LatestNews

ಕುಶಾಲನಗರದಲ್ಲಿ ನೀಟ್ ಅಕ್ರಮ,ರಾಹುಲ್ ಗಾಂಧಿ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಕುಶಾಲನಗರ (ಆರ್ ಹೆಚ್):  ನೀಟ್ ಪ್ರಶ್ನೆಪತ್ರಿಕೆ ಸೋರಿಕೆ,ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಂಧನ ಹಾಗೂ ವಿದ್ಯಾರ್ಥಿಗಳ ಮೇಲೆ‌ ಲಾಠಿ ಚಾರ್ಜ್ ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನೀಟ್ ನ ಪ್ರಶ್ನೆ‌ಪತ್ರಿಕೆಯ‌ ನಿರಂತರ ಸೋರಿಕೆಯ ಅಕ್ರಮದ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಅಗ್ರಹಿಸಿ ಆಂದೋಲನ ನಿರತ ವಿದ್ಯಾರ್ಥಿ ಹಾಗೂ ಪೋಷಕರ ವಿರುದ್ದ ಪೈಶಾಚಿಕ ದಾಳಿ ನಡೆಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು ನರೇಂದ್ರ ಮೋದಿ, ಅಮಿತ್ ಶಾ ವಿರುದ್ದ ಧಿಕ್ಕಾರ ಕೂಗಿ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿದರು.  ಬಂಧನಕ್ಕೆ‌ ಒಳಪಡಿಸಿರುವ ವಿದ್ಯಾರ್ಥಿಗಳ ಬಿಡುಗಡೆಗೆ ಆಗ್ರಹಿಸಿ ಮತ್ತು ‌ಅವರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು.

ಕುಶಾಲನಗರ ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನದ ಬಳಿಯಿಂದ‌ ನಡೆದ ಬೃಹತ್ ‌ಪ್ರತಿಭಟನಾ ಮೆರವಣಿಗೆ ರಥಬೀದಿ‌ ಮೂಲಕ ಹಳೆ ಮಾರುಕಟ್ಟೆ ರಸ್ತೆ, ಟೌನ್ ಕಾಲೋನಿ ಮೂಲಕ ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಆಗಮಿಸಿತು.

ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ದೇಶಾದ್ಯಂತ ಬಿಜೆಪಿ ಸರಕಾರದ ವಿರುದ್ದ ಜನತೆ ಆಕ್ರೋಶ ಭರಿತರಾಗಿದ್ದಾರೆ. ಹಲವು ಹಗರಣಗಳಿಂದ ರೋಸಿಹೋಗಿದ್ದಾರೆ. ಜನವಿರೋಧಿ‌ ಮೋದಿ ಸರಕಾರ ಕಿತ್ತೊಗೆದು ಜನಪರವಾಗಿ‌ ಬೀದಿಗಿಳಿದು ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿಯನ್ನು ದೇಶದ ಮುಂದಿನ ಪ್ರಧಾನಿಯಾಗಿಸಬೇಕಿದೆ ಎಂದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮೋದಿ ಸರಕಾರವನ್ನು ಪ್ರಶ್ನಿಸುವವರ, ಹೋರಾಟ, ಚಳುವಳಿಗಳನ್ನು ಹಮ್ಮಿಕೊಳ್ಳುವವರಿಗೆ ಒಂದೊಂದು ಹಣೆಪಟ್ಟಿ ಕಟ್ಟಿ ಅವರ ಸದ್ದಡಗಿಸುವ ದಮನಕಾರಿ‌ ನೀತಿಯನ್ನು ಬಿಜೆಪಿ ಸರಕಾರ ಅನುಸರಿಸುತ್ತಿದೆ. ಮುಸಲ್ಮಾನರ ವಿರುದ್ದವಾಗಿ ಹಿಂದೂಗಳನ್ನು ಎತ್ತಿಕಟ್ಟಿ ದೀರ್ಘಾವಧಿಗೆ ದೇಶ ನಡೆಸಬೇಕೆನ್ನುವ ಹುನ್ನಾರ, ಚಿಂತನೆ ಫಲಕೊಡುವುದಿಲ್ಲ ಎಂದರು.

ಮುಖಂಡರಾದ ನಾಪಂಡ ಮುತ್ತಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಮತ್ತೊಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಎನ್ಎಸ್ ಯುಐ ನ ಬಸವರಾಜು ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಮೋದ್ ಮುತ್ತಪ್ಪ, ವಿ.ಎಸ್.ಆನಂದ್ ಕುಮಾರ್, ಶಾಜಿ,ಸುನೀತಾ ಮಂಜುನಾಥ್, ಜೆ.ಫಿಲೋಮಿನಾ, ಪ್ರೇಮಲೀಲಾ, ಕರೀಂ, ಎಸ್.ಎಸ್.ಚಂದ್ರಶೇಖರ್, ಇರ್ಫಾನ್, ಅಜೀಜ್, ಶಶಿಭೀಮಯ್ಯ, ದಾಮೋದರ್, ಮೂರ್ತಿ, ಮೋಹನ್, ನವೀನ್ ಕುಮಾರ್, ಗೋವಿಂದಪ್ಪ, ಬಸವನಹಳ್ಳಿ ಚಂದ್ರಶೇಖರ್, ಕಾಂಗ್ರೆಸ್ ನ ವಿವಿಧ ಘಟಕ, ಸಮಿತಿಗಳ ಪದಾಧಿಕಾರಿಗಳು, ಮಾಜಿ ಜನಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

admin
the authoradmin

Leave a Reply