CinemaLatest

ರಾಮಗೋಪಾಲ್ ಚಂದನವನದಲ್ಲಿ ಮಿಂಚಿಯೂ ಮಿನುಗದ ನಟ…  ಕೈಕೊಟ್ಟಿತಾ ಅದೃಷ್ಟ!

ಚಂದನವನದಲ್ಲಿ  ಆಯಾಯ ಕಾಲಘಟ್ಟದಲ್ಲಿ ಹಲವು ನಟರು ಬಂದು ಹೋಗಿದ್ದಾರೆ. ಇವತ್ತು ಹಳೆಯ ಸಿನಿಮಾಗಳನ್ನು ನೋಡಿದಾಗ ಅದು ತಿಳಿಯುತ್ತದೆ. ಆದರೆ ಬಹುತೇಕ ನಟರು ಮರೆತು ಹೋಗಿದ್ದಾರೆ. ಅವರನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಯತ್ನವೇ ಲೇಖನ ಮಾಲಿಕೆಯಾಗಿದೆ. ಬಾರಿ ನಟ, ರಾಮ್ ಗೋಪಾಲ್ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಬರೆದಿದ್ದಾರೆ ಓದಿ ಅಭಿಪ್ರಾಯ ತಿಳಿಸಿ…

ಮೂಲತಃ ಓರ್ವ ಯಶಸ್ವಿ ಬಿಸಿನೆಸ್‌ಮನ್ ಆಗಿದ್ದ ಆರ್ಯವೈಶ್ಯ ಕೋದಂಡರಾಮಶೆಟ್ಟಿ 1944ರಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿನಾಡು ಭಾಗದ ಚಿಕ್ಕಬಳ್ಳಾಪುರ ಟೌನಲ್ಲಿ ಜನಿಸಿದರು. ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸದ ಪಕ್ಕಾ ವ್ಯಾಪಾರಿ. ಇದ್ದಕ್ಕಿದ್ದಂತೆ ಒಮ್ಮೆ ಅನಿರೀಕ್ಷಿತವಾಗಿ ತನ್ನ ಬೆಳಗಾವಿ ಸ್ನೇಹಿತರ ಮೂಲಕ ಸಾವಕಾಶವಾಗಿ 4.1.1966ರಂದು ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಮೂಲಕ ರಾಮಗೋಪಾಲ್ ಎಂಬ ಹೆಸರಿನಿಂದ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಕನ್ನಡ ನಾಡುನುಡಿಯ ಅಪ್ಪಟಭಕ್ತ.

ಈ ಐತಿಹಾಸಿಕ ಕನ್ನಡ-ಮರಾಠಿ ಎರಡೂ ಭಾಷೆಯ ಚಿತ್ರಗಳ ನಿರ್ಮಾಪಕರು ನೇಮಿನಾಥ, ನಿರ್ದೇಶಕರು ಬಿ.ಟಿ.ಅಥಣಿ. ಮರಾಠಿ ಮತ್ತು ತೆಲುಗು ನಟ ನಟಿಯರೇ ಹೆಚ್ಚಾಗಿದ್ದ ಗುಂಪಲ್ಲಿ ಸ್ವಲ್ಪವೇ ಸ್ಥಾನ ಪಡೆದಿದ್ದ ಕೆಲವೇ ಕನ್ನಡ ಕಲಾವಿದರಲ್ಲಿ ಈತನೂ ಒಬ್ಬನಾಗಿದ್ದ. ಈ ಚಿತ್ರದ ಎಲ್ಲಾ ಏಳು ಹಾಡುಗಳನ್ನು ಮರಾಠಿಗ ಲಕ್ಷ್ಮಣ ಬೆರಳೇಕರ್ ಸಂಗೀತ ನಿರ್ದೇಶನದಲ್ಲಿ ಬಾಲಿವುಡ್ ಗಾಯಕರಾದ ಲತಾಮಂಗೇಶ್ಕರ್, ಉಷಾಮಂಗೇಶ್ಕರ್ ಆಶಾಭೋಸ್ಲೆ, ಮನ್ನಾಡೆಯಂಥ ದಿಗ್ಗಜರಿಂದ ಹಾಡಿಸಿದ್ದು ಚಂದನವನದ ನಿತ್ಯನೂತನ ದಾಖಲೆ. ಚಿತ್ರದ ಬಹುತೇಕ ತಾಂತ್ರಿಕ ವರ್ಗದ ಸಿಬ್ಬಂದಿಯೂ ಮುಂಬಯಿ ಚಿತ್ರರಂಗದವರೆ ಇದ್ದ ಹಲವಾರು ವಿಶೇಷತೆಯುಳ್ಳ ಸಿನಿಮಾದ ನೃತ್ಯ ಸಂಗೀತ ಅಭಿನಯ ಈ ಮೂರೂ ವಿಭಾಗದ ಹೊಣೆ ಹೊತ್ತಿದ್ದ ಖ್ಯಾತ ಕಲಾವಿದ ಅಭಿಭಟ್ಟಾಚಾರ್ಯರು ಅತಿಥಿ ನಟನಾಗಿ ಅಭಿನಯಿಸಿದ್ದು ಸಹ ಗಮನಾರ್ಹ ಅಂಶ!

ರಾಮಗೋಪಾಲ್ ಸ್ಫುರದ್ರೂಪಿ ಮತ್ತು ಪ್ರತಿಭಾವಂತ ಯುವಕನಾದರೂ ಅದೃಷ್ಟವು ಕೈ ಕೊಡಲಾಗಿ ಬಯಸಿದಷ್ಟು ಉತ್ತಮ ಪಾತ್ರ ಆಗಲೀ ಅಥವ ಹೀರೋ ಪಾತ್ರವಾಗಲೀ ನಿರೀಕ್ಷಿಸಿದ್ದಷ್ಟು ಸಂಖ್ಯೆಯ ಸಿನಿಮಾಗಳಲ್ಲಿ ದೊರಕಲಿಲ್ಲ. ಕಡೇವರೆಗೂ ಈತನ ಪ್ರತಿಭೆಗೆ ತಕ್ಕ ಪುರಸ್ಕಾರ-ಅವಕಾಶ ಸಿಗಲೇಇಲ್ಲ?!ಕೇವಲ 12 ಚಿತ್ರಗಳಲ್ಲಿ ಮಾತ್ರ ಹೀರೋಆಗಿ, ಒಂದು ಫ಼ಿಲಂನಲ್ಲಿ ಖಳನಟನಾಗಿ, 18ಸಿನಿಮಾಗಳಲ್ಲಿ ಪೋಷಕನಟನಾಗಿ ಅಭಿನಯಿಸಿದರು.

ಕೆಲವು ಮರಾಠಿ, ತೆಲುಗು ಚಿತ್ರಗಳಲ್ಲು ಮುಖ್ಯಪಾತ್ರ ನಿರ್ವಹಿಸಿದ್ದುಂಟು. ಇಷ್ಟಾದರೂ ನಿರಾಶೆಗೊಳ್ಳದ ಇವರು ತಮಗೆ ದೊರೆತ ಕಡಿಮೆ ಅವಕಾಶಗಳನ್ನು ಬಿಡದೇ ಸದುಪಯೋಗಪಡಿಸಿಕೊಂಡ ಪ್ರಾಮಾಣಿಕ ನಟ. ಯಾವುದೇ ಭಾಷೆಯ ನಿರ್ಮಾಪಕ, ನಿರ್ದೇಶಕರಿಗೆ ಯಾವ ರೀತಿಯಲ್ಲು ತೊಂದರೆ ಆಗದಂತೆ ಶೂಟಿಂಗ್ ಮುಕ್ತಾಯದವರೆಗೂ ಎಲ್ಲರೊಡನೆ ಬೆರೆತು ನಗುನಗುತ್ತ ಕಲಿತು, ಕಲಿಸಿ, ಸಲಹೆ ಸಹಾಯ ಸಹಕಾರ ನೀಡುತ್ತ ಯಾರನ್ನೂ ನಿರಾಶೆಗೊಳಿಸದ ವಿಶ್ವಾಸಾರ್ಹ ಮೈತ್ರೇಯ ಕಲಾವಿದ.

“ಬೀಸಿದಬಲೆ” ಚಿತ್ರದ ಹೀರೋ ಪಾತ್ರದಲ್ಲಿ ನವನಟಿ ಜಯಲಕ್ಷ್ಮಿ ಜತೆಗಿನ ಯುಗಳಗೀತೆ “ಕಸ್ತೂರಿ ಕನ್ನಡ ಕುಲದ ಮುದ್ದಾದ ಮದು ಮಗಳೆ…” ಮತ್ತು “ಜಾಣೆ ಜಾಗಾರ್ಧಹೆಣ್ಣೆ…..”    ಚಿತ್ರಗೀತೆಗಳು ಇವತ್ತಿಗೂ ಜನಪ್ರಿಯ ಹಾಗೂ ಆಪ್ಯಾಯಮಾನ. ರಾಜನ್‌-ನಾಗೇಂದ್ರ ಸಂಗೀತ, ಬಿ.ಎ.ಅರಸುಕುಮಾರ್ ನಿರ್ದೇಶನ ಇದ್ದ ಈ ಚಿತ್ರವು ಸಿಲ್ವರ್‌ ಜ್ಯುಬ್ಲಿ ಪ್ರದರ್ಶನ ಕಂಡು ಇವರನ್ನೂ ಯಶಸ್ವಿ ನಾಯಕನಟರ ಸಾಲಿಗೆ ಕೊಂಡೊಯ್ಯಿತು! ಭಲೇರಾಣಿ ಮತ್ತು ತೀರದಬಯಕೆ ಮುಂತಾದ ಹಲವು ಚಿತ್ರಗಳು 100 ದಿನಗಳ ಪ್ರದರ್ಶನ ಕಂಡವು.

ಬಹಳ ವರ್ಷಗಳ ನಂತರ ಡಾ.ರಾಜ್‍ಕುಮಾರ್ ನಟಿಸಿದ ಎರಡುಕನಸು ಚಿತ್ರದಲ್ಲಿ ಖ್ಯಾತನಟಿ ಮಂಜುಳಾ ಪತಿಯಾಗಿ ರಾಜ್ ರವರ ಸಹೋದ್ಯೋಗಿ ಪ್ರೊಫೆಸರ್ ಮಿತ್ರನಾಗಿ ಅಮೋಘ ಅಭಿನಯ ನೀಡಿದರು. ಈ ಫಿಲಂ ಕೂಡ ಸಿಲ್ವರ್‌ ಜ್ಯುಬಿಲಿ ಪ್ರದರ್ಶನ ಕಂಡು ರಾಮಗೋಪಾಲ್‌ಗೆ ಪುನರ್ಜನ್ಮ ನೀಡಿತು. ತೆಲುಗು ತಮಿಳು ತುಳು ಕೊಂಕಣಿ ಕೊಡವ ಭಾಷಾ ಚಿತ್ರಗಳಲ್ಲಿ ನಟಿಸಿದ್ದ ಒಟ್ಟು ಸಿನಿಮಾ ಸಂಖ್ಯೆಯು ಕಡಿಮೆ ಎನಿಸಿದರೂ 23 ವರ್ಷಕಾಲ ಇವರು ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ವಿವಿಧ ಬಗೆಯ ಕಲಾಸೇವೆಯನ್ನು ವಿಶಿಷ್ಟ ರೀತಿಯಲ್ಲಿ ನೆರವೇರಿಸಿ ಪ್ರೇಕ್ಷಕರ ಮೆಚ್ಚುಗೆ, ಅಭಿಮಾನದ ಜತೆಗೇ ಕೆಲವಾರು ಪ್ರಶಸ್ತಿ ಪುರಸ್ಕಾರ ಬಿರುದು ಬಹುಮಾನ ಗಳಿಸಿದ್ದರು. ತಮ್ಮ 70ನೇ ವಯಸ್ಸಲ್ಲಿ ವಯೋಸಹಜ ಅನಾರೋಗ್ಯದಿಂದ 2015ರಲ್ಲಿ ಬೆಂಗಳೂರಲ್ಲಿ ನಿಧನರಾದರು. ಇಂಥ ಹಿರಿಯ ಕಲಾವಿದನನ್ನು ಕನ್ನಡ ಕುಲಕೋಟಿ ಸೇರಿದಂತೆ ಇಡೀ ಚಂದನವನ ಚಿತ್ರರಂಗ ಎಂದಿಗೂ ಮರೆಯುವುದಿಲ್ಲ.

ರಾಮಗೋಪಾಲ್ ನಟಿಸಿದ ಫ಼ಿಲಂಸ್… ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ, ಭಲೇರಾಣಿ, ಐದುಬೆರಳು, ಮಹಡಿಯಮನೆ, ಗೃಹಿಣಿ, ಉತ್ತರದಕ್ಷಿಣ, ಬೀಸಿದಬಲೆ, ಎರಡುಕನಸು, ಮನೆಬೆಳಗಿದ ಸೊಸೆ, ಮಾಡಿಮಡಿದವರು, ಅಣ್ಣಅತ್ತಿಗೆ, ನಂಜುಂಡನಕ್ಕಾಗ, ಮನೆಬೆಳಕು, ಕಸ್ತೂರಿವಿಜಯ, ಆಶೀರ್ವಾದ, ಬಾಳುಜೇನು,  ವಿಜಯವಾಣಿ, ಮಹದೇಶ್ವರಪೂಜಾಫಲ, ಬಂಗಾರದಗುಡಿ, ಮಾಂಗಲ್ಯ ಭಾಗ್ಯ, ಗುರುಭಕ್ತಿ, ಯಾರುಹಿತವರು, ರಾಜನರ್ತಕಿಯ ರಹಸ್ಯ, ಶ್ರೀರೇಣುಕಾ ದೇವಿಮಹಾತ್ಮೆ, ಲಕ್ಷ್ಮೀನಿವಾಸ, ಕಾಡ್ಗಿಚ್ಚು, ಪುನರ್ಮಿಲನ, ಶನಿಪ್ರಭಾವ,  ದೇವರೇದಿಕ್ಕು, ಸುಮಂಗಲಿ, ಹೃದಯದೀಪ, ಅನುಬಂಧ, ಮಂಗಳಾ, ತೀರದ ಬಯಕೆ, ಛಲಗಾರ, ಮಂಗಳಸೂತ್ರ, ಮುಂತಾದವು.

admin
the authoradmin

Leave a Reply

Translate to any language you want