಡು ಮನೆಯ ಕಡೆ ಹೋಗಿದ್ದಾರೆ. ಈ ವೇಳೆ ಅಜ್ಜಿ ಕೆಂಪಮ್ಮ ತನ್ನ ಮಗಳು ಎಲ್ಲಿದ್ದಾಳೆ? ಹೇಗಿದ್ದಾಳೆ? ಯಾವ ಆಸ್ಪತ್ರೆಗೆ ಸೇರಿಸಿದ್ದೀರಾ? ಎಂದೆಲ್ಲ ಪ್ರಶ್ನೆ ಕೇಳಿದ್ದಾಳೆ. ಆದರೆ ವಾಪಸ್ ಹೋದವರಲ್ಲಿ ಯಾವುದಕ್ಕೂ ಉತ್ತರವಿರಲಿಲ್ಲ. ಹೀಗಾಗಿ ಅನುಮಾನ ಹುಟ್ಟಿಕೊಂಡಿತ್ತು. ಮಧ್ಯಾಹ್ನದ ಹೊತ್ತಿಗೆ ಊರಿನಲ್ಲಿ ಕೊಲೆ ಮಾಡಿ ಸುಟ್ಟು ಹಾಕಿರುವ ಸುದ್ದಿಗಳು ಹರಿದಾಟಿತ್ತು ಹೀಗಾಗಿ ಪೊಲೀಸರಿಗೆ ಮಾಹಿತಿ ಹೋಗಿತ್ತು.
ಹೀಗಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಜಯಪುರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಅದರಂತೆ ಪೊಲೀಸರು ಊರಿಗೆ ಹೋಗಿ ಮಾಹಿತಿ ಕಲೆ ಹಾಕಿದಾಗ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಸುಧಾಳ ತಾಯಿ ಕೆಂಪಮ್ಮ ಅವರನ್ನು ಕೇಳಿದಾಗ ಜಗಳದ ಬಗ್ಗೆ ಹೇಳಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇದಾದ ನಂತರ ಪೊಲೀಸರು ಹಂತಕ ಶಿವರುದ್ರಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಏನೇನಾಯಿತು ಎಂಬುದನ್ನು ಬಾಯಿ ಬಿಟ್ಟಿದ್ದಾನೆ.

ಅದರಂತೆ ಹಂತಕ ಶಿವರುದ್ರಪ್ಪ ಮತ್ತು ತಂದೆ ನಂಜುಂಡಯ್ಯ, ಸಂಬಂಧಿಗಳಾದ ಅಭಿ ಮತ್ತು ಆಕಾಶ್ ನನ್ನು ವಶಕ್ಕೆ ಪಡೆದು ಸುಧಾಳನ್ನು ಸುಟ್ಟು ಹಾಕಿದ ಜಮೀನಿಗೆ ಹೋಗಿದ್ದಾರೆ. ಈ ವೇಳೆ ಸಂಜೆಯಾಗಿದ್ದರಿಂದ ದೇಹದ ಬಹುತೇಕ ಭಾಗಗಳು ಸುಟ್ಟು ಬೂದಿಯಾಗಿದ್ದವು. ಕೂಡಲೇ ಬೆಂಕಿಯನ್ನು ನಂದಿಸಿ ತಲೆಬುರುಡೆ ಮತ್ತು ಎಲುಬುಗಳನ್ನು ಪೊಲೀಸರು ಶೇಖರಿಸಿಕೊಂಡಿದ್ದಲ್ಲದೆ, ತಾಳಿ ಓಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೀಗ ಸುಧಾಳ ತಾಯಿ ಕೆಂಪಮ್ಮ ನೀಡಿದ ದೂರಿನ ಮೇರೆಗೆ ಕೊಲೆ ಮಾಡಿದ ಆರೋಪದಡಿ ಶಿವರುದ್ರಪ್ಪ ಹಾಗೂ ಹೆಣವನ್ನು ಸುಟ್ಟುಹಾಕಿ ಸಾಕ್ಷಿ ನಾಶ ಮಾಡಲು ಸಹಕಾರ ನೀಡಿದ ಆರೋಪದಲ್ಲಿ ತಂದೆ ನಂಜುಂಡಯ್ಯ, ಸಂಬಂಧಿಗಳಾದ ಅಭಿ ಮತ್ತು ಆಕಾಶ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಕ್ರೈಂ ಸುದ್ದಿ ಮತ್ತು ಸ್ಟೋರಿಗಳಿಗೆ ಇದರ ಮೇಲೆ ಕ್ಲಿಕ್ ಮಾಡಿ….
–ಬಿ.ಎಂ.ಲವಕುಮಾರ್








