LatestLife style

ಕನಕಪುರ ದೇಗುಲ ಮಠದ ದಿವ್ಯ ಸನ್ನಿಧಿಯಲ್ಲಿ…: ಭಕ್ತಿ ಮತ್ತು ವಚನ ಸಂಸ್ಕಾರದ ಒಂದು ಅಪೂರ್ವ ಪಯಣ

ಸವಿ ಸವಿ ನೆನಪಿನ ಪಯಣ-6

ಭಕ್ತಿ, ಪ್ರಕೃತಿ ಮತ್ತು ವಚನ ಸಂಸ್ಕಾರದ ತ್ರಿವೇಣಿ ಸಂಗಮ: ಒಂದು ಧನ್ಯ ಭಾನುವಾರದ ಪಯಣ

ಅದು ಆಧ್ಯಾತ್ಮಿಕ ಚಿಂತನೆ, ಪ್ರಕೃತಿಯ ಆರಾಧನೆ ಮತ್ತು ಶರಣರ ಸ್ಮರಣೆಯಿಂದ ಕೂಡಿದ ಒಂದು ಧನ್ಯ ಭಾನುವಾರ. ಮನಸ್ಸಿನಲ್ಲಿ ಭಕ್ತಿಯ ಭಾವ, ಕೈಯಲ್ಲಿ ವಚನ ಸಾಹಿತ್ಯದ ಬುತ್ತಿ ಹೊತ್ತು ನಾವು ಪಯಣ ಬೆಳೆಸಿದಾಗ ದಿನ ಇಷ್ಟೊಂದು ವಿಶೇಷ ಅನುಭವಗಳನ್ನು ನೀಡುತ್ತದೆ ಎಂದು ಭಾವಿಸಿರಲಿಲ್ಲ.

ಮದುವೆಯ ಸಂಭ್ರಮ ಹಾಗೂ ಅಪರೂಪದ ಆತಿಥ್ಯ

ಭಾನುವಾರ ಬೆಳಿಗ್ಗೆ 10 ಗಂಟೆಗೆ ಸಂಗಮದ ಶ್ರೀ ಮಹಾದೇವ ತಾತರವರ ಪುಣ್ಯ ಕ್ಷೇತ್ರದಲ್ಲಿ ಆನಗಟ್ಟಿಯ ಪುಟ್ಟಣ್ಣನವರ ಮಗಳು ಮತ್ತು ರೇವಣ್ಣನವರ ಮಗನ ಶುಭ ವಿವಾಹವಿತ್ತು. ಈ ಮದುವೆಯಲ್ಲಿ ಭಾಗವಹಿಸಲು ನಾನು, ನನ್ನ ಧರ್ಮಪತ್ನಿ ರೂಪಾ ಕುಮಾರಸ್ವಾಮಿ ಹಾಗೂ ನಮ್ಮ ಶರಣು ವಿಶ್ವವಚನ ಫೌಂಡೇಷನ್‌ನ ಕೇಂದ್ರೀಯ ಸಂಚಾಲಕರಾದ ಶ್ರೀ ವಿ. ಲಿಂಗಣ್ಣನವರೊಂದಿಗೆ ತೆರಳಿದ್ದೆವು. ವಧು-ವರರನ್ನು ಮನದುಂಬಿ ಹರಸಿದ ನಂತರ, ಆನಗಟ್ಟಿಯ ಶಿವರುದ್ರಪ್ಪ ಮತ್ತು ಚಂದ್ರಶೇಖರ್ ಅವರನ್ನೂ ನಮ್ಮ ಕಾರಿನಲ್ಲಿಯೇ ಜೊತೆಯಲ್ಲಿ ಕರೆದುಕೊಂಡು ಕಿರುಗಾವಲಿನ ಕಡೆಗೆ ಹೊರಟೆವು.

ಕಿರುಗಾವಲಿನಲ್ಲಿ ಮಳವಳ್ಳಿ ಬೆಳೆದಿಂಗಳ ಶರಣರ ಚಿಂತನ ಮಂಥನ ಸಮಿತಿಯ ಅಧ್ಯಕ್ಷರಾದ ಶ್ರೀ ಮಲ್ಲೇಶಣ್ಣನವರ ಮಗಳ ವಿವಾಹ ಮಹೋತ್ಸವವಿತ್ತು. ನಾವು ಅಲ್ಲಿಗೆ ತಲುಪುವಾಗ ಮಧ್ಯಾಹ್ನ 2 ಗಂಟೆಯಾಗಿತ್ತು. ಅದು ಮದುವೆಯ ಕೊನೆಯ ಪಂಕ್ತಿಯ ಸಮಯ. ಸಾಮಾನ್ಯವಾಗಿ ಕೊನೆಯ ಪಂಕ್ತಿಯಲ್ಲಿ ಊಟದ ಅಚ್ಚುಕಟ್ಟುತನ ಕಡಿಮೆಯಿರುತ್ತದೆ ಎಂಬ ಹಣೆಪಟ್ಟಿ ಇರುತ್ತದೆ. ಆದರೆ, ಇಲ್ಲಿ ಕಂಡಿದ್ದು ಇತಿಹಾಸದಲ್ಲೇ ಮೊದಲು!

ಕೊನೆಯ ಪಂಕ್ತಿಯಾದರೂ ಯಾವುದೇ ಒಂದು ಪದಾರ್ಥವೂ ಕಡಿಮೆಯಾಗದಂತೆ, ಅತ್ಯಂತ ಪ್ರೀತಿಪೂರ್ವಕವಾಗಿ ನಮಗೆ ಬಡಿಸಿದರು. ನಾವೆಲ್ಲರೂ ಅತ್ಯಂತ ತೃಪ್ತಿಯಿಂದ ಪ್ರಸಾದವನ್ನು ಸವಿದು, ಮಲ್ಲೇಶಣ್ಣನವರ ಕುಟುಂಬಕ್ಕೆ ಶುಭ ಹಾರೈಸಿ, ಅಲ್ಲಿಂದ ಕನಕಪುರದ ದೇಗುಲ ಮಠದ ಕಡೆಗೆ ಪಯಣ ಬೆಳೆಸಿದೆವು.

ಪೂಜ್ಯ ಶ್ರೀ ಮುಮ್ಮಡಿ ನಿರ್ಮಾಣ ಮಹಾಸ್ವಾಮಿಗಳ ಐಕ್ಯ ಸ್ಥಳದಲ್ಲಿ ನುಡಿ ನಮನ

ಕನಕಪುರದ ದೇಗುಲ ಮಠದ ಪೂಜ್ಯ ಶ್ರೀ ಮುಮ್ಮಡಿ ನಿರ್ಮಾಣ ಮಹಾಸ್ವಾಮಿಗಳೊಂದಿಗೆ ನಮಗೆ ಅಪಾರ ಭಕ್ತಿಯ ಒಡನಾಟವಿತ್ತು. 2016ರ ಜನವರಿ 15ರಂದು ಶ್ರೀ ಸಿದ್ದಗಂಗಾ ಕ್ಷೇತ್ರದಲ್ಲಿ ನಡೆದಾಡುವ ದೇವರು ಶ್ರೀ ಶಿವಕುಮಾರಸ್ವಾಮೀಜಿಗಳು ನಮ್ಮ ‘ಶರಣು ವಿಶ್ವವಚನ ಫೌಂಡೇಷನ್’ ಅನ್ನು ಉದ್ಘಾಟಿಸಿದಾಗ, ಪೂಜ್ಯ ಶ್ರೀ ಮುಮ್ಮಡಿ ನಿರ್ಮಾಣ ಮಹಾಸ್ವಾಮಿಗಳೂ ಉಪಸ್ಥಿತರಿದ್ದು ಆಶೀರ್ವದಿಸಿದ್ದರು.

ತದನಂತರ ಅನೇಕ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡ ನೆನಪು ಹಸಿರಾಗಿತ್ತು. ಆದರೆ, ಅವರು ಲಿಂಗೈಕ್ಯರಾದಾಗ ಕಾರಣಾಂತರಗಳಿಂದ ಅವರ ಅಂತ್ಯಸಂಸ್ಕಾರಕ್ಕಾಗಲಿ ಅಥವಾ ಪುಣ್ಯಸ್ಮರಣೆಗಾಗಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂಬ ನೋವು ಮನಸ್ಸನ್ನು ಕಾಡುತ್ತಿತ್ತು. ಈ ಭಾನುವಾರ ಅವರ ಐಕ್ಯ ಸ್ಥಳದ ದರ್ಶನ ಮಾಡಲೇಬೇಕೆಂದು ನಾನು ಮತ್ತು ನನ್ನ ಪತ್ನಿ ನಿರ್ಧರಿಸಿ ಮಠವನ್ನು ಪ್ರವೇಶಿಸಿದೆವು.

ಪೂಜ್ಯರ ಐಕ್ಯ ಕ್ಷೇತ್ರವನ್ನು ದರ್ಶಿಸಿದಾಗ ಮನಸ್ಸು ಭಾರವಾಯಿತು. ಆದರೂ, ಶರಣರ ವಾಣಿಯಾದ “ಮರಣವೇ ಮಹಾನವಮಿ” ಮತ್ತು “ಎಮ್ಮವರು ಸಾವನರಿಯರು” ಎಂಬ ಸತ್ಯವನ್ನು ನೆನೆದು ನೋವನ್ನು ಮರೆತೆವು. 84 ವಸಂತಗಳ ಕಾಲ ಈ ಧರೆಯಲ್ಲಿ ಭಕ್ತಿಯ ಬೆಳೆಯನ್ನು ಬೆಳೆದ ಪೂಜ್ಯರಿಗಾಗಿ ನಾನು ಬರೆದಿದ್ದ ‘ನುಡಿ ನಮನ’ವನ್ನು ಅವರ ಐಕ್ಯ ಗದ್ದಿಗೆಯ ಮುಂದೆ ನಿಂತು ನಾನು ಮತ್ತು ನನ್ನ ಶ್ರೀಮತಿ ವಾಚನ ಮಾಡಿದೆವು. ನಾವು ಭಕ್ತಿಯಿಂದ ವಾಚಿಸುತ್ತಿದ್ದಾಗ, ಹೊರಗಡೆ ಇದ್ದ ಅನೇಕರು ಬಂದು ಅತ್ಯಂತ ಆಸಕ್ತಿಯಿಂದ ಕಿವಿಗೊಟ್ಟು ಕೇಳಿಸಿಕೊಂಡರು. ಪೂಜ್ಯರು ನಮ್ಮ ಪಕ್ಕದಲ್ಲೇ ನಿಂತು ಆಲಿಸುತ್ತಿದ್ದಾರೇನೋ ಎಂಬ ದಿವ್ಯ ಭಾವ ಆ ಕ್ಷಣ ನಮ್ಮದಾಗಿತ್ತು.

ಉದ್ಯಾನವನದ ಸುತ್ತಾಟ ಹಾಗೂ ಆತ್ಮೀಯ ಭೇಟಿ

ಆ ಸಮಯದಲ್ಲಿ ಪೂಜ್ಯರು ಮಠದಲ್ಲಿ ಇರದಿದ್ದರಿಂದ ನಾವು ಒಂದೂವರೆ ಗಂಟೆ ಕಾಯಬೇಕಾಯಿತು. ಈ ವೇಳೆಯಲ್ಲಿ ಅತ್ತಹಳ್ಳಿ ಶ್ರೀ ನಿರಂಜನಮಹಾಸ್ವಾಮಿಗಳವರು ನಮಗೆ ಹಳೇ ಗದ್ದಿಗೆಯನ್ನು ದರ್ಶನ ಮಾಡಿ ಬರುವಂತೆ ತಿಳಿಸಿದರು. ನಾವು ಹಳೇ ಗದ್ದಿಗೆ ಮತ್ತು ಕಾಲೇಜಿನ ಆವರಣವನ್ನು ಸುತ್ತಾಡಿ ಬಂದೆವು. ಮೊನ್ನೆ ತಾನೇ ನಡೆದಿದ್ದ ಭವ್ಯ ಕಾರ್ಯಕ್ರಮದ ಅದ್ಭುತ ಸಿದ್ಧತೆಗಳು ಅಲ್ಲಿ ಕಣ್ಣಿಗೆ ಕಟ್ಟುವಂತಿದ್ದವು.

ಇದೇ ಸಮಯದಲ್ಲಿ ಕನಕಪುರ ಮಠದ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ (FDA) ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಲಿಂಗಣ್ಣನವರ ಸಂಬಂಧಿಕರಾದ ನಾಗೇಂದ್ರರವರು ನಮ್ಮನ್ನು ಭೇಟಿ ಮಾಡಲು ವಾಹನ ತಂದು, ಅತ್ಯಂತ ಪ್ರೀತಿಯಿಂದ ತಮ್ಮ ಮನೆಗೆ ಆಹ್ವಾನಿಸಿದರು. ಅವರ ಮನೆಗೆ ತೆರಳಿ, ಚಹಾ-ಬಿಸ್ಕೆಟ್ ಸವಿದು, ಅವರಿಗೆ ನಮ್ಮ ಸಂಸ್ಥೆಯ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದೆವು. ಅವರ ಆತಿಥ್ಯ ನಮಗೆ ಅಪಾರ ಸಂತಸವನ್ನು ನೀಡಿತು.

ಮಕ್ಕಳಲ್ಲಿ ವಚನ ಜಾಗೃತಿ ಹಾಗೂ ಮಠದ ಮಹಾಪ್ರಸಾದ

ಮತ್ತೆ ಮಠಕ್ಕೆ ಮರಳಿದಾಗ ಅಲ್ಲಿನ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ಗಮನಿಸಿದೆವು. ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಸಂಸ್ಥೆಯ ನಿರಂತರ ಹಂಬಲ. ಮಕ್ಕಳನ್ನು ಹತ್ತಿರ ಕರೆದು ವಚನಗಳ ಬಗ್ಗೆ ವಿಚಾರಿಸಿದಾಗ ಕೆಲವರಿಗೆ ತಿಳಿದಿತ್ತು, ಕೆಲವರಿಗೆ ತಿಳಿದಿರಲಿಲ್ಲ. ತಕ್ಷಣವೇ ನಮ್ಮ *ವಚನ ಗ್ರಾಮ ಪುಸ್ತಕವನ್ನು ಅವರಿಗೆ ನೀಡಿ ಸುಮಾರು 7-8 ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ವಚನಗಳನ್ನು ವಾಚನ ಮಾಡಿಸಿದೆವು. ನಂತರ ಅವರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ, ಒಂದು ಸಾಮೂಹಿಕ ಭಾವಚಿತ್ರವನ್ನು ಕ್ಲಿಕ್ಕಿಸಿಕೊಂಡೆವು. ಆಗಲೇ ಸಮಯ ಸಂಜೆ 5:30 ಆಗಿತ್ತು.

ನಾವು ಮಠಕ್ಕೆ ಬಂದ ತಕ್ಷಣವೇ ಪ್ರಸಾದ ಮಾಡಲು ಹೇಳಿದ್ದರು. ಆದರೆ ಮದುವೆಯ ಊಟವಾಗಿದ್ದರಿಂದ ನಿರಾಕರಿಸಿದ್ದೆವು. ಆದರೆ ಸಂಜೆ 5:30 ಆದರೂ ನಮ್ಮನ್ನು ಬಿಡದ ಅತ್ತಹಳ್ಳಿ ಸ್ವಾಮಿಗಳು ಮತ್ತು ಮಠದ ಸಿಬ್ಬಂದಿ ಪ್ರಸಾದ ಸ್ವೀಕರಿಸಲೇಬೇಕೆಂದು ಒತ್ತಾಯಿಸಿದರು. ಅತ್ಯಂತ ಸ್ವಚ್ಛತೆಯಿಂದ ಕೂಡಿದ್ದ ಪ್ರಸಾದ ನಿಲಯವನ್ನು ಪ್ರವೇಶಿಸಿದಾಗ ಮನಸ್ಸಿಗೆ ಮುದ ನೀಡಿತು. ಮೊದಲು ನನಗೆ ಅತ್ಯಂತ ಪ್ರಿಯವಾದ ಉಪ್ಪಿಟ್ಟು, ನಂತರ ಕೇಸರಿಬಾತ್, ಕೋಸಂಬರಿ, ಬೀನ್ಸ್ ಪಲ್ಯ, ಉಪ್ಪಿನಕಾಯಿ ಮತ್ತು ಪಾಯಸವನ್ನು ಬಡಿಸಿದರು. ಹೊಟ್ಟೆ ಹಸಿವಿಲ್ಲದಿದ್ದರೂ ಆ ಪ್ರಸಾದದ ರುಚಿ ಮತ್ತು ಮಠದ ಭಕ್ತಿಗೆ ಸೋತು ಒಂದು ಚೂರು ಬಿಡದಂತೆ ಕಣ್ತುಂಬಿಕೊಂಡು, ಮನತುಂಬಿಕೊಂಡು ಸವಿದೆವು.

ಪೂಜ್ಯರ ಸನ್ನಿಧಿಯಲ್ಲಿ ಸಾಹಿತ್ಯಿಕ ಸಮಾಲೋಚನೆ

ಸಮಯ ಆರು ಗಂಟೆಯಾಗುತ್ತಿದ್ದಂತೆ ಕನಕಪುರ ಮಠದ ಪೂಜ್ಯ ಶ್ರೀ ಡಾ. ಚನ್ನಬಸವಮಹಾಸ್ವಾಮಿಗಳು ಮಠಕ್ಕೆ ಆಗಮಿಸಿ ತಮ್ಮ ಆಸನದಲ್ಲಿ ಆಸೀನರಾದರು. ನಾವು ಅತ್ಯಂತ ಭಕ್ತಿಪೂರ್ವಕವಾಗಿ ಪೂಜ್ಯರಿಗೆ ಶರಣಾರ್ಥಿಗಳನ್ನು ಸಮರ್ಪಿಸಿ, ನಮ್ಮ ಭಾವಪೂರ್ಣ ಪ್ರೇಮದ ನಮನಗಳನ್ನು ಸಲ್ಲಿಸಿದೆವು. ಅವರು ಅದನ್ನು ಪ್ರೀತಿಯಿಂದ ಸ್ವೀಕರಿಸಿದರು. ತದನಂತರ, ನಾನು ರಚಿಸಿದ ವಚನ ಕಥಾ ಪ್ರಪಂಚ ಪುಸ್ತಕವನ್ನು ಪೂಜ್ಯರಿಗೆ ಹಸ್ತಾಂತರಿಸಿದೆವು. ಪುಸ್ತಕವನ್ನು ಪಡೆದ ಪೂಜ್ಯರು ಸಂತಸ ವ್ಯಕ್ತಪಡಿಸಿದರು. ನಂತರ ಲಿಂಗೈಕ್ಯ ಪೂಜ್ಯ ಶ್ರೀ ನಿರ್ವಾಣ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಜೀವನ, ಸಂದೇಶ ಹಾಗೂ ಸಾಧನೆಗಳ ಕುರಿತು ಅನೇಕ ಮಹತ್ವದ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ, “ಗುರುಗಳೇ, ಮುಂದಿನ ದಿನಗಳಲ್ಲಿ ನೀವು ಮೈಸೂರಿಗೆ ಬಂದಾಗ ನಮ್ಮ ಶರಣು ವಿಶ್ವವಚನ ಫೌಂಡೇಷನ್ ಕಚೇರಿಗೆ ಭೇಟಿ ನೀಡಬೇಕು” ಎಂದು ವಿನಮ್ರವಾಗಿ ಆಹ್ವಾನಿಸಿದೆವು. ಇದರೊಂದಿಗೆ ನನ್ನ ಶ್ರೀಮತಿ ರೂಪಕುಮಾರಸ್ವಾಮಿ ಅವರು, “ನಿಮ್ಮ ಕನಕಪುರ ಶಾಲೆಯ ಮಕ್ಕಳಿಗಾಗಿಯೂ ಒಂದು ‘ಶಾಲೆಗಳೆಡೆಗೆ ವಚನಗಳೆಡೆಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು” ಎಂದು ವಿನಂತಿಸಿದರು. ಅದಕ್ಕೆ ಪೂಜ್ಯರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿ, “ಖಂಡಿತ ಮಾಡೋಣ, ಅದಕ್ಕೆ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ” ಎಂಬ ಭರವಸೆಯನ್ನು ನೀಡಿದರು.

ಕನಕಪುರ ದೇಗುಲ ಮಠದ ಆ ದಿವ್ಯ ಆಧ್ಯಾತ್ಮಿಕ ವಾತಾವರಣದಲ್ಲಿ ಕಳೆದ ಆ ಒಂದೂವರೆ-ಎರಡು ಗಂಟೆಯ ಸಮಯ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು. ಆ ಮಠವನ್ನು ಬಿಟ್ಟು ಹೊರಬರಲು ಮನಸ್ಸಿಲ್ಲದಂತಹ ಒಂದು ಅಪೂರ್ವ ಭಕ್ತಿಯ ಸೆಳೆತ ಅಲ್ಲಿ ಉಂಟಾಗಿತ್ತು. ಕೊನೆಗೆ ಪೂಜ್ಯರಿಗೆ ಮತ್ತೊಮ್ಮೆ ಶರಣಾರ್ಥಿಗಳನ್ನು ಅರ್ಪಿಸಿ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.

ಪ್ರಕೃತಿಯ ಸೌಂದರ್ಯ ನೆನಪಿನ ಫೋಟೋಗಳಲ್ಲಿ ಸೆರೆಯಾಯಿತು..

ಕನಕಪುರದಿಂದ ಮಳವಳ್ಳಿಯ ಕಡೆಗೆ ಕಾರಿನಲ್ಲಿ ಬರುತ್ತಿರುವಾಗ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ರಮಣೀಯ ದೃಶ್ಯಗಳು ನಮ್ಮನ್ನು ಕೈಬೀಸಿ ಕರೆದವು. ಪ್ರಕೃತಿಯ ಈ ಚೆಲುವನ್ನು ಕಂಡು ನಾನು ಪತ್ನಿಗೆ, “ಇಲ್ಲಿ ಒಂದು ಫೋಟೋ ತೆಗೆಸಿಕೊಳ್ಳೋಣವೇ?” ಎಂದು ಕೇಳಿದೆ. ಅವಳಿಗೆ ನನಗಿಂತಲೂ ಫೋಟೋ ಎಂದರೆ ಅತೀವ ಆಸಕ್ತಿ! ತಕ್ಷಣವೇ ಕಾರಿನಿಂದ ಕೆಳಗಿಳಿದು ಆ ಸುಂದರ ಪ್ರಕೃತಿಯ ಮಡಲಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಮನವನ್ನು ಪ್ರಕೃತಿಯ ಸೌಂದರ್ಯದಿಂದ ಕಣ್ತುಂಬಿಕೊಂಡೆವು.

ಮಳವಳ್ಳಿ ತಲುಪಿದಾಗ ಅಲ್ಲಿ ಮತ್ತೊಂದು ಮದುವೆಯಿತ್ತು; ಅದು ನಮ್ಮ ಆತ್ಮೀಯರಾದ ಶ್ರೀ ನಾಗರಾಜಪ್ಪನವರ ಪುತ್ರಿ ಡಾ. ನಂದಿನಿ ಅವರ ವಿವಾಹ ಮಹೋತ್ಸವ. ಅಲ್ಲಿಯೂ ಭಾಗವಹಿಸಿ ವಧು-ವರರನ್ನು ಹರಸಿ ಮುಂದೆ ಸಾಗಿದೆವು. ದಾರಿಯಲ್ಲಿ ಕಾರಿನಲ್ಲಿ ಸ್ವಲ್ಪವೇ ಪೆಟ್ರೋಲ್ ಇತ್ತಾದರೂ, ರಾತ್ರಿಯಿಡೀ ಪಯಣವಿರುವುದರಿಂದ ಮುನ್ನೆಚ್ಚರಿಕೆಯಾಗಿ ಪೆಟ್ರೋಲ್ ತುಂಬಿಸುವುದು ಒಳಿತು ಎಂದು ಭಾವಿಸಿ ಬಂಕ್‌ಗಳನ್ನು ಗಮನಿಸುತ್ತಾ ಸಾಗಿದೆವು. ಆಗ ಒಂದು ಅಪರೂಪದ ಪೆಟ್ರೋಲ್ ಬಂಕ್ ನಮ್ಮ ಗಮನ ಸೆಳೆಯಿತು.

ಆ ಬಂಕಿನ ಮುಂಭಾಗದಲ್ಲಿ ರೈತನೊಬ್ಬ ಎತ್ತಿನಗಾಡಿಯನ್ನು ಓಡಿಸುತ್ತಿರುವ ಸುಂದರವಾದ ಪ್ರತಿಕೃತಿಯನ್ನು (Model) ಪ್ರದರ್ಶಿಸಲಾಗಿತ್ತು. ಇದನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಒಂದು ಕುತೂಹಲದ ಪ್ರಶ್ನೆ ಮೂಡಿತು. ಇದು ಪೆಟ್ರೋಲ್ ಬಂಕ್, ಇಲ್ಲಿ ಇಂಧನ ತುಂಬಿಸಲಾಗುತ್ತದೆ. ಆದರೆ ಇಲ್ಲಿ ಪ್ರದರ್ಶಿಸಿರುವುದು ಎತ್ತಿನಗಾಡಿಯನ್ನು! ಎತ್ತಿನಗಾಡಿಗೆ ಪೆಟ್ರೋಲ್‌ನ ಅಗತ್ಯವೇ ಇಲ್ಲ. ಹಾಗಾದರೆ ಇದರ ಸಂದೇಶವೇನು? ಬಹುಶಃ ನಾವು ಎತ್ತಿನಗಾಡಿಯ ಕಾಲದಿಂದ ಇಂದಿನ ಆಧುನಿಕ ಕಾರು, ವಾಹನಗಳ ಆವಿಷ್ಕಾರದವರೆಗೆ ನಡೆದುಬಂದ ಹಾದಿಯನ್ನು ನೆನಪಿಸಲು ಇದನ್ನು ಹಾಕಲಾಗಿದೆಯೇ? ಅಥವಾ ಗ್ರಾಮೀಣ ಬದುಕಿನ ಮೂಲ ಬೇರನ್ನು ಮರೆಯಬಾರದು ಎಂಬ ಸಂಕೇತವೇ?” ಎಂಬ ಯೋಚನೆ ಮನಸ್ಸನ್ನು ಕೊರೆಯುತ್ತಿತ್ತು. ಅಲ್ಲಿ ಪೆಟ್ರೋಲ್ ತುಂಬಿಸಿಕೊಂಡು, ಆ ಅಪರೂಪದ ಮಾದರಿಯ ಮುಂದೆ ಒಂದು ಫೋಟೋವನ್ನೂ ಕ್ಲಿಕ್ಕಿಸಿಕೊಂಡು ಮೈಸೂರಿನತ್ತ ಮುನ್ನಡೆದೆವು.

ಕಾಯಕನಿಷ್ಠೆಯ ಬೀಳ್ಕೊಡುಗೆ ಮತ್ತು ಮಧುರ ವಿಶ್ರಾಂತಿ

ಮೈಸೂರಿನ ರಿಂಗ್ ರೋಡ್ ತಲುಪುತ್ತಿದ್ದಂತೆ, ಆನಗಟ್ಟಿಯಿಂದ ನಮ್ಮೊಂದಿಗೆ ಬಂದಿದ್ದ ಶಿವರುದ್ರಪ್ಪ ಮತ್ತು ಚಂದ್ರಶೇಖರ್ ಅವರು, “ನಮ್ಮನ್ನು ಇಲ್ಲೇ ರಿಂಗ್ ರೋಡ್ ಹತ್ತಿರ ಬಿಟ್ಟುಬಿಡಿ, ನಾವು ಆನಗಟ್ಟಿಗೆ ಹೊರಡುತ್ತೇವೆ” ಎಂದರು. ನಾವು ಅವರನ್ನು ಪ್ರೀತಿಯಿಂದ ಮನೆಗೆ ಆಹ್ವಾನಿಸಿದರೂ, ಅವರು “ಇಲ್ಲ ಸರ್, ನಾಳೆ ನಮಗೆ ಕಾಯಕವಿದೆ. ದಯವಿಟ್ಟು ಬಸ್ಸಿಗೆ ಕಳುಹಿಸಿಕೊಡಿ” ಎಂದು ತಮ್ಮ ಕಾಯಕನಿಷ್ಠೆಯನ್ನು ಮೆರೆದರು. ಅವರ ವಿನಂತಿಯಂತೆ ಶ್ರೀರಾಂಪುರ ಬಸ್ ನಿಲ್ದಾಣದಲ್ಲಿ ಅವರನ್ನು ಇಳಿಸಿ, ಬಸ್ ಹತ್ತಿಸಿ ನಾವು ಮನೆಯ ಕಡೆಗೆ ಬಂದೆವು.

ರಾತ್ರಿ ಸರಿಯಾಗಿ 10 ಗಂಟೆಗೆ ನಮ್ಮ ‘ಶರಣು ವಿಶ್ವವಚನ ಫೌಂಡೇಷನ್’ ಕಚೇರಿ ಹಾಗೂ ಮನೆ ಎರಡೂ ಒಂದೇ ಆಗಿರುವ ಆ ಪವಿತ್ರ ತಾಣವನ್ನು ತಲುಪಿದೆವು. ಈಗಾಗಲೇ ಮಠ ಮತ್ತು ಮದುವೆಗಳಲ್ಲಿ ಹೊಟ್ಟೆ ತುಂಬ ಪ್ರಸಾದ ಸವಿದಿದ್ದರಿಂದ ರಾತ್ರಿ ಊಟದ ಅಗತ್ಯವಿರಲಿಲ್ಲ. ನನ್ನ ಪತ್ನಿ ರೂಪಾ, “ಹೊಟ್ಟೆ ತುಂಬಿದೆ, ಸ್ವಲ್ಪ ಹಾಲು ಕುಡಿದರೆ ಸಾಕಲ್ಲವೇ?” ಎನ್ನುತ್ತಾ ಬಿಸಿ ಬಿಸಿ ಬಾದಾಮಿ ಹಾಲು ಮತ್ತು ಜೇನುತುಪ್ಪ ಸವರಿದ ಬ್ರೆಡ್ ತಯಾರಿಸಿಕೊಟ್ಟಳು. ಆ ಮಧುರವಾದ ಬಾದಾಮಿ ಹಾಲು ಮತ್ತು ಜೇನುತುಪ್ಪದ ಬ್ರೆಡ್ ಸವಿಯುತ್ತಾ, ದಿನದ ಇಡೀ ಭಕ್ತಿಯ ಪಯಣವನ್ನು ಮನದಲ್ಲೇ ಮೆಲುಕುಹಾಕುತ್ತಾ ದಣಿವಾರಿಸಿಕೊಳ್ಳಲು ವಿಶ್ರಾಂತಿಗೆ ಶರಣಾದೆವು.  ಈ ಭಾನುವಾರದ ಪಯಣ ನಮ್ಮ ಬದುಕಿನ ಅತ್ಯಂತ ಅರ್ಥಪೂರ್ಣ ಮತ್ತು ಮರೆಯಲಾಗದ ಸಾಹಿತ್ಯಿಕ-ಆಧ್ಯಾತ್ಮಿಕ ಸವಿನೆನಪಾಗಿ ಉಳಿಯಿತು.

ಹಸಿರು ಕ್ರಾಂತಿಯ ಕಾಯಕಯೋಗಿಗೆ ನಮನ…  ಇದೊಂದು ಸುಂದರ ಮರೆಯಲಾಗದ ಪಯಣದ ಮೆಲುಕು

admin
the authoradmin

Leave a Reply