ಮೈಸೂರಿನ ತಿ.ನರಸೀಪುರ ಬೇವನಹಳ್ಳಿಯಲ್ಲಿ ಬಯಲಾಯ್ತು ಪ್ರಕರಣ… 18 ಜೀತದಾಳುಗಳ ರಕ್ಷಣೆ.. ಮೂವರ ಬಂಧನ..

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜನ ಬೆಚ್ಚಿ ಬೀಳುವ ಸುದ್ದಿಯೊಂದು ಹೊರ ಬಂದಿದೆ. ಸುಮಾರು ಎರಡೂವರೆ ದಶಕಗಳ ಹಿಂದಿನ ಹಂಗರಹಳ್ಳಿ ಜೀತಪ್ರಕರಣವನ್ನು ನೆನಪು ಮಾಡುವಂತಹ ಜೀತ ಪ್ರಕರಣ ಇದೀಗ ಮೈಸೂರಿನ ತಿ.ನರಸೀಪುರ ತಾಲೂಕಿನ ಬೇವನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕಳೆದ ಇಪ್ಪತ್ತೈದು ವರ್ಷಗಳ ಹೊಟ್ಟೆಪಾಡಿಗಾಗಿ ತಮಿಳುನಾಡಿನಿಂದ ಬಂದಿದ್ದ ಕುಟುಂಬವೊಂದನ್ನು ಜೀತದಾಳುಗಳಂತೆ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಬಳಸಲಾಗುತ್ತಿತ್ತು ಎನ್ನಲಾಗಿದೆ. ಇದೀಗ ಅವರನ್ನು ಪೊಲೀಸರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕ ಪತ್ತೆ ಹಚ್ಚಿ ಬಿಡುಗಡೆ ಮಾಡಲಾಗಿದ್ದು, ಜೀತದಿಂದ ಮುಕ್ತರಾದ ಕುಟುಂಬದಲ್ಲಿ ಸುಮಾರು 18 ಮಂದಿಯಿದ್ದರು ಎನ್ನುವುದು ದುರ್ದೈವದ ಸಂಗತಿಯಾಗಿದೆ. ಇವರಲ್ಲಿ 7 ಜನ ಗಂಡಸರು ಮತ್ತು 9 ಮಂದಿ ಮಹಿಳೆಯರು ಸೇರಿದ್ದಾರೆ.
ಈಗಾಗಲೇ ಜೀತಪದ್ಧತಿ ನಿರ್ಮೂಲನೆಗಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ಕೈಗೊಂಡಿದ್ದರೂ .ನರಸೀಪುರ ತಾಲೂಕಿನ ಬೇವನಹಳ್ಳಿ ಗ್ರಾಮದಲ್ಲಿ ಜೀತ ಪದ್ಧತಿ ಜೀವಂತವಾಗಿದ್ದದ್ದು ದುರ್ದೈವದ ಸಂಗತಿಯಾಗಿದೆ. ಮೂಲಗಳ ಮಾಹಿತಿ ಪ್ರಕಾರ ಈ ಕುಟುಂಬ ಸುಮಾರು 25 ಸಾವಿರ ರೂ.ಗಳನ್ನು ಪಡೆದುಕೊಂಡಿತ್ತು ಎನ್ನಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಅವರನ್ನು ಕೂಡಿ ಹಾಕಿ ಅವರಿಗೆ ಯಾವುದೇ ಸ್ವಾತಂತ್ರ್ಯ ನೀಡದೆ ಇಟ್ಟಿಗೆ ಫ್ಯಾಕ್ಟರಿಯಲ್ಲಿ ದುಡಿಸಿಕೊಳ್ಳುತ್ತಿದ್ದರು.

ಹೀಗಿರುವಾಗಲೇ ಇಲ್ಲಿ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಕಾರ್ಮಿಕರಾದ ಮುತ್ತಣ್ಣ ಮತ್ತು ಜ್ಯೋತಿ ದಂಪತಿ ಇಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಇಟ್ಟಿಗೆ ಫ್ಯಾಕ್ಟರಿ ಮಾಲೀಕರಿಗೆ ವಿಷಯ ಗೊತ್ತಾಗಿ ಅವರನ್ನು ಹಿಡಿದುಕೊಂಡು ಹೋಗಿ ದಿಗ್ಭಂಧನ ಹಾಕಿದ್ದರು. ಹಲ್ಲೆಯನ್ನೂ ಮಾಡಿದ್ದರು ಎನ್ನಲಾಗಿದೆ.
ಅದ್ಯಾಗೋ ವಿಷಯ ಬೆಳಕಿಗೆ ಬಂದಿದ್ದು ಜೀತದಾಳುಗಳಿದ್ದ ಇಟ್ಟಿಗೆ ಫ್ಯಾಕ್ಟರಿಗೆ ತಹಶೀಲ್ದಾರ್ ಸುರೇಶ್ ಆಚಾರ್ ನೇತೃತ್ವದಲ್ಲಿ ಪೊಲೀಸರು ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಫ್ಯಾಕ್ಟರಿಯಲ್ಲಿದ್ದ ಜೀತದಾಳುಗಳನ್ನು ರಕ್ಷಿಸಲಾಗಿದ್ದು, ಹಲ್ಲೆಗೊಳಗಾಗಿರುವ ಮುತ್ತಣ್ಣ, ಜ್ಯೋತಿ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಈ ಸಂಬಂಧ ಇಟ್ಟಿಗೆ ಫ್ಯಾಕ್ಟರಿ ಮಾಲೀಕರಾದ ಯತಿರಾಜ್, ಗಿರೀಶ್ ಹಾಗೂ ಮಹದೇವ್ ಎಂಬ ಮೂವರನ್ನು ಬನ್ನೂರು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.







