LatestMysore

ಕೆ.ಆರ್.ನಗರ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಇಹಲೋಕ ತ್ಯಜಿಸಿದ ತಾಯಿ ಮಗು.. ಸಂಬಂಧಿಕರ ಪ್ರತಿಭಟನೆ

ಕೃಷ್ಣರಾಜನಗರ(ಸಂಘಟನೆ ಮಂಜುನಾಥ್): ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ಹೆರಿಗೆಗೆಗೆಂದು ದಾಖಲಾಗಿದ್ದ ತಾಲೂಕಿನ ಮಳಲಿ ಗ್ರಾಮದ ಮಹೇಶ್ ಎಂಬುವವರ ಪತ್ನಿ ಗರ್ಭಿಣಿ ಮಹಿಳೆ ಸುಶ್ಮಿತಾ(26) ಹಾಗೂ ಮಗು ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಮೃತರ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ಘಟನೆ ವಿವರ : ಸೋಮವಾರ ಹೆರಿಗೆಗಾಗಿ ದಾಖಲಾಗಿದ್ದ ಗರ್ಭಿಣಿ ಸುಶ್ಮಿತ ಹಾಗೂ ಅವರ ನವಜಾತ ಶಿಶು ಬೆಳಿಗ್ಗೆ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಇದಕ್ಕೆ ಚಿಕಿತ್ಸೆ ನೀಡುವಲ್ಲಿ ವೈದ್ಯರ ನಿರ್ಲಕ್ಷವೇ ಕಾರಣ ಎಂದು  ಗಂಭೀರವಾಗಿ ಆರೋಪಿಸಿ ಆಸ್ಪತ್ರೆ ಮುಂದೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ಮೃತ ಮಹಿಳೆ ಸುಶ್ಮಿತಾಳ ಮೊದಲನೇ ಮಗು ಸಹಜವಾಗಿ ಹೆರಿಗೆಯಾಗಿತ್ತು. ಆದರೆ ಈಗ ಏಕೆ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ. ಹೆರಿಗೆ ಮಾಡಿಸಲು ಸಾಧ್ಯವಿಲ್ಲ ಎಂದಿದ್ದರೆ ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದೆವು. ನಮಗೆ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ಆಸ್ಪತ್ರೆ ವೈದ್ಯರ ವಿರುದ್ಧ ಆರೋಪಿಸಿದ ಮೃತಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

ಶಾಸಕ ಡಿ.ರವಿಶಂಕರ್ ಭೇಟಿ: ತಾಯಿ ಮತ್ತು ಮಗುವಿನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಡಿ ರವಿಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು ನಂತರ ವೈದ್ಯರೊಂದಿಗೆ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ನಂತರ ಮೃತಳ ಸಂಬಂಧಿಕರ ಜೊತೆ ಮಾತನಾಡುವಾಗ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದಾಗಿ ತಾಯಿ ಮಗು ಸಾವನ್ನಪ್ಪಿದ್ದಾರೆ ಎಂದು ಶಾಸಕರ ಬಳಿ ಆರೋಪಿಸುತ್ತಿರುವುದು ಕಂಡುಬಂದಿತು.

ಮೃತ ಮಹಿಳೆಯ ಪ್ರತಿ ಮಹಿ ಹಾಗೂ ಸಂಬಂಧಿಕರಿಗೆ ಶಾಸಕ ಡಿ ರವಿಶಂಕರ್ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ತಾಯಿ ಮತ್ತು ಮಕ್ಕಳ ಅಧಿಕಾರಿ, ತಾಲೂಕು ಆರೋಗ್ಯಧಿಕಾರಿ ಡಾ. ಎಂ ಬಿ ಸಂತೋಷ್ ಹಾಜರಿದ್ದರು. ಘಟನೆಗೆ ಸಂಬಂಧಿಸಿದಂತೆ ವೈದ್ಯಕೀಯ ಮಂಡಳಿ ಅಥವಾ ಪೊಲೀಸ್ ಇಲಾಖೆಯ ಅಧಿಕೃತ ತನಿಖೆಯ ನಂತರವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿಯಬೇಕಿದೆ.

ಪೊಲೀಸ್ ಇನ್ ಸ್ಪೆಕ್ಟರ್ ಶಿವಪ್ರಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ