LatestSports

ಮಲೇಷ್ಯಾದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋದಲ್ಲಿ ಸಾಧನೆಗೈದ ಹುಣಸೂರಿನ ಗಣಪತಿ ಜಕಾತಿ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮಲೇಷ್ಯಾದ ಸೆಲಂಗೋರ್‌ನ ಯುಪಿಎಂ ಕ್ರೀಡಾಂಗಣದಲ್ಲಿ ಜೂನ್ 5 ರಿಂದ 7 ರವರೆಗೆ ನಡೆದ 38ನೇ ಮಲೇಷ್ಯನ್ ಅಂತರರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್–2026ರಲ್ಲಿ ಹುಣಸೂರು ತಾಲೂಕಿನ ಗಣಪತಿ ಪರಮಾತ್ಮ ಜಕಾತಿಯವರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಡಿಸ್ಕಸ್ ಥ್ರೋ (ತಟ್ಟೆ ಎಸೆತ) ಸ್ಪರ್ಧೆಯಲ್ಲಿ ಭಾಗವಹಿಸಿದ ಅವರು 28.76 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರಕ್ಕೆ ಭಾಜನರಾಗಿದ್ದಾರೆ. ಈ ಸ್ಪರ್ಧೆಯನ್ನು ಮಲೇಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ (MMAA) ಆಯೋಜಿಸಿತ್ತು. ವಿವಿಧ ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಗಣಪತಿ ಜಕಾತಿಯವರು ಸಾಧನೆ ಮಾಡಿರುವುದು ಜಿಲ್ಲೆಯ ಕ್ರೀಡಾಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.

ಗಣಪತಿ ಪರಮಾತ್ಮ ಜಕಾತಿಯವರು ಪ್ರಸ್ತುತ ಹುಣಸೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಬನ್ನಿಕುಪ್ಪೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಿಲಯ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿ ಜವಾಬ್ದಾರಿಗಳ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ನಿರಂತರ ಅಭ್ಯಾಸ ಹಾಗೂ ಪರಿಶ್ರಮದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ಅವರ ಈ ಸಾಧನೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದರು

admin
the authoradmin

Leave a Reply

Translate to any language you want