ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು, ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.
71- ಕೃತಿ: ಇವನೊಬ್ಬ ಬೇರೆ ಹುಟ್ಟಿದ (ಕವನ ಸಂಕಲನ)
ಕರ್ತೃ: ಭಗತರಾಜ ನಿಜಾಮಕಾರ
ಕಳೆದ ದಶಕದಿಂದ ಈಚೆಗೆ ಹೊಸದಾಗಿ ಸೇರ್ಪಡೆಯಾದ ಯುವ ಕವಿಗಳಲ್ಲಿ ಭಗತರಾಜ ನಿಜಾಮಕಾರನೂ ಒಬ್ಬರು. ಈವರೆಗೆ ಇವರ ಅದೆಷ್ಟು ಕೃತಿಗಳು ಬಿಡುಗಡೆಯಾಗಿವೆ ಎಂಬುದರ ಮಾಹಿತಿ ಇಲ್ಲ. ಅದೇನೇ ಇರಲಿ “ಇವನೊಬ್ಬ ಬೇರೆ ಹುಟ್ಟಿದ” ಕವನ ಸಂಕಲನದೊಳಗಿನ ಕೆಲವು ಉದಾಹರಣೆ:….. ಈಗ ಕವನಗಳು
(‘ಈಗಿನ ಕವನಗಳು’ಎಂದು ಇದ್ದಿದ್ದರೆ ಹೆಚ್ಚು ಅರ್ಥ ಇರುತ್ತಿತ್ತು?)
ಹೆಣ್ಣಿನ ಎದೆಯ ಮೇಲೆ (‘ಹೆಣ್ಣಿನೆದೆಮೇಲೆ’ಎಂದಿದ್ದರೆ ಸರಿ ಇರ್ತ್ತಿತ್ತು?)
ಉಗುರಿನಿಂದ ಚಿತ್ತಾರ ಬಿಡಿಸುವುದಕ್ಕಲ್ಲ (‘ಉಗುರಿಂದ’ ಎಂದಿದ್ದರೆ ಅರ್ಥ ಬರುತ್ತಿತ್ತು)
ಮುಖವಾಡಗಳ ಎದೆ ಸೀಳಿ
(‘ಎದೆಸೀಳಿ’ ಒಂದೇ ಸಾಲಿನಲ್ಲಿದಿದ್ದರೆ…?)
ಗುಂಡಿಗೆ ತುಂಬ
ನಮ್ಮ ಧ್ವನಿ ತುಂಬಿ
(“ನೊಂದವರ ದನಿ…”ಎಂದು ಬರೆದಿದ್ದರೆ ಹೆಚ್ಚಿನ ಅರ್ಥವಿರ್ತ್ತಿತ್ತು?)
ಅಕ್ಷರಗಳು ಮೂಡಿಸಬೇಕಾಗಿದೆ
(‘ಅಕ್ಷರಗಳನ್ನು ಕೆತ್ತಬೇಕಾಗಿದೆ’ ಎಂದಿದ್ದರೆ ಢಿಚ್ಚಿ ಹೊಡೆದಂತೆ ಇರುತ್ತಿತ್ತು?)
ಕಾವ್ಯ ಪ್ರಯೋಗದಲ್ಲಿ ‘ಕ್ರಾಂತಿ ಭಾವನೆ’ ಎದ್ದುಕಾಣುತ್ತದೆ ಆದರೂ ಕನ್ನಡಭಾಷಾ ಪ್ರಯೋಗದಲ್ಲಿ ‘ಜೋಶ್-ಪಂಚ್’ ಎದ್ದು ಕಾಣಿಸುತ್ತಿಲ್ಲ. ಹೀಗಾಗಿ ಗಟ್ಟಿತನವು ಸೊನ್ನೆ ಆಗಿ, ಗಾಳಿ ಊದಿದ ಬಲೂನ್ ಥರ ಠುಸ್ ಆಗಬಹುದು, ಎನಿಸುತ್ತದೆ. ಬಾಲಕವಿ ಭಗತರಾಜರ ಕವನಗಳಲ್ಲಿ, ಈಗತಾನೇ ಪದ್ಯ ಬರೆಯಲು ಹೊರಟ ಹೊಸಬರಲ್ಲಿ ಇರಬಹುದಾದ ಗುಣದೋಷ ಕಂಡರೂ ಸಹ ಶ್ರೀಯುತರು ಇನ್ನೂ ಬೆಳೆಯಬೇಕಾಗಿದೆ ಅಥವ ಬೆಳೆಯುವ ಕವಿಯಾಗಲು ಪ್ರಯತ್ನ ಪಡುತ್ತಿದ್ದಾರೆ ಎಂಬುದನ್ನು ದೃಢಪಡಿಸುವ ಕೆಲವು ಕವಿತೆಗಳು ಇದರಲ್ಲಿವೆ, ಎಂದಷ್ಟೇ ಹೇಳಬಹುದು.
(1982ನವೆಂಬರ್’ಗ್ರಂಥಲೋಕ’ಮಾಸಿಕದ ‘ಗ್ರಂಥಲೋಕದ ಮೂಸೆಯಲ್ಲಿ’ ಅಂಕಣದಲ್ಲಿ ಪ್ರಕಟಿತ)
72-ಕೃತಿ : ಕಾವ್ಯಕನ್ನಿಕೆಯ ಸೆರಗುಸರಿಸಿ (ಕವನ ಸಂಕಲನ)
ಕರ್ತೃ: ಆರ್.ಕೆ. ಮಣಿಪಾಲ
‘ಕಾವ್ಯ ಕನ್ನಿಕೆಯ ಸೆರಗು ಸರಿಸಿ’ ಎಂಬ ಶೀರ್ಷಿಕೆಯೇ ಆಕರ್ಷಕವಾಗಿದ್ದು ಹದಿಹರೆಯದ ಹುಡುಗ-ಹುಡುಗೀರ ಅಥವ ಪಡ್ಡೆ ವಯಸ್ಸಿನ ಓದುಗರ ಗಮನ ಸೆಳೆಯುತ್ತದೆ. ಹಾಗಾಗಿ ಇದರೊಳಗೆ ಇಣುಕಿ ನೋಡಿದಾಗ ಕಂಡುದು:
ಒಂದೊಂದು ಕ್ಷಣದ ಯುವ ಭಾವನೆಗಳನ್ನು ಪುಟ್ಟಪುಟ್ಟ ಕವಿತೆಗಳಲ್ಲಿ ಅಭಿವ್ಯಕ್ತ ಪಡಿಸಿರುವ ಲೇಖಕ ಆರ್ಕೆ. ಮಣಿಪಾಲರವರು ಪುಸ್ತಕದ ಶೀರ್ಷಿಕೆಗೆ ಅನುಗುಣವಾಗಿ ಇಚ್ಛೆಪಟ್ಟು ಬಂದ ಅಥವ ಸನಿಹ ಬಯಸಿ ಬಂದ ಓರ್ವಳಿಗೆ ಬರೆದುದು ಇಂತಿದೆ:
“ಒಬ್ಬೊಬ್ಬರಿಗೆ
ಅರ್ಧರ್ಧ ಮೊಲೆ ಅರ್ಪಿಸಿ
ಮುತ್ತು ಸಹಿತ ಉದುರುವ
ಬ್ರಾ ಬಿಡಿಸಿ
ಆ ಸುಂದರಿಯ ಲಂಗದ ಮಡಿಕೆ
ಹಸಿ ಹಸಿ ಹುಡುಗಿ
ತೊಡೆ ಜಗತ್ತಿಗೆ ಇಳಿದು ಬರುತ್ತದೆ…..”
ಹೀಗೆಲ್ಲಾ ಬರೆದ ಲೇಖಕರು, ಹೆಣ್ಣಿನ ಅಂಗಾಂಗಗಳ ಸುತ್ತಾ ಸುತ್ತುವ ಹನಿಗವನಗಳಲ್ಲಿ; ಯಾವುದೇ ಸಾಮಾಜಿಕ ಕಳಕಳಿಯಾಗಲೀ, ಸಭ್ಯತೆಯ ಕಾಳಜಿಯಾಗಲೀ ಕಂಡು ಬರುವುದಿಲ್ಲ. ಆದರೆ ಯೌವ್ವನದ ಹೊಸ್ತಿಲಲ್ಲಿರುವ ಅ- ಸಂಸ್ಕೃತಿ ಗಂಡು-ಹೆಣ್ಣುಗಳ ಬಾಯಲ್ಲಿ ನೀರೂರಿಸುವ, ಮೈಯಲ್ಲಿ ಖಾವೇರಿಸುವ ಸಫಲತೆ ಕಾಣಬಹುದು. ಇಂತಹ ಪುಸ್ತಕಗಳ ಆಯಸ್ಸು-ಶ್ರೇಯಸ್ಸು ಬಹಳ ಕಡಿಮೆ ಇರುತ್ತದೆ?!
(1982ನವೆಂಬರ್ ಗ್ರಂಥಲೋಕ ಮಾಸಪತ್ರಿಕೆ ‘ಗ್ರಂಥಲೋಕದ ಮೂಸೆಯಲ್ಲಿ’ ಶೀರ್ಷಿಕೆಯಡಿ ಪ್ರಕಟ.
73-ಕೃತಿ: ವಚನ ತತ್ವಸಾರ
ಕರ್ತೃ : ಸಿದ್ದರಾಮೇಶ್ವರ ಶರಣರು
೧೦೧ ವಚನಗಳನ್ನು ಭಾವಾರ್ಥ ಸಹಿತ ರಚಿಸಿರುವ ಕೃತಿಯೆ ಈ ವಚನ ತತ್ವಸಾರ. ಬಹುತೇಕ ಶರಣರು ತಮ್ಮ ವಚನಗಳನ್ನು ಜನರು ಆಡುವ ಸರಳ ಭಾಷೆಯಲ್ಲಿ ಬರೆದಿದ್ದಾರೆ. ಇಷ್ಟಕ್ಕೇ ತೃಪ್ತಿಯಾಗದ ಸಿದ್ದರಾಮೇಶ್ವರ ಶರಣರು ಪ್ರತಿಯೊಂದು ವಚನ ಸಾರವು ಪ್ರತಿಯೊಬ್ಬರಿಗೂ ಇಷ್ಟವಾಗುವಂಥ, ಅದರಲ್ಲೂ ಸಾಮಾನ್ಯ ಓದುಗನಿಗೆ ತಿಳಿಯುವಂಥ, ಮಕ್ಕಳಿಗೆ ಅರ್ಥ ಆಗುವಂಥ ಬಾಲಭಾಷೆಯಲ್ಲಿ ಬರೆಯುವ ಮೂಲಕ ಮತ್ತಷ್ಟು ತಿಳಿಗೊಳಿಸಿದ್ದಾರೆ.
ಕೆಲವು ಶರಣರ ಕಠಿಣ ವಚನಗಳ ಭಾವಾರ್ಥದ ಸಾರಾಂಶವನ್ನು ಸುಲಭಗೊಳಿಸಿದ್ದಾರೆ. ಬೇರೆಬೇರೆ ಶರಣರ 101 ವಚನಗಳನ್ನು ಆಯ್ದುಕೊಂಡು ಷಟ್ಸ್ಥಲಕ್ಕೆ ಅನುಗುಣವಾಗಿ ಹೊಂದಿಸಿ ಬರೆದಿದ್ದಾರೆ. ಶರಣರ ತತ್ವಗಳನ್ನು ಶ್ರೀಸಾಮಾನ್ಯರ ತನುಮನಕ್ಕೆ ತಲುಪಿಸುವ ದೂರದೃಷ್ಟಿಯಿಂದ ರಚಿಸಿರುವುದು ಕಂಡು ಬರುತ್ತದೆ. ಧಾರ್ಮಿಕ ಸಮುದಾಯದ ಹಿನ್ನೆಲೆಯಲ್ಲಿ ನೂರಾರು ವರ್ಷಗಳಿಂದ ಹಾಸುಹೊಕ್ಕ ನೀತಿಯನ್ನು ಸರಳ ಹಾಗೂ ಸುಲಭ ಭಾವಾರ್ಥ ಗದ್ಯದೊಂದಿಗೆ ವಿವರಿಸಿದ್ದಾರೆ.
ಹಲವು ಸಲ ಪರಿಭಾಷಿಕ ಪದಗಳ ಅರ್ಥ ವಿವರಣೆ ನೀಡುವಲ್ಲಿ ಸೋತಿದ್ದಾರೆ. ಹಲವಾರು ಅ-ಸಾಂಧರ್ಭಿಕ ವಚನಗಳ ಆಯ್ಕೆ ಕ್ರಮವು ಅರ್ಥವಾಗದು. ಅಷ್ಟಸ್ಥಲಕ್ಕಿಂತ ಮೊದಲು ನಮೂದಿಸಿರುವ ಸ್ಥಲದ ಅಂಕಿತಕ್ಕೆ ಆಧಾರವೇನು? ವಚನಗಳಿಗೆ ನೀಡಿದ ಹೆಸರುಗಳ ಪದಸಾಲು ಸಮರ್ಪಕವಾಗಿಲ್ಲ. ಕೆಲವೆಡೆ ಭಾವಾರ್ಥಕ್ಕಿಂತ ಹೆಚ್ಚಾಗಿ ವಿವರಣೆಯೇ ತುಂಬಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಮುದ್ರಾರಾಕ್ಷಸನ ಹಾವಳಿಯಿಂದ ಅಥವ ಮುದ್ರಣ ದೋಷದಿಂದ ಹೊರತಾಗಿಲ್ಲ! ಆದರೆ, ಲೇಖಕರ ಒಳ್ಳೆಯ ಉದ್ದೇಶ, ಪ್ರಾಮಾಣಿಕ ಪ್ರಯತ್ನ, ಶ್ಲಾಘನೀಯ ಎನ್ನಬಹುದು.
(ನವೆಂಬರ್ 19 “ಗ್ರಂಥಲೋಕ” ಮಾಸಪತ್ರಿಕೆಯ “ಗ್ರಂಥಲೋಕದ ಮೂಸೆಯಲ್ಲಿ” ಶೀರ್ಷಿಕೆಯಡಿ ಪ್ರಕಟಿತ)

74-ಕೃತಿ : ಮೃತ್ಯುಸಂಪುಟ (ಪತ್ತೇದಾರಿ ಕಥೆಗಳು)
ಕರ್ತೃ : ಪದ್ಮಕಾಂತ
ನಾಲ್ಕು ಬೇರೆ ಬೇರೆ ಪತ್ತೇದಾರಿ ಕಥೆಗಳುಳ್ಳ ‘ಮೃತ್ಯು ಸಂಪುಟ’ ಪುಸ್ತಕವು ಲೇಖಕ ಪದ್ಮಕಾಂತರವರ ಪ್ರಥಮ ಪ್ರಯತ್ನ. ಈ ಪುಸ್ತಕದ ಮುನ್ನುಡಿಯಲ್ಲಿ ಸ್ವಯಂ ಲೇಖಕರೇ ಹೇಳಿರುವಂತೆ ಇದೊಂದು ಹೊಸ ಬಗೆಯ ಪ್ರಯತ್ನವಂತೆ?
ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪದ್ಮಕಾಂತ ಹೇಳುತ್ತಾರೆ: ಇದರಲ್ಲಿರುವುದು ಇಂಗ್ಲಿಷ್ ಕಥೆಗಳ ಭಾಷಾಂತರ ಅಲ್ಲ, ಕೇವಲ ರೂಪಾಂತರ ಮಾತ್ರ-ಎಂದು. ಆದರೆ ಆಂಗ್ಲ ಭಾಷೆಯ ಮೂಲ ಕತೆಗಳ ಚೌಕಟ್ಟನ್ನು ಯಥಾವತ್ತಾಗಿ ಉಳಿಸಿಕೊಂಡು ಸಂಭಾಷಣೆ ಮತ್ತು ಪಾತ್ರಪೋಷಣೆ ಹಾಗೂ ಸನ್ನಿವೇಶ ಮತ್ತು ಕಥಾಹೆಣಿಕೆ ಇತ್ಯಾದಿಗಳನ್ನು ಮಾರ್ಪಾಡು ಮಾಡಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಸಹ ಈ ಪುಸ್ತಕವು ಅನುವಾದ ಖಂಡಿತ ಅಲ್ಲವಂತೆ? ಇಂಥ ನಿರ್ಧಾರ ಅಥವ ಘೋಷಣೆ ಯಾವ ಲೇಖಕನಿಗು ಉಚಿತ ಶೋಭೆಯಲ್ಲ, ಏಕಂದರೆ ನಕಲಿ ಸಾಹಿತ್ಯ ಎಂದಿಗೂ ನಿತ್ಯಸತ್ಯವಾಗೋಲ್ಲ!
ಸರ್ ಆರ್ಥರ್ ಕಾನನ್ ಡೈಲ್ ಅವರ ಇಂಗ್ಲಿಷ್ ಪತ್ತೇದಾರಿ ಕಾದಂಬರಿಗಳಲ್ಲಿ ಬರುವಂಥ ಶೆರ್ಲಾಕ್ ಹೋಮ್ಸ್ ಪಾತ್ರವನ್ನು ಮಿಸ್ಟರ್ ರಾವ್ ಪಾತ್ರವನ್ನಾಗಿಸಿ ಮತ್ತು ಡಾ.ವ್ಯಾಟ್ಸನ್ ಪಾತ್ರವನ್ನ ಸತ್ಯಂ ಪಾತ್ರವನ್ನಾಗಿಸಿ ತಮ್ಮದೇಆದ ವಿಪರೀತದ ಪರಿಸರವನ್ನೂ ಸೃಷ್ಟಿಸಿ ಓದುಗರನ್ನು ಯಾಮಾರಿಸೋ ಪ್ರಯತ್ನ ನಡೆದಿದೆ, ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ನಮ್ಮ ಪರಿಸರಕ್ಕಿಂತ ವಿಚಿತ್ರವಾದ ಮತ್ತು ವಿಭಿನ್ನವಾದ ಪರಿಸರವೊಂದನ್ನು ಕಂಡಾಗ ಒಮ್ಮೊಮ್ಮೆ ಇರಿಸುಮುರಿಸು ಆಗುತ್ತದೆ. ಹೀಗಿರುವಾಗ ಈ ನನ್ನ ಟೀಕೆ ಟಿಪ್ಪಣಿಯು ಸತ್ಯಕ್ಕೆ ಹತ್ತಿರವಾಗಿದೆ ಎಂಬುದನ್ನಂತೂ ಪ್ರಾಮಾಣಿಕ ಓದುಗರು ಒಪ್ಪಿಕೊಳ್ಳುವರು ಎಂಬ ಭರವಸೆ ನನಗಿದೆ. ಇಲವಾದರಿಲವೆನ್ನಿ ಹೌದಾದರೌದೆನ್ನಿ…!
(ನವಂಬರ್ 1982 ಗ್ರಂಥಲೋಕ ಮಾಸಪತ್ರಿಕೆಯಲ್ಲಿ ಪ್ರಕಟಿತ)
75-ಕೃತಿ : ಬಾಲಂಗೋಚಿ
ಕರ್ತೃ: ಕಿಕ್ಕೇರಿ ನಾರಾಯಣ
“ಬಾಲಂಗೋಚಿ”ಪುಸ್ತಕದ ಲೇಖಕರು ಕಿಕ್ಕೇರಿ ಎಂಬ ಪುಟ್ಟ ಗ್ರಾಮದವರು. ನನಗೆ ತಿಳಿದಂತೆ ನಾರಾಯಣರ ಹುಟ್ಟೂರು ಕಿಕ್ಕೇರಿ ಸೇರಿದಂತೆ ಮೈಸೂರು ಮತ್ತು ಪೂನ ಶಾಲಾ ವಿದ್ಯಾರ್ಥಿ ಆಗಿದ್ದಾಗಲೇ ಈತ ಬಲುಚೂಟಿ. ವಯಸ್ಕನಾದಮೇಲೆ ನಿರೀಕ್ಷೆಗೂ ಮೀರಿದ ಬುದ್ದಿವಂತ, ರಂಜಿಸುವ ಮಾತುಗಾರ, ವೈವಿಧ್ಯತೆಯ ಕಣಜ ಹಾಗೂ ಕ್ರಿಯೇಟಿವಿಟಿ ಕ್ವಾಲಿಟಿಯ ಟ್ರೆಶರಿ.
ಇವರ ಸಹಪಾಠಿಯೂ, ಮಿತ್ರನೂ, ಆಗಿದ್ದ ಖ್ಯಾತ ಸಾಹಿತಿ ವಿ.ಎನ್.ಲಕ್ಷ್ಮೀನಾರಾಯಣ್ ಜತೆಗೂಡಿ ಕ್ಷೇತ್ರಕಾರ್ಯ ಮಾಡುವ ಮೂಲಕ “ತುಂಬೆ ಹೂವಿಟ್ಟು ಶರಣೆನ್ನಿ” ಎಂಬ ಜಾನಪದ ಸಂಕಲನವನ್ನು ಆಗಿನ ಕಾಲದಲ್ಲೆ ಸಂಪಾದಿಸಿ ಪ್ರಕಟಿಸಿದ್ದ ಭೂಪ! ಜೇನುಕುರುಬರ ಕನ್ನಡ ಭಾಷೆಯ ಬಗ್ಗೆ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡಿದ ನಂತರ ಅವರದ್ದೇ ಭಾಷೆಯ ನಿಘಂಟು ಮತ್ತು ಪಠ್ಯಪುಸ್ತಕ ಸಿದ್ಧಪಡಿಸಿದ್ದ ಓರ್ವ ಅತಿಶಯ ಸಾಹಿತಿ!
ಇಂಥವರ ಒಂದು ನೀಳ್ಗತಾ ಪುಸ್ತಕವೇ, ‘ಬಾಲಂಗೋಚಿ’. ಲೇಖಕರ ಸ್ವ-ಅನುಭವಗಳ ಜತೆಗೆ ಬಾಲ್ಯದ (ಅಪ)ನಂಬಿಕೆ ಮುಗ್ಧಗ್ರಹಿಕೆ ಮೂಢನಂಬಿಕೆ ಇತ್ಯಾದಿಗಳಿಂದ ಹುಟ್ಟಿದ ಬಾಲ್ಯಾನುಭವ ಘಟನೆಗಳೆ ಇದರಲ್ಲಿರುವ ಕಥಾವಸ್ತು. ತಾವು ಹುಟ್ಟಿ ಬೆಳೆದ ಊರಲ್ಲಿ ಜರುಗುವ ಗಾಳಿಪಟದ ಹಬ್ಬ, ಊರದೇವರ ಹಬ್ಬ, ಪಕ್ಕದೂರಿನ ರಥೋತ್ಸವ, ಮನೆದೇವರ ಜಾತ್ರೆ, ಸೋಮವಾರ ಸಂತೆ ಮುಂತಾದ ವಿಶೇಷ ದಿನಗಳ ಸಡಗರ ಸಂಭ್ರಮದ ಬಗ್ಗೆ ಆಡುಭಾಷೆಯ ಚಿತ್ರಣ, ಗ್ರಾಮೀಣ ಭಾಷೆಯ ವರ್ಣನೆ ಅಮೋಘವಾಗಿದೆ. ಈ ಪೈಕಿ ಬದಗ ಮತ್ತು ಕೇಶೀ ಎಂಬ ಇಬ್ಬರು ತರುಣರ ಪಾತ್ರ ಪ್ರಮುಖ ಎನಿಸುತ್ತದೆ.
ಬದಗ ಮತ್ತು ಕೇಶೀ ನಡುವಣ ಸಂಬಂಧದ ಚರ್ಚೆಯು ಗಮನ ಸೆಳೆಯುತ್ತದೆ. ಊರಿನ ಹಬ್ಬದಂದು ಕೇಶೀ ಎಂಬುವನ ಮನದಲ್ಲಾಗುವ ಹೊಯ್ದಾಟ, ಮತ್ತು ಬದಗ ಎಂಬುವನ ಮನಸ್ಸಲ್ಲಾಗುವ ಬಡಿದಾಟ ಆಕರ್ಷಕ ಎನಿಸುತ್ತದೆ. ಕೇಶಿ ಮನೆಯವರು ಶಾಮಣ್ಣನಿಗೆ ಕಾಯುವುದು.ಸುಬೇದಾರ್ ರ ಮನೆ ಬಗ್ಗೆ ಮತ್ತು ಹಳ್ಳಿಯ ಬಗ್ಗೆಲ್ಲ ಪರಿಸರ ಸಮೇತ ವರ್ಣನೆಯಂತೂ ಅರ್ಥಪೂರ್ಣ ಆಗಿದ್ದು ಸ್ವಾತಂತ್ರ್ಯಪೂರ್ವ ಬ್ರಿಟಿಷ್ ಕಾಲದ ಕಥೆಗೆ ಬಣ್ಣಕಟ್ಟಿ ಬರೆದಿರುವುದು ಹೆಚ್ಚಿನ ಮಹತ್ವ ತಂದುಕೊಟ್ಟಿದೆ.
ಸಂಪ್ರದಾಯ ಆಚರಣೆ, ಸಾಮಾಜಿಕ ಪ್ರಕ್ರಿಯೆ, ಹಳ್ಳಿಜನರ ಚಿಂತನೆ, ಈ ಮೂರೂ ಪರಸ್ಪರ ಹೆಣೆದುಕೊಳ್ಳುವಂತೆ ಮಾಡಿರುವುದು ಬರವಣಿಗೆಯ ವಿಶೇಷ. ಜಾನಪದ ಭಾಷಾ ಪ್ರಯೋಗವು ಸಾಮಾನ್ಯದ್ದನ್ನೂ ಗಂಭೀರವನ್ನಾಗಿಸಿದೆ, ಪ್ರಾದೇಶಿಕ ವಿವರವು ವಿಫುಲವಾಗಿದೆ. ಎಲಕ್ಕಿಂತ ಮಿಗಿಲಾಗಿ ಮಂಡ್ಯ ಜಿಲ್ಲೆಯ ಕುಗ್ರಾಮದಲ್ಲಿನ ಒಂದು ಸಮುದಾಯದ ಜೀವಂತಿಕೆಯನ್ನು ಸದೃಢಪಡಿಸುತ್ತದೆ. ಒಂದೆರಡು ಸನ್ನಿವೇಶಗಳು ಸಪ್ಪೆ ಎನಿಸಿದರೂ, ಅನುಭವೀ ಲೇಖಕರ ನಿರೂಪಣೆಯಿಂದಾಗಿ ಓದುಗರಿಗೆ ತೃಪ್ತಿ, ವಿಮರ್ಶಕರಿಗೆ ಸಮಾಧಾನ, ನೀಡಬಲ್ಲದು.
(1.11.1982. ಗ್ರಂಥಲೋಕ ಮಾಸಪತ್ರಿಕೆಯಲ್ಲಿ ಪ್ರಕಟಿತ)

ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ಐದು ಕೃತಿಗಳ ಪರಿಚಯ.. ಭಾಗ-14
ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ಐದು ಕೃತಿಗಳ ಪರಿಚಯ.. ಭಾಗ-14








