ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-11

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ. 

51 ಕೃತಿ : ನೆಲೆಬೆಲೆ

 ಕರ್ತೃ : ಬಿ.ಟಿ.ಲಲಿತಾನಾಯಕ್

ವಿಭಿನ್ನ ಪತ್ರಕರ್ತ ಪ್ರೊ.ಪಿ.ಲಂಕೇಶ್ ಸಾರಥ್ಯದ ಕನ್ನಡ ಸಾಪ್ತಾಹಿಕ ‘ಲಂಕೇಶ್ ಪತ್ರಿಕೆ’ ಮೂಲಕ ರಾತ್ರೋರಾತ್ರಿ ದಿಢೀರನೆ ನಾಡಿನಾದ್ಯಂತ ಖ್ಯಾತರಾದವರು ಲಲಿತಾನಾಯಕ್. ಪ್ರಪಂಚದ ಮೊಟ್ಟಮೊದಲ ಜಾಹೀರಾತು ರಹಿತ ವಾರಪತ್ರಿಕೆ ಎಂಬ ವಿಶ್ವದಾಖಲೆ ನಿರ್ಮಿಸಿದ ಲಂಕೇಶ್ ಪತ್ರಿಕೆಯಲ್ಲಿ ಅಂಕಣಗಾರ್ತಿ-ಕಮ್-ಲೇಖಕಿಯಾಗಿ ಗುರ್ತಿಸಿಕೊಂಡ ನಂತರ ಇವರು ತಮ್ಮ ಒಂದೊಂದೇ ಪುಸ್ತಕಗಳನ್ನು ಬರೆಯಲಾರಂಭಿಸಿದರು. ಕಾಲಕ್ರಮೇಣ ಕರ್ನಾಟಕ ರಾಜ್ಯದ ಮಹಿಳಾ-ಮಕ್ಕಳಾ, ಕನ್ನಡ-ಸಂಸ್ಕೃತಿ ಸಚಿವೆ ಹುದ್ದೆಯನ್ನು ಅಲಂಕರಿಸಿ ನಿಷ್ಠಾವಂತ ಸೇವೆ ಸಲ್ಲಿಸಿದರು.

‘ನೆಲೆಬೆಲೆ’ ಕೃತಿಯು ಗ್ರಾಮೀಣ ಮತ್ತು ನಗರ ಜೀವನಗಳ ತೌಲನಿಕ ಚಿತ್ರಣ ಕೊಡುವಂಥ ಮಿಶ್ರಣದ ಕಾದಂಬರಿ. 1981 ರಲ್ಲಿ ನಾಡಿನ ಜನಪ್ರಿಯ ವಾರಪತ್ರಿಕೆ ‘ಸುಧಾ’ ಕಾದಂಬರಿ ಸ್ಫರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಮಡಿವಂತಿಕೆಯ ಸಮಾಜದಲ್ಲಿ ಬಹಳ ಅಪರೂಪದ ಪುನರ್ವಿವಾಹ ಗಂಡು ಹೆಣ್ಣುಗಳ (ಅ)ಸಮಾನತೆ, ಮೇಲು ಕೀಳು ಮನೋಭಾವ ಇವುಗಳಿಂದಾಗುವ ಫಲಾಫಲ; ಕಾದಂಬರಿಯ ಮುಖ್ಯವಸ್ತು.

ಇಂತಹ ವೈಪರೀತ್ಯ ವಿಪರ್ಯಾಸ ವಿಶಿಷ್ಠಗಳನ್ನು ಒತ್ತಿಹೇಳುವಂತೆ ಹರಿಯುವ ನಿರೂಪಣೆಯಿಂದಾಗಿ ನೆಲೆ-ಬೆಲೆ ಕಾದಂಬರಿಯು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಟೀಕೆ-ಟಿಪ್ಪಣಿ, ಅಭಿಪ್ರಾಯ-ಅನಿಸಿಕೆ, ವಿಡಂಭನೆ-ವಿಮರ್ಶೆ, ಪ್ರತಿಯೊಬ್ಬ ಓದುಗರಲ್ಲೂ ಬೇರೆಯೇ ಆಗಿರುತ್ತದೆ. ಪ್ರಸಿದ್ಧ ವಿಚಾರವಾದಿಯೊಬ್ಬರು ಬರೆದ ಕಾದಂಬರಿಯಿದು ಎಂಬ ತೂಕ ಇದ್ದೇ ಇದೆ. ಇಚ್ಛೆಯುಳ್ಳವರು ಕೊಂಡು ಓದಬಹುದು ಯಾರದ್ದೂ ಅಭ್ಯಂತರ ಇರುವುದಿಲ್ಲ?!

(ಜನವರಿ 1982 “ಗ್ರಂಥಲೋಕ” ಮಾಸಪತ್ರಿಕೆಯಲ್ಲಿ ಪ್ರಕಟಿತ)

52 ಕೃತಿ:ಲಿಂಗಾಯತ ಧರ್ಮದ ಸಮಾಜ ತತ್ವಜ್ಞಾನ

 ಕರ್ತೃ : ಸಿದ್ಧಣ್ಣ ಲಂಗೋಟಿ

ಶ್ರೀಮಾನ್ ಲಂಗೋಟಿಯವರ ೩ನೆ ಕೃತಿ. ಪುಸ್ತಕದ ಹೆಸರೇ ಸೂಚಿಸುವಂತೆ ಇದು, ಲಿಂಗಾಯತ ಧರ್ಮದ ಸಮಾಜ ತತ್ವಜ್ಞಾನದ ಬಗ್ಗೆ 25ವಚನಗಳ ಆಧಾರದ ಮೇಲೆ ವಿವೇಚನೆ ಮಾಡಿ ಲೇಖಕರು ಬರೆದಿದ್ದಾರೆ. ಲಿಂಗಾಯತ ಧರ್ಮ ಸಂಸ್ಥಾಪಕ ಕ್ರಾಂತಿಕಾರಿ ಬಸವಣ್ಣನವರ ಹೃದಯದಂತಿದ್ದ ಸಮಾಜ ತತ್ವಜ್ಞಾನದ ಬಗ್ಗೆ ಮತ್ತು ಮಹಾಪುರುಷನ ಹಿರಿಮೆಯನ್ನು ಬಿಂಬಿಸುವ ಪ್ರಯತ್ನ ಇದರಲ್ಲಿದೆ.

ಜನರ ವಾಣಿಯನ್ನೇ ದೇವರ ವಾಣಿಯನ್ನಾಗಿ ಮಾರ್ಪಾಡಿಸಿದ ಬಗ್ಗೆ ಮತ್ತು ಏಕದೇವ ಉಪಾಸನೆ ನೀತಿಯ ತಳಹದಿ ಮೇಲೆ ಹೊಸ ಧರ್ಮವೊಂದನ್ನು ರೂಪಿಸಿದ ಬಗ್ಗೆ ಗಂಭೀರ ಚಿಂತನೆ ಮಾಡಲಾಗಿದೆ. ಅಣ್ಣ ಕೈಗೊಂಡ ಸ್ತ್ರೀಸ್ವಾತಂತ್ರ್ಯ ಅರ್ಹತೆ, ಮೂಢನಂಬಿಕೆ ನಿವಾರಣೆ, ಪಂಚಸೂತಕ ಪರಿತ್ಯಾಗ, ವರ್ಣಾಶ್ರಮ ಪದ್ಧತಿ ನಿರ್ಮೂಲನೆ, ಮುಂತಾದವು ಇವತ್ತಿಗೂ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳು. ಇವುಗಳನ್ನೆ ಮುಖ್ಯ ವಸ್ತುವನ್ನಾಗಿಸಿ, ನಯವಾಗಿ ವಿಶ್ಲೇಷಿಸಿ, ನವಿರಾಗಿ ಮೂಡಿಸಿ, ಪ್ರಕಟಿಸಿರುವುದು, ಕೃತಿಯ ವೈಶಿಷ್ಟ್ಯ.

ಸನಾತನ ಧರ್ಮದ ಜತೆಯಲ್ಲೆ ರಾಷ್ಟ್ರ ಧರ್ಮವನ್ನೂ ಶೋಷಿತ ಸಮಾಜವನ್ನೂ ಸರಿಯಾಗಿ ರೂಪಿಸುವಲ್ಲಿ ಲಿಂಗಾಯತ ಪಂತದ ಉದಾತ್ತ ತತ್ವ/ವಚನಗಳು ಪ್ರಯೋಜನಕಾರಿ ಆಗಿರುತ್ತವೆ. ಆದರೆ, ಎಲ್ಲಕ್ಕಿಂತ ಮಿಗಿಲಾದುದು ಮಾನವಧರ್ಮ ಎಂಬುದರಲ್ಲಿ ಲವಲೇಶ ಸಂಶಯವಿಲ್ಲ. ಬೆಳಕು ಮತ್ತು ಜ್ಞಾನವು ಜಗತ್ತಿನ ಯಾವ ಮೂಲೆಯಿಂದ ಬಂದರೂ ಸ್ವಾಗತಿಸಬೇಕು. ವಿದೇಶೀ ಆಧುನಿಕ ಸಂಸ್ಕಾರ ಸಂಸ್ಕೃತಿ ನಾಗರಿಕತೆ ವೇಗವಾಗಿ ಆವರಿಸುತ್ತಿರುವ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸತ್ಸಂಗ ಸುವಿಚಾರ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಇಂಥ ಪುಸ್ತಕಗಳು ಸ್ವಾಗತಾರ್ಹ ಹಾಗು ಲೇಖಕರು ಅಭಿನಂದನಾರ್ಹ. ಧಾರ್ಮಿಕ ವಿಚಾರದ ಇಂಗಿತವುಳ್ಳ ಓದುಗರಿಗಿದು ಪ್ರಿಯವಾಗಬಹುದು.

(ಜೂನ್ 1981 ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)

53 ಕೃತಿ:ಹಳ್ಳಿಗಳಲ್ಲಿ ಗೃಹ ನಿರ್ಮಾಣ

 ಕರ್ತೃ: ಪ್ರೊ.ಎಂ.ಎಸ್.ಹುಲ್ಲೋಳಿ

ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ ಸಂಸ್ಥೆಯ”ಉಪನ್ಯಾಸ ಗ್ರಂಥಮಾಲಿಕೆ” ಪ್ರಕಟಣೆ ಸರಣಿಯಲ್ಲಿ ಹೊರಬಂದ ಈ ಕಿರು ಹೊತ್ತಗೆಯು ನಮ್ಮನಾಡಿನ ಗ್ರಾಮೀಣ ಜನ, ಜೀವನದ ಬಗ್ಗೆ ಕನ್ನಡಿ ಹಿಡಿದಂತಿದೆ. ನೂರಾರು ವರ್ಷದಿಂದ ಹಳ್ಳಿಗಳಲ್ಲಿ ಕಾಡುತ್ತಿರುವ ವಸತಿ ಅಗತ್ಯತೆಯನ್ನು ಪ್ರತಿಬಿಂಬಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಹುತೇಕ ಜನರನ್ನು ಬಹುವಾಗಿ ಪೀಡಿಸುತ್ತಿರುವ ಸಮರ್ಪಕ ವಸತಿಗೃಹ ಸಮಸ್ಯೆ ಗಳನ್ನು ಹೇಗೆ ಬಗೆಹರಿಸಬಹುದು? ಎಂಬ ಬಗ್ಗೆ ಲೇಖಕ ವಿಶೇಷ ಗಮನ ಹರಿಸಿದ್ದಾರೆ. ಈ ಬಗ್ಗೆ ಅವಶ್ಯಕವಾಗಿ ಬೇಕಾದ ಮಾಹಿತಿ, ಪರಿಹಾರ, ಮುಂತಾದವುಗಳನ್ನು ವಿವರವಾಗಿ ತಿಳಿಸಿದ್ದಾರೆ.

ಮೂರು ಸರಳ ಮತ್ತು ಸ್ಪಷ್ಟ ಚಿತ್ರವುಳ್ಳ ಪ್ರೊ.ಹುಲ್ಲೋಳಿಯವರ ‘ಹಳ್ಳಿಗಳಲ್ಲಿ ಗೃಹ ನಿರ್ಮಾಣ’ ಪುಸ್ತಕವು ಅರೆಬರೆ ಓದುಬರಹ ಬರುವಂಥ ಹಳ್ಳಿಯ ಮುಗ್ಧರಿಗೂ, ನಗರದ ಅಮಾಯಕರಿಗೂ ಸಹ ಅರ್ಥವಾಗುವಂತಿದೆ. ನಿಜವಾಗಲೂ ಸಮಾಜೋದ್ಧಾರ ಮಾಡಬಲ್ಲ ದಿಟ್ಟ ಸಾಮಾಜಿಕ ಹೋರಾಟಗಾರರಿಗೆ ಹಾಗೂ ಗ್ರಾಮೀಣಾಭಿವೃದ್ಧಿಯ ಮನಸ್ಸುಳ್ಳ ಶುದ್ಧ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡುವಂತಿದೆ.

ಸಂಬಂಧಪಟ್ಟ ಇಲಾಖೆಯವರಿಗೆ, ಹಳ್ಳಿಯ ನಿರ್ವಸತಿಗರ ವಸತಿ ಬಗ್ಗೆ ಕಳಕಳಿ ಇದ್ದವರಿಗೆ, ಇದೊಂದು ಉತ್ತಮ ‘ಗೈಡ್’ ಪುಸ್ತಕ. ಹೀಗಾಗಿ ಕರ್ನಾಟಕ ರಾಜ್ಯದ್ದೇ ಏಕೆ, ಇಡೀ ರಾಷ್ಟ್ರದ ಪ್ರತಿಯೊಂದು ವಿ.ವಿ.ಯ ಮುದ್ರಣಾಲಯ, ಪ್ರಸಾರಾಂಗದ ವತಿಯಿಂದ ಇಂತಹ ಉಪಯುಕ್ತ ಪುಸ್ತಕಗಳು ಪ್ರಕಟಗೊಂಡರೆ ನಮ್ಮ ದೇಶವು ಸರ್ವತೋಮುಖ ಪ್ರಗತಿ ಸಾಧಿಸುವುದರಲ್ಲಿ ಸಂದೇಹವಿಲ್ಲ. ಪುಸ್ತಕವನ್ನು ಪ್ರತಿಯೊಬ್ಬರೂ, ವಿಶೇಷವಾಗಿ ಸಿವಿಲ್ ಎಂಜಿನಿಯರ್ಸ್ ಓದುವುದರಿಂದ ವಸತಿ ಪುನರ್ವಸತಿ ಅನುಷ್ಠಾನದ ಸಾಧ್ಯಾಸಾಧ್ಯತೆ ಬಗ್ಗೆ ಇರಬೇಕಾದ ಸಾಮಾನ್ಯಜ್ಞಾನ ವೃದ್ಧಿಸುತ್ತದೆ…?!

(ಜೂನ್ 1981 ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)

54 ಕೃತಿ: ಅರ್ಪಣೆ (ನಾಟಕ)

 ಕರ್ತೃ: ನಾ.ದಾಮೋದರ ಶೆಟ್ಟಿ

ಹದಿನೈದು ಪಾತ್ರಗಳನ್ನೊಳಗೊಂಡ ನಾ.ದಾಮೋದರಶೆಟ್ಟಿ ವಿರಚಿತ ನಾಟಕ ‘ಅರ್ಪಣೆ’. ಗತಕಾಲದಲ್ಲಿ ಜೀವಿಸಿರ ಬಹುದಾದ ಓರ್ವ ಕ್ರೈಸ್ತ ಸಂತನ ಕುರಿತಾದ ರಚನೆ ಇದು. ಸಂತ ಎಲೋಷಿಯಸ್ ಗೋನ್ಸಾಗ್ ಎಂಬುವನ ತ್ಯಾಗಮಯ ಜೀವನ ಚರಿತ್ರೆ ಆಧಾರಿತ ನಾಟಕದ ಪುಸ್ತಕ. ಇಟಲಿ ದೇಶದ ಗೋನ್ಸಾಗಾ ಮನೆತನದ ಸೇನಾನಿ ಫರ್ಡಿನಾಂಡ್ ಮತ್ತು ಅವನ ಪತ್ನಿ ಮಾರ್ತಾ ಇವರಿಬ್ಬರ ಜೇಷ್ಠ ಪುತ್ರನೇ ಎಲೋಷಿಯಸ್. ಕೂಸು ಹುಟ್ಟುವ ಮೊದಲೆ ತಾಯಿಯು, ತನ್ನ ಮಗನನ್ನು ಪರಮಾತ್ಮನ ಸೇವೆಗೆ ಮೀಸಲಿರಿಸುವೆನೆಂದು ತೀರ್ಮಾನಿಸುತ್ತಾಳೆ. ಆದರೆ ತಂದೆಯು, ಪುತ್ರ ನನ್ನು ದೇಶಕ್ಕೆ ಸಮರ್ಪಿಸಿ ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂದು ನಿರ್ಧರಿಸಿರುತ್ತಾನೆ.

ಎಲೋಷಿಯಸ್ ಪ್ರೌಢ ವಯಸ್ಸಿಗೆ ಬಂದ್ಮೇಲೆ, ತಾಯಿಯ ಇಚ್ಛೆಯಂತೆ ಸನ್ಮಾರ್ಗದೆಡೆ ಸಾಗಿ ತನ್ನನ್ನೇ ಮರೆತು ಪರಮಾತ್ಮನ ಧ್ಯಾನ ಮಾಡುತ್ತಾನೆ. ಯೇಸು ಸನ್ನಿಧಿ ಸೇರುವುದರ ಹೊರತು ಅನ್ಯಮಾರ್ಗವಿಲ್ಲವೆಂದೂ ತನ್ನನ್ನು ಪರಮಾತ್ಮನಿಗೆ ಅರ್ಪಿಸಿಕೊಳ್ಳಬೇಕೆಂದೂ ನಿರ್ಧರಿಸುತ್ತಾನೆ. ತಂದೆಯ ಬಳಿಕ ದೊರಕುವ ವೈಭವಯುತ ಉತ್ತರಾಧಿಕಾರಿ ಪಟ್ಟದ ಆಸೆ ಆಮಿಷಗಳಿಗೆ ಬಲಿಯಾಗದೆ, ಎಲ್ಲವನ್ನು ತ್ಯಜಿಸುತ್ತಾನೆ. 1591ರಲ್ಲಿ ಬರಗಾಲದ ಪ್ಲೇಗ್ ರೋಗದ ಸುಳಿಯಲ್ಲಿ ಸಿಲುಕಿ ಹಸಿವು ತೃಷೆ ಬಾಯಾರಿಕೆ ರೋಗಬಾಧೆ ಯಿಂದ ನರಳುವನು. ತಾಯಿಯ ಪ್ರತಿಜ್ಞೆಯನ್ನು ಹಾಗೂ ಸ್ವಯಂ ಬಯಕೆಯನ್ನು ತನ್ನ 23ನೇ ಹರೆಯದಲ್ಲಿ ಈಡೇರಿಸಿ ಕೊಳ್ಳಲು ಎಲೋಷಿಯಸ್ ತನ್ನನ್ನು ತಾನೇ ಪರಮಾತ್ಮನಿಗೆ ‘ಅರ್ಪಣೆ’ ಮಾಡಿಕೊಳ್ಳುತ್ತಾನೆ!

ಹೃದಯಂಗಮವಾಗಿ ರಚಿಸಿರುವ ‘ಅರ್ಪಣೆ’ ನಾಟಕವೂ ಸೇರಿದಂತೆ ದಾಮೋದರ ಶೆಟ್ಟಿಯವರು ಬರೆದಿರುವುದು ನಾಲ್ಕು ನಾಟಕಗಳು. ಆದರೆ ಬೆಳಕು ಕಂಡಿರುವುದು ಇದೊಂದೇ ನಾಟಕ! ಒಳ್ಳೆಯ ನಾಟಕ ರಚನೆಕಾರನಾಗುವ ಲಕ್ಷಣಗಳನ್ನು ಇದರಲ್ಲಿ ತೋರ್ಪಡಿಸಿದ್ದಾರೆ. ಭವಿಷ್ಯದಲ್ಲಿ ಹಲವಾರು ಉತ್ತಮ ಕೃತಿಗಳನ್ನು ಮತ್ತು ಸಧೃಢ ನಾಟಕಗಳನ್ನು ನೀಡುತ್ತಾರೆಂಬ ಭರವಸೆ ಮೂಡಿಸುತ್ತದೆ ಪುಸ್ತಕದ ಅಂತರಾಳ.ಕಡಿಮೆಸಂಖ್ಯೆ ಪಾತ್ರಗಳಿರುವ ಈನಾಟಕವನ್ನು ಹೆಚ್ಚುಬಾರಿ ಪ್ರಯೋಗ ಮಾಡುವ ಮೂಲಕ ಕನ್ನಡಿಗರ ಶ್ರೀರಕ್ಷೆ ಅಭಿನಂದನೆ ಇವರಿಗಿರಲಿ?

(ಜೂನ್ 1981 ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)

55 ಮೂಲ: ಮಲಯಾಳಂ ಸಣ್ಣಕಥೆಗಳು

 ಅನುವಾದ: ಬಿ.ಕೆ.ತಿಮ್ಮಪ್ಪ

ಡಾ.ಬಿ.ಕೆ.ತಿಮ್ಮಪ್ಪನವರು ಕಾಸರಗೋಡಿನಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಕನ್ನಡ- ಮಲಯಾಳಂ ಭಾಷೆಗಳ ಕೊಂಡಿಯಾಗಿ ಎರಡೂ ಭಾಷೆಯಲ್ಲಿ ಸಾಹಿತ್ಯಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಎಂದಿನಂತೆ ಮಲಯಾಳಂನ ವಿವಿಧ ಲೇಖಕರ ಹನ್ನೆರಡು ಸಣ್ಣ ಕಥೆಗಳನ್ನು ಅನುವಾದಿಸಿ ಇದರಲ್ಲಿ ಕ್ರೋಢೀಕರಿಸಲಾಗಿದೆ. ಇವುಗಳ ಪೈಕಿ ಹನ್ನೊಂದು ಕತೆಗಳ ವಸ್ತು ಮತ್ತು ವಿಷಯ ಬಹುತೇಕ “ಕಾಮ-ಪ್ರೇಮ” ಆಧಾರಿತದ್ದಾಗಿವೆ. ಇದರ ಹೊರತಾಗಿಯೂ ಉನ್ನತ ಮಟ್ಟದಲ್ಲಿ ನಿಲ್ಲುವಂತಹ ಕಥೆಗಳ ಉದಾಹರಣೆ ಕೆಳಕಂಡಂತಿದೆ…

1*ಹಣಕ್ಕಿಂತ ಮನುಷ್ಯ ದೊಡ್ಡವನು: ಕಥೆಯಲ್ಲಿ ವೈದ್ಯನೊಬ್ಬ ಹಣವೇ ಮುಖ್ಯವೆಂದು ಭಾವಿಸಿರುತ್ತಾನೆ. ಆಗ ಓರ್ವ ಶ್ರೀಸಾಮಾನ್ಯನಿಂದ ಪಾಠ ಕಲಿತು ಹಣಕ್ಕಿಂತಲೂ ಮನುಷ್ಯನೇ ದೊಡ್ಡವನು ಎಂದು ಅರಿತುಕೊಳ್ಳುತ್ತಾನೆ.

2*ಇಪ್ಪತ್ತು ನಿಮಿಷಗಳ ಕಥೆ: ಸಾಹಿತಿಯೊಬ್ಬ ಆಕಸ್ಮಾತ್ ತನ್ನನ್ನು ಭೇಟಿಯಾಗುವ ಓರ್ವ ಅಪರಿಚಿತ ಹೆಣ್ಣಿನೊಡನೆ, ತನ್ನ ಪ್ರಯಾಣದ ಬಿಡುವಿನ ಸಮಯದಲ್ಲಿ ಏರ್ ಫೋರ್ಟ್ ನಲ್ಲಿ ನಡೆಸಿದ ಸಂದರ್ಶನ. ಅದೇ ವೇಳೆಗೆ ತನ್ನ ಮನಸ್ಸಿನಲ್ಲೆ ಅಪರಿಚಿತಳ ಬಗ್ಗೆ ಎರಡು ದೃಷ್ಟಿಕೋನದಿಂದ ಅಳೆದ ನಂತರ ವಳನ್ನು ಬಾಳಸಂಗಾತಿಯನ್ನಾಗಿ ಅಥವಾ  ಸೋದರಿಯನ್ನಾಗಿ ಮಾಡಿಕೊಳ್ಳಲು ಇಚ್ಚಿಸುವನು. ಯುವಕನ ಅಂತರಾಳದಲ್ಲಿ 20 ನಿಮಿಷ ಕಾಲ ನಡೆಯುವ ದ್ವಂದ್ವ ಜಿಜ್ಞಾಸೆಯನ್ನು ಲೇಖಕ ಸುಂದರವಾಗಿ ವರ್ಣಿಸಿದ್ದಾರೆ.

3*ಇಬ್ಬರೂ ಊರುಬಿಟ್ಟರು: ಕಥೆಯಲ್ಲಿ ಒಂದೆಡೆ, ಪ್ರಾಮಾಣಿಕ ಜಮೀನ್ದಾರನೊಬ್ಬ ತನ್ನ ಧರ್ಮಪತ್ನಿ ಆದಿಯಾಗಿ ಸರ್ವಸ್ವವನ್ನು ನಂಬಿದ್ದು, ನಂತರ ಅವರಿಂದಲೆ ವಂಚಿತನಾಗಿ ಊರು ಬಿಡುತ್ತಾನೆ. ಮತ್ತೊಂದೆಡೆ, ಕದಿಯಬಾರದ್ದು ಯಾವುದೂ ಇಲ್ಲ ಸುಖವಾಗಿ ಜೀವಿಸಲಿಕ್ಕಾಗೇ ಹುಟ್ಟಿರುವ ನಾನು ಏನ್ನನ್ನಾದರೂ ಕದಿಯುತ್ತೇನೆ ಎಂಬ ಕೆಟ್ಟ ಸಿದ್ಧಾಂತ ಹೊಂದಿದ್ದ ಕಳ್ಳನೊಬ್ಬ ತಾನು ಬಹುವಾಗಿ ನಂಬಿದ್ದ ಹೆಣ್ಣಿನಿಂದಲೇ ವಂಚಿತನಾಗಿ ಊರು ಬಿಡುತ್ತಾನೆ.

ಇನ್ನುಳಿದ ಕಥೆಗಳು ಸಹ ಮನುಷ್ಯ ಜೀವನದಲ್ಲಿ ಬರುವಂಥ ಪ್ರೇಮ-ಕಾಮ ಒಳಿತು-ಕೆಡಕು ನೀತಿ-ಅನೀತಿ ಅಂತರಂಗ-ಬಹಿರಂಗ ಇತ್ಯಾದಿ ಜಂಜಾಟದ ಬಗ್ಗೆ ವಿಧವಿಧ ಮುಖಗಳನ್ನು ಆಕರ್ಷಕವಾಗಿ ಪರಿಚಯಿಸುತ್ತದೆ. ಮಲಯಾಳಂ ಮೂಲದ ಕಥೆಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿರುವ ಖ್ಯಾತ ಅನುವಾದಕ ತಿಮ್ಮಪ್ಪನವರ ಕಥಾಸಂಕಲನವು ಬಹುಶಃ ಮೂಲ ಕೃತಿಯಷ್ಟೆ ಪಕ್ವತೆಯಿಂದ ಕೂಡಿದ್ದು ಎಲ್ಲವನ್ನು ಸರಿಯಾಗಿ ಪರಿಚಯ ಮಾಡಿಕೊಟ್ಟಿದೆ. ಓದುಗರಿಗೆ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಸಣ್ಣಸಣ್ಣ ಕತೆಗಳ ಈ ಪುಸ್ತಕವನ್ನು ಸಾಹಿತ್ಯಾಸಕ್ತರು ಒಂದುಸಲ ಓದಬಹುದು.

(ಆಗಸ್ಟ್ 1982 ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-10

admin
the authoradmin

Leave a Reply