ಅಜ್ಞಾತವಾಗಿ ಉಳಿದಿದ್ದ ವಚನಗಳನ್ನು ಬೆಳಕಿಗೆ ತಂದವರು ಫ.ಗು.ಹಳಕಟ್ಟಿ: ದೊಡ್ಡನಹುಂಡಿ ರಾಜಣ್ಣ ಹೇಳಿಕೆ

ಮೈಸೂರು: ಅಜ್ಞಾತವಾಗಿ ದೇವರ ಪೂಜಾ ಕೊಠಡಿಗಳಲ್ಲಿ, ಅಟ್ಟದ ಮೇಲೆ ಉಳಿದಿದ್ದ 12ನೇ ಶತಮಾನದ ಶರಣರ ಅನೇಕ ವಚನಗಳನ್ನು ಬೆಳಕಿಗೆ ತಂದ ಕೀರ್ತಿ ವಚನ ಪಿತಾಮಹ ಹಾಗೂ ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಬಣ್ಣಿಸಿದರು.
ಇತ್ತೀಚೆಗೆ ನಗರದ ಗೌರಿಶಂಕರ ನಗರ ಬಡಾವಣೆಯಲ್ಲಿರುವ ಶ್ರೀ ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫ.ಗು. ಹಳಕಟ್ಟಿ ಅವರ ಜನ್ಮದಿನ ಸಮಾರಂಭದಲ್ಲಿ ಮಾತನಾಡಿ, ಫ.ಗು.ಹಳಕಟ್ಟಿ ಅವರು ಸೈಕಲ್ ನಲ್ಲಿ ಗ್ರಾಮ ಗ್ರಾಮಗಳನ್ನು ತಿರುಗಿ ವಚನಗಳನ್ನು ಸಂಗ್ರಹಿಸಿ ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಹೊರ ಜಗತ್ತಿಗೆ ಪರಿಚಯಿಸಿದರು. ಸುಮಾರು 250 ವಚನಕಾರರನ್ನು ಬೆಳಕಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಇದಲ್ಲದೆ ಹರಿಹರನ 42 ರಗಳೆಗಳನ್ನೂ ಫ.ಗು. ಹಳಕಟ್ಟಿ ಅವರು ಸಂಗ್ರಹಿಸಿದರು. ಓಲೆಗರಿಯಲ್ಲಿ ಅಜ್ಞಾತವಾಗಿ ಅಡಗಿದ್ದ ಬಸವಣ್ಣ ಸೇರಿದಂತೆ ಅನೇಕ ಶರಣರ ವಚನಗಳನ್ನು ಪುಸ್ತಕಗಳಾಗಿ ಪ್ರಕಟಿಸಿದರು. ಅದಕ್ಕಾಗಿ ಸ್ವಂತ ಮುದ್ರಣಾಲಯವನ್ನೇ ಸ್ಥಾಪಿಸಿದರು. ಮುದ್ರಣಾಲಯ ಸ್ಥಾಪಿಸಲು ಹಣವಿಲಲ್ಲದ ಕಾರಣ ತಾವು ವಾಸವಿದ್ದ ಮನೆಯನ್ನೇ ಮಾರಿದ ಮಹಾತ್ಮರು ಅವರು. ಇಂದು ಅಂತಹ ಮಹಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸಮಾರಂಭವನ್ನು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಅವರು ಉದ್ಘಾಟಿಸಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಮುಖ್ಯ ಶಿಕ್ಷಕ ಸಂಪತ್ತು ಅವರು ಮಾತನಾಡಿ, ಫ.ಗು. ಹಳಕಟ್ಟಿ ಅವರ ಸಾಧನೆ-ಸಿದ್ಧಗಳನ್ನು ವಿವರಿಸಿದ್ದರು.
ಸಮಾರಂಭದಲ್ಲಿ ಓರಿಗಾಮಿ ಕಲಾವಿದ ಎಚ್.ವಿ. ಮುರಳೀಧರ್ ,ಮುಖ್ಯ ಶಿಕ್ಷಕ ಯೋಗೇಂದ್ರ, ಹಿರಿಯ ಶಿಕ್ಷಕಿ ಮಹಾದೇವಿ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಲಕ್ಷ್ಮಮ್ಮ ಅವರನ್ನು ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಶರಣರ ವಚನಗಳನ್ನು ಹೇಳಿದ ಹಲವು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಬಹುಮಾನವಾಗಿ ವಿತರಿಸಲಾಯಿತು.







