2028 ವಿಧಾನಸಭಾ ಚುನಾವಣೆಗೆ ಕೇವಲ ಎರಡು ವರ್ಷಗಳಷ್ಟೇ ಬಾಕಿಯಿದೆ.. ಹೀಗಾಗಿ ರಾಜಕೀಯ ನಾಯಕರು ಈಗಿನಿಂದಲೇ ರಾಜಕೀಯ ಶುರು ಮಾಡಿದ್ದಾರೆ. ಹಿರಿಯ ಪತ್ರಕರ್ತರಾದ ರಮೇಶ ಸುರ್ವೆ ಅವರು ಕೊಪ್ಪಳದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ ಅದನ್ನು ಇಲ್ಲಿ ಪ್ರಕಟಿಸಲಾಗಿದೆ..
ಸಂಗಣ್ಣ ಕರಡಿ.. ನನಗೆ 30 ವರ್ಷಗಳ ಹಿಂದೆಯೆ, ಗುಳಗಣ್ಣ ಈಶಪ್ಪನವರಿಂದ ಪರಿಚಿತರು. ಕೊಪ್ಪಳಕ್ಕೆ ಬಂದಾಗ, ಹಲವಾರು ಭಾರಿ ಅವರೊಂದಿಗೆ ಮುಖಾಮುಖಿಯಾಗಿದ್ದೇವೆ. ಕೊಪ್ಪಳದಲ್ಲಿ ನನ್ನ ಕಾರ್ಯಕ್ರಮಗಳನ್ನು ಮಾಡಿದಾಗ, ಕರೆಯಲೊಮ್ಮೆ, ಆಮಂತ್ರಣ ಪತ್ರಿಕೆ ಕೊಡಲೊಮ್ಮೆ, ಅವರ ಮನೆಗೆ ಹೋಗಿದ್ದೇನೆ. ಬರುತ್ತೇನೆಂದು ಒಪ್ಪಿಕೊಂಡವರು ಎಂದು ಬಂದಿಲ್ಲ.. ಬರಲಿಲ್ಲವೆಂದು ಕರೆಯುವುದನ್ನು ಬಿಟ್ಟಿಲ್ಲ.

ಕಳೆದ ವರ್ಷ ಮಗನ ಮದುವೆ ಆರತಕ್ಷತೆಯನ್ನು ಕೊಪ್ಪಳದಲ್ಲಿ ಮಾಡಿದಾಗ, ಮನೆಗೆ ಹೋಗಿ ಕರೆದಿದ್ದೆ. ಬರುತ್ತೇನೆಂದುವರು ಕೂಡಾ ಬರಲಿಲ್ಲ. ಹಿಂದೆ ಉಪ-ಚುನಾವಣೆ ನಡೆದಾಗ, ಅವರು ಗೆಲ್ಲುತ್ತಾರೆಂದು ಬರೆದಿದ್ದೆ. ಅವರಿಗೆ ನೇರವಾಗಿ ಮತ್ತು ಮನೆಗೆ ಹತ್ತಾರು ಪ್ರತಿಗಳನ್ನು ಕೊಟ್ಟು ಬಂದಿದ್ದೆ. ಅವರು ಕಾರ್ಯಕ್ರಮಕ್ಕೆ ಬರದಿದ್ದರೂ, ಅವರಿಗಾಗಿ ಮಾಡಿದ ನೆನಪಿನ ಕಾಣಿಕೆಗಳನ್ನು ಅವರ ಮನೆಗೆ ತಲುಪಿಸಿದ್ದೆ. ಅವರು ಬರದೆ ಇರುವುದರಿಂದ ಅಸಾಂಸ್ಕೃತಿಕ ನಡುವಳಿಕೆಯನ್ನು ಅವರಲ್ಲಿ ಕಂಡಿದ್ದೇನೆ.
ಕಳೆದ ಲೋಕಸಭೆಯಲ್ಲಿ ಅವರಿಗೆ ಟಿಕೆಟ್ ಸಿಗದಿದ್ದಾಗ, ಅವರು ಭಾಜಪ ತೊರೆದರೆ, ಭಾಜಪ ಮುಕ್ತ ಕೊಪ್ಪಳ ಎಂದು ಲೇಖನ ಬರೆದಿದ್ದೆ. ಈ ಹೊತ್ತಿಗೆ ತಮ್ಮ ಮಗ ಹಾಗೂ ಸೊಸೆಯನ್ನು ಶಾಸಕರನ್ನಾಗಿಸಲು ಪ್ರಯತ್ನಿಸಿ, ಅವರು ಎರಡು ಭಾರಿ ವಿಫಲರಾಗಿದ್ದರು. ಎಂ.ಪಿ. ಚುನಾವಣೆ ಹೊತ್ತಿಗೆ, ವಯಸ್ಸಿನ ಕಾರಣವೋ..? ಎರಡು ಸಲ ಟಿಕೆಟ್‌ಕೊಟ್ಟರು ಗೆಲ್ಲಿಸಲಾರರು ಎಂಬ ಕಾರಣವೋ..? ಅವರಿಗೆ ಟಿಕೆಟ್ ಸಿಗಲಿಲ್ಲ. ಹಾಗಾಗಿ ಅವರು ಅಸಮಾಧಾನಗೊಂಡಿದ್ದರು.

ಈ ಸಂದರ್ಭವನ್ನು ಬಳಸಿಕೊಂಡ ಕಾಂಗ್ರೆಸ್, ಅವರಿಗೆ ಏನು ಅಮೀಷ ತೋರಿಸಿತೋ ಅಥವಾ ಆರ್ಥಿಕ ಹೊಂದಾಣಿಕೆ ಮಾಡಿತ್ತೋ..? ದೇವರೇ ಬಲ್ಲ..? ಅವರು ಕಾಂಗ್ರೆಸ್ ಬಂದರು. ಎಂ.ಪಿ. ಚುನಾವಣೆಯಲ್ಲಿ ಭಾಜಪ ಮುಕ್ತ ಕೊಪ್ಪಳ ಮಾಡಿದರು.
ಸಂಗಣ್ಣ ಈಗಲು 30ರಿಂದ 40ಸಾವಿರ ಮತಗಳ ಮೇಲೆ ಹಿಡಿತವಿಟ್ಟುಕೊಂಡಿದ್ದಾರೆ. ಇವು ಅವರನ್ನು ಗೆಲ್ಲಿಸಲು ಸಾಲುವುದಿಲ್ಲ. ಕಾಂಗ್ರೆಸ್‌ಗೆ ಹೊದಮೇಲೆ, ಇದೆ ಮತಗಳ ಆಧಾರದಲ್ಲಿ ಮೋದಿ ಅಲೆಯಲ್ಲಿಯೂ, ರಾಜಶೇಖರ್ ಹಿಟ್ನಾಳ್ ಗೆಲುವಿಗೆ ಕಾರಣವಾದವು. ಹೀಗಾಗಿ ನಾನು ಮುಂದಿನ 2028ರ ಚುನಾವಣೆಯಲ್ಲಿ ಕೊಪ್ಪಳದ ಕಿಂಗ್‌ಮೇಕರ್ – ಸಂಗಣ್ಣ ಎಂದು ಲೇಖನ ಬರೆದಿದ್ದೆ.
ಸಂಗಣ್ಣ ಭಾಜಪ ತೊರೆದು, ಲೋಕಸಭೆಯಲ್ಲಿ ಭಾಜಪ ಗೆಲ್ಲದಂತೆ ನೋಡಿಕೊಂಡರು. ಈಗ ಅವರು ಕಾಂಗ್ರೆಸ್‌ಗೆ ಬಂದಮೇಲೆ, ಅವರಿಗೆ ಯಾವ ಅಧಿಕಾರವನ್ನು ಕಾಂಗ್ರೆಸ್ ನೀಡಲಿಲ್ಲ. ಎರಡು ಎಂ.ಎಲ್.ಸಿ. ಚುನಾವಣೆಯಾದರು, ಅವರಿಗೆ ವಿಧಾನ ಪರಿಷತ್‌ಗೆ ಹೋಗುವ ಅವಕಾಶ ಕಲ್ಪಿಸಲಿಲ್ಲ. ಕೊನೆಯ ಪಕ್ಷ ಅವರ ಮಗನಿಗೋ, ಸೊಸೆಗೋ ನಿಗಮ ಮಂಡಳಿಗಳಿಗೆ ಅವರ ಹೆಸರು ಕಾಣಿಸಲಿಲ್ಲ. ಹಾಗಾದರೆ ಮುಂದಿನ ನಡೆ ಏನು..? 2028ರ ಚುನಾವಣೆಯಲ್ಲಿ ಗಂಗಾವತಿಯಿಂದ ಅವರು ನಿಲ್ಲಬಹುದೆಂಬ ಉಹಾ-ಪೋಹಗಳಿವೆ. ಕೊಪ್ಪಳದಲ್ಲೇ ಗೆಲ್ಲಲಾರದವರು, ಗಂಗಾವತಿಯಲ್ಲಿ ಗೆಲ್ಲುವರೆ..? ಇದು ಮಿಲಿಯನ್ ಡಾಲರ್ ಪ್ರಶ್ನೆ..?

2028ರ ಚುನಾವಣೆಯಲ್ಲಿ ಒಬ್ಬ ಶಾಸಕ ಕನಿಷ್ಟ 50 ಕೋಟಿ ಇಟ್ಟುಕೊಂಡು ಫೀಲ್ಡ್‌ಗೆ ಇಳಿಯಬೇಕು. ಇದು ಸಂಗಣ್ಣನವರಿಗೆ ಅಸಾಧ್ಯದ ವಿಷಯ. ಟಿಕೆಟ್‌ಗಾಗಿ ಓಡಾಡಲು ಪಕ್ಷ ಬೇಕು. ಮತ್ತೆ ಭಾಜಪಕ್ಕೆ ಹೋದರೆ ಓಡಾಡಲು ಸಾಧ್ಯ. ಏಕೆಂದರೆ, ಕಾಂಗ್ರೆಸ್‌ನಿಂದ ರಾಘವೇಂದ್ರ ಹಿಟ್ನಾಳ್, ದಳದಿಂದ ಸಿ.ವಿ. ಚಂದ್ರಶೇಖರ್ ಝಂಡಾ ಹೊಡೆದುಕೊಂಡು ಕೂತಿದ್ದಾರೆ. ಇನ್ನು ಉಳಿದಿರುವುದು ಭಾಜಪ.. ಬಸವರಾಜ್ ಕ್ಯಾವಟರ್ ಎಂ.ಪಿ. ಬದಲು, ವಿಧಾನಸಭೆಗೆ ಹೋಗಲು ಬಯಸಿದರೆ ಅದು ಇಲ್ಲ. ಈಗಾಗಲೇ ಅವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಕೊಪ್ಪಳದಲ್ಲಿ ಮತ್ತೆ ತ್ರಿಕೋನ ಸ್ಪರ್ಧೆ ಸಾಧ್ಯ.
ಹಾಗೇನಾದರು ಆದರೆ, ನಾಲ್ಕನೇ ಬಾರಿಗೆ ರಾಘವೇಂದ್ರ ಹಿಟ್ನಾಳ್ ಜಯಮಾಲೆ ಹಾಕಿಕೊಳ್ಳುವುದರಲ್ಲಿ ಯಾವ ಸಂದೇಹವು ಇಲ್ಲ. ಭಾಜಪ ಮತ್ತು ದಳ ಜಂಟಿ ಸ್ನೇಹದಲ್ಲಿ ಒಬ್ಬರಿಗೆ ಟಿಕೆಟ್ ಸಿಕ್ಕಿದರೆ, ಇಬ್ಬರು ಸೇರಿ ಹೋರಾಡಿದರೆ, ರಾಘವೇಂದ್ರ ಹಿಟ್ನಾಳ್ ಬೆವರು ಹರಿಸಿಕೊಳ್ಳಬೇಕಾಗುತ್ತದೆ. ಗೆಲವು ಆಗ ಅಡ್ಡ ಗೋಡೆಯ ಮೇಲೆ ದೀಪದಂತಿರುತ್ತದೆ.
ಜಂಟಿ ಸ್ನೇಹದಲ್ಲಿ ಸಿವಿಸಿಗೆ ಟಿಕೆಟ್ ಸಿಕ್ಕರೆ, ಕ್ಯಾವಟರ್ ಮನಪೂರ್ವಕವಾಗಿ ಕೆಲಸ ಮಾಡಿದರೆ ಮುಂದಿನ ಚುನಾವಣೆ ಸಿವಿಸಿಗೆ ಒಲಿಯಬಹುದು. ಏಕೆಂದರೆ, ಕೊಪ್ಪಳದ ಜನ ಈ ಸಲ ಬದಲಾವಣೆಯನ್ನು ಬಯಸಿದ್ದಾರೆ. ಅದೃಷ್ಠಾವಶಾತ್ ಡಿಕೆಶಿ ಸಂಪುಟದಲ್ಲಿ, ಕೊಪ್ಪಳಕ್ಕೆ ಪ್ರಾತಿನಿಧ್ಯತೆ ಸಿಕ್ಕು, ರಾಘವೇಂದ್ರ ಹಿಟ್ನಾಳ್ ಮಂತ್ರಿಯಾದರೆ, ಮತ್ತೆ ಕೊಪ್ಪಳ ಹಿಟ್ನಾಳ್ ಕುಟುಂಬಕ್ಕೆ ಒಲಿಯಲಿದೆ. ಬಸವರಾಜ್ ಕ್ಯಾವಟರ್ ಆಗಲಿ, ಸಿವಿಸಿಯಾಗಲಿ ಪಾರ್ಟಿ ಹಾಗೂ ಲಿಂಗಾಯತ ಮತಗಳನ್ನು ನಂಬಿಕೊಂಡವರು.

ಕ್ಷೇತ್ರದ ಉದ್ದಕ್ಕೂ ಜನ ಸಂಪರ್ಕದಲ್ಲಿ ಹಿಟ್ನಾಳ್‌ರಿಗಿಂತ ಹಿಂದೆ ಇದ್ದಾರೆ. ಹಿಟ್ನಾಳ್ ಸಹೋದರ ಹಾಗೂ ಸಂಸದ, ಆಗಾಗ ವಿವಾಧಾತ್ಮಕ ಕಾರಣಗಳಿಗೆ ಡ್ಯಾಮೇಜ್ ಆಗುತ್ತಲ್ಲೆ, ಪಕ್ಷವನ್ನು ಡ್ಯಾಮೇಜ್ ಮಾಡುತ್ತಾ ಬಂದಿದ್ದಾರೆ. ಕ್ಷೇತ್ರದ ಕೆಲಸಗಳನ್ನು ನೋಡಿಕೊಳ್ಳುವುದನ್ನು ಬಿಟ್ಟು, ಪತ್ನಿಯನ್ನು ಹೊಸಪೇಟೆ ವಿಧಾನಸಭೆಗೆ, ತಾವು ಅವಕಾಶ ಸಿಕ್ಕರೆ ಗಂಗಾವತಿ ಕ್ಷೇತ್ರಕ್ಕೆ ನಿಲ್ಲುವ ತಯಾರಿ ಹಾಗೂ ಯಲಬುರ್ಗಾಕ್ಕೆ ತಮ್ಮ ಸ್ವಜಾತಿ ಬಂಧುವನ್ನು ನಿಲ್ಲಿಸಲು ಒಳಗೊಳಗೆ ಪ್ರಯತ್ನಿಸುತ್ತಿದ್ದಾರೆ.
ಹಿಂದೆ ಸ್ಥಳೀಯ ಗುತ್ತಿಗೆದಾರರಿಗೆ, ಏನೇ ಕಾಮಗಾರಿಗೆ ಮೆಟಿರಿಯಲ್ ಬೇಕಾದರೆ, ನಮ್ಮಲ್ಲೆ ಖರೀದಿಸಬೇಕೆಂಬ ಅಂಧಾಕಾನೂನಿಂದಾಗಿ ಅವರ ವಿರುದ್ಧ ನಡೆದ ಗುತ್ತಿಗೆದಾರರ ಹೋರಾಟ, ಒಂದು ಹೆಣ್ಣಿನ ಮೇಲಾದ ಅತ್ಯಾಚಾರ ಸಣ್ಣ ವಿಷಯವೆಂಬ ಹೇಳಿಕೆ, ಅವರನ್ನು ಹಿಗ್ಗಾಮುಗ್ಗಾ ಟೀಕಿಸಲು ಕಾರಣವಾಗಿದೆ. ಅವರ ವಿರುದ್ದ ಪ್ರತಿಭಟನೆಗಳು ನಡೆದಿವೆ. ಇದು ರಾಘವೇಂದ್ರನ ಮುಂದಿನ ಚುನಾವಣೆಗೆ ಹಿನ್ನಡೆಯಾಗುವ ಸಂಭವವು ಇದೆ. ಮುಂದಿನ ಚುನಾವಣೆಯಲ್ಲಿ ಡಿಕೆ/ಅಮಿತ್ ಶಾ ಮುಖಾಮುಖಿಯಾಗಲಿದ್ದು, ಯಾರು ಉರುಳುತ್ತಾರೋ.. ಯಾರು ಉಳಿಯುತ್ತಾರೋ.. ಈಗಲೇ ಹೇಳುವುದು ಕಷ್ಟ. ಇದರಲ್ಲಿ ಸಂಗಣ್ಣ ಯಾರ ಕಡೆ ವಾಲುತ್ತಾರೋ.. ಅವರು ಗೆಲ್ಲುವುದು ಶತಸಿದ್ಧ.
ಈ ಹಿನ್ನಲೆಯಲ್ಲಿಯೇ ನಾನು ಕಿಂಗ್‌ಮೇಕರ್ ಸಂಗಣ್ಣ ಎಂದು ಬರೆದಿದ್ದೆ. ಸಂಗಣ್ಣ ವಾಲುವುದು ಎಂದರೆ, ಅವರನ್ನು ಎಲ್ಲಾ ರೀತಿಯಲ್ಲಿ ಸಂತೈಸಿ, ತೃಪ್ತಿ ಪಡಿಸಿದರೆ ಮಾತ್ರ.. ನಾನು ಪತ್ರಿಕೆಯಲ್ಲಿ ಯಾರದೆ ಹೆಸರು ದಾಖಲಿಸಿದರು, ಅವರನ್ನು ಟೀಕಿಸಿದರೂ, ಅವರಿಗೆ ನೇರವಾಗಿ ಪತ್ರಿಕೆ ಕೊಡುವುದು, ಕೊರಿಯರ್ ಮಾಡುವ ಅಭ್ಯಾಸ, ಮೊದಲನಿಂದಲು ಇದೆ. ಯಾರು ಓದುತ್ತಾರೋ.. ಬಿಡುತ್ತಾರೋ.. ಪ್ರತಿ ತಿಂಗಳು ಕೊಪ್ಪಳವು ಸೇರಿದಂತೆ ಜಿಲ್ಲೆಯಾದ್ಯಂತ, ಒಂದು ಸಾವಿರ ಸುರ್ವೆ ಪತ್ರಿಕೆಯ ಪ್ರತಿಗಳು, ನನ್ನ ಪರಿಚತರ ಮನೆ ಬಾಗಿಲಿಗೆ ಹೋಗುತ್ತವೆ.

ಪ್ರತಿ ಅಮಾವಾಸ್ಯೆಗೆ ನಾಲ್ಕೈದು ದಿನ ಕೊಪ್ಪಳದಲ್ಲಿದ್ದಾಗ, ನೂರಾರು ಪ್ರತಿಗಳನ್ನು ನನ್ನ ಗೆಳಯರಿಗೆ ಹಂಚುತ್ತೇನೆ. ಅನೇಕರ ಜೊತೆ ನೇರ ಸಂಪರ್ಕ ಇರುವುದರಿಂದ, ಅವರ ಜೊತೆ ನಡೆದ ಚರ್ಚೆಗಳಲ್ಲಿ, ಕೊಪ್ಪಳದ ಅನೇಕ ಮಾಹಿತಿ ಲಭ್ಯವಾಗುವುದರಿಂದ, ಏನಾದರು ಬರೆಯಲು ವಿಷಯಗಳು ಇದ್ದೆ ಇರುತ್ತದೆ.
ಮಹಂತೇಶ ಪಾಟೀಲ್ ಮೈನಳ್ಳಿ ಕೂಡಾ 2028ರ ಪ್ರಭಲ ಅಕಾಂಕ್ಷಿ. ಹೀಗಾಗಿ ಮತ್ತೆ ತ್ರಿಕೋನ ಸ್ಪರ್ಧೆ ಗ್ಯಾರೆಂಟಿ. ಚುನಾವಣೆಗೆ ಮೊದಲು ಬರೆದ ಭಾಜಪ ಮುಕ್ತ ಕೊಪ್ಪಳ ಹಾಗೂ ಈ ವರ್ಷ ಬರೆದ ಕಿಂಗ್ ಮೇಕರ್ ಸಂಗಣ್ಣ, ಎರಡು ಲೇಖನದಲ್ಲಿ ಒಂದು ನಿಜವಾಗಿದೆ. ಎರಡನೇ ಫಲಿತಾಂಶಕ್ಕೆ ನಾನು ಕಾದಿರುವೆ..
ಇದೆಲ್ಲದರ ನಡುವೆ ಕೊಪ್ಪಳದ ಭಾಜಪ ಅಭ್ಯರ್ಥಿಯಾಗಿ, ಮಹಂತೇಶ ಪಾಟೀಲ್ ಮೈನಳ್ಳಿ ಕೂಡಾ ಟಿಕೆಟ್ ಅಕಾಂಕ್ಷಿಯಾಗಿದ್ದಾರೆ. ಸಂಗಣ್ಣನ ಶಿಷ್ಯನಾಗಿ ಗುರುತಿಸಿಕೊಂಡಿದ್ದ ಮಹಂತೇಶ, ಒಂದು ಅವಧಿಯ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹೌದು. ಯುವಕರಾಗಿರುವ ಮಹಂತೇಶ ಪಾಟೀಲ್ ಮೈನಳ್ಳಿ ತೀವೃತರವಾದ ಪ್ರಯತ್ನವನ್ನು ಕೂಡ ಚಾಲನೆಯಲ್ಲಿಟ್ಟಿದ್ದಾರೆ. ಈಗಾಗಲೇ ಅವರ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಅಕಾಂಕ್ಷಿ ಅಭ್ಯರ್ಥಿಯಾಗಿ ಅವರ ಹೆಸರನ್ನು ತೇಲಿ ಬಿಟ್ಟಿದ್ದಾರೆ.
ಭಾಜಪ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಯಾರಿಗೆ ಶಿಫಾರಸ್ಸು ಮಾಡುತ್ತಾರೆ ಕಾದು ನೋಡಬೇಕು. ಅವರಿಂದಲೂ ಒಬ್ಬ ಅಭ್ಯರ್ಥಿ ಶಿಫಾರಸ್ಸಾದರೆ, ಸಂಗಣ್ಣನಿಗೆ ಭಾಜಪ ಬಾಗಿಲು ಮುಚ್ಚಿದಂತೆ. ಮುಂದಿನದೆಲ್ಲವು ಹೈಕಮಾಂಡ್ ಆಯ್ಕೆಗೆ ಬಿಟ್ಟಿದು..
ರಮೇಶ ಸುರ್ವೆ,
ಹಿರಿಯ ಪತ್ರಕರ್ತರು, 9845307327
ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ..
–








