Latest

ದೇಶದ ವೀರ ಸೈನಿಕರು – ನಮ್ಮ ಹೆಮ್ಮೆ, ನಮ್ಮ ಶಕ್ತಿ, ನಮ್ಮ ಪ್ರೇರಣೆ… ಕಾಲ ಬದಲಾಗಿದೆ, ದೇಶದ ನಿಲುವೂ ಬದಲಾಗಿದೆ..

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-26

ಗಡಿಯಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕಾವಲು ಕಾಯುತ್ತಿರುವ ನಮ್ಮ ಯೋಧರೇ ಇಂದು ನಾವು ಮನೆಯಲ್ಲಿ ನೆಮ್ಮದಿಯಾಗಿ ಬದುಕಲು ಕಾರಣ. ಅವರು ತಮ್ಮ ಮನೆ-ಮನ, ಹಬ್ಬ-ಸಂಕ್ರಾಂತಿ, ಮಗುವಿನ ಮೊದಲ ಹೆಜ್ಜೆ ಎಲ್ಲವನ್ನೂ ತ್ಯಾಗ ಮಾಡಿ ದೇಶವನ್ನೇ ದೇವರು ಎಂದು ಆರಾಧಿಸುತ್ತಾರೆ. ಸಿಯಾಚಿನ್ ನ ಮಂಜುಗಡ್ಡೆಯಿಂದ ಹಿಡಿದು ಕಚ್ಚ್‌ನ ಮರುಭೂಮಿಯವರೆಗೆ, ಪ್ರತಿ ಗಡಿಯಲ್ಲೂ ಅವರು ಜೀವಂತ ಕೋಟೆಯಂತೆ ನಿಂತಿದ್ದಾರೆ. ಅವರ ಸಮವಸ್ತ್ರದ ಹಿಂದೆ ಇರುವುದು ಕೇವಲ ಶಿಸ್ತಲ್ಲ, ಅಪಾರವಾದ ದೇಶಭಕ್ತಿ ಮತ್ತು ಅಚಲವಾದ ತ್ಯಾಗ ಇದೆ.

ಕಾಲ ಬದಲಾಗಿದೆ, ದೇಶದ ನಿಲುವೂ ಬದಲಾಗಿದೆ. ಮುಂಚೆ ಯುದ್ಧದ ಸಂದರ್ಭದಲ್ಲೂ ಒಂದು ಗುಂಡು ಹಾರಿಸಲು ಸರ್ಕಾರದ ಅನುಮತಿಗಾಗಿ ಕಾಯಬೇಕಾದ ಪರಿಸ್ಥಿತಿ ಇತ್ತು. ಇದರಿಂದ ನಮ್ಮ ಸೈನಿಕರ ಕೈ ಕಟ್ಟಿಹಾಕಿದಂತಾಗಿತ್ತು. ಆದರೆ ಇಂದು ಗಡಿಯಲ್ಲಿ ಏನೇ ಸಮಸ್ಯೆ ಆದರೂ ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಸೈನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ದಿಟ್ಟ ನಿರ್ಧಾರದಿಂದ ಶತ್ರುಗಳಿಗೆ ಸಂದೇಶ ಸ್ಪಷ್ಟವಾಗಿದೆ.

“ಭಾರತದ ಸೈನಿಕ ಈಗ ಇನ್ನಷ್ಟು ಬಲಶಾಲಿ ಮತ್ತು ಸ್ವತಂತ್ರ”. ಇದರ ಜೊತೆಗೆ ಬುಲೆಟ್ ಪ್ರೂಫ್ ಜಾಕೆಟ್, ಆಧುನಿಕ ಹೆಲ್ಮೆಟ್, ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು “ಮೇಕ್ ಇನ್ ಇಂಡಿಯಾ” ಅಡಿಯಲ್ಲಿ ಸೈನಿಕರನ್ನು ತಲುಪುತ್ತಿವೆ. ಉತ್ತಮ ರಕ್ಷಾ ಕವಚ ಮತ್ತು ಮುಕ್ತ ನಿರ್ಧಾರದ ಅಧಿಕಾರ ಎರಡೂ ಸಿಕ್ಕಾಗ ನಮ್ಮ ಯೋಧನ ಮನೋಸ್ಥೈರ್ಯ ಆಕಾಶವನ್ನೇ ಮುಟ್ಟುತ್ತದೆ. ಕಾರ್ಗಿಲ್‌ನಿಂದ ಗಾಲ್ವಾನ್‌ವರೆಗೆ ಪ್ರತಿ ಯುದ್ಧದಲ್ಲೂ ಅವರು “ನಾನು ಇರುವವರೆಗೆ ಧ್ವಜ ಕೆಳಗೆ ಬೀಳುವುದಿಲ್ಲ” ಎಂದು ಜಗತ್ತಿಗೆ ತೋರಿಸಿದ್ದಾರೆ.

ಯುದ್ಧದ ಹೊರತಾಗಿಯೂ ನಮ್ಮ ಸೈನಿಕರು ದೇಶದ ರಕ್ಷಕರಷ್ಟೇ ಅಲ್ಲ, ಸಂದರ್ಭದ ಸೇವಕರೂ ಆಗಿದ್ದಾರೆ. ಪ್ರವಾಹ, ಭೂಕಂಪ, ಕೊರೋನಾದಂತಹ ಮಹಾಮಾರಿ ಬಂದಾಗ ಮೊದಲು ಓಡಿ ಬಂದು ಜನರನ್ನು ರಕ್ಷಿಸಿದ್ದು, ಆಹಾರ-ಮದ್ದು ತಲುಪಿಸಿದ್ದು ಅವರೇ. ಅವರ ಸೇವೆ ಗಡಿಗೆ ಮಾತ್ರ ಸೀಮಿತವಲ್ಲ, ದೇಶದ ಪ್ರತಿಯೊಂದು ಸಂಕಷ್ಟದಲ್ಲೂ ಅವರು ನಮ್ಮ ಜೊತೆ ನಿಂತಿದ್ದಾರೆ.

ಕಾರ್ಗಿಲ್ ವಿಜಯ ದಿನ… ಹಿಮಗಡ್ಡೆಗಳ ಮೇಲೆ ಬರೆದ ರಕ್ತದ ಕಥೆ… ಯೋಧರಿಗೊಂದು ಸಲಾಮ್

ಆದರೆ ನಾವು ಇನ್ನೊಂದು ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಸೇನೆಯಲ್ಲಿ ವರ್ಷಗಟ್ಟಲೆ ದುಡಿದು, ದೇಶಕ್ಕೆ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಂದ ಮಾಜಿ ಸೈನಿಕರಿಗೆ ಮತ್ತು ಸೇನಾ ಅಧಿಕಾರಿಗಳಿಗೆ ನಾವು ಕೊಡಬೇಕಾದ ಗೌರವ ಇನ್ನೂ ಬಾಕಿ ಇದೆ. ಅವರು ಯುವಕರಾಗಿದ್ದಾಗ ಗಡಿ ಕಾಯ್ದರು, ಈಗ ಅವರ ಅನುಭವ ನಮ್ಮ ದೇಶಕ್ಕೆ ಬೇಕಾಗಿದೆ.

ಆಯಾ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಸಭೆ-ಸಮಾರಂಭಗಳು ನಡೆಯುವಾಗ ಸೈನಿಕರ ಮತ್ತು ಮಾಜಿ ಸೈನಿಕರ ಕಾರ್ಯವನ್ನು ನೆನೆದು ಅವರನ್ನು ಸನ್ಮಾನಿಸುವ ಕಾರ್ಯಕ್ರಮಗಳು ನಡೆಯಬೇಕು. ಅವರ ಎದೆಯ ಮೇಲಿನ ಪದಕಗಳು ಮತ್ತು ಅವರ ಕಥೆಗಳು ಕೇಳಿದಾಗ ಯುವಕರಲ್ಲಿ ದೇಶಭಕ್ತಿ ಸಹಜವಾಗಿ ಮೂಡುತ್ತದೆ. ಗ್ರಾಮದ ಸಭೆಯಲ್ಲಿ ಒಬ್ಬ ನಿವೃತ್ತ ಸೈನಿಕನನ್ನು ವೇದಿಕೆಗೆ ಕರೆದು ಗೌರವಿಸಿದಾಗ, ಅದನ್ನು ನೋಡುವ 18 ವರ್ಷದ ಹುಡುಗನಿಗೆ “ನಾನೂ ದೇಶಕ್ಕೆ ಏನಾದರೂ ಮಾಡಬೇಕು” ಎಂಬ ಕನಸು ಹುಟ್ಟುತ್ತದೆ. ಇದು ನಮ್ಮ ಸೇನೆಗೆ ಸಿಗುವ ಅತ್ಯಂತ ದೊಡ್ಡ ಪ್ರೇರಣೆ.

ಇದಕ್ಕಿಂತ ಮುಂದುವರಿದು ರಾಜಕೀಯ ರಂಗದಲ್ಲೂ ಅವರಿಗೆ ವಿಶೇಷ ಸ್ಥಾನಮಾನ ಸಿಗಬೇಕು. ರಾಜ್ಯಸಭೆಗೆ ಮತ್ತು ವಿಧಾನಪರಿಷತ್ತಿಗೆ ನಾಮಿನೇಟ್ ಮಾಡುವ ಸಂದರ್ಭದಲ್ಲಿ ಒಬ್ಬ ಮಾಜಿ ಸೈನಿಕರಿಗೆ ಅಥವಾ ಮಾಜಿ ಸೇನಾ ಅಧಿಕಾರಿಗಳಿಗೆ ವಿಶೇಷ ಮೀಸಲು ಸ್ಥಾನ ನೀಡುವ ವ್ಯವಸ್ಥೆ ಆಗಬೇಕು. ಯಾಕೆಂದರೆ ಗಡಿಯಲ್ಲಿ ದೇಶದ ನೀತಿ ರೂಪಿಸುವಲ್ಲಿ ಅವರು ಪ್ರಾಣ ಕೊಟ್ಟಿದ್ದಾರೆ. ಇಂದು ದೇಶದ ನೀತಿ ನಿರೂಪಣೆಯಲ್ಲಿ, ಸಂಸತ್ತಿನಲ್ಲಿ, ವಿಧಾನಮಂಡಲದಲ್ಲಿ ಅವರ ಅನುಭವದ ಧ್ವನಿ ಕೇಳಿಸಬೇಕು. ಗಡಿಯಲ್ಲಿ ದೇಶ ಕಾಯಿದ ಕೈಗಳು ಈಗ ದೇಶದ ಕಾನೂನು ರೂಪಿಸುವಲ್ಲಿಯೂ ಇರಬೇಕು. ಇದು ಭಾರತದ ಪ್ರತಿಯೊಬ್ಬ ಸೈನಿಕನಿಗೆ ಸಿಗುವ ಅತ್ಯುನ್ನತ ಗೌರವ ಮತ್ತು ಮುಂದಿನ ಪೀಳಿಗೆಗೆ ಸಿಗುವ ಅತಿದೊಡ್ಡ ಸ್ಪೂರ್ತಿ ಆಗುತ್ತದೆ.

ಕಾರ್ಗಿಲ್ ವಿಜಯೋತ್ಸವ… ನಮ್ಮ ಯೋಧರಿಗೊಂದು ಸಲ್ಯೂಟ್… ನಮ್ಮ ದೇಶ… ನಮ್ಮ ಹೆಮ್ಮೆ!
ಅವರು ನಮಗೆ ಸ್ವಾತಂತ್ರ್ಯ ಕೊಡಲು ತಮ್ಮ ಯೌವನವನ್ನೇ ಅರ್ಪಿಸಿದ್ದಾರೆ. ನಾವು ಅವರಿಗೆ ಗೌರವ ಕೊಟ್ಟು, ಸ್ಥಾನಮಾನ ಕೊಟ್ಟು ಆ ಋಣ ತೀರಿಸೋಣ. ಅವರ ಕುಟುಂಬಗಳಿಗೆ ಆಸರೆಯಾಗೋಣ, ಅವರ ಸಲಹೆಗಳನ್ನು ಆಡಳಿತದಲ್ಲಿ ಬಳಸಿಕೊಳ್ಳೋಣ. ಸೈನಿಕನ ಕೈಯಲ್ಲಿ ಗನ್ ಬಲವಾಗಿದ್ದರೆ ದೇಶದ ಗಡಿ ಬಲವಾಗಿರುತ್ತದೆ.  ಮಾಜಿ ಸೈನಿಕನಿಗೆ ಸಭೆಯಲ್ಲಿ ಸ್ಥಾನ ಸಿಕ್ಕರೆ ದೇಶದ ನೀತಿ ಬಲವಾಗಿರುತ್ತದೆ.

ನಮ್ಮ ವೀರ ಯೋಧರಿಗೆ ಮತ್ತು ಮಾಜಿ ಹಾಗೂ ಹಾಲಿ ಯೋಧರಿಗೆ ಶತಕೋಟಿ ಸಲಾಂ. ಜೈ ಹಿಂದ್, ಜೈ ಭಾರತ್

admin
the authoradmin

Leave a Reply