ಮಡಿಕೇರಿ: ಅಕ್ಟೋಬರ್ ನಲ್ಲಿ ನಡೆಯುವ ದಸರಾಕ್ಕೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿರುವುದರಿಂದ ದಶಮಂಟಪಗಳ ಸಮಿತಿ ಸದಸ್ಯರು ದಸರಾ ಸಮಿತಿ ಆಯ್ಕೆ ಇನ್ನಿತರ ಚಟುವಟಿಕೆಗಳನ್ನು ಈಗಿನಿಂದಲೇ ಆರಂಭಿಸಿದ್ದು, ಇದೀಗ ಮಡಿಕೇರಿಯ ಪೇಟೆ ಶ್ರೀ ರಾಮಮಂದಿರ ದಸರಾ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಸುನಿಲ್ ಮುತ್ತಪ್ಪ ಆಯ್ಕೆಯಾಗಿದ್ದಾರೆ.
ಈ ಸಂಬಂಧ ಸಭೆಯು ಮಡಿಕೇರಿಯ ಹೋಟೆಲ್ ಲೀ ಕೂರ್ಗ್ ನ ಸಭಾಂಗಣದಲ್ಲಿ ಗೌರವ ಅಧ್ಯಕ್ಷರಾದ ಶ್ರೀ ಶಿವಮೂರ್ತಿರವರ ಅಧ್ಯಕ್ಷತೆಯಲ್ಲಿ ನಡೆದು ಸಮಿತಿಯ ಮುಂದಿನ ಕಾರ್ಯಕ್ರಮಗಳು, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳು, ಸಂಘಟನೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸದಸ್ಯರ ಜವಾಬ್ದಾರಿಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಸರ್ವ ಸದಸ್ಯರ ಒಮ್ಮತದ ನಿರ್ಣಯದಂತೆ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಆಯ್ಕೆಯಾದ ಎಲ್ಲ ಪದಾಧಿಕಾರಿಗಳು ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದು, ಶ್ರೀ ರಾಮನ ಸೇವಾ ಕಾರ್ಯಗಳನ್ನು ವ್ಯಾಪಕವಾಗಿ ಜನರಿಗೆ ತಲುಪಿಸುವುದು ಹಾಗೂ ಯುವಜನರನ್ನು ಸಂಘಟನೆಯೊಂದಿಗೆ ಜೋಡಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಅಧಿಕೃತವಾಗಿ ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಸುನಿಲ್ ಮುತ್ತಪ್ಪ, ಉಪಾಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ವಿಘ್ನೇಶ್ ಜಿ. ಜಿ, ಖಜಾಂಚಿಗಳಾಗಿ ಹೇಮಂತ್ ಹಾಗೂ ಅಯ್ಯಪ್ಪ ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು.
ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಅವಧಿಯಲ್ಲಿ ಸಂಘಟನೆಯು ಇನ್ನಷ್ಟು ಅಭಿವೃದ್ಧಿ ಹೊಂದಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೊನೆಯಲ್ಲಿ ಸಂಘಟನೆಯ ಪರವಾಗಿ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು. “ಎಲ್ಲರೂ ಒಂದಾಗಿ ಶ್ರೀರಾಮನ ಸೇವೆ” ಎಂಬ ಧ್ಯೇಯದೊಂದಿಗೆ ಸಮಾಜದಲ್ಲಿ ಸೇವಾ ಮನೋಭಾವವನ್ನು ಬೆಳೆಸುವ ಸಂಕಲ್ಪವನ್ನು ಸದಸ್ಯರು ಮಾಡಿದರು.








