ಕೊಡಗಿನ ಆಸ್ತಿ ಕೊಡಗಿನಲ್ಲೇ ಉಳಿಯಲಿ… ಆಸ್ತಿ ಮಾರಾಟ ಮಾಡುವ ಮುನ್ನ ಯೋಚಿಸಿ!
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-5

ಕೊಡಗಿನ ಮಣ್ಣು ಅನ್ಯರ ಪಾಲಾಗುತ್ತಿದೆ… ತಾತ ಮುತ್ತಾಂದಿರು ಉಳಿಸಿಕೊಂಡು ಬಂದಿದ್ದ ಆಸ್ತಿಯನ್ನು ಈಗಿನ ತಲೆಮಾರು ಮಾರಾಟ ಮಾಡುತ್ತಿದೆ.. ಎಲ್ಲೋ ಕುಳಿತವರು ಕೊಡಗಿನ ಮಣ್ಣಿನ ಮೇಲೆ ಬಂಡವಾಳ ಸುರಿಯುತ್ತಿದ್ದಾರೆ… ಇದು ಒಳ್ಳೆಯ ಬೆಳವಣಿಗೆಯಲ್ಲ… ಕೊಡಗಿನ ಆಸ್ತಿ ಕೊಡಗಿನಲ್ಲಿಯೇ ಉಳಿಯುವಂತೆ ನೋಡಿಕೊಳ್ಳುವುದು ಈಗಿನ ಅಗತ್ಯತೆಯಾಗಿದೆ.. ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಈ ಕುರಿತಂತೆ ಲೇಖನದಲ್ಲಿ ವಿವರಿಸಿದ್ದಾರೆ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ…
ನಮ್ಮ ನೆಲ, ನಮ್ಮ ಅಸ್ತಿತ್ವ ಉಳಿಯಬೇಕಾದರೆ ಕೊಡಗಿನ ಆಸ್ತಿ ಕೊಡಗಿನವರ ಕೈಯಲ್ಲೇ ಇರಬೇಕು. ಇಂದು ಅನಿವಾರ್ಯ ಕಾರಣಕ್ಕೆ ಪಿತ್ರಾರ್ಜಿತ ತೋಟ, ಭೂಮಿ ಮಾರಾಟವಾದಾಗ ಅದು ಹೊರಗಿನವರ ಕೈ ಸೇರುತ್ತಿದೆ. ಹೀಗೆ ಮುಂದುವರಿದರೆ ನಾಳೆ ನಮ್ಮ ಮಕ್ಕಳಿಗೆ “ಇದು ನಮ್ಮ ಊರು” ಎಂದು ಹೇಳಲು ಒಂದು ಎಕರೆ ಜಾಗವೂ ಉಳಿಯುವುದಿಲ್ಲ.

ಆದ್ದರಿಂದ ಯಾರೇ ಆಸ್ತಿ ಮಾರಾಟ ಮಾಡುವ ಮುನ್ನ ದಯವಿಟ್ಟು ನಿಮ್ಮ ಸಮಾಜದೊಂದಿಗೆ, ಕೊಡಗಿನವರೊಂದಿಗೆ ಚರ್ಚಿಸಿ. ಕೊಡಗಿನ ಆಸ್ತಿ ಕೊಡಗಿನವರಲ್ಲೇ ಉಳಿಯಲಿ. ಇದು ಕೊಡವ ಜನಾಂಗಕ್ಕೆ ಮಾತ್ರವಲ್ಲ, ಕೊಡಗಿನ ಎಲ್ಲಾ ಸಮುದಾಯಗಳಿಗೂ ಅನ್ವಯ. ನಾವು ಪರಸ್ಪರ ಹೊಂದಾಣಿಕೆಯಿಂದ ನಮ್ಮ ನೆಲವನ್ನು ನಾವೇ ಕಾಪಾಡಿಕೊಳ್ಳಬೇಕು.
ಈ ಕಾರ್ಯಕ್ಕೆ ಅಖಿಲ ಕೊಡವ ಸಮಾಜ, ಎಲ್ಲಾ ಊರಿನ ಕೊಡವ ಸಮಾಜಗಳು, ಹಾಗೂ ಕೊಡಗಿನ ಇತರ ಎಲ್ಲಾ ಸಮಾಜಗಳು ಒಟ್ಟಾಗಿ “ನೆಲ ಉಳಿವು ನಿಧಿ” ಸ್ಥಾಪಿಸಲಿ. ಕೈಬಿಟ್ಟು ಹೋಗುತ್ತಿರುವ 5 ಎಕರೆ, 10 ಎಕರೆ ಆಸ್ತಿಗಳನ್ನು ಮೊದಲು ಸಮಾಜವೇ ಖರೀದಿಸಲಿ, ನಂತರ ದೊಡ್ಡ ಆಸ್ತಿಗಳನ್ನು ಉಳಿಸುವ ಕೆಲಸ ಆಗಲಿ. ಈ ಆಸ್ತಿಯಲ್ಲಿ ವಿದ್ಯಾಸಂಸ್ಥೆ, ವಸತಿ ನಿಲಯ, ಕೃಷಿ ತರಬೇತಿ, ಸಾಂಸ್ಕೃತಿಕ ಭವನ ಕಟ್ಟಿ ಜನಾಂಗದ ಏಳಿಗೆಗೆ ಬಳಸಬಹುದು.
ಇದಕ್ಕಾಗಿ ಪ್ರತಿ ಕೊಡಗಿನವರು ನೂರು ರೂಪಾಯಿಯಿಂದ ಲಕ್ಷ ರೂಪಾಯಿವರೆಗೆ ದೇಣಿಗೆ ನೀಡಿ. ಇದು ನಮ್ಮ ನೆಲಕ್ಕೆ ನಾವು ಮಾಡುವ ಹೂಡಿಕೆ. ನಿಮ್ಮ ಒಂದು ರೂಪಾಯಿಯೂ ಕೊಡಗಿನ ಒಂದು ಇಂಚು ಭೂಮಿಯನ್ನು ಉಳಿಸಬಹುದು.
ಇದು ಯಾರ ವಿರುದ್ಧದ ಹೋರಾಟವಲ್ಲ. ನಮ್ಮ ಅಸ್ತಿತ್ವ, ಸಂಸ್ಕೃತಿ, ನೆಲದ ಹಕ್ಕನ್ನು ಉಳಿಸಿಕೊಳ್ಳುವ ಪ್ರಯತ್ನ. ಇಂದು ಎಚ್ಚೆತ್ತುಕೊಳ್ಳದಿದ್ದರೆ ನಾಳೆ “ಕೊಡಗು ನಮ್ಮದು” ಎಂದು ಹೇಳುವ ಹಕ್ಕನ್ನೇ ಕಳೆದುಕೊಳ್ಳುತ್ತೇವೆ. ಎಲ್ಲಾ ಸಮಾಜದ ಮುಖಂಡರು, ಯುವಕರು ತಕ್ಷಣ ಸಭೆ ಸೇರಿ ರೂಪುರೇಷೆ ತಯಾರಿಸಿ. ನೆಲ ಇದ್ದರೆ ನಾವು, ನಾವು ಇದ್ದರೆ ನಮ್ಮ ಸಂಸ್ಕೃತಿ.

“ನೆಲ ಉಳಿವು ನಿಧಿ” – ಕಾವೇರಿ ತಾಯಿಯ ಕರೆ…
ಇಲ್ಲಿನ ತನಕದ ಬರಹದಲ್ಲಿ “ಕೊಡಗಿನ ಆಸ್ತಿ ಕೊಡಗಿನಲ್ಲೇ ಉಳಿಯಲಿ” ಎಂದು ಉಲ್ಲೇಖಿಸಿದ್ದೇನೆ. ಅದು ಕೇವಲ ಮಾತಲ್ಲ, ನಮ್ಮ ತಾಯಿ ಕಾವೇರಿಯ ಕಣ್ಣೀರಿನ ಕರೆ. . “ನೆಲ ಉಳಿವು ನಿಧಿ” (ನಮ್ಮ ಭೂಮಿ ನಮ್ಮ ಹಕ್ಕು ಜಮ್ಮ ಕೊಡಗು) ಇದು ನಮ್ಮ ಉಸಿರು ಪ್ರತಿ ಊರಿನ ಕೊಡವ ಸಮಾಜ ಹಾಗೂ ಇತರ ಸಮಾಜಗಳು ಒಂದಾಗಿ ಒಂದು ಟ್ರಸ್ಟ್ ರಚಿಸಲಿ. ಇದು ಕೇವಲ ಕಾಗದದ ಟ್ರಸ್ಟ್ ಅಲ್ಲ, ನಮ್ಮ ಮಕ್ಕಳ ಭವಿಷ್ಯದ ಆಧಾರ ಸ್ತಂಭ.
ಈ ಟ್ರಸ್ಟ್‌ಗೆ ಕಾನೂನಾತ್ಮಕ ಮಾನ್ಯತೆ ಇರಲಿ. ಪ್ರತಿ ತಿಂಗಳು ಪಾರದರ್ಶಕ ಲೆಕ್ಕ ಕೊಡುವ ವ್ಯವಸ್ಥೆ ಇರಲಿ. ನಮ್ಮ ಬೆವರಿನ ಹನಿ ಹನಿಗೂ ಲೆಕ್ಕ ಇರಬೇಕು, ಏಕೆಂದರೆ ಇದು ನಮ್ಮ ನೆಲದ ಹಕ್ಕು. ಮಾರಾಟಕ್ಕೆ ಬರುವ ಕೊಡಗಿನ ಆಸ್ತಿಯ ಮಾಹಿತಿ ಮೊದಲು ಈ ನಿಧಿಗೆ ಬರಬೇಕು. 30 ದಿನಗಳ ಒಳಗೆ ಸಮಾಜ ಖರೀದಿಸುವ ತೀರ್ಮಾನ ಮಾಡಬೇಕು. ತಡ ಮಾಡಿದರೆ, ನಾಳೆ ನಮ್ಮದೇ ನೆಲದಲ್ಲಿ ನಾವು ಪರಕೀಯರಾಗುತ್ತೇವೆ.

ಹಣ ಎಲ್ಲಿಂದ ಬರಬೇಕು? ಆರು ತಿಂಗಳಲ್ಲಿ ಕೋಟಿ ಕೋಟಿ ಹೇಗೆ?
ಕೊಡಗಿನ ಹೊರಗೆ-ಒಳಗೆ ಇರುವ ಪ್ರತಿಯೊಬ್ಬ ಕೊಡಗಿನವನು ತಿಂಗಳಿಗೆ ಕೇವಲ ₹100 ಕೊಟ್ಟರೂ, 50,000 ಜನ ಸೇರಿದರೆ ತಿಂಗಳಿಗೆ ₹50 ಲಕ್ಷ, ಆರು ತಿಂಗಳಲ್ಲಿ ₹3 ಕೋಟಿ ಸಂಗ್ರಹವಾಗುತ್ತದೆ. ನಿಮ್ಮ ಒಂದು ದಿನದ ಕಾಫಿಯ ಖರ್ಚು, ನಾಳೆ ನಿಮ್ಮ ಮಗುವಿನ ಒಂದು ಎಕರೆ ನೆಲವಾಗುತ್ತದೆ. ಇದರ ಜೊತೆ ಉದ್ಯಮಿಗಳು, ಉದ್ಯೋಗಸ್ಥರು, ನಿವೃತ್ತ ಅಧಿಕಾರಿಗಳು ತಿಂಗಳಿಗೆ ₹10,000 ಕೊಟ್ಟರೆ, 1000 ಜನ ಸೇರಿದರೂ ಆರು ತಿಂಗಳಲ್ಲಿ ₹6 ಕೋಟಿ ಬರುತ್ತದೆ.
ಒಟ್ಟು ಆರು ತಿಂಗಳಲ್ಲಿ ₹9 ರಿಂದ ₹10 ಕೋಟಿ ಸುಲಭವಾಗಿ ಸಂಗ್ರಹಿಸಬಹುದು. ಇದಲ್ಲದೆ, ಕೊಡಗಿನ ಮನೆತನದ ಕುಟುಂಬದ ಹೆಸರಿನಲ್ಲೂ ಸಹ ಇಂತಹ ಪುಣ್ಯ ಕಾರ್ಯಗಳನ್ನು ಮಾಡಬಹುದು. ತಮ್ಮ ಹಿರಿಯರ ಸ್ಮರಣಾರ್ಥ ಒಂದು ಎಕರೆ ಜಾಗವನ್ನು ಸಮಾಜಕ್ಕೆ ದಾನವಾಗಿ ನೀಡಬಹುದು, ಅಥವಾ ತಮ್ಮ ಮನೆತನದ ಹೆಸರಿನಲ್ಲಿ ವಸತಿ ಶಾಲೆ, ಆಸ್ಪತ್ರೆ ವಾರ್ಡ್ ಕಟ್ಟಿಸಬಹುದು. ನಿಮ್ಮ ಮನೆತನದ ಹೆಸರು ಕೊಡಗಿನ ಮಣ್ಣಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ಹಣಕ್ಕೆ ತೆರಿಗೆ ವಿನಾಯಿತಿ ಸಿಗುವಂತೆ ಸರ್ಕಾರದ ಮಾನ್ಯತೆ ಪಡೆಯಬೇಕು. ಇದು ದಾನವಲ್ಲ, ನಮ್ಮ ರಕ್ತಕ್ಕೆ, ನಮ್ಮ ಅನ್ನಕ್ಕೆ ನಾವು ಮಾಡುವ ಹೂಡಿಕೆ.

ಖರೀದಿಸಿದ ಆಸ್ತಿಯನ್ನು ಏನು ಮಾಡಬೇಕು?
5 ಎಕರೆಯೊಳಗಿನ ಜಾಗ: ಯುವ ರೈತರಿಗೆ, ಬಡ ಕುಟುಂಬಗಳಿಗೆ ಕಡಿಮೆ ಬಾಡಿಗೆಗೆ ನೀಡಿ ಕೃಷಿ ಮಾಡಿಸಬೇಕು. ನಮ್ಮ ಹುಡುಗರು ಮತ್ತೆ ಮಣ್ಣಿನ ವಾಸನೆ ಮರೆಯಬಾರದು.
10 ಎಕರೆ ಮೇಲ್ಪಟ್ಟ ಆಸ್ತಿ: ಕೊಡವ ಕಲಾಕೇಂದ್ರ, ವಸತಿ ಶಾಲೆ, ಹಿರಿಯ ನಾಗರಿಕರ ಕೇಂದ್ರ, ಆಯುರ್ವೇದ ಚಿಕಿತ್ಸಾಲಯ , ಸಾಂಸ್ಕೃತಿಕ ಅಕಾಡೆಮಿ ಹೀಗೆ ಹಲವಾರು…. ನಮ್ಮ ಸಂಸ್ಕೃತಿಯ ದೀಪ ಆರದಂತೆ ನೋಡಿಕೊಳ್ಳಬೇಕು.
ಸರಕಾರಗಳನ್ನು ಬೇಡುವ ಬದಲು ನಮ್ಮ ಸಮಾಜವೇ ಒಂದಾಗಿ ಕೊಡಗಿನ ಮಧ್ಯಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಬಹುದು ನಮ್ಮ ತಾಯಂದಿರು, ಹಿರಿಯರು ಮಡಿಕೇರಿ- ಮೈಸೂರು ಅಲೆದಾಡಬಾರದು. ನಮ್ಮವರಿಗೆ ಉಚಿತ/ಕಡಿಮೆ ದರದಲ್ಲಿ ಚಿಕಿತ್ಸೆ, ಹೊರಗಿನವರಿಗೆ ಶುಲ್ಕ ವಿಧಿಸಿ ಆ ಆದಾಯದಿಂದ ಆಸ್ಪತ್ರೆ ನಡೆಸಬಹುದು. ಇದು ಸ್ವಾವಲಂಬನೆಯ ದಾರಿ, ಸ್ವಾಭಿಮಾನದ ದಾರಿ.

ಈ ಎಲ್ಲ ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಕೊಡಗಿನಲ್ಲೇ ನೂರಾರು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ. ಜೊತೆಯಲ್ಲಿ ನಮ್ಮ ಪ್ರಕೃತಿ ಸೊಗಸಾಗಿ ಉಳಿಯುತ್ತದೆ. _ಬೆಂಗಳೂರು, ಮೈಸೂರಿನಲ್ಲಿ ಸಣ್ಣ ಸಣ್ಣ ಸಂಬಳದಲ್ಲಿ ಕಷ್ಟಪಡುತ್ತಿರುವ ನಮ್ಮ ಯುವ ಸಮೂಹ ತಾಯ್ನೆಲಕ್ಕೆ ಮರಳಿ ಬರಲು ಇದೊಂದು ದೊಡ್ಡ ಸಹಾಯವಾಗುತ್ತದೆ. *ನಮ್ಮ ಮಕ್ಕಳು ಪರವೂರಲ್ಲಿ ಗುಲಾಮರಾಗಬಾರದು, ತಮ್ಮ ನೆಲದಲ್ಲಿ ರಾಜರಾಗಬೇಕು._
ನಮ್ಮ ಕೊಡಗಿನ ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಭಾಗ್ಯಕ್ಕೆ ಉಚಿತ ನೆರವು ಕೊಡುವಂತಹ ವ್ಯವಸ್ಥೆ ಮಾಡಬಹುದು. ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್, ರೋಗಿಗೆ ಉಚಿತ ಚಿಕಿತ್ಸೆ – ಇದು ಕಾವೇರಿ ತಾಯಿ ನಮಗೆ ಕೊಟ್ಟ ಕರುಣೆಯ ಋಣ ತೀರಿಸುವ ದಾರಿ.
ನಮ್ಮ ಜನಾಂಗದಲ್ಲಿ ಈಗಲೂ ಮನೆ ಇಲ್ಲದೆ ಗುಡಿಸಲಲ್ಲಿ/ ಅಥವಾ ಅತ್ಯಂತ ಸಂಕಷ್ಟದಲ್ಲಿ ಬದುಕುವ ಕುಟುಂಬಗಳಿವೆ. ಅಂತವರಿಗೆ ‘ಸ್ವಂತ ಮನೆ’ ಕಟ್ಟಿಕೊಡುವ ಪುಣ್ಯದ ಕೆಲಸ ಮಾಡಬಹುದು. ಒಂದು ಸೂರು ಕೊಟ್ಟರೆ ಒಂದು ಕುಟುಂಬದ ಕಣ್ಣೀರು ಒರೆಸಿದಂತೆ.

ಯಾವುದೇ ಕಾರಣಕ್ಕೂ ಈ ಆಸ್ತಿಯನ್ನು ಮತ್ತೆ ವ್ಯಕ್ತಿಗಳಿಗೆ ಮಾರಾಟ ಮಾಡುವಂತಿಲ್ಲ. ಇದು ನಮ್ಮ ಪೂರ್ವಜರ ತ್ಯಾಗದ ಪ್ರತೀಕ, ಇದು ಸಮಾಜದ ಶಾಶ್ವತ ಆಸ್ತಿ.
ತಕ್ಷಣ ಮಾಡಬೇಕಾದ ಕೆಲಸಗಳು…
ದಯವಿಟ್ಟು ಪ್ರತಿ ಊರಿನ ಕೊಡವ ಸಮಾಜ ಹಾಗೂ ಇತರ ಸಮಾಜಗಳ ಮುಖಂಡರು ಆದಷ್ಟು ಬೇಗ ಪ್ರತಿ ತಾಲೂಕಿನಲ್ಲಿ ಸಭೆ ಸೇರಿ ಚರ್ಚಿಸಬೇಕೆಂದು ವಿನಂತಿ. ಇದು ಚರ್ಚೆಯಲ್ಲ, ನಮ್ಮ ಅಸ್ತಿತ್ವದ ಯಜ್ಞ.
ವಕೀಲರು, ಲೆಕ್ಕಪರಿಶೋಧಕರನ್ನು ಸೇರಿಸಿ ಟ್ರಸ್ಟ್ ಡೀಡ್ ತಯಾರಿಸುವ ಯೋಜನೆಗಳ ಬಗ್ಗೆ ಯೋಚಿಸುವುದು ಒಳ್ಳೆಯದು. ವಾಟ್ಸಾಪ್, ಫೇಸ್‌ಬುಕ್‌ನಲ್ಲಿ “ನೆಲ ಉಳಿವು ನಿಧಿ” ಪುಟ ತೆರೆದು ಪ್ರತಿದಿನ ಪ್ರಗತಿ ಹಂಚಿಕೊಳ್ಳೋಣ. ಪ್ರತಿ ರೂಪಾಯಿಯ ಕಥೆ ಕೊಡಗಿನ ಪ್ರತಿ ಮನೆಗೂ ತಲುಪಲಿ.
ಇದು ಭಾವನಾತ್ಮಕ ವಿಷಯವಲ್ಲ, ಅಸ್ತಿತ್ವದ ಪ್ರಶ್ನೆ. ಇಸ್ರೇಲ್‌ನ ಯಹೂದಿಗಳು ಪ್ರಪಂಚದಾದ್ಯಂತ ಇದ್ದರೂ ತಮ್ಮ ಒಂದು ಇಂಚು ನೆಲವನ್ನು ಬಿಟ್ಟುಕೊಡುವುದಿಲ್ಲ. ನಾವು ಕಾವೇರಿ ತೀರದಲ್ಲಿ ಹುಟ್ಟಿ, ಕಾಫಿ ತೋಟದಲ್ಲಿ ಬೆಳೆದು, ಐನ್‌ಮನೆಯಲ್ಲಿ ನಲಿದವರು. ನಮ್ಮ ನೆಲವನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಇದಕ್ಕಿಂತ ದೊಡ್ಡ ನೋವು ಬೇರೆ ಇದೆಯಾ?

ಆದರೆ ಮುಖ್ಯವಾಗಿ ಬೇಕಾಗಿರೋದು ಇಚ್ಛಾಶಕ್ತಿ. _ಯಾವುದೇ ದುರುದ್ದೇಶವಿಲ್ಲದೆ, ರಾಜಕೀಯ ಲಾಭವಿಲ್ಲದೆ, ರಾಜಕೀಯದ ಗಾಳಿಯು ಇಲ್ಲಿ ತಾಗಬಾರದು . ಕೊಡಗಿನ ಮಹಾಜನರಲ್ಲಿ ಕೊಡಗಿನ ತಾಯಿಗಾಗಿ ದುಡಿಯುವ ಮನಸ್ಸುಗಳು ಬೇಕು ಅಷ್ಟೇ. _ಪದವಿ, ಹಣ, ಹೆಸರು ಮುಖ್ಯವಲ್ಲ – ಕಾವೇರಿ ತಾಯಿಯ ನ್ಯಾಯಾಲಯದಲ್ಲಿ ಸತ್ಯ ನಿಷ್ಠೆ ಹಾಗೂ ತ್ಯಾಗದ ಮನೋಭಾವನೆ ಇರಬೇಕು.. ನಾನು ನನ್ನ ನೆಲಕ್ಕಾಗಿ ಏನು ಮಾಡಿದೆ?
ಕಾವೇರಿ ತಾಯಿಯ ಮಣ್ಣಿನಲ್ಲಿ ಹುಟ್ಟಿ ಬೆಳೆದ ನಾವು, ಕಾವೇರಿ ಮಣ್ಣಿನ ಋಣ ತೀರಿಸಲು ಯಾರೊಬ್ಬರೂ ಹಿಂದೆ ಸರಿಯಬೇಡಿ. ಇಂದು ನಾವು ನೆಲ ಉಳಿಸದಿದ್ದರೆ, ನಾಳೆ ನಮ್ಮ ಮಕ್ಕಳು “ಅಜ್ಜ, ನಮ್ಮ ಕೊಡಗು ಎಲ್ಲಿ?” ಅಂತ ಕೇಳಿದರೆ ನಾವು ಯಾವ ಉತ್ತರ ಕೊಡುತ್ತೇವೆ? ಆ ಪ್ರಶ್ನೆಗೆ ಉತ್ತರಿಸಲಾಗದ ಪಾಪ ನಮಗೆ ಬೇಡ.
ಇದು ಎಚ್ಚರಿಕೆಯ ಗಂಟೆ.. ಇನ್ನು ಮಾತಲ್ಲ, ಕೃತಿ ಬೇಕು. ಕಣ್ಣೀರಲ್ಲ, ಕೆಚ್ಚೆದೆ ಬೇಕು.
ಕೊಡಗು ಉಳಿಯಲಿ, ನಮ್ಮಿಂದಲೇ ಉಳಿಯಲಿ…








