ArticlesLatest

ಕುಶಾಲನಗರದ  ಹಳೆಸೇತುವೆ ಈಗ ಸುಂದರ ಉದ್ಯಾನ… ನೋಡ ಬನ್ನಿ ಒಮ್ಮೆ..

ಕಾವೇರಿ ನದಿ ಮೇಲೆ ಎದ್ದು ನಿಂತ ಉದ್ಯಾನ… ಬ್ರಿಟೀಷರ ಸೇತುವೆಗೆ ಹೊಸ ಕಳೆ

ಕುಶಾಲನಗರ (ಆರ್ ಹೆಚ್): ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಗಡಿ ಭಾಗದಲ್ಲಿ ಹಾದು ಹೋಗಿರುವ ಕಾವೇರಿ ನದಿಗೆ ಅಡ್ಡಲಾಗಿ 18 ದಶಕಗಳ ಹಿಂದೆ ಬ್ರಿಟಿಷರು ನಿರ್ಮಿಸಿದ್ದ ಹಳೆಯ ಸೇತುವೆಯಲ್ಲಿ ಇದೀಗ ಸುಂದರ ಉದ್ಯಾನ ರೂಪುಗೊಂಡಿದ್ದು, ಸಾರ್ವಜನಿಕರ  ಗಮನ ಸೆಳೆಯುತ್ತಿದೆ.

ಕುಶಾಲನಗರ ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಹಳೆಯ ಸೇತುವೆ ಮೇಲೆ ರೂ.25 ಲಕ್ಷ ವೆಚ್ಚದಲ್ಲಿ ಉದ್ಯಾನವನ್ನು ನಿರ್ಮಿಸಿದ್ದು, ಈ ಸಾಮಾಜಿಕ ಕಾರ್ಯ ಇತರೆ ಸಂಘಸಂಸ್ಥೆಗಳಿಗೆ ಮಾದರಿಯಾಗಿದ್ದು, ಪ್ರವಾಸಿಗರ ಗಮನವನ್ನು ತನ್ನತ್ತ ಸೆಳೆಯಲಿದೆ. 1848ರಲ್ಲಿ ಅಂದಿನ ಮೈಸೂರು ಕಮಿಷನರ್ ಮೇಜರ್ ಜನರಲ್ ಮಾರ್ಕ್ ಕಬ್ಬನ್ ಅವರ ಅವಧಿಯಲ್ಲಿ ನಿರ್ಮಾಣಗೊಂಡ ಈ ಐತಿಹಾಸಿಕ ಸೇತುವೆ, ಹೊಸ ಸೇತುವೆ ನಿರ್ಮಾಣವಾದ ನಂತರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

ಈ ಸೇತುವೆ ಶಿಥಿಲಾವಸ್ಥೆಗೆ ತಲುಪಿತ್ತು.ಅಲ್ಲದೆ ಸುಸೈಡ್ ಸ್ಪಾಟ್ ಆಗಿತ್ತು.ಈ ಪುರಾತನ ಸೇತುವೆಗೆ ರೋಟರಿ ಸಂಸ್ಥೆ ಪುರಸಭೆಯ ಸಹಕಾರದೊಂದಿಗೆ ಕಾಯಕಲ್ಪ ನೀಡಿ ಆಧುನಿಕ ಸ್ಪರ್ಶ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಟೋಲ್ ಗೇಟ್ ಬಳಿ ಎರಡು ಜಿಲ್ಲೆಗಳ ಮಧ್ಯೆ ಹರಿಯುವ ಜೀವನದಿ ಕಾವೇರಿ ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತದೆ. ಈ ದೃಶ್ಯವನ್ನು ಉದ್ಯಾನದಲ್ಲಿ ಕುಳಿತು ವೀಕ್ಷಣೆ ಮಾಡುವುದು ಒಂದು ಅದ್ಭುತ ಅನುಭವವಾಗಲಿದೆ.

ರೋಟರಿಯ ಸುವರ್ಣ ಸಂಭ್ರಮಾಚರಣೆ ವರ್ಷದ ಸಂಸ್ಥೆಯ 50ನೇ ಅಧ್ಯಕ್ಷರಾಗಿ ಆಯ್ಕೆಗೊಂಡ ಮಾಳೆಯಂಡ ಮನು ಪೆಮ್ಮಯ್ಯ ಅವರು ರೋಟರಿ ಸುವರ್ಣ ಸಂಭ್ರಮದ ಅಂಗವಾಗಿ ವಿವಿಧ ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಈ ಪೈಕಿ ಕೊಪ್ಪ ಕಾವೇರಿ ಸೇತುವೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ರೂಪಿಸುವ ಒಂದು  ವಿಶೇಷ ಚಿಂತನೆಯನ್ನು ಹೊಂದುವ ಮೂಲಕ ರೋಟರಿ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ರೂ 25 ಲಕ್ಷ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ.

400 ಅಡಿ ಉದ್ದ,20 ಅಡಿ ಅಗಲದ ಈ ಸೇತುವೆಯ ಮೇಲಿನ ಬಿರುಕುಗಳನ್ನು ದುರಸ್ತಿ ಮಾಡಿ, ಸುಮಾರು 8000 ಚದರ ಅಡಿ ಗಳಷ್ಟು ನೆಲಹಾಸಿಗೆ ಹೊಸ ಟೈಲ್ಸ್ ಅಳವಡಿಸಲಾಗಿದೆ, 10 ಅಡಿ ಉದ್ದ ಮತ್ತು 2 ಅಡಿ ಅಗಲದ 30ಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ನಿರ್ಮಿಸಲಾಗಿದೆ, 150ಕ್ಕೂ ಹೆಚ್ಚು ಅಲಂಕಾರಿಕ ಸಸ್ಯಗಳನ್ನು ನೆಡಲಾಗಿದೆ.ಸೇತುವೆ ಎರಡೂ ಬದಿಗಳಲ್ಲಿ ಸುಮಾರು 800 ಅಡಿ ಸುರಕ್ಷತಾ ಗ್ರಿಲ್ ಅಳವಡಿಸಲಾಗಿದೆ, 8 ಸುಂದರ ಕಮಾನುಗಳನ್ನು ನಿರ್ಮಿಸಿ ಹಸಿರು ಬಳ್ಳಿಗಳಿಂದ ಅಲಂಕರಿಸಲಾಗಿದೆ.ಸೇತುವೆಯ ಎರಡೂ ತುದಿಗಳಲ್ಲಿ ಪ್ರವೇಶ ದ್ವಾರಗಳ ನಿರ್ಮಿಸಲಾಗಿದೆ,

20ಕ್ಕೂ ಹೆಚ್ಚು ಸೋಲಾರ್ ದೀಪಗಳು ಮತ್ತು ಆರ್ಚ್ ಲೈಟ್‌ಗಳ ಅಳವಡಿಸಲಾಗಿದೆ, ಬಣ್ಣಬಣ್ಣದ ಪೇಂಟಿಂಗ್ ಮತ್ತು ಬೆಳಕಿನ ವಿನ್ಯಾಸಗಳು, ಮದ್ಯಪಾನ, ಧೂಮಪಾನ ಹಾಗೂ ಅನೈತಿಕ ಚಟುವಟಿಕೆ ತಡೆಯಲು ಸಿಸಿ ಟಿವಿ ಕಣ್ಗಾವಲಿರಿಸಲಾಗಿದೆ, ವಿಶೇಷವಾಗಿ ಕಸದ ತೊಟ್ಟಿ ವ್ಯವಸ್ಥೆ, ನಿರಂತರ ನೀರಾವರಿ ವ್ಯವಸ್ಥೆ,ಆಸನಕ್ಕೆ 30ಕ್ಕೂ ಹೆಚ್ಚು ಬೆಂಚುಗಳ ಅಳವಡಿಕೆ ಮಾಡಲಾಗಿದೆ.

ಉದ್ಯಾನದ ಕುರಿತಂತೆ ಕುಶಾಲನಗರ ‌ರೋಟರಿ ಅಧ್ಯಕ್ಷ ಮನುಪೆಮ್ಮಯ್ಯ ಮಾತನಾಡಿ, ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲು ಬ್ರಿಟಿಷರು ನಿರ್ಮಿಸಿದ್ದ ಹಳೆಯ ಸೇತುವೆ ಬಹುತೇಕ ಹಾನಿಯಾಗಿತ್ತು.ರೋಟರಿ ಸುವರ್ಣ ಮಹೋತ್ಸವ ಅಂಗವಾಗಿ ರೋಟರಿ ಸದಸ್ಯರು, ದಾನಿಗಳ ಸಹಕಾರದಿಂದ ಈ ಸೇತುವೆಗೆ ಕಾಯಕಲ್ಪ ನೀಡಿ ಸುಂದರ ಉದ್ಯಾನವ ನಿರ್ಮಿಸಲಾಗಿದೆ.ರೋಟರಿ ಸಂಸ್ಥೆ ಈ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದಿದ್ದಾರೆ.

ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಮಾತನಾಡಿ.ರೋಟರಿ ಸಂಸ್ಥೆ ಹಳೆಯ ಸೇತುವೆ ಕಾಯಕಲ್ಪ ನೀಡಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತ ಸುಂದರ ಉದ್ಯಾನವನ್ನು ನಿರ್ಮಿಸಿದ್ದಾರೆ‌. ಈ ಸೇತುವೆಯನ್ನು ಶಾಸಕರ ಅನುದಾನ ಹಾಗೂ ಪುರಸಭೆ ಸಹಕಾರದೊಂದಿಗೆ ರೋಟರಿ ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

admin
the authoradmin

Leave a Reply

Translate to any language you want