
ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಬೈಕಿನಲ್ಲಿ ಹೋಗುವಾಗ ಆಯ ತಪ್ಪಿ ಬಿದ್ದು ಯುವಕರಿಬ್ಬರೂ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಹುಣಸೂರು ತಾಲೂಕಿನ ಮಲಗಿನ ಕೆರೆಯ ಸಮೀಪ ಹುಣಸೂರು ಮಾಕೋಡು ರಸ್ತೆಯಲ್ಲಿ ಭಾನುವಾರ ಸಂಜೆ 3 ಗಂಟೆ ಸಮಯದಲ್ಲಿ ಘಟನೆ ನಡೆದಿದೆ.
ಮೃತ ಯುವಕರು ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮರೂರು ಗ್ರಾಮದವರಾಗಿದ್ದು, ರಾಜ ನಾಯಕ (38) ಸುದೀಪ್ (25) ಎಂದು ಗುರುತಿಸಲಾಗಿದೆ. ರಾಜನಾಯಕ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ, ಸುದೀಪ್ 8 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದನು.
ಘಟನೆ ನಡೆದಿದ್ದು ಹೇಗೆ?: ರಾಜನಾಯಕ ಮತ್ತು ಸುದೀಪ್ ಒಂದೇ ಗ್ರಾಮದವರಾಗಿದ್ದು ಇಬ್ಬರು ಸ್ನೇಹಿತರು ಇವರು ಪ್ರತಿನಿತ್ಯ ಎಳನೀರು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದು ಸೋಮವಾರಕ್ಕೆ ಎಳನೀರು ಬೇಕಾಗಿರುವುದರಿಂದ ತೋಟಗಳನ್ನು ನೋಡಿಕೊಂಡು ಬರಲು ಹೋಗಿದ್ದರು ವಾಪಸ್ ಬರುವಾಗ ಬೈಕ್ ನಿಂದ ಆಯ ತಪ್ಪಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗೆ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.








