ಕುಶಾಲನಗರ (ರಘುಹೆಬ್ಬಾಲೆ): ಸಮೀಪದ ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹ ಹೆಮ್ಮೆ ಮತ್ತು ದೇಶಭಕ್ತಿಯ ಭಾವನೆಯೊಂದಿಗೆ ಆಚರಿಸಲಾಯಿತು. ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಹಾಗೂ ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಲೆಯಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಸಂವಿಧಾನ ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು.

ರಕ್ಷಣಾ ಸಿಬ್ಬಂದಿ ದೇಶದ ರಕ್ಷಣೆ ಹಾಗೂ ಸಮಗ್ರತೆಯಲ್ಲಿ ತೋರಿಸುವ ನಿಸ್ವಾರ್ಥ ಸೇವಾಭಾವನೆಯನ್ನು ಉದಾಹರಿಸಿ, ವೈಯಕ್ತಿಕ ವಿಶ್ರಾಂತಿಗಿಂತ ದೇಶಸೇವೆಯನ್ನು ತಮ್ಮ ಜೀವನದ ಪರಮೋಚ್ಛಗುರಿಯನ್ನಾಗಿ ಹೊಂದಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಾಗೆಯೇ ಪ್ರಶಸ್ತಿ ಸ್ವೀರಿಸಿದ ಸಿಬ್ಬಂದಿವರ್ಗದವರಿಗೆ ಅಭಿನಂದನೆ ಸಲ್ಲಿಸಿ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ಆಕರ್ಷಕ ಪಥಸಂಚಲನದೊಂದಿಗೆ ನಾಯಕ ಕೆಡೆಟ್ ಪ್ರಿಯಾಂಶು ಯಾದವ್ ಅವರು ಮುಖ್ಯ ಅತಿಥಿಗೆ ಗೌರವ ವಂದನೆ ಸಲ್ಲಿಸಿದರು.

ನೆರೆದಿದ್ದ ಸಭಿಕರು ರಾಷ್ಟ್ರಗೀತೆಯ ಗಾಯನ ಮಾಡಿದರು. ಪಥಸಂಚಲನದ ಸಮೀಕ್ಷಾ ಕ್ರಮದ ನಂತರ ಶಾಲೆಯ ಸಂಗೀತ ಕ್ಲಬ್ ಸದಸ್ಯರ ವಂದೇ ಮಾತರಂ ಗೀತೆಯು ಸಭಿಕರ ಮನಸೆಳೆಯಿತು. ಶಾಲೆಯ ಸಮೃದ್ಧ ಸೈನಿಕ ಪರಂಪರೆ, ರಾಷ್ಟ್ರ ಹಾಗೂ ಅದರ ಸಂವಿಧಾನದ ಮೇಲಿನ ಅಪಾರ ಗೌರವವನ್ನು ಪ್ರತಿಬಿಂಬಿಸುವಂತಿತ್ತು.

ಇಂಗ್ಲಿಷ್ ಭಾಷಾ ವಿಭಾಗದ ಪಿಜಿಟಿ ಶಿಕ್ಷಕಿ ವಿ.ಎಸ್. ಶ್ರೀಲೇಖಾ ಹಾಗೂ ಸಿಬ್ಬಂದಿ ಎಸ್.ಜಿ. ಮುರಳಿ ಅವರಿಗೆ ಶಾಲೆಯಲ್ಲಿ ಸಲ್ಲಿಸಿದ ಸೇವೆ ಪ್ರತೀಕವಾಗಿ ಎಲ್ ಬಿ ಎ ಅಧ್ಯಕ್ಷರ ಪ್ರಶಂಸನಾ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಶಾಲೆಯ ಪ್ರಥಮ ಮಹಿಳೆ ದಿವ್ಯಾ ಸಿಂಗ್, ಶಾಲಿನಿ ರಾವ್, ಶಾಲಾ ವೈದ್ಯಾಧಿಕಾರಿ, ಹಿರಿಯ ಶಿಕ್ಷಕರು, ಬೋಧಕ-ಬೋಧಕೇತರ ಸಿಬ್ಬಂದಿವರ್ಗ, ಎನ್‌ಸಿಸಿ ಸಿಬ್ಬಂದಿವರ್ಗ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.








