ArticlesLatest

ಹರ್ ಘರ್ ತಿರಂಗ… ಪ್ರತಿ ಮನೆಯಲ್ಲಿ ಹೆಮ್ಮೆ, ಪ್ರತಿ ಹೃದಯದಲ್ಲಿ ದೇಶಭಕ್ತಿ ಮೊಳಗಲಿ…

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-30

ಡ್ರಗ್ಸ್ ಮುಕ್ತ ನಶೆ, ಕಸ ಮುಕ್ತ ಕೊಡಗು… ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ

80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೊಡಗಿನವರಾದ ನಾವು ಯಾವುದರಿಂದ ಸ್ವಾತಂತ್ರ್ಯರಾಗಬೇಕು ಎಂಬುದನ್ನು ಲೇಖಕರಾದ ಕಾಯಪಂಡ ವಿಷ್ಣು ನಾಚಪ್ಪ ತಮ್ಮ ಲೇಖನದ ಮೂಲಕ ತಿಳಿಸಿದ್ದಾರೆ.

ಆಗಸ್ಟ್ 15 ಬರುತ್ತಿದೆ. ನಾಲ್ಕು ಕಡೆಯೂ “ವಂದೇ ಮಾತರಂ” ಪ್ರತಿಧ್ವನಿಸುತ್ತಿದೆ. ಆದರೆ ಸ್ವಾತಂತ್ರ್ಯ ಅಂದರೆ ಕೇವಲ ಧ್ವಜಾರೋಹಣ ಮತ್ತು ಸಿಹಿ ಹಂಚುವುದಲ್ಲ. ಸ್ವಾತಂತ್ರ್ಯ ಅಂದರೆ ಪ್ರತಿ ಕ್ಷೇತ್ರದಲ್ಲೂ ಸ್ವಾವಲಂಬನೆ, ಸ್ವಚ್ಛತೆ, ಸ್ವಾಭಿಮಾನ. “ಸಾರೆ ಜಹಾನ್ ಸೇ ಅಚ್ಚಾ ಹಿಂದೂಸ್ತಾನ್ ಹಮಾರಾ” ಅಂತ ನಾವು ಹೆಮ್ಮೆಯಿಂದ ಹೇಳಬೇಕಾದರೆ, ನಮ್ಮ ಮನೆ, ನಮ್ಮ ಊರು, ನಮ್ಮ ಜಿಲ್ಲೆ ಮೊದಲು ಮಾದರಿಯಾಗಬೇಕು. ಈ ಬಾರಿಯ ಸ್ವಾತಂತ್ರ್ಯೋತ್ಸವ ಹಾಗೆ ಆಗಲಿ.

ಈ ಮಣ್ಣು ಕೇವಲ ಕಾಫಿ ಮತ್ತು ಮಂಜಿನ ನಾಡಲ್ಲ. ಇದು ತ್ಯಾಗದ ನಾಡು. ಮಲ್ಲೇಂಗಡ ಚಂಗಪ್ಪ, ಕಲಿಯಂಡ ಪೂವಯ್ಯ, ಕಡಿಯೋತ್ತ್ ಚೆನ್ನಯ್ಯ, ಪಂಡಿತ್ ದೇವಯ್ಯ  ಹೀಗೆ ನೂರಾರು ಕೊಡವ ವೀರರು ಬ್ರಿಟಿಷರ ವಿರುದ್ಧ ಕತ್ತಿ ಹಿಡಿದ ನೆಲ. ದೇಶಕ್ಕೆ ಅತಿ ಹೆಚ್ಚು ಸೈನಿಕರನ್ನು ಕೊಟ್ಟ “ಕ್ಯಾಪ್ಟನ್ ಗಳ ನಾಡು”. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳು, ವಿಜ್ಞಾನಿಗಳು, ಅಧಿಕಾರಿಗಳನ್ನು ಕೊಟ್ಟ ಹೆಮ್ಮೆಯ ಜಿಲ್ಲೆ ನಮ್ಮದು. ಅಂತಹ ವೀರರ ನಾಡನ್ನು ನಾವು ಯಾವ ರೀತಿ ನೋಡಿಕೊಳ್ಳುತ್ತಿದ್ದೇವೆ? ಈ ಪ್ರಶ್ನೆ ಈ ಸ್ವಾತಂತ್ರ್ಯದ ದಿನ ನಮ್ಮನ್ನು ಕಾಡಬೇಕು.

ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ “ಹರ್ ಘರ್ ತಿರಂಗ” ಕರೆ ಕೇವಲ ಒಂದು ಅಭಿಯಾನವಲ್ಲ. ಅದು 140 ಕೋಟಿ ಜನರ ಭಾವನಾತ್ಮಕ ಒಗ್ಗೂಡುವಿಕೆ. ಆಗಸ್ಟ್ 13 ರಿಂದ 15 ರವರೆಗೆ ಕೊಡಗಿನ ಪ್ರತಿ ಮನೆ, ಪ್ರತಿ ಕಾಫಿ ತೋಟ, ಪ್ರತಿ ಹೋಮ್ ಸ್ಟೇ, ಪ್ರತಿ ಶಾಲೆಯ ಮೇಲೂ ತಿರಂಗ ಹಾರಲಿ. ಆ ಕೇಸರಿ, ಬಿಳಿ, ಹಸಿರು ನಮ್ಮ ಹುತಾತ್ಮರ ರಕ್ತ, ಶಾಂತಿ ಮತ್ತು ಸಮೃದ್ಧಿಯ ಸಂಕೇತ. “ಏ ಮೆರೇ ವತನ್ ಕೆ ಲೋಗೋ” ಹಾಡು ಕೇಳುವಾಗ ಕಣ್ಣಲ್ಲಿ ನೀರು ಬರುವಂತಹ ದೇಶಭಕ್ತಿ ನಮ್ಮ ಮಕ್ಕಳಲ್ಲಿ ಮೂಡಲಿ.

ಆದರೆ ತಿರಂಗದ ಜೊತೆಗೆ ಇನ್ನೂ ಎರಡು ಯುದ್ಧ ನಾವು ಗೆಲ್ಲಬೇಕಿದೆ. ಮೊದಲನೆಯದು ಡ್ರಗ್ಸ್ ಮುಕ್ತ ಕೊಡಗು. ಇಂದು ನಮ್ಮ ಯುವಕರು ಶಾಲೆ ಬಿಟ್ಟು, ಕ್ರೀಡಾಂಗಣ ಬಿಟ್ಟು ಡ್ರಗ್ಸ್ ನೆರಳಿಗೆ ಹೋಗುತ್ತಿದ್ದಾರೆ. ಇದು ನಮ್ಮ ತಿರಂಗಕ್ಕೆ ಮಾಡಿದ ದೊಡ್ಡ ಅವಮಾನ. ಗಡಿಯಲ್ಲಿ “ಸಂದೇಸೆ ಆತೇ ಹೈ” ಅಂತ ಕಾಯುತ್ತಿರುವ ಸೈನಿಕನಿಗೆ ನಾವು ಕೊಡುವ ಗೌರವವೇನು? ಡ್ರಗ್ಸ್ ತ್ಯಜಿಸುವುದು ಕೂಡ ಒಂದು ದೇಶಸೇವೆ. ನಾನು ತಗೋಲ್ಲ, ಮಾರಲ್ಲ, ನನ್ನ ಸ್ನೇಹಿತನನ್ನು ರಕ್ಷಿಸುತ್ತೇನೆ – ಈ ಪ್ರತಿಜ್ಞೆ ಪ್ರತಿ ಯುವಕ ಮಾಡಲಿ.

ಎರಡನೇ ಯುದ್ಧ ಕಸ ಮುಕ್ತ ಕೊಡಗು. ಸ್ವಚ್ಛತೆ ಇಲ್ಲದೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಪ್ರವಾಸಿಗರನ್ನು ಆಕರ್ಷಿಸುವ ನಮ್ಮ ಕಾಫಿನಾಡು ಪ್ಲಾಸ್ಟಿಕ್ ಮತ್ತು ಕಸದಿಂದ ತುಂಬುತ್ತಿದೆ. ರಸ್ತೆ ಬದಿ, ನದಿ ದಡ, ತೋಟದ ಅಂಗಳದಲ್ಲಿ ಕಸ. “ಸ್ವಚ್ಛ ಭಾರತ” ನಮ್ಮಿಂದಲೇ ಶುರುವಾಗಬೇಕು. ಪ್ರತಿ ಮನೆಯಿಂದ ಒಂದು ಚೀಲ ಕಸ ಕಡಿಮೆ ಮಾಡಿದರೆ, ಕೊಡಗು ದೇಶಕ್ಕೇ ಮಾದರಿಯಾಗುತ್ತದೆ. ಸ್ವಚ್ಛ ಕೊಡಗು ಅಂದರೆ ಅದೇ ನಿಜವಾದ ತಿರಂಗಕ್ಕೆ ಸಲ್ಯೂಟ್.

ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಒಂದು ದುಃಖದ ವಿಷಯ ಹೇಳಲೇಬೇಕು. ದೇಶಕ್ಕೆ ಲಕ್ಷಾಂತರ ಸೈನಿಕರನ್ನು ಕೊಟ್ಟ, ಕ್ರೀಡೆಯಲ್ಲಿ ಸಾಧನೆ ಮಾಡಿದ ನಮ್ಮ ಕೊಡಗಿಗೆ ಇಂದಿಗೂ ಒಂದು ಮಲ್ಟಿ ಸ್ಪೆಷಾಲಿಟಿ, ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಇಲ್ಲ. ತುರ್ತು ಸಂದರ್ಭದಲ್ಲಿ ರೋಗಿಯನ್ನು ಮೈಸೂರು, ಮಂಗಳೂರಿಗೆ ಓಡಿಸಬೇಕಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ನಮ್ಮ ಹಿರಿಯರಿಗೆ ಇದು ನಾವು ಕೊಡುವ ಗೌರವನಾ? ಆರೋಗ್ಯವೂ ಸ್ವಾತಂತ್ರ್ಯದ ಒಂದು ಭಾಗ. ಇದಕ್ಕೆ ಧ್ವನಿ ಎತ್ತುವುದು ನಮ್ಮೆಲ್ಲರ ಕರ್ತವ್ಯ.

ಇನ್ನೊಂದು ಕಣ್ಣೀರಿನ ವಿಷಯ ನಮ್ಮ ರಸ್ತೆಗಳು. ಮಳೆ ಬಂದರೆ ಗುಂಡಿ, ಗುಂಡಿ ಬಂದರೆ ಅಪಘಾತ. ಕೊಡಗಿನ ರಸ್ತೆಗಳು “ಅನ್ಯಗ್ರಹದ ಮೇಲ್ಮೈ”ಯಂತೆ ಆಗಿವೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೋಗಲು, ಮಕ್ಕಳು ಶಾಲೆಗೆ ಹೋಗಲು, ಪ್ರವಾಸಿಗರು ಬರಲು ರಸ್ತೆಗಳೇ ಮೂಲ. ಕೇಂದ್ರ ಮತ್ತು ರಾಜ್ಯದಿಂದ ಹಣ ಬಂದರೂ ಕೆಲಸ ನಡೆಯುತ್ತಿಲ್ಲ. ಪರಿಸರದ ಹೆಸರಲ್ಲಿ ಫೈಲ್ ಅಡ್ಡಿ. ದೇಶಭಕ್ತ ಕೊಡಗಿನ ಜನರಿಗೆ ಉತ್ತಮ ರಸ್ತೆ ಕೇಳುವುದು ತಪ್ಪಾ? ಇದು ಕೂಡ ಸ್ವಾತಂತ್ರ್ಯದ ಹಕ್ಕು. ಹಾಗಾಗಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ನಾವು 4 ಸಂಕಲ್ಪದೊಂದಿಗೆ ಆಚರಿಸೋಣ.

ಹರ್ ಘರ್ ತಿರಂಗ

ಪ್ರತಿ ಮನೆಯ ಮೇಲೆ ಬಾವುಟ

ಡ್ರಗ್ಸ್ ಮುಕ್ತ ಕೊಡಗು ನಶೆಗೆ ನೋ ಎನ್ನುವ ಅಭಿಯಾನ,

ಕಸ ಮುಕ್ತ ಕೊಡಗು ನಮ್ಮ ಕಸ ನಮ್ಮ ಜವಾಬ್ದಾರಿ

ಅಭಿವೃದ್ಧಿ ಯುಕ್ತ ಕೊಡಗು

ಆಸ್ಪತ್ರೆ, ರಸ್ತೆಗೆ ನಾವೆಲ್ಲರೂ ಒಟ್ಟಾಗಿ ದನಿ ಎತ್ತುವುದು

ಯುವಕರೇ, ನಿಮ್ಮ ಕೈಯಲ್ಲಿದೆ ದೇಶದ ಭವಿಷ್ಯ. “ಜೋ ಭರಾ ನಹೀ ಭಾವೋಂ ಸೇ” ಅಂತ ಕವಿ ಹೇಳಿದ ಹಾಗೆ, ದೇಶದ ಬಗ್ಗೆ ಭಾವವಿಲ್ಲದ ಜೀವನ ವ್ಯರ್ಥ. ನಿಮ್ಮ ಎನರ್ಜಿಯನ್ನು ಕ್ರೀಡೆಯಲ್ಲಿ, ಉದ್ಯಮದಲ್ಲಿ, ಸಮಾಜ ಸೇವೆಯಲ್ಲಿ ತೋರಿಸಿ. ಡ್ರಗ್ಸ್ ನಲ್ಲಿ ಅಲ್ಲ. ನಿಮ್ಮ ಪ್ರತಿ ಸಾಧನೆಯೂ ಕೊಡಗಿನ ಸಾಧನೆ, ಕೊಡಗಿನ ಪ್ರತಿ ಸಾಧನೆಯೂ ಭಾರತದ ಸಾಧನೆ.

ದೇಶದ ಯುವ ಸಮೂಹವೇ ನಮ್ಮ ನಡೆ ದೇಶದ ಪ್ರಗತಿಯ ಕಡೆ ದೇಶಭಕ್ತರ ಪಡೆಯೊಂದಿಗೆ . ಸ್ವಾತಂತ್ರ್ಯ ಎಂದರೆ ಬರೀ ಒಂದು ದಿನದ ಸಂಭ್ರಮವಲ್ಲ. ಅದು ಪ್ರತಿದಿನದ ಕ್ರಿಯೆ. ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ನಮ್ಮ ಊರು ಸ್ವಚ್ಛವಾಗಿರಬೇಕು, ನಮ್ಮ ದೇಹ ಆರೋಗ್ಯವಾಗಿರಬೇಕು, ನಮ್ಮ ಯುವಕರು ದೃಢವಾಗಿರಬೇಕು. ಅವಾಗ್ಲೇ ನಮ್ಮ ವೀರಾಧಿವೀರರಿಗೆ ನಿಜವಾದ ಗೌರವ.

ನನ್ನ ತಿರಂಗ ನನ್ನ ಗುರುತು.

ನನ್ನ ಕೊಡಗು ಡ್ರಗ್ಸ್ ಮುಕ್ತ, ಕಸ ಮುಕ್ತ.

ನನ್ನ ಭಾರತ ವಿಶ್ವಗುರು. ಜೈ ಹಿಂದ್! ಭಾರತ್ ಮಾತಾ ಕಿ ಜೈ! ವಂದೇ ಮಾತರಂ!

admin
the authoradmin

Leave a Reply