ಕೊಡಗಿನಲ್ಲಿ ‘ಡ್ರಗ್ಸ್’ಹಾವಳಿ… ನಮ್ಮ ಮಕ್ಕಳು ಬಲಿಯಾಗಬಹುದು… ಹುಷಾರ್!
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-4

ರೆಸಾರ್ಟ್ ಮತ್ತು ಹೋಂಸ್ಟೇ ಸಂಸ್ಕೃತಿ ಮುಂದೊಂದು ದಿನ ಕೊಡಗಿನ ಸಂಸ್ಕೃತಿ ಮತ್ತು ಯುವ ಜನತೆಯ ಮೇಲೆ ಗಂಡಾಂತರ ಬೀರಬಹುದು ಎಂಬ ಮಾತನ್ನು ಕೆಲ ದಶಕಗಳ ಹಿಂದೆಯೇ ಕೊಡಗಿನ ಬಗ್ಗೆ ಕಾಳಜಿ ಹೊಂದಿದ್ದ ಹಿರಿಯರು ಹೇಳಿದ್ದರು. ಅದೀಗ ನಿಜವಾಗುತ್ತಿದೆ… ಹೊರ ರಾಜ್ಯ, ಹೊರದೇಶದ ಜನ ಇಲ್ಲಿಗೆ ಎಂಜಾಯ್ ಮಾಡಲೆಂದು ಬರುತ್ತಿದ್ದು ಅವರ ಜತೆಗೆ ಮಾದಕ ವಸ್ತುಗಳು ಸದ್ದಿಲ್ಲದೆ ಎಂಟ್ರಿ ಕೊಟ್ಟಿವೆ. ಅದು ಇಲ್ಲಿನ ಯುವಜನತೆಯನ್ನು ಬಲಿ ಪಡೆಯಲು ಆರಂಭಿಸಿದೆ… ಕೊಡಗಿನಲ್ಲಿ ಡ್ರಗ್ಸ್ ಸೃಷ್ಟಿಸಿರುವ ಆತಂಕವನ್ನು ಲೇಖಕ ಕಾಯಪಂಡ ವಿಷ್ಣು ನಾಚಪ್ಪ ತೆರೆದಿಟ್ಟಿದ್ದಾರೆ.

ಇವತ್ತು ಕೊಡಗಿನ ಹಸಿರು ಬೆಟ್ಟಗಳ ಮಧ್ಯೆ ಒಂದು ಕರಾಳ ನೆರಳು ಆವರಿಸಿದೆ. ಅದರ ಹೆಸರು ಡ್ರಗ್ಸ್. ನಿನ್ನೆ ನಗುತ್ತಿದ್ದ ಮಗ ಇವತ್ತು ಕಣ್ಣು ಕೆಂಪಗೆ ಮಾಡಿಕೊಂಡು ಮಲಗಿದ್ದಾನೆ. ನಿನ್ನೆ ಪುಸ್ತಕ ಹಿಡಿದಿದ್ದ ಮಗಳು ಇವತ್ತು ದಾರಿ ತಪ್ಪಿ ನಡೆಯುತ್ತಿದ್ದಾಳೆ. ಇದು ಯಾವುದೋ ಸಿನಿಮಾ ಕಥೆ ಅಲ್ಲ. ನಮ್ಮ ಅಕ್ಕ ಪಕ್ಕದಲ್ಲಿ ಕೆಲವೆಡೆ ನಡೆಯುತ್ತಿರುವ ಸನ್ನಿವೇಶಗಳು.
ಇದನ್ನೂ ಓದಿ… ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ
ಪೋಷಕರೇ, ಎಚ್ಚರ
‘ನನ್ನ ಮಗ ಹಾಗಲ್ಲ’ ಅನ್ನೋ ಭ್ರಮೆ ಬಿಡಿ. ಮೊಬೈಲ್ ಕೊಟ್ಟು, ಪಾಕೆಟ್ ಮನಿ ಕೊಟ್ಟು ನಿಮ್ಮ ಜವಾಬ್ದಾರಿ ಮುಗೀತು ಅಂದುಕೊಳ್ಳಬೇಡಿ. ದಿನಾ 10 ನಿಮಿಷ ಮಗನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ. ಅವನ ಸ್ನೇಹಿತರು ಯಾರು? ಶಾಲೆ ಬಿಟ್ಟು ಎಲ್ಲಿಗೆ ಹೋಗ್ತಾನೆ? ಜೇಬಲ್ಲಿ ಏನಿದೆ? ಪ್ರೀತಿಯಿಂದ ವಿಚಾರಿಸಿ. ಅನುಮಾನ ಬಂದರೆ ಗದರಬೇಡಿ, ತಬ್ಬಿಕೊಂಡು ಕೇಳಿ. ನಿಮ್ಮ ಒಂದು ಅಪ್ಪುಗೆ ಅವನನ್ನು ನರಕದಿಂದ ಎಳೆದು ತರಬಹುದು.

ಮಕ್ಕಳೇ, ಒಂದು ನಿಮಿಷ ಯೋಚಿಸಿ
‘ಜಸ್ಟ್ ಟ್ರೈ ಮಾಡೋಣ’ ಅಂತ ಶುರುವಾಗೋದು ‘ಸಾಯೋವರೆಗೂ ಬಿಡೋಲ್ಲ’ . ನಿಮ್ಮ ಒಂದು ತಪ್ಪು ಹೆಜ್ಜೆ ಅಪ್ಪ-ಅಮ್ಮನ 20 ವರ್ಷದ ಕನಸನ್ನು ಸುಟ್ಟು ಬಿಡುತ್ತೆ. ಗೆಳೆಯರು ‘ಎಂಜಾಯ್ ಮಾಡು ಅಂತಾರೆ, ಆದ್ರೆ ಆಸ್ಪತ್ರೆ ಸೇರಿದಾಗ ಯಾರೂ ಬರಲ್ಲ. ನಿಮ್ಮ ದೇಹ ನಿಮ್ಮದಲ್ಲ, ನಿಮ್ಮನ್ನು ಹೊತ್ತು ಹೆತ್ತವರ ಕನಸು. ಅದನ್ನು ವಿಷಕ್ಕೆ ಕೊಡಬೇಡಿ.
ಇದನ್ನೂ ಓದಿ… ಕಾವೇರಿಯ ತವರಿನಲ್ಲಿ ಬರದ ಛಾಯೆ….. ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ…
ಶಿಕ್ಷಕರೇ, ನೀವೇ ದಾರಿದೀಪ
ತರಗತಿ ಮುಗಿದ್ರೆ ನಿಮ್ಮ ಪಾಠ ಮುಗೀತು ಅಲ್ಲ. ಮಗು ತರಗತಿಯಲ್ಲಿ ನಿದ್ದೆ ಮಾಡ್ತಿದೆಯಾ? ಒಂಟಿಯಾಗಿ ಕೂತಿದೆಯಾ? ಸಮವಸ್ತ್ರ ಸರಿ ಇಲ್ಲವಾ? ಹಠಾತ್ ವರ್ತನೆ ಬದಲಾಯ್ತಾ? ಗಮನಿಸಿ. ಬೈದು ತಿದ್ದೋದು ಬೇಡ, ಪ್ರೀತಿಯಿಂದ ಹತ್ತಿರ ಕರೆದು ಮಾತಾಡಿಸಿ. ಶಾಲೆಯ ಗೇಟಿನಿಂದ ಒಳಗೆ ಬರೋದು ಕೇವಲ ಮಕ್ಕಳಲ್ಲ, ಒಂದು ಕುಟುಂಬದ ಭವಿಷ್ಯ. ಡ್ರೆಸ್ ಕೋಡ್, ಶಿಸ್ತು ಅಂದ್ರೆ ಬಂಧನ ಅಲ್ಲ. ಅದು ಮಗುವನ್ನು ಕೆಟ್ಟ ದಾರಿಯಿಂದ ಕಾಪಾಡೋ ಲಕ್ಷ್ಮಣ ರೇಖೆ.

ಡ್ರಗ್ಸ್‌ಗೆ ಜಾತಿ ಇಲ್ಲ, ಬಡವ-ಶ್ರೀಮಂತ ಇಲ್ಲ. ಅದು ನಮ್ಮ ಮನೆ ಬಾಗಿಲು ತಟ್ಟುವ ಮೊದಲೇ ನಾವು ಎಚ್ಚರಗೊಳ್ಳಬೇಕು. ಪೊಲೀಸರು, ಕಾನೂನು ಆಮೇಲೆ. ಮೊದಲು ಮನೆಯಲ್ಲಿ, ಶಾಲೆಯಲ್ಲಿ ಪ್ರೀತಿ, ನಂಬಿಕೆ, ಸಂವಹನ ಇರಲಿ.
ಇದನ್ನೂ ಓದಿ… ಕೊಡಗಿನ ಮಣ್ಣಿನ ಮಕ್ಕಳ ಕಣ್ಣೀರು…. ಒಂಟಿಯಾದ ಜೀವಗಳಿಗೆ ಜೊತೆಯಾಗೋಣ…
ಒಂದು ಮಗು ಹಾಳಾದ್ರೆ ಒಂದು ಮನೆ ಅಲ್ಲ, ಇಡೀ ಊರು ಸಾಯುತ್ತೆ. ನಮ್ಮ ಕೊಡಗಿನ ಮಕ್ಕಳು ಕಾಫಿ ತೋಟದ ಪರಿಮಳದ ಜೊತೆ ಎಂಜಾಯ್ ಮಾಡಬೇಕು.. ಡ್ರಗ್ಸ್ ನಿಂದ ಅಲ್ಲ. ಎಲ್ಲರೂ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸೋಣ.








