ಪ್ರತಿ ಮನೆಯಲ್ಲೂ ಒಂದು ಹೋಮ್ ಕ್ಲಿನಿಕ್ ಇರಲಿ …. ಏಕೆ ಗೊತ್ತಾ? ಇದು ಜೀವ ಕಾಪಾಡಬಹುದು!
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-21

ನಾವು ಈ ವಿಷಯವನ್ನು ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. “ಪ್ರತಿ ದೊಡ್ಡ ಮನೆಯಲ್ಲಿ ಒಂದು ಹೋಮ್ ಕ್ಲಿನಿಕ್ ಇರಬೇಕು” ಅಂತ. ಜನರು ಎಷ್ಟರಮಟ್ಟಿಗೆ ಇದನ್ನು ಮನಸ್ಸಿನೊಳಗೆ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ. ಆದರೆ ಇಂದು ಮತ್ತೆ ಅದೇ ಕಳಕಳಿಯೊಂದಿಗೆ ವಿವರಣೆಯೊಂದಿಗೆ ಹೇಳ್ತಿದ್ದೇನೆ. ದಯವಿಟ್ಟು ಈ ಲೇಖನವನ್ನು ಓದಿ ಸುಮ್ಮನಾಗಬೇಡಿ. ಇದನ್ನು ನಿಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಿ. ಇದು ಖಂಡಿತ ಅತ್ಯಂತ ಸಹಾಯಕಾರಿಯಾಗುತ್ತದೆ.
ಕೊಡಗು ಪ್ರಕೃತಿಯ ಸೌಂದರ್ಯಕ್ಕೆ ಹೆಸರಾದರೂ, ಗುಡ್ಡಗಾಡು ಪ್ರದೇಶ. ಇಲ್ಲಿ ಒಂದು ದೊಡ್ಡ ಚಿಂತೆ ಇದೆ – ಆಸ್ಪತ್ರೆ ದೂರ ಇರುವುದು. ಎಮರ್ಜೆನ್ಸಿ ಆದಾಗ 30 ನಿಮಿಷ, 1 ಗಂಟೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತುಂಬಾ ತಡವಾಗಿಬಿಡುತ್ತದೆ. ಇಂದು ಕೊಡಗಿನಲ್ಲಿ 50 ಲಕ್ಷ, 1 ಕೋಟಿ ಖರ್ಚು ಮಾಡಿ ಸುಂದರ ಮನೆ ಕಟ್ಟುವ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮನೆಯಲ್ಲಿ ಎಲ್ಲಾ ಆಧುನಿಕ ಸೌಲಭ್ಯ ಇರುತ್ತದೆ. ಆದರೆ ಒಂದು ವಿಷಯ ನಾವು ಮರೆಯುತ್ತೇವೆ – ನಾಳೆ ನಮಗೂ ವಯಸ್ಸಾಗುತ್ತದೆ.
ಮನೆಯಲ್ಲಿ ವಯಸ್ಸಾದ ತಂದೆ-ತಾಯಿ, ಬೆಡ್ ಪೇಷಂಟ್ ಆದವರು ಇರಬಹುದು. ಅಂತಹ ಸಂದರ್ಭದಲ್ಲಿ ಅವರನ್ನು ಎತ್ತುವುದು, ತಿರುಗಿಸುವುದು, ಆರೈಕೆ ಮಾಡುವುದು ತುಂಬಾ ಕಷ್ಟ. ಆಸ್ಪತ್ರೆಗೆ ಓಡಾಡಲು ಆಗುವುದಿಲ್ಲ. ಇಲ್ಲಿ ಒಂದು ವಿಷಯ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಆಸ್ಪತ್ರೆಗೆ ಹೋಗುವಂತಹ ದೊಡ್ಡ ಕಾಯಿಲೆಗಳಿಗೆ, ಆಪರೇಷನ್, ಗಂಭೀರ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಲೇಬೇಕು. ಆದರೆ ಮನೆಯಲ್ಲೇ ನೋಡಿಕೊಳ್ಳಬೇಕಾದ ಸಂದರ್ಭದಲ್ಲಿ, ಆಸ್ಪತ್ರೆಗೆ ಹೋಗುವವರೆಗಿನ ಸಮಯದಲ್ಲಿ (Home clinic) ಹೋಮ್ ಕ್ಲಿನಿಕ್ ಅತ್ಯವಶ್ಯಕ. ಅಂದರೆ ಇದು ಆಸ್ಪತ್ರೆಯ ಬದಲಿ ಅಲ್ಲ. ಇದು ಜೀವ ಉಳಿಸುವ “ಮೊದಲ 1 ಗಂಟೆಯ ಸೇತುವೆ” ಮತ್ತು “ವಯಸ್ಸಾದ ಕಾಲದ ಆಸರೆ”.

ಇದನ್ನು ನಾವು ಯಾಕೆ ಇವತ್ತೇ ಶುರು ಮಾಡಬೇಕು ಗೊತ್ತಾ?.. ಕಾರಣ ತುಂಬಾ ಸರಳ. ಕೊಡಗಿನಲ್ಲಿ ಎಮರ್ಜೆನ್ಸಿ ಬಂದಾಗ “108 ಆಂಬುಲೆನ್ಸ್ ಬರೋವರೆಗೆ” ಕಾಯುವ ಸಮಯವೇ ಅತ್ಯಂತ ಅಪಾಯಕಾರಿ. ಆ 30 ನಿಮಿಷದಿಂದ 1 ಗಂಟೆಯೊಳಗೆ ನಾವು ನೀಡುವ ಪ್ರಥಮ ಚಿಕಿತ್ಸೆಯೇ ಜೀವ ಉಳಿಸುತ್ತದೆ, ಇಲ್ಲ ಅಂದ್ರೆ ಜೀವ ಹೋಗುತ್ತದೆ.
ಊರಿನಿಂದ 20 KM ದೂರದ ತೋಟದಲ್ಲಿ ಹಾವು ಕಡಿತ ಆಯ್ತು ಅಂತ ಇಟ್ಕೊಳ್ಳಿ. ಆಸ್ಪತ್ರೆ ತಲುಪುವವರೆಗೆ ವಿಷ ಎಲ್ಲಾ ಕಡೆ ಹಬ್ಬಿಬಿಡುತ್ತದೆ. ಆದರೆ ನಿಮ್ಮ ಮನೆಯ “ಹೋಮ್ ಕ್ಲಿನಿಕ್ (Home clinic)”ನಲ್ಲಿ ಫಸ್ಟ್ ಏಡ್ + ಸಕ್ಷನ್ ಮೆಷಿನ್ ಇದ್ದರೆ, ತರಬೇತಿ ಪಡೆದ ಮನೆಯವರೇ ಪ್ರಾಣ ಉಳಿಸಬಹುದು.
ಇದೇ ರೀತಿ ರಾತ್ರಿ 2 ಗಂಟೆಗೆ ಎದೆ ನೋವು ಶುರುವಾದ್ರೆ, ಆಕ್ಸಿಜನ್ + ಆಸ್ಪತ್ರೆ ಬೆಡ್ ಇದ್ದ ಮನೆಯಲ್ಲಿ ರೋಗಿಯನ್ನು ಸ್ಟೇಬಲ್ ಆಗಿ ಇಟ್ಟು ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು. ಇಲ್ಲಾಂದ್ರೆ ದಾರಿಯಲ್ಲೇ ರಿಸ್ಕ್. ಹಾಗಾಗಿ ಹೋಮ್ ಕ್ಲಿನಿಕ್ ಐಷಾರಾಮಿ ಅಲ್ಲ ಬಂಧುಗಳೇ, ಇದು ಗುಡ್ಡಗಾಡು ಕೊಡಗಿನ ಅನಿವಾರ್ಯತೆ. 50 ಲಕ್ಷದ ಮನೆ ಕಟ್ಟುವಾಗ 2.5 ಲಕ್ಷ ಬದಿಗಿಟ್ಟರೆ, ಅದು ಫರ್ನಿಚರ್ ಅಲ್ಲ, ಅದು ನಿಮ್ಮ ಕುಟುಂಬದ “ಇನ್ಶೂರೆನ್ಸ್ ಪಾಲಿಸಿ”. ಇದನ್ನು ನಾವು ಇವತ್ತೇ ಅಳವಡಿಸಿಕೊಳ್ಳಬೇಕು, ನಾಳೆ ಅಲ್ಲ.
ಹಾಗಾಗಿ ಕೊಡಗಿನ 50 ಲಕ್ಷಕ್ಕಿಂತ ಹೆಚ್ಚು ವೆಚ್ಚದಲ್ಲಿ ಮನೆ ಕಟ್ಟುವ ಎಲ್ಲಾ ಮಾಲೀಕರಲ್ಲಿ ನನ್ನ ಒಂದು ಸವಿನಯ ಮನವಿ. ದಯವಿಟ್ಟು ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಒಂದು “ಹೋಮ್ ಕ್ಲಿನಿಕ್ (home clinic)” ನಿರ್ಮಿಸಿ. ಹೋಮ್ ಕ್ಲಿನಿಕ್ ಅಂದರೆ ದೊಡ್ಡ ಆಸ್ಪತ್ರೆ ಅಲ್ಲ. ಚಿಕ್ಕದಾದ 10×10 ಕೋಣೆಯಾದರೂ ಸಾಕು. 50 ಲಕ್ಷ ಖರ್ಚು ಮಾಡುವಾಗ ಅದರಲ್ಲಿ ಕೇವಲ 5% ಅಂದರೆ 2.5 ಲಕ್ಷ ರೂಪಾಯಿಯನ್ನು ಹೋಮ್ ಕ್ಲಿನಿಕ್ಗೆ ವಿನಿಯೋಗಿಸಿ.

ಈ ಕ್ಲಿನಿಕ್ನಲ್ಲಿ ಏನಿರಬೇಕು?
ಆಧುನಿಕ ಆಸ್ಪತ್ರೆ ಬೆಡ್, ಆಕ್ಸಿಜನ್ ಸಿಲಿಂಡರ್ + ಆಕ್ಸಿಜನ್ ಕಾನ್ಸಂಟ್ರೇಟರ್, ಫೋಲ್ಡಿಂಗ್ ಸ್ಟ್ರೆಚರ್, ಬಿಪಿ-ಶುಗರ್ ಚೆಕ್ ಯಂತ್ರ, ಸಕ್ಷನ್ ಯಂತ್ರ, ಫಸ್ಟ್ ಏಡ್ ಕಿಟ್, ಪ್ರಾಥಮಿಕ ಔಷಧಗಳು. ವಯಸ್ಸಾದವರು, ಬೆಡ್ ಪೇಷಂಟ್ ಆದವರಿಗೆ ಆಸ್ಪತ್ರೆಯಲ್ಲಿರುವಂತೆ ಎತ್ತಿ-ಇಳಿಸುವ ಆಧುನಿಕ ಬೆಡ್ ಇದ್ದರೆ ಅವರ ಆರೈಕೆ ಅಚ್ಚುಕಟ್ಟಾಗಿ ಮಾಡಬಹುದು. ಮನೆಯವರ ಕಷ್ಟವೂ ಕಡಿಮೆಯಾಗುತ್ತದೆ. ಕೋವಿಡ್ ಸಮಯದಲ್ಲಿ ನಾವೆಲ್ಲಾ ಆಕ್ಸಿಜನ್ ಕೊರತೆಯನ್ನು ಕಣ್ಣಾರೆ ಕಂಡಿದ್ದೇವೆ. ಹಾಗಾಗಿ ಪ್ರತಿ ಓಂ ಕ್ಲಿನಿಕ್ನಲ್ಲೂ ಸರಿಯಾದ ಮಟ್ಟದ ಆಕ್ಸಿಜನ್ ವ್ಯವಸ್ಥೆ ಇರಲೇಬೇಕು. ಇದು ಉಸಿರಾಟದ ತೊಂದರೆ, ಹೃದಯಾಘಾತದ ಸಂದರ್ಭದಲ್ಲಿ ಜೀವ ಉಳಿಸುತ್ತದೆ.
ಇದು ನಿಮ್ಮ ಮನೆಯವರಿಗೆ ಮಾತ್ರ ಅಲ್ಲ. ನಿಮ್ಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ನೆರೆಮನೆಯವರಿಗೆ, ದಾರಿಹೋಕರಿಗೆ ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ. ಇಲ್ಲಿ ಸರ್ಕಾರದ ಜವಾಬ್ದಾರಿ ತುಂಬಾ ಮುಖ್ಯ. ಸರ್ಕಾರವು ಪ್ರತಿ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಕಡ್ಡಾಯ ಪ್ರಥಮ ಚಿಕಿತ್ಸಾ ತರಬೇತಿ ನೀಡುವಂತಾಗಬೇಕು. CPR, ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆ, ಹಾವು ಕಡಿತ, ರಕ್ತಸ್ರಾವ ನಿಲ್ಲಿಸುವುದು – ಇಂತಹ ತರಬೇತಿ ಇದ್ದರೆ ಮಾತ್ರ ಹೋಮ್ ಕ್ಲಿನಿಕ್ ಅರ್ಥಪೂರ್ಣ ವಾಗುತ್ತದೆ.

ಸರ್ಕಾರವು ಪ್ರತಿ ಹೋಮ್ ಕ್ಲಿನಿಕ್ಗೆ ಫಸ್ಟ್ ಏಡ್ ಕಿಟ್, ಜೀವ ರಕ್ಷಕ ಮಾತ್ರೆಗಳು ನೀಡಬೇಕು. ಜೊತೆಗೆ ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ಕಾರ್ಯಕರ್ತರು ಬಂದು ತಪಾಸಣೆ ಮತ್ತು ರಿಫ್ರೆಶ್ ತರಬೇತಿ ಕೊಡುವಂತಾಗಲಿ. ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಇದು ತುಂಬಾ ಯಶಸ್ವಿಯಾಗುತ್ತದೆ. ಏಕೆಂದರೆ ಇಲ್ಲಿ ಸಮಯವೇ ಔಷಧಿ. ಆಸ್ಪತ್ರೆ ತಲುಪುವವರೆಗೆ ನೀಡುವ ಪ್ರಾಥಮಿಕ ಚಿಕಿತ್ಸೆಯೇ ಸಾವಿಗೂ ಬದುಕಿಗೂ ಇರುವ ವ್ಯತ್ಯಾಸ. ಮನೆಗೆ ಬಣ್ಣ, ಫರ್ನಿಚರ್, ಟಿವಿ ಮುಖ್ಯವಾದಷ್ಟೇ ಜೀವ ರಕ್ಷಣೆಯ ವ್ಯವಸ್ಥೆ ಮತ್ತು ತರಬೇತಿಯೂ ಮುಖ್ಯ.
ಯಾರಾದರೂ ಒಬ್ಬರು ಇದಕ್ಕೆ ಚಾಲನೆ ಕೊಟ್ಟರೆ ಎಲ್ಲರಿಗೂ ಪ್ರೇರಣೆ ಆಗುತ್ತದೆ. ಕುಟುಂಬದ ಆರೋಗ್ಯದ ಮೇಲೆ ಕಾಳಜಿ ಇರುವವರು ತಕ್ಷಣವೇ ಕಾರ್ಯರೂಪಕ್ಕೆ ತನ್ನಿ. ಸರ್ಕಾರದ ನೆರವಿಗಾಗಿ ಕಾಯಬೇಡಿ. ನೀವೇ ಸರ್ಕಾರಗಳಾಗಿ, ನಿಮ್ಮ ಕುಟುಂಬದ ಆರೋಗ್ಯದ ವಿಷಯದಲ್ಲಿ ಆರೋಗ್ಯ ಹಿತೈಷಿಗಳಾಗಿ. ಬನ್ನಿ, ನಾವೆಲ್ಲಾ ಸೇರಿ ಇಂದೇ ಒಂದು ಸಣ್ಣ ಹೆಜ್ಜೆ ಇಡೋಣ. ಮನೆಯಲ್ಲಿ ಒಂದು ಮೂಲೆಯನ್ನು “home ಕ್ಲಿನಿಕ್” ಆಗಿ ಮಾಡಿ, 2 ಜನರಿಗೆ ಪ್ರಥಮ ಚಿಕಿತ್ಸಾ ತರಬೇತಿ ಕೊಡಿಸಿ. ನಿಮ್ಮ ಒಂದು ನಿರ್ಧಾರ ನಾಳೆ ಯಾರದ್ದೋ ಜೀವ ಉಳಿಸಬಹುದು.
ಬನ್ನಿ, ಕೊಡಗಿನ ಪ್ರತಿಯೊಂದು ದೊಡ್ಡ ಮನೆಯೂ “ಜೀವ ಉಳಿಸುವ ಒಂದು ಗಂಟೆಯ ಸೇತುವೆ” ಆಗಲಿ. “ವಯಸ್ಸಾದ ಕಾಲದ ಆಸರೆ” ಆಗಲಿ. ಬೆಳಗುವ ದೀಪದ ಜೊತೆಗೆ ಉಸಿರು ನೀಡುವ ಆಕ್ಸಿಜನ್ ಮತ್ತು ಆರೈಕೆಯ ಬೆಡ್ ಕೂಡ ಇರಲಿ. ಜೀವ ಉಳಿಸೋಣ, ಕೊಡಗನ್ನು ಸುರಕ್ಷಿತವಾಗಿಡೋಣ.

ಬೆಳಕು ನೀಡಿ, ಕತ್ತಲು ಮಾಡಬೇಡಿ ರಾತ್ರಿ ರಸ್ತೆ ಸುರಕ್ಷತೆ ಕಾಪಾಡಿ.. ಕೊಡಗಿನತ್ತ ಕಾಳಜಿ ಇರಲಿ…







