ನಂಜನಗೂಡು: ಬೈಕ್ ಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಂಜನಗೂಡು -ಹುಲ್ಲಹಳ್ಳಿ ರಸ್ತೆ ಯ ಕೊಂಗಳ್ಳಿ ಗೇಟ್ ಬಳಿ ನಡೆದಿದೆ.
ಘಟನೆಯಲ್ಲಿ ಹುಲ್ಲಹಳ್ಳಿ ನಿವಾಸಿಗಳಾದ ಹಾಲಿನ ಬಸವಣ್ಣ ಮತ್ತು ಪರ್ವೀಜ್ ಎಂಬುವರೇ ಮೃತ ಪಟ್ಟ ದುರ್ದೈವಿಗಳು. ಮೃತ ಬಸವಣ್ಣ ಮತ್ತು ಪರ್ವೀಜ್ ಇಬ್ಬರು ತಮ್ಮ ಮೋಟಾರ್ ಬೈಕ್ ನಲ್ಲಿ ನಂಜನಗೂಡು ಕಡೆಯಿಂದ ಹುಲ್ಲಹಳ್ಳಿಗೆ ಹೋಗುತ್ತಿದ್ದರು ಎನ್ನಲಾಗಿದೆ.
ಇದೇ ಸಂದರ್ಭ ಹುಲ್ಲಹಳ್ಳಿಯಿಂದ ನಂಜನಗೂಡು ಕಡೆಗೆ ಹೋಗುತ್ತಿದ್ದ ಗೂಡ್ಸ್ ಆಟೋ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದಿಂದ ಬಂದು ಮೋಟಾರ್ ಬೈಕ್ ಗೆ ಡಿಕ್ಕಿ ಹೊಡೆದಿರುವುದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಅಲ್ಲದೆ, ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಲ್ಟಿ ಹೊಡೆದಿದೆ. ಆದರೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಬಸವಣ್ಣ ನೆಲಕ್ಕುರುಳಿ ಬಿದ್ದು ಸ್ಥಳದಲ್ಲೇ ಮೃತ ಪಟ್ಟರೆ ಮತೊಬ್ಬ ಪರ್ವೀಜ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಕೊನೆಯುಸಿರೆಳಿದಿದ್ದಾರೆ.
ಇನ್ನು ಆಟೋದಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು ಅವರನ್ನು ನಂಜನಗೂಡು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಕೃಷ್ಣಕಾಂತ ಕೋಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡು ಮೃತ ವ್ಯಕ್ತಿಯ ಶವವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.








