ಬೆಳಕು ನೀಡಿ, ಕತ್ತಲು ಮಾಡಬೇಡಿ ರಾತ್ರಿ ರಸ್ತೆ ಸುರಕ್ಷತೆ ಕಾಪಾಡಿ.. ಕೊಡಗಿನತ್ತ ಕಾಳಜಿ ಇರಲಿ…
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-21

ಕೊಡಗಿನಲ್ಲಿ ಪ್ರವಾಸೋದ್ಯಮ ಜಿಗಿತುಕೊಂಡ ಬಳಿಕ ವಾಹನ ದಟ್ಟಣೆ ಹೆಚ್ಚಾಗಿದೆ.. ಆದರೆ ಇಲ್ಲಿನ ರಸ್ತೆಗಳ ವಿಸ್ತೀರ್ಣ ಹೆಚ್ಚಾಗಿಲ್ಲ.. ಹೀಗಾಗಿ ಅಪಾಯಕಾರಿ, ಗುಂಡಿ ಬಿದ್ದ ತಿರುವಿನ ರಸ್ತೆಗಳಲ್ಲಿ ಸಂಚರಿಸುವುದು ಬಹುದೊಡ್ಡ ಸವಾಲ್.. ಹೀಗಿರುವಾಗ ರಾತ್ರಿ ಸಂಚಾರ ಅದೆಷ್ಟು ಕಠಿಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ… ಈ ಬಗ್ಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪರವರು ಬರೆದಿದ್ದಾರೆ...
ಕೊಡಗಿನ ರಾತ್ರಿ ರಸ್ತೆಗಳು ಸುಂದರವಾದಷ್ಟೇ ಅಪಾಯಕಾರಿಯೂ ಹೌದು. ಕಿರಿದಾದ ರಸ್ತೆಗಳು, ದೊಡ್ಡ ದೊಡ್ಡ ಟರ್ನ್ಗಳು, ಮಳೆ,ಮಂಜು. ಇಂತಹ ಸಮಯದಲ್ಲಿ ನಮ್ಮ ಸುರಕ್ಷತೆಯನ್ನು ನಿರ್ಧರಿಸುವುದು ಒಂದು ಚಿಕ್ಕ ಸ್ವಿಚ್ – ಹೆಡ್ಲೈಟ್. ಇತ್ತೀಚೆಗೆ ಈ ರಸ್ತೆಗಳಲ್ಲಿ ಒಂದು ಹೊಸ ಹಾವಳಿ ಹೆಚ್ಚಾಗಿದೆ. ಅದು ಅತಿಯಾದ ಹೈಬೀಮ್ ಮತ್ತು ಪ್ರಖರ LED ಲೈಟ್ಗಳ ಬಳಕೆ. ರಾತ್ರಿ ಹೊತ್ತು ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಈ ಅನುಭವ ಇದೆ. ಕೆಲವು ಬಸ್ ಗಳಲ್ಲಂತೂ ಮದುವೆಗೆ ಸಿಂಗಾರ ಮಾಡಿದ ಮಂಟಪದಂತೆ ಸೀರಿಯಲ್ ಲೈಟ್ ಅಳವಡಿಸಿರುತ್ತಾರೆ.

ಎದುರಿನಿಂದ ಒಂದು ಬಸ್, ಟೆಂಪೋ ಟ್ರಾವೆಲರ್ ಅಥವಾ ಪ್ರವಾಸಿ ವಾಹನ ಬಂದಾಗ 2-3 ಸೆಕೆಂಡ್ ಕಣ್ಣೇ ಕಾಣಿಸುವುದಿಲ್ಲ. ಮುಂದೆ ರಸ್ತೆ ಇದೆಯಾ, ಟರ್ನ್ ಇದೆಯಾ, ಮನುಷ್ಯ ಇದ್ದಾನಾ ಏನೂ ಗೊತ್ತಾಗುವುದಿಲ್ಲ. ದೊಡ್ಡ ಟರ್ನ್ಗಳಲ್ಲಿ ಇದು ನೇರ ಅಪಘಾತಕ್ಕೆದಾರಿ. ಈ ಸಮಸ್ಯೆ ಕೇವಲ ಕೊಡಗಿಗೆ ಮಾತ್ರ ಸೀಮಿತವಲ್ಲ. ಇದು ರಾಜ್ಯದ ಹೆದ್ದಾರಿಗಳು, ಕೇರಳ ಗಡಿ ರಸ್ತೆಗಳು, ಮಲೆನಾಡು ಸೇರಿದಂತೆ ಎಲ್ಲೆಡೆ ಇದೆ. ಆದರೆ ಕೊಡಗಿನಂತಹ ಕಿರಿದಾದ ರಸ್ತೆಗಳು ಮತ್ತು ನಿರಂತರ ಟರ್ನ್ಗಳಿರುವ ಜಾಗದಲ್ಲಿ ಇದರ ಪರಿಣಾಮ ಇನ್ನೂ ತೀವ್ರ.

ಖಾಸಗಿ ಬಸ್ಗಳು, ಟೆಂಪೋ ಟ್ರಾವೆಲರ್ಗಳು ಮತ್ತು ಕೆಲವು ವಾಣಿಜ್ಯ ವಾಹನಗಳಲ್ಲಿ ಅಲಂಕಾರಕ್ಕಾಗಿ ಹೆಚ್ಚುವರಿ LED ಲೈಟ್ಗಳನ್ನು ಅಳವಡಿಸಲಾಗುತ್ತಿದೆ. ಸರ್ಕಾರಿ ಬಸ್ಗಳು ಸಾಮಾನ್ಯ ಲೈಟ್ನಲ್ಲಿ ಓಡುವಾಗ ಇವು ಅತಿ ಪ್ರಖರ ಬೆಳಕಿನಿಂದ ಓಡಾಡುತ್ತವೆ. ಈ ವ್ಯತ್ಯಾಸವೇ ದೊಡ್ಡ ಅಪಾಯಕ್ಕೆ ಕಾರಣವಾಗುತ್ತಿದೆ. ಸ್ಥಳೀಯ ವಾಹನಗಳು, ಹೊರ ರಾಜ್ಯದಿಂದ ಬರುವ ವಾಹನಗಳು, ಪ್ರವಾಸಿ ವಾಹನಗಳು – ಎಲ್ಲರಲ್ಲೂ ಈ ಅಭ್ಯಾಸ ಕಾಣುತ್ತಿದೆ. ಹಾಗಾಗಿ ಇದು ಯಾರದ್ದೋ ತಪ್ಪು ಎಂದು ಹೇಳುವುದಕ್ಕಿಂತ, ಇದು ನಾವೆಲ್ಲರೂ ಸರಿಪಡಿಸಬೇಕಾದ ಸಾಮಾಜಿಕ ಸಮಸ್ಯೆ.

ಎಲ್ ಇಡಿ ಲೈಟ್ಗಳ ಪ್ರಖರತೆ ರಾತ್ರಿ ಸಮಯದಲ್ಲಿ ಎದುರಿಗೆ ಬರುವ ವಾಹನ ಸವಾರರ ಪ್ರಾಣಕ್ಕೆ ಸಂಕಟವಾಗಿದೆ. ರಾತ್ರಿ ಕೆಲಸ ಮುಗಿಸಿ ಬರುವವರು, ವಿದ್ಯಾರ್ಥಿಗಳು, ರೈತರು, ವಯಸ್ಸಾದವರು ಈ ಬೆಳಕಿನಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ತಂತ್ರಜ್ಞಾನದ ಬೆಳವಣಿಗೆ ಒಳ್ಳೆಯದು. ಆದರೆ ಅದನ್ನು ಜವಾಬ್ದಾರಿಯಿಂದ ಬಳಸದಿದ್ದಾಗ ಅದು ಅಪಾಯವಾಗುತ್ತದೆ. ನನಗೆ ರಸ್ತೆ ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ಎದುರಿನವರ ಸುರಕ್ಷತೆಯನ್ನು ಮರೆಯುವುದು ಸರಿಯಲ್ಲ.

ಇದಕ್ಕೆ ತಕ್ಷಣ ಪರಿಹಾರ ಬೇಕು. ಮೊದಲನೆಯದಾಗಿ ವಾಣಿಜ್ಯ ವಾಹನಗಳಲ್ಲಿ ಅನಗತ್ಯ ಅಲಂಕಾರಿಕ LED ಲೈಟ್ಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಎರಡನೆಯದಾಗಿ ಖಾಸಗಿ ಬಸ್ಗಳು, ಟೆಂಪೋ ಟ್ರಾವೆಲರ್ಗಳು ಎಲ್ಲವೂ ಸರ್ಕಾರಿ ಬಸ್ ಗಳಂತೆ ಸಾಮಾನ್ಯ ಹೆಡ್ಲೈಟ್ ಮತ್ತು ಫಾಗ್ ಲೈಟ್ ಮಾತ್ರ ಹೊಂದಿರಬೇಕು. ಈ ಏಕರೂಪದ ನಿಯಮ ರಾಜ್ಯಾದ್ಯಂತ ಜಾರಿಯಾಗಬೇಕು. ಮೂರನೆಯದಾಗಿ RTO ಮತ್ತು ಪೊಲೀಸ್ ಇಲಾಖೆ ರಾತ್ರಿ ವೇಳೆ ವಿಶೇಷ ತಪಾಸಣೆ ನಡೆಸಿ, ಹೈಬೀಮ್ ಮತ್ತು ಅನಧಿಕೃತ ಲೈಟ್ ಬಳಸುವ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.

ರಸ್ತೆ ನಮ್ಮೆಲ್ಲರದು. ನಿಮ್ಮ ವಾಹನದ ಬೆಳಕು ಯಾರದ್ದೋ ದಾರಿ ತೋರಿಸಬೇಕು, ಯಾರದ್ದೋ ಕಣ್ಣನ್ನು ಕುರುಡು ಮಾಡಬಾರದು. ಒಂದು ಸೆಕೆಂಡ್ ಜವಾಬ್ದಾರಿ ಒಂದು ಜೀವವನ್ನು ಉಳಿಸಬಹುದು. ದೊಡ್ಡ ಟರ್ನ್ಗಳಲ್ಲಿ ಎಚ್ಚರ, ಲೋ ಬೀಮ್ನಲ್ಲಿ ಸುರಕ್ಷತೆ. ಬೆಳಕು ನೀಡಿ, ಕತ್ತಲು ಮಾಡಬೇಡಿ. ಸುರಕ್ಷಿತವಾಗಿ ಚಲಾಯಿಸಿ, ಸುರಕ್ಷಿತವಾಗಿ ಮನೆಗೆ ತಲುಪೋಣ.
ಕಾವೇರಿ ಕಣ್ಣೀರು… ಕಾವೇರಿ ನದಿಯನ್ನು ಸಂರಕ್ಷಿಸದಿದ್ದರೆ ನಮ್ಮ ಪೂಜೆಗೆ ಯಾವ ಅರ್ಥವೂ ಇರಲಾರದು!







