ಕೆ.ಆರ್.ನಗರ(ಸಂಘಟನೆ ಮಂಜುನಾಥ್): 2026-27ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎಚ್.ಎಲ್. ಗೀತಾ ಹೆಚ್.ಎಲ್ ರವರು ತಿಳಿಸಿದ್ದಾರೆ.
ರಾಷ್ಟ್ರೀಯ ಎಣ್ಣೆ ತಾಳೆ ಅಭಿಯಾನ ಯೋಜನೆಯಡಿ ಹೊಸದಾಗಿ ಪ್ರದೇಶ ವಿಸ್ತರಣೆ, ನಿರ್ವಹಣೆ ಮತ್ತು ಅಂತರ ಬೆಳೆ ಬೆಳೆಯಲು ಸಹಾಯಧನ ನೀಡಲಾಗುವುದು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತಂಬಾಕು ಪರ್ಯಾಯ ಬೆಳೆ ಕಾರ್ಯಕ್ರಮದಲ್ಲಿ ತಂಬಾಕು ಪರವಾನಿಗೆ ಹೊಂದಿರುವ ರೈತರು ತಂಬಾಕಿಗೆ ಬದಲಾಗಿ ಅಂಗಾಂಶ ಬಾಳೆ, ಕಂದು ಬಾಳೆ, ತರಕಾರಿ ಬೆಳೆ ಬೆಳೆಯಲು ಸಹಾಯಧನ ನೀಡಲಾಗುವುದು ಎಂದು ಹೇಳಿದ್ದಾರೆ
ರಿಯಾಯಿತಿ ದರದಲ್ಲಿ ಲಘು ಪೋಷಕಾಂಶಗಳನ್ನು ವಿತರಣೆ ಮಾಡಲಾಗುವುದು ಅಲ್ಲದೇ ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ ಪದ್ಧತಿ ಅಳವಡಿಸಲು ಸಹಾಯಧನ ನೀಡಲಾಗುವುದು, ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಹೊಸದಾಗಿ ತೆಂಗಿನ ಸಸಿಗಳನ್ನು ನಾಟಿ ಮಾಡಲಾಗಿರುವ ರೈತರುಗಳಿಗೆ ಒಂದು ಸಸಿಗೆ ರೂ.350 ರಂತೆ ಮೊದಲನೇ ವರ್ಷ ರೂ.175 ಮತ್ತು ಎರಡನೇ ವರ್ಷ ರೂ.175 ರಂತೆ ಸಹಾಯಧನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ
ಹೆಚ್ಚಿನ ಮಾಹಿತಿಗೆ ಹತ್ತಿರದ ತೋಟಗಾರಿಕಾ ಇಲಾಖೆಯನ್ನು ಭೇಟಿ ಮಾಡಿ ಮಾಹಿತಿ ಪಡೆಯ ಬಹುದಾಗಿದೆ.








