ArticlesLatestLife style

ಆನೆ ನಾಡಿಗೆ ನುಗ್ಗುತ್ತಿರುವುದೇಕೆ?  ಕಾಡಾನೆ ಹಸಿವಿನ ಹಿಂದೆ ಅದೆಷ್ಟು ಸಂಕಟಗಳ ಕಥೆ!

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-6

ಇವತ್ತು ಆನೆ ಸೇರಿದಂತೆ ಎಲ್ಲ ವನ್ಯಪ್ರಾಣಿಗಳು ಆಹಾರ ಅರಸಿ ನೇರವಾಗಿ ನಾಡಿಗೆ ನುಗ್ಗುತ್ತಿವೆ. ಹಸಿವು ನೀಗಿಸುವ ಭರದಲ್ಲಿ ಮನುಷ್ಯನ ಪ್ರಾಣ ತೆಗೆಯುತ್ತಿವೆ.. ಇಂತಹದೊಂದು ಮಾನವ-ಪ್ರಾಣಿ ಸಂಘರ್ಷ ಮುಂದುವರೆಯುತ್ತಲೇ ಇದೆ.. ಇದನ್ನು ತಡೆಯ ಬೇಕಾದರೆ ನಾವೇನು ಮಾಡಬಹುದು? ಎಂಬ ಪ್ರಶ್ನೆಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಲೇಖನದ ಮೂಲಕ ಉತ್ತರ ನೀಡಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ…

ನೆನಪಿರಲಿ…. “ಇವತ್ತು ನೀವು ನಾವು ನೆಡುವ ಒಂದು ಬೀಜ, ನಾಳೆ ನಿಮ್ಮ ಮಗುವನ್ನು ಮನೆಗೆ ಕರೆತರಬಹುದು”  ಇದು ಉತ್ಪ್ರೇಷೆಯ ಮಾತಲ್ಲ.. ನಿಜಸಂಗತಿ… ಕೊಡಗಿನ ರೈತ ಇವತ್ತು ಗದ್ದೆ ಬಿಟ್ಟಿದ್ದಾನೆ. ಕಾರಣ ಒಂದೇ ಕಾಡಾನೆ, ಕಾಡುಕೋಣ, ಹಂದಿ. ರಾತ್ರಿ ಬೆಳೆದು ನಿಂತ ಭತ್ತ, ಬಾಳೆ, ಕಾಫಿ ಬೆಳಿಗ್ಗೆ ನೋಡಿದರೆ ಮಣ್ಣುಪಾಲು. “ಬೇಲಿ ಹಾಕಿ” ಅಂತ ಸರ್ಕಾರಕ್ಕೆ ಮನವಿ, “ಗುಂಡು ಹೊಡಿ” ಅನ್ನುವಷ್ಟು ಕೋಪ.  ಆದರೆ ನಾವು ನೀವು ಕೇಳಬೇಕಾದ ನಿಜವಾದ ಪ್ರಶ್ನೆ ಇದಲ್ಲ “ಆನೆ ಓಡಿಸುವುದು ಹೇಗೆ?” ಅಲ್ಲ. “ಆನೆ ಯಾಕೆ ಬರುತ್ತೆ?”   ಇದಕ್ಕೆ ಉತ್ತರ ಒಂದೇ ಪದ “ಹಸಿವು”.

ಇದರ ಬೆಲೆ ಕೇವಲ ಬೆಳೆಯಲ್ಲ, ಜೀವ ಕೂಡ. ಕೊಡಗಿನಲ್ಲಿ ಮಾತ್ರ ಪ್ರತಿ ವರ್ಷ ಅಂದಾಜು 20 ರಿಂದ 25 ಜನರು ಕಾಡಾನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಅಮಾಯಕ ವಿದ್ಯಾರ್ಥಿನಿಯನ್ನು ಆನೆ ತುಳಿದು ಕೊಂದಿದೆ. ಶಾಲೆಯ ಬೆಲ್ ಆದ ಮೇಲೆ ನಗುನಗುತ್ತಾ ಹೊರಟ ಮಗಳು ಮನೆ ಸೇರಲಿಲ್ಲ. ಯೋಚಿಸಿ, ಮನೆಗೆ ನೀರು ತರಲು ಹೋದ ಮಹಿಳೆಯರು, ತೋಟಕ್ಕೆ ಕೆಲಸಕ್ಕೆ ಹೋದ ಅಮಾಯಕ ರೈತರು ಬಲಿಯಾಗಿದ್ದಾರೆ. ಯಾರದೋ ಅಪ್ಪ, ಯಾರದೋ ಮಗ, ಯಾರದೋ ತಂಗಿ ಮನೆಗೆ ಬರೋದಿಲ್ಲ.

ದುರಂತ ಅಲ್ಲಿಗೆ ಮುಗಿಯಲ್ಲ. ಮನೆ ಯಜಮಾನ ಸತ್ತ ಮೇಲೆ ಸರ್ಕಾರ ಘೋಷಿಸುವ 15 ಲಕ್ಷ ಪರಿಹಾರ ಸರಿಯಾಗಿ, ಸಮಯಕ್ಕೆ ಸರಿಯಾಗಿ ಮನೆಯವರ ಕೈ ಸೇರುತ್ತಿಲ್ಲ. ಕಾಗದ-ಪತ್ರ, ಆಫೀಸು-ಅಧಿಕಾರಿ ಅಂತ ಅಲೆದು ವರ್ಷವಾದರೂ ಹಣ ಸಿಗಲ್ಲ. ದುಡಿಯುವ ಕೈ ಇಲ್ಲ, ಪರಿಹಾರವೂ ಇಲ್ಲ. ಮಕ್ಕಳ ಓದು ನಿಂತುಹೋಗುತ್ತೆ, ಹೆಂಗಸರ ಬದುಕು ಬೀದಿಗೆ ಬೀಳುತ್ತೆ. ಬದುಕು ಅತ್ಯಂತ ಕಷ್ಟಕರವಾಗಿದೆ. ಒಂದು ಜೀವ ಹೋದರೆ ಅದರ ಬೆಲೆ ಕಟ್ಟಲು ಸಾಧ್ಯವೇ?

ಇನ್ನೊಂದು ದೊಡ್ಡ ದುರಂತ.. ಬೆಟ್ಟಗುಡ್ಡಗಳನ್ನು ಕಡಿದು ರೆಸಾರ್ಟ್ ಕಟ್ಟುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ತಡೆಯಬೇಕು. ಕಾಡಾನೆ ಓಡಾಡುವ ದಾರಿ, ನೀರು ಹರಿಯುವ ತೊರೆ ಮುಚ್ಚಿ ಕಾಂಕ್ರೀಟ್ ಎದ್ದು ನಿಂತಿದೆ. ಈಗಾಗಲೇ ಕಟ್ಟಿರುವ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು. ಕೊಡಗಿನ ಅರಣ್ಯದ ಮೇಲೆ ಆಗುತ್ತಿರುವ ಅತ್ಯಾಚಾರಗಳನ್ನು ನಿಲ್ಲಿಸಬೇಕು. ಕಾಡು ಕಡಿದರೆ ಮಳೆ ನಿಲ್ಲುತ್ತೆ, ಆನೆ ಊರಿಗೆ ಬರುತ್ತೆ, ಮನುಷ್ಯ ಸಾಯುತ್ತಾನೆ. ಕಾಂಕ್ರೀಟ್ ಕೊಡಗು ಬೇಡ. ನಮ್ಮ ಹಳೆಯ ಹಸಿರು ಕೊಡಗು ಬೇಕು.

ಮತ್ತೊಂದು ಕರಾಳ ಸತ್ಯ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬಿದ್ದರೆ ಆನೆ-ಜಿಂಕೆ-ಕರಡಿ ಎಲ್ಲವೂ ಊರ ಕಡೆ ಓಡುತ್ತವೆ. ಒಣ ಎಲೆ, ಒಣ ಹುಲ್ಲು, ನೀಲಗಿರಿ ತೋಟಕ್ಕೆ ಒಂದು ಕಿಡಿ ಸಾಕು. ಕಾಡು ಸುಟ್ಟು ಬೂದಿಯಾದರೆ ಪ್ರಾಣಿಗಳಿಗೆ ತಿನ್ನಲು ಏನೂ ಇರಲ್ಲ. ನೀರು ಇರಲ್ಲ. ಆಗ ಅವು ಹಸಿವಿನಿಂದ, ಬಾಯಾರಿಕೆಯಿಂದ ಹಳ್ಳಿಗೆ ನುಗ್ಗುತ್ತವೆ. ಹೀಗಾಗಿ ಪ್ರತಿ ಬೇಸಿಗೆಯಲ್ಲಿ ಅರಣ್ಯ ಇಲಾಖೆ “ಅರಣ್ಯ ತುರ್ತು” ಅನ್ನುವ ವಿಶೇಷ ಅಭಿಯಾನ ಮಾಡಲೇಬೇಕು. ಫೆಬ್ರವರಿಯಿಂದ ಮೇ ವರೆಗೆ ಕಾಡಿಗೆ ಬೆಂಕಿ ಬೀಳದಂತೆ 24×7 ಕಾವಲು ಇರಬೇಕು. ಫೈರ್ ಲೈನ್ ಮಾಡಬೇಕು, ನೀರಿನ ತೊಟ್ಟಿ ತುಂಬಿಸಬೇಕು, ಗ್ರಾಮಸ್ಥರಿಗೆ ಬೆಂಕಿ ನಂದಿಸುವ ತರಬೇತಿ ಕೊಡಬೇಕು. ಕಾಡು ಉಳಿದರೆ ಮಾತ್ರ ಆನೆ ಉಳಿಯುತ್ತೆ. ಆನೆ ಕಾಡಿನಲ್ಲಿದ್ದರೆ ಮಾತ್ರ ಮನುಷ್ಯ ಉಳಿಯುತ್ತಾನೆ.

ಜನರ ಮನಸ್ಸಿನಲ್ಲಿ ಇನ್ನೊಂದು ಪ್ರಶ್ನೆ ಇದೆ.. ಅರಣ್ಯ ಇಲಾಖೆಗೆ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಬರುತ್ತೆ. ಈ ಹಣವನ್ನು ಏನು ಮಾಡುತ್ತಿದೆ ಅಂತ ಗೊತ್ತಾಗುತ್ತಿಲ್ಲ. ಈ ಹಣವನ್ನು ಸಮರ್ಪಕವಾಗಿ ಬಳಸಿದರೆ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಲು, ಬೇಸಿಗೆಯಲ್ಲಿ ಬೆಂಕಿ ತಡೆಯಲು ಯಾವುದೇ ಕಷ್ಟವಿಲ್ಲ. ಹಣ ಇದೆ, ಮನಸ್ಸು ಬೇಕು. ಹೊಣೆಗಾರಿಕೆ ಬೇಕು.

ಆನೆಯ ಹೊಟ್ಟೆಯ ಪ್ರಶ್ನೆಗೆ ಉತ್ತರ ಕಾಡಿನಲ್ಲೇ ಇದೆ. ಕಾಡಿನಲ್ಲಿ ಅದಕ್ಕೆ ತಿನ್ನಲು ಏನಿದೆ? ಬ್ರಿಟಿಷರು ನೆಟ್ಟ ಅಕೇಶಿಯ, ನೀಲಗಿರಿ, ಸಾಗುವಾನಿ. ಇವುಗಳ ಕಾಯಿ-ಎಲೆ ಆನೆ ಮುಟ್ಟಲ್ಲ. ಹುಲ್ಲುಗಾವಲು ಇಲ್ಲ, ತೊರೆ ಬತ್ತಿದೆ. ನಾವು ಕಾಡನ್ನು “ಹಸಿರು ಮರುಭೂಮಿ” ಮಾಡಿ, ಆಮೇಲೆ “ಆನೆ ಊರಿಗೆ ಬಂತು” ಅಂತ ಅಳುತ್ತಿದ್ದೇವೆ.

ಇನ್ನೊಂದು ಗುಪ್ತ ದುರಂತ.. 25 -30 ವರ್ಷಗಳಿಂದ ಕೆಲವು ಕಾಡಾನೆ ಹಿಂಡುಗಳು ನಾಡಿನಲ್ಲೇ ವಾಸಿಸುತ್ತಿವೆ. ಒಂದು ಕಾಲದಲ್ಲಿ ಕಾಡಿನ ದಾರಿ ಮುಚ್ಚಿಹೋದಾಗ, ಬೆಟ್ಟ ಕೊರೆದಾಗ, ಆನೆಗಳು ಕಾಫಿ ತೋಟಕ್ಕೆ ಬಂದವು. ಅಲ್ಲೇ ಮರಿಗಳನ್ನು ಹಾಕಿದವು. ಈಗ ಆ ಮರಿಗಳಿಗೂ ಕಾಡು ಗೊತ್ತಿಲ್ಲ. ಕಾಫಿ ತೋಟವೇ ಅವುಗಳ ಮನೆ ಆಗಿದೆ. ಇವುಗಳನ್ನು ಮತ್ತೆ ಕಾಡಿಗೆ ಕಳಿಸುವ ವೈಜ್ಞಾನಿಕ ಮಾರ್ಗವನ್ನು ಕಂಡುಹಿಡಿಯಲೇಬೇಕು. ಕಾಡಿನಲ್ಲಿ ಅವುಗಳಿಗೆ ಬೇಕಾದ ಊಟ, ನೀರು, ಹುಲ್ಲುಗಾವಲು, ಉಪ್ಪಿನ ಮಣ್ಣು ಸೃಷ್ಟಿಸಿ, ನಿಧಾನವಾಗಿ ಕಾಡಿಗೆ ಆಕರ್ಷಿಸಬೇಕು. “ಆನೆ ಟಾಸ್ಕ್ ಫೋರ್ಸ್” ಮಾಡಿ, ಪ್ರಾಣಿ ತಜ್ಞರ ಸಹಾಯದಿಂದ ಹಂತ-ಹಂತವಾಗಿ ಇವುಗಳನ್ನು ಮೂಲ ಕಾಡಿಗೆ ಮರಳಿಸಬೇಕು. ಕಾಡು ಅವುಗಳ ನಿಜವಾದ ಮನೆ. ಕಾಫಿ ತೋಟವೆಂಬ ಜೈಲಲ್ಲ.

ಪರಿಹಾರ ಸರಳ… ಕಾಡಿಗೇ ಊಟ ಕೊಡಿ. ಕಾಡಿಗೆ ಬೆಂಕಿ ಬೀಳದಂತೆ ಕಾಯಿರಿ. ನಾಡಾನೆಯಾದ ಆನೆಯನ್ನು ಮತ್ತೆ ಕಾಡಾನೆ ಮಾಡಿ. ಆನೆ ತಾನಾಗೇ ನಿಲ್ಲುತ್ತೆ.   ಮೀಸಲು ಅರಣ್ಯ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲ, ಆನೆ ಕಾರಿಡಾರ್‌ನ ಎರಡೂ ಬದಿಯಲ್ಲಿ, ಸರ್ಕಾರಿ ಅಭಯಾರಣ್ಯಗಳಲ್ಲಿ, ನದಿಯ ದಡಗಳ ಅಕ್ಕಪಕ್ಕ, ತೊರೆ-ಹಳ್ಳಗಳ ಆಸುಪಾಸಿನಲ್ಲಿ ಹಣ್ಣು ಹಂಪಲಿನ ಮರಗಳನ್ನು ಅತಿಯಾಗಿ ಬೆಳೆಸಬೇಕು. ಊರಿನ ದೇವರ ಕಾಡು, ನಾಗಬನ, ಭೂತದ ಕಾಡು ಇಂಥಾ ಪವಿತ್ರ ಸ್ಥಳಗಳಲ್ಲೂ ಕಾಡು ಹಣ್ಣಿನ ಮರ ನೆಡಬೇಕು.  ನಮ್ಮ ಹಿರಿಯರು ದೇವರ ಹೆಸರಲ್ಲಿ ಕಾಡು ಕಾಯ್ದರು. ಈಗ ಅದೇ ದೇವರ ಕಾಡಿನಲ್ಲಿ ಹಲಸು, ಮಾವು, ನೇರಳೆ ನೆಟ್ಟರೆ ದೇವರಿಗೂ ಪೂಜೆ, ಆನೆಗೂ ಊಟ.

ಏನು ನೆಡಬೇಕು?… ಕಾಡು ಹಣ್ಣಿನ ಮರಗಳ ಜೊತೆಗೆ ಕಾಡು ಪ್ರಾಣಿಗಳಿಗೆ ಇಷ್ಟವಾಗುವ ಇತರ ಮರ-ಗಿಡಗಳನ್ನೂ ನೆಡುವಂತಾಗಲಿ. ಹಲಸು ಮೂರು ವರ್ಷಕ್ಕೆ ಕಾಯಿ ಬಿಡುತ್ತೆ. ಒಂದು ಮರಕ್ಕೆ ನೂರು-ಇನ್ನೂರು ಕಾಯಿ. ಆನೆ, ಕರಡಿ, ಮಂಗ ಎಲ್ಲಕ್ಕೂ ಪ್ರಿಯ. ಕಾಡು ಮಾವು, ನೆಲ್ಲಿ, ನೇರಳೆ ಮಳೆಗಾಲ-ಬೇಸಿಗೆಯ ಪಂಚಾಮೃತ. ಬಿದಿರು, ಆನೆ ಹುಲ್ಲು ಆನೆಗೆ ದಿನಕ್ಕೆ 200 ಕೆಜಿ ಮೇವು. ಆಲ, ಅರಳಿ, ಅತ್ತಿ, ಮತ್ತಿ, ಹೊನ್ನೆ ಮರಗಳ ಹಣ್ಣು, ಎಲೆ, ನೆರಳು ಎಲ್ಲವೂ ಪ್ರಾಣಿಗಳಿಗೆ ಜೀವದಾನ.

ಇದರಿಂದ ಏನಾಗುತ್ತೆ? ಕಣ್ಣು ಮುಚ್ಚಿ  ಒಮ್ಮೆ ಯೋಚಿಸಿ. ನಿಮ್ಮ ಮಗು ಶಾಲೆಯಿಂದ ನಗುನಗುತ್ತಾ ಸುರಕ್ಷಿತವಾಗಿ ಮನೆಗೆ ಬರುತ್ತೆ. ರೈತರು ಜೀವಂತವಾಗಿ ಮನೆ ಸೇರಬಹುದು, ಕಾಡಿನಲ್ಲೇ ಊಟ-ನೀರು ಸಿಕ್ಕರೆ, ಬೆಂಕಿ ಬಿದ್ದು ಕಾಡು ಸುಡದಿದ್ದರೆ, ನಾಡಾನೆಗಳು ಮತ್ತೆ ಕಾಡಿಗೆ ಹೋದರೆ ಆನೆ ಊರಿಗೆ ಬರೋದು ನಿಂತುಹೋಗುತ್ತೆ. ಪ್ರತಿ ವರ್ಷದ 20-25 ಕುಟುಂಬಗಳು ಅನಾಥ ಆಗೋದು ನಿಲ್ಲುತ್ತೆ. ಆನಮಲೈ, ವಯನಾಡಿನಲ್ಲಿ ಹಣ್ಣಿನ ಕಾರಿಡಾರ್ ಮಾಡಿದ ಮೇಲೆ ಸಾವು ಶೇ 70 ರಷ್ಟು ಕಡಿಮೆಯಾಗಿದೆ. ಒಂದು ಹಲಸಿನ ಮರ = ಒಂದು ಮಗುವಿನ ಜೀವ.

ಇನ್ನೊಂದು ದೊಡ್ಡ ಲಾಭ…. ಹಣ್ಣಿನ ಮರಗಳು ಹೆಚ್ಚಾಗಿ ಬೆಳೆದರೆ ಕಾಡಿನಲ್ಲಿ ಜಿಂಕೆ, ಕಾಡುಕೋಣ, ಕಾಡು ಹಂದಿ ಸಂಖ್ಯೆ ಸಹಜವಾಗಿ ಹೆಚ್ಚಾಗುತ್ತೆ. ಆಗ ಹುಲಿ-ಚಿರತೆಗಳಿಗೆ ಕಾಡಿನಲ್ಲೇ ಹೊಟ್ಟೆ ತುಂಬಾ ಆಹಾರ ಸಿಗುತ್ತೆ. ಇವತ್ತು ಕೊಡಗಿನ ರೈತರು ಆನೆ ದಾಳಿ ಜೊತೆಗೆ ಹುಲಿ ದಾಳಿಗೂ ನಲುಗುತ್ತಿದ್ದಾರೆ. ಹಸಿದ ಹುಲಿ ಊರಿಗೆ ಬಂದು ಹಸು, ಕುರಿ, ಮೇಕೆ ಹೊತ್ತೊಯ್ಯುತ್ತೆ. ರೈತನ ಬದುಕಿನ ಆಧಾರವೇ ಕಿತ್ತುಕೊಂಡ ಹಾಗೆ. ಆದರೆ ಕಾಡಿನಲ್ಲಿ ಬೇಟೆ ಪ್ರಾಣಿಗಳು ಹೆಚ್ಚಾದರೆ ಹುಲಿ ಕಾಡು ಬಿಟ್ಟು ಬರೋದಿಲ್ಲ. ಆಗ ರೈತರ ಜಾನುವಾರು ಉಳಿಯುತ್ತೆ. ಹೈನಿಗಾಗಿ, ಉಳುಮೆಗಾಗಿ ಸಾಕಿದ ಎತ್ತು, ಹಸು, ಕರು ಹುಲಿಯ ಪಾಲಾಗೋದು ತಪ್ಪುತ್ತೆ. ಕಾಡಿನ ಸಮತೋಲನ ಸರಿಯಾದರೆ ಆನೆಗೂ ಊಟ, ಹುಲಿಗೂ ಊಟ, ರೈತನಿಗೂ ನೆಮ್ಮದಿ.

ನಿಮ್ಮ ಗದ್ದೆಯಲ್ಲಿ ಮತ್ತೆ ಭತ್ತ ನಗುತ್ತೆ. ಆನೆ ಕಾಡಿನಲ್ಲೇ ಇದ್ದರೆ ರೈತ ಧೈರ್ಯವಾಗಿ ನಾಟಿ ಮಾಡುತ್ತಾನೆ. ನದಿ ಮತ್ತೆ ಹರಿಯುತ್ತೆ. ಬೆಟ್ಟ ಕಡಿಯೋದು ನಿಲ್ಲಿಸಿ, ನದಿ ದಡದಲ್ಲಿ ಆಲ-ಮತ್ತಿ ನೆಟ್ಟರೆ ಮಣ್ಣು ಕೊಚ್ಚಿ ಹೋಗದೆ ನಿಂತು ನದಿಗೆ ಜೀವ ಬರುತ್ತೆ.  ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಜಗದ ನಿಯಮ. ಆದರೆ ಬದಲಾವಣೆಗಾಗಿ ಬದುಕು ನಾಶ ಆಗದೆ ಇರಲಿ. ಬೆಟ್ಟ ಕೊರೆದು ಮಾಡುವ “ಅಭಿವೃದ್ಧಿ” ಬೇಡ. ಅದು ಅಭಿವೃದ್ಧಿ ಅಲ್ಲ, ಆತ್ಮಹತ್ಯೆ. ರಸ್ತೆ ಬೇಕು, ಶಾಲೆ ಬೇಕು, ಆಸ್ಪತ್ರೆ ಬೇಕು. ಆದರೆ ಕಾಡು ಕಡಿದು, ನದಿ ಮುಚ್ಚಿ ಮಾಡುವ ಅಭಿವೃದ್ಧಿ ನಮಗೆ ಬೇಡ.

ಇದನ್ನು ಮಾಡೋದು ಹೇಗೆ?… ನಮ್ಮ ನಿಮ್ಮ ಕೈಯಲ್ಲೇ ಇದೆ. ಬೆಟ್ಟ ಕಡಿಯೋದು, ಅಕ್ರಮ ರೆಸಾರ್ಟ್ ನಿಲ್ಲಿಸಿ. ತೆರವುಗೊಳಿಸಿ. ಕಾನೂನು ಎಲ್ಲರಿಗೂ ಒಂದೇ. ಜುಲೈನಲ್ಲಿ “ಹಣ್ಣಿನ ವನ ಮಹೋತ್ಸವ” ಆಚರಿಸಿ. ನೀಲಗಿರಿ ಬೇಡ. ಪ್ರತಿ ಶಾಲೆ, ಪ್ರತಿ ಮಗು ಹಲಸು, ಮಾವು, ಆಲ ನೆಡಲಿ. ನೆಟ್ಟ ಮರಕ್ಕೆ ನಿಮ್ಮ ಮಗುವಿನ ಹೆಸರಿಡಿ. 3 ವರ್ಷ ಆ ಮಗುವೇ ಆ ಮರದ ಪೋಷಕ. ನಿಮ್ಮ ಮಗು ಬೆಳೆದಂತೆ ಆ ಮರವೂ ಬೆಳೆದು, ಇನ್ನೊಂದು ತಾಯಿಯ ಮಗುವಿನ ಜೀವ ಉಳಿಸುತ್ತೆ.

ತಿಂಗಳಿಗೆ ಒಂದು ದಿನ “ಕಾಡು ದಿನ” ಆಚರಿಸಿ. ಮಕ್ಕಳನ್ನು ನದಿ ದಡ, ದೇವರ ಕಾಡಿಗೆ ಕರೆದುಕೊಂಡು ಹೋಗಿ. “ಆನೆ ನಮ್ಮ ಶತ್ರು ಅಲ್ಲ, ಹಸಿದ ಜೀವ” ಅಂತ ತೋರಿಸಿ. ಪ್ರತಿ ಬೇಸಿಗೆಯಲ್ಲಿ “ಅರಣ್ಯ ತುರ್ತು” ಘೋಷಿಸಿ. ಕಾಡಿಗೆ ಬೆಂಕಿ ಬೀಳದಂತೆ ಇಲಾಖೆ, ಜನ, ಯುವಕರು ಸೇರಿ ಕಾಯಿರಿ. ನಾಡಾನೆಗಳನ್ನು ಕಾಡಿಗೆ ಮರಳಿಸಲು ವಿಶೇಷ ಯೋಜನೆ ರೂಪಿಸಿ. ಅರಣ್ಯ ಇಲಾಖೆಯ ಸಾವಿರಾರು ಕೋಟಿಯಲ್ಲಿ ಶೇ 10 ಹಣ್ಣಿನ ಕಾಡಿಗೆ, ಶೇ 5 ಬೆಂಕಿ ತಡೆಗೆ, ಶೇ 5 ನಾಡಾನೆ ಪುನರ್ವಸತಿಗೆ ಮೀಸಲಿಡಲಿ.

ಒಂದು ಮರ ನೆಟ್ಟರೆ ಒಂದು ಜೀವ ಉಳಿಯುತ್ತೆ. ಒಂದು ಕಾಡು ಉಳಿದರೆ ನೂರು ಜೀವ ಉಳಿಯುತ್ತೆ. ಮನೆಯಲ್ಲಿ ತಿಂದ ಹಲಸಿನ ಬೀಜ ಬಿಸಾಡಬೇಡಿ. ಮಣ್ಣಿನ ಉಂಡೆ ಮಾಡಿ ಮಳೆಗಾಲದಲ್ಲಿ ಕಾಡಿಗೆ ಎಸೆಯಿರಿ. ಶೇ 30 ಮೊಳಕೆಯಾದರೂ ಸಾವಿರಾರು ಮರ ಉಚಿತ.

“ಆನೆ ಓಡಿಸಿ” ಅನ್ನೋದು ಬೆಂಕಿ ಆರಿಸಿದ ಹಾಗೆ. “ಕಾಡಿಗೆ ಊಟ ಕೊಡಿ, ಕಾಡು ಉರಿಸಬೇಡಿ” ಅನ್ನೋದು ಬೆಂಕಿ ಹತ್ತದಂತೆ ನೋಡಿಕೊಂಡ ಹಾಗೆ. ಈ ಮಳೆಗಾಲದಲ್ಲೇ ಶುರು ಮಾಡೋಣ. ಮೂರು ವರ್ಷ ಕಾದು ನೋಡಿ. ನಿಮ್ಮ ಕೈಯಲ್ಲಿ ನೆಟ್ಟ ಹಲಸಿನ ಮರಕ್ಕೆ ಕಾಯಿ ಬಿಟ್ಟಾಗ, ಆ ದಿನ ಆನೆ ಊರಿಗೆ ಬರೋದು ನಿಂತಿರುತ್ತೆ. ಹುಲಿ ಹಸು ಹಿಡಿಯೋದು ನಿಂತಿರುತ್ತೆ. ನಾಡಾನೆ ಕಾಡಿಗೆ ಹೋಗಿರುತ್ತೆ.  ಏಕೆಂದರೆ ಆನೆಯ ಹೊಟ್ಟೆಯ ಪ್ರಶ್ನೆಗೆ ನೀವು ಉತ್ತರ ಕೊಟ್ಟಿದ್ದೀರಿ. ಹುಲಿಯ ಹೊಟ್ಟೆಯ ಪ್ರಶ್ನೆಗೂ ಉತ್ತರ ಕೊಟ್ಟಿದ್ದೀರಿ. ನಾಡು ಸೇರಿದ ಆನೆಗೆ ಮತ್ತೆ ಕಾಡಿನ ದಾರಿ ತೋರಿಸಿದ್ದೀರಿ. ಒಂದು ಅಮಾಯಕ ಜೀವದ ಪ್ರಶ್ನೆಗೆ ನೀವು ಜೀವ ಕೊಟ್ಟಿದ್ದೀರಿ.

ಇದು ಕೊಡಗಿನ ಕತೆ ಮಾತ್ರ ಅಲ್ಲ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ ಕರ್ನಾಟಕದ ಎಲ್ಲಾ ಆನೆ-ಹುಲಿ ಕಾರಿಡಾರ್ ಜಿಲ್ಲೆಗಳ ಕಣ್ಣೀರ ಕತೆ ಇದೇ. ಸಕಲೇಶಪುರದ ರೈತನೂ ಗದ್ದೆ ಬಿಟ್ಟಿದ್ದಾನೆ. ತೀರ್ಥಹಳ್ಳಿಯ ತಾಯಿಯೂ ಮಗುವಿಗಾಗಿ ಅಳುತ್ತಿದ್ದಾಳೆ. ಗುಂಡ್ಲುಪೇಟೆಯ ಅಪ್ಪನೂ ಪರಿಹಾರಕ್ಕೆ ಅಲೆಯುತ್ತಿದ್ದಾನೆ. ಬಂಡೀಪುರದ ಅಂಚಿನ ರೈತನೂ ಹಸು ಕಳೆದುಕೊಂಡು ಕಣ್ಣೀರಿಡುತ್ತಿದ್ದಾನೆ. ಸಮಸ್ಯೆ ಒಂದೇ, ಪರಿಹಾರವೂ ಒಂದೇ. ಕೊಡಗಿನಿಂದ ಶುರುವಾಗಿ ಇಡೀ ಕರ್ನಾಟಕದಲ್ಲಿ “ಹಣ್ಣಿನ ಹಬ್ಬ” ನಡೆಯಬೇಕು. ಪ್ರತಿ ಬೇಸಿಗೆಯಲ್ಲಿ “ಅರಣ್ಯ ತುರ್ತು” ಪಾಲನೆಯಾಗಬೇಕು. ನಾಡಾನೆಗಳಿಗೆ “ಕಾಡಿಗೆ ಮರಳುವ ಯೋಜನೆ” ಆಗಬೇಕು. ಪ್ರತಿ ಜಿಲ್ಲಾಧಿಕಾರಿ, ಪ್ರತಿ ತಹಶೀಲ್ದಾರ್ ಈ ಅಭಿಯಾನಕ್ಕೆ ಕೈ ಜೋಡಿಸಬೇಕು.

ಕಾಡು ಹೊಟ್ಟೆ ತುಂಬಿದರೆ, ಕಾಡು ಸುಡದಿದ್ದರೆ, ಆನೆ ಕಾಡಿಗೆ ಮರಳಿದರೆ, ನಾಡು ನೆಮ್ಮದಿಯಾಗಿರುತ್ತೆ.  ಬೆಟ್ಟ ಕಡಿಯೋದು ನಿಲ್ಲಿಸಿ. ಅಕ್ರಮ ರೆಸಾರ್ಟ್ ತೆರವುಗೊಳಿಸಿ. ಕಾಡಿಗೆ ಬೆಂಕಿ ಬೀಳದಂತೆ ಕಾಯಿರಿ. ನಾಡಾನೆಯನ್ನು ಕಾಡಿಗೆ ಕಳಿಸಿ. ಕಾಂಕ್ರೀಟ್ ಕೊಡಗು ಬೇಡ, ಹಸಿರು ಕೊಡಗು ಬೇಕು. ಕೊಡಗಿನಿಂದ ಶುರುವಾಗಿ ಇಡೀ ಕರ್ನಾಟಕದಲ್ಲಿ ಹಣ್ಣಿನ ಹಬ್ಬ ಮಾಡೋಣ. ಇವತ್ತೇ ಒಂದು ಬೀಜ ನೆಡಿ, ಇವತ್ತೇ ಒಂದು ಕಾಡು ಕಾಯಿರಿ. ಅದು ನಾಳೆ ನಿಮ್ಮ ಮಗುವನ್ನು, ನಿಮ್ಮ ಹಸುವನ್ನು ಮನೆಗೆ ಕರೆತರಬಹುದು.

ಕೊನೆಗೂ ಒಂದೇ ಸತ್ಯ ನಾವು ಕಾಡಿಗೆ ಹಣ್ಣಿನ ಮರ ಕೊಟ್ಟರೆ, ಹುಲ್ಲು ತಿನ್ನುವ ಜಿಂಕೆ-ಆನೆಗಳಿಗೆ ಊಟ ಸಿಗುತ್ತೆ. ಜಿಂಕೆ-ಕಾಡುಕೋಣ ಹೆಚ್ಚಾದರೆ ಮಾಂಸ ತಿನ್ನುವ ಹುಲಿ-ಚಿರತೆಗೂ ಕಾಡಿನಲ್ಲೇ ಊಟ ಸಿಗುತ್ತೆ. ಹುಲ್ಲು ತಿನ್ನೋದಕ್ಕೂ, ಮಾಂಸ ತಿನ್ನೋದಕ್ಕೂ ಕಾಡಿನಲ್ಲೇ ಆಹಾರ ಸಿಕ್ಕಾಗ, ನಾಡಾನೆ ಕಾಡಿಗೆ ಮರಳಿದಾಗ, ಯಾವ ಪ್ರಾಣಿಯೂ ಊರ ಕಡೆ ಬರೋದಿಲ್ಲ. ಆಗ ಮನುಷ್ಯನೂ ಉಳಿಯುತ್ತಾನೆ, ಅವನ ಜಾನುವಾರೂ ಉಳಿಯುತ್ತೆ. ಇದೇ ಪ್ರಾಕೃತಿಕ ಸಮತೋಲನ. ಇದನ್ನು ಕಾಯ್ದರೆ ಕಾಡೂ ಉಳಿಯುತ್ತೆ, ನಾಡೂ ಉಳಿಯುತ್ತೆ. ನಾವೆಲ್ಲರೂ ಉಳಿಯುತ್ತೇವೆ.

ಈ ಲೇಖನವನ್ನು ಓದಿದ ಮೇಲೆ ಸುಮ್ಮನೆ ಕೂರಬೇಡಿ. ಸರ್ಕಾರಕ್ಕೆ ಒತ್ತಡ ಹಾಕಿ. ಶಾಸಕ, ಸಂಸದ, ಜಿಲ್ಲಾಧಿಕಾರಿ, ಅರಣ್ಯ ಅಧಿಕಾರಿ – ಎಲ್ಲರಿಗೂ ಇದನ್ನು ತಲುಪಿಸಿ. ಸರ್ಕಾರದ ಅಧಿಕಾರಿಗಳೇ, ಇದನ್ನು ಓದುತ್ತಿದ್ದರೆ ದಯವಿಟ್ಟು ಕಣ್ಣು ಮುಚ್ಚಬೇಡಿ. ಇದು ನಿಮ್ಮ ಕರ್ತವ್ಯ. ಇದನ್ನು ಕಾರ್ಯರೂಪಕ್ಕೆ ತನ್ನಿ. ನಾವು ಕಟ್ಟುವ ತೆರಿಗೆ ಹಣ ಎಸಿ ರೂಮಿನ ಫೈಲ್‌ನಲ್ಲಿ ಕೊಳೆಯಬಾರದು. ಸಾರ್ವಜನಿಕರ ಟ್ಯಾಕ್ಸ್ ಹಣ ಪ್ರಾಕೃತಿಕ ಸಮತೋಲನದ ದಾರಿಯಾಗಲಿ. ಅದು ರಸ್ತೆಯಾಗಲಿ, ಬೇಲಿಯಾಗಲಿ, ಗುಂಡಿನ ಖರ್ಚಾಗಲಿ. ಅದರ ಬದಲು ಹಣ್ಣಿನ ಕಾಡಾಗಲಿ, ಬೆಂಕಿ ತಡೆಯುವ ವ್ಯವಸ್ಥೆಯಾಗಲಿ, ನೀರಿನ ತೊಟ್ಟಿಯಾಗಲಿ, ನಾಡಾನೆ ಪುನರ್ವಸತಿಯಾಗಲಿ. ಜನರ ಪ್ರಾಣ ಉಳಿಯಲಿ, ಜಾನುವಾರು ಉಳಿಯಲಿ, ಕಾಡೂ ಉಳಿಯಲಿ. ಇದೇ ನಿಜವಾದ ಅಭಿವೃದ್ಧಿ.

ಕೊಡಗಿನ ಆಸ್ತಿ ಕೊಡಗಿನಲ್ಲೇ ಉಳಿಯಲಿ… ಆಸ್ತಿ ಮಾರಾಟ ಮಾಡುವ ಮುನ್ನ ಯೋಚಿಸಿ!

 

 

 

admin
the authoradmin

Leave a Reply

Translate to any language you want