ತುಮಕೂರು: ತುಮಕೂರು ನಗರ ಸಮೀಪದ ರಾಮದೇವರಬೆಟ್ಟದ ತಪ್ಪಲಿನಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ರಾಮದೇವರಬೆಟ್ಟದ ತಪ್ಪಲಿನ ಜೀವವೈಧತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೃಷಿ, ಜಲಚರ, ಪರಿಸರ ಹಾನಿಯಾಗುತ್ತಿದೆ. ಸಂಬಂಧಿಸಿದ ಇಲಾಖೆಗಳಿಗೆ ಹಾನಿಯ ಅರಿವಿದ್ದರೂ ಕಣ್ಣುಮುಚ್ಚಿಕೊಂಡು ಅನುಮತಿ ನೀಡಿರುವುದೇ ಇದಕ್ಕೆ ಕಾರಣ ಎಂದು ಹೈ ಕೋರ್ಟ್ ನ್ಯಾಯವಾದಿ, ಬಾಲ ನ್ಯಾಯ ಮಂಡಳಿ ಸದಸ್ಯ ರಮೇಶ್ ನಾಯಕ್ ಎಲ್ ಆರೋಪಿಸಿದ್ದಾರೆ.
ಪ್ರಕೃತಿ, ಪರಿಸರದ ಮೇಲಿನ ಹಾನಿ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾರೂಬ್ಬರೂ ಧನಾತ್ಮಕವಾಗಿ ಸ್ಪಂದಿಸಿಲ್ಲ, ಈ ಬಗ್ಗೆ ತಾವು ಹೈ ಕೋರ್ಟ್‌ಗೆ ಸಾರ್ವಜನಿಕ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ತುಮಕೂರು ನಗರ ಹಾಗೂ ಸಿದ್ಧಗಂಗಾ ಮಠಕ್ಕೆ ಅತಿ ಸಮೀಪವಿರುವ ರಾಮದೇವರಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಧೂಳು ಆವರಿಸಿ ಜನಜೀವನದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಶ್ರದ್ಧಾ ಕೇಂದ್ರವಾಗಿದ್ದ ರಾಮದೇವರಬೆಟ್ಟವು ಕಲ್ಲುಗಣಿಗಾರಿಕೆಯಿಂದ ಇಬ್ಭಾಗವಾಗಿದೆ.

ಐತಿಹಾಸಿಕ ದೇವರಾಯನದುರ್ಗ ಮಿಸಲು ಆರಣ್ಯಪ್ರದೇಶದ ಸುತ್ತಮುತ್ತಲಿನ ಮೈದಾಳ, ಪಂಡಿತನಹಳ್ಳಿ, ಮಾರನಾಯಕನಪಾಳ್ಯ, ಅರೆಗುಜ್ಜನಹಳ್ಳಿ, ದುರ್ಗದಹಳ್ಳಿ, ಸೇಟುಪಾಳ್ಯ ಪ್ರದೇಶಗಳಲ್ಲಿ ಕಲ್ಲುಗಣಿಗಾರಿಗೆ ವ್ಯಾಪಕವಾಗಿ ನಡೆಯುತ್ತಿದೆ. ಮುಖ್ಯವಾಗಿ ಮೈದಾಳ ಗ್ರಾಮಕ್ಕೆ ಹೊಂದಿಕೊಂಡಿರುವ ರಾಮದೇವರಬೆಟ್ಟದ ತಪ್ಪಲಿನಲ್ಲಿ ಸುಮಾರು 20 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಬೆಟ್ಟವನ್ನೇ ಕಡಿದುಹಾಕಲಾಗಿದೆ ಎಂದು ರಮೇಶ್ ನಾಯಕ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಡಲಿರುವ ಮೈದಾಳ, ಸುತ್ತಮುತ್ತಲ ಗ್ರಾಮಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ನಗರದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಇಷ್ಟೆಲ್ಲದರ ಅರಿವಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಣಿಗಾರಿಕೆಗೆ ಅನುಮತಿ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ತಾವು ನೀಡಿದ ದೂರಿನ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳು ಜನವರಿ 17ರಂದು ಮೈದಾಳಕ್ಕೆ ಕಲ್ಲುಗಣಿಗಾರಿಕೆ ಸ್ಥಳ ಮಹಜರಿಗೆ ತೆರಳಿದ್ದಾಗ ಕ್ರಷರ್-ಕ್ವಾರಿ ದಣಿಗಳ ಬೆಂಬಲಿಗರು ಅಡ್ಡಗಟ್ಟಿ ತಡೆದಿದ್ದಾರೆ ಎಂದು ಗೊತ್ತಾಗಿದೆ. ಈ ವೇಳೆ ಅಧಿಕಾರಿಗಳು ರಸ್ತೆಯಲ್ಲೇ ಸ್ಥಳ ಮಹಜರು ಶಾಸ್ತ್ರ ಮುಗಿಸಿದ್ದಾರೆ. ನಂತರ ಈ ಬಗ್ಗೆ ಅಧಿಕಾರಿಗಳು ಪೊಲೀಸರಿಗೂ ದೂರು ನೀಡಿಲ್ಲ, ಪೊಲೀಸ್ ರಕ್ಷಣೆಯಲ್ಲಿ ಸ್ಥಳ ಪರಿಶೀಲನೆ, ಕರ್ತವ್ಯಕ್ಕೆ ಅಡ್ಡಿ ವಿರುದ್ಧ ಕ್ರಮಕ್ಕೂ ಪ್ರಯತ್ನವನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.

ಕಲ್ಲುಗಣಿಗಾರಿಕೆಯಿಂದ ಪರಿಸರ ಹಾಗೂ ಜೀವಸಂಕುಲದ ಮೇಲೆ ತೀವ್ರ ಹಾನಿಯಾಗುತ್ತದೆ. ಇದು ಅರಣ್ಯ ನಾಶ, ಜೀವವೈವಿಧ್ಯದ ನಾಶ ಮತ್ತು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಗಣಿಗಳಿಂದ ಬಿಡುಗಡೆಯಾಗುವ ವಿಷಕಾರಿ ರಾಸಾಯನಿಕಗಳು, ಆರ್ಸೆನಿಕ್ ಮುಂತಾದವು ಸಮೀಪದ ಕೆರೆಗಳನ್ನು ಕಲುಶಿತಗೊಳಿಸುತ್ತವೆ ಹಾಗೂ ಅಂತರ್ಜಲ ಮಟ್ಟ ಕುಸಿತಕ್ಕೂ ಕಾರಣವಾಗುತ್ತದೆ. ಸ್ಫೋಟಕ ಶಬ್ಧ, ಧೂಳು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೈಸರ್ಗಿಕ ಆವಾಸಸ್ಥಾನಗಳ ನಾಶದಿಂದ ವನ್ಯಜೀವಿಗಳು ಹಾಗೂ ಸಸ್ಯವರ್ಗ ನಾಶವಾಗುತ್ತವೆ. ಮಣ್ಣಿನ ಸವೆತ ಮತ್ತು ಭೂಕಂಪನದಂತಹ ಗಂಭೀರ ಪರಿಣಾಮಗಳನ್ನು ಪರಿಸರ ಮತ್ತು ಸ್ಥಳೀಯ ಜನ ಎದುರಿಸಬೇಕಾಗುತ್ತದೆ.
ದೇವರಾಯನದುರ್ಗ ಸುತ್ತಮುತ್ತಲ ಪ್ರದೇಶ ಈಗಾಗಲೇ ಮಣ್ಣು ಮಾಫಿಯಾದಿಂದ ತತ್ತರಿಸಿದೆ. ಪ್ರಕರಣ ಹೈ ಕೋರ್ಟ್ ಅಂಗಳಕ್ಕೆ ಹೋಗಿದ್ದರಿಂದ ನ್ಯಾಯಾಲಯದ ಆದೇಶದಿಂದ ಮಣ್ಣು ಮಾಫಿಯಾ ನಿಂತಿದೆ. ಈ ಭಾಗದಲ್ಲಿ ಕ್ರಷರ್-ಕ್ವಾರಿ ಅಬ್ಬರ ಹೆಚ್ಚಾಗಿ ಪರಿಸರ ನಾಶವಾಗುತ್ತಿದೆ. ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಬಗ್ಗೆ ಅನುಮಾನಗಳಿವೆ. ಹೀಗಾಗಿ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡುವುದು ಅನಿವಾರ್ಯವಾಗಿದೆ ರಮೇಶ್ ನಾಯಕ್ ಎಲ್. ತಿಳಿಸಿದ್ದಾರೆ.








