ArticlesLatest

ಶಿವ.. ಶಿವ.. ಎಂದರೆ ಭಯವಿಲ್ಲ… ಅಖಿಲೇಶ್ವರ, ಅಮೃತೇಶ್ವರ, ಜ್ಞಾನೇಶ್ವರ, ಜಗದೀಶ್ವರ, ವಿಶ್ವೇಶ್ವರ.. ನಮೋ ನಮಃ!

ಶಿವರಾತ್ರಿ ಮತ್ತೆ ಬಂದಿದೆ.. ಎಲ್ಲೆಲ್ಲೂ ಶಿವನ ಜಪ ಶುರುವಾಗಿದೆ.. ಶಿವಾಲಯಗಳಲ್ಲಿ ಶಿವ ಸ್ಮರಣೆಯ ಜಾಗರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಿವರಾತ್ರಿ ಆಚರಣೆ ಮತ್ತು ಮಹತ್ವದ ಕುರಿತಂತೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಮಾಹಿತಿ ನೀಡಿದ್ದಾರೆ… ನೀವೊಮ್ಮೆ ಓದಿ ಬಿಡಿ.. ಶಿವನ ಕೃಪೆ ನಿಮ್ಮ ಮೇಲಿರಲಿ…

“ನಮಃ ಶಿವಾಯ” ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಹಾಗೂ ಆಧ್ಯಾತ್ಮಿಕಮೋಡಿ: ಈ ಐದು ಶಕ್ತಿಗಳಿವೆ ಎಂಬ ಸತ್ಯ ಲೋಕಮಾನ್ಯ! ಪ್ರತಿ ವರ್ಷವೂ ಚಳಿಗಾಲದ ಅಂತ್ಯ ಬೇಸಿಗೆಕಾಲದ ಪ್ರಾರಂಭ ಇವೆರಡೂ ಕಾಲಗಳ ನಡುವೆ ಬರುವ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನ ದಿನ ಪ್ರಾರಂಭವಾಗಿ 24 ತಾಸಿನವರೆಗೆ ದ್ರವ-ಫಲಾಹಾರ ಪೂಜೆ ಪುನಸ್ಕಾರ ಹರಿಕಥೆ ಶಿವಕಥೆ ಹವನ ಹೋಮ ಉಪವಾಸ ಜಾಗರಣೆ ಮುಂತಾದ ಕೈಕಂಕರ್ಯಗಳನ್ನು ಹ[ರಿ]ರ ಭಕ್ತರು ಮಾತ್ರವಲ್ಲದೆ ಪ್ರತಿಯೊಂದು ಹಿಂದೂ ಕುಟುಂಬವು ಶ್ರದ್ಧಾ ಭಕ್ತಿಯಿಂದ ಸಂಪ್ರದಾಯ ಬದ್ಧರಾಗಿ ಆಚರಿಸುವ ಶಿಷ್ಟಾಚಾರ ಶಿವಾಚಾರದ ಪದ್ಧತಿಯುಳ್ಳ ಹಬ್ಬವೆ ‘ಮಹಾಶಿವರಾತ್ರಿ’…

ಭೂಲೋಕದ ಮೊಟ್ಟಮೊದಲ ಸಾಹಿತ್ಯ, ಗ್ರಂಥ/ಕಥೆಯೇ ಶಿವಪುರಾಣ! ಸೃಷ್ಟಿಕರ್ತ ಬ್ರಹ್ಮನ ತಂದೆ ಶ್ರೀಮನ್‍ ನಾರಾಯಣ. ಈತನ ಪಿತಾಮಹ ಓಂಕಾರಮೂರ್ತಿ ಶಿವ?! ಪರಂಜ್ಯೋತಿ ಪರಶಿವಂಗೆ ಪಿತನು ಇದ್ದ ಅಥವಾ ಯಾರು?ಎಂಬುದಕ್ಕೆ ಯಾವ ಪುರಾಣ ಹಿನ್ನೆಲೆಯೂ ಇಲ್ಲ! ಆದ್ದರಿಂದ ಆದಿದೇವ ಶಿವನನ್ನು ತ್ರಿಮೂರ್ತಿ ಜೇಷ್ಠನೂ ತ್ರಿಲೋಕಶ್ರೇಷ್ಠನೂ ಎಂದೇ ಕೊಂಡಾಡುವರು.

ವಿಶ್ವದಾದ್ಯಂತ ಪ್ರಥಮ ಪೂಜಿತ ಗಣೇಶನ ತಂದೆಯಾಗಿ ಸರ್ವ ಕಾಲದಲ್ಲೂ ಅತ್ಯುನ್ನತ ಪೂಜಾ ಸ್ಥಾನದಲ್ಲಿ ಇರುವವನೆ ವಿಶ್ವನಾಥ! ಗೌರಿಪುತ್ರನಿಗೆ ಈಶ್ವರ ಪಟ್ಟದ ವರ ನೀಡಿ ವಿಘ್ನೇಶ್ವರ ನನ್ನಾಗಿಸಿದ ಅಖಿಲಾಂಡ ಕೋಟಿ ಬ್ರಹ್ಮಾಂಡಪಾಲಕ ಅಖಿಲೇಶ್ವರ ಅಮೃತೇಶ್ವರ ಜ್ಞಾನೇಶ್ವರ ಜಗದೀಶ್ವರ ವಿಶ್ವೇಶ್ವರ ಮುಂತಾದ ಸಹಸ್ರ ನಾಮದಿಂದ ಸುರಾಸುರ ವಂದ್ಯನಾಗಿ ಅನವರತವೂ ಆರಾಧಿಸಲ್ಪಡುವ ಏಕಮೇವ ಅದ್ವಿತೀಯ ದೈವ ಮಹಾದೇವ!

ಹಿಂದೂ ಧರ್ಮದ ಮಹಾನ್‍ ಗ್ರಂಥ ಭಗವದ್ಗೀತೆಯ ಉದಾಹರಣೆಯಾಗಿ ನೋಡುವುದಾದರೆ ಅಧ್ಯಾಯ-9,ಶ್ಲೋಕ-34:ಮನ್ಮನಾಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕರು, ಮಾಮೇವ ಏಷ್ಯಸಿ ಯುಕ್ತ್ವಾ ಏವಮಾತ್ಮಾನಂ ಮತ್ಪರಾಯಣಃ ಎಂಬುದರ ಕನ್ನಡ ತಾತ್ಪರ್ಯ: “ನನ್ನಲ್ಲಿ ಮನಸ್ಸುಳ್ಳವನಾಗಿರು, ನನ್ನ ಭಕ್ತನಾಗಿರು, ನನ್ನನ್ನೆ ಪೂಜಿಸುತ್ತಿರು, ನನಗೆನಮಸ್ಕರಿಸುತ್ತಿರು, ನನ್ನನ್ನು ಪರಮಗತಿ ಎಂದರಿತು ನನ್ನಲ್ಲಿ ನಿನ್ನ ಮನಸ್ಸನ್ನು ಲೀನವಾಗಿಸು ಆಗ ಮಾತ್ರ ನೀನು ನನ್ನನ್ನು ಪಡೆಯುವೆ”

ಅಧ್ಯಾಯ-18, ಶ್ಲೋಕ-66 : ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂವ್ರಜ ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾಶುಚಃ.  ಇದರ ಕನ್ನಡ ತಾತ್ಪರ್ಯ:- “ಎಲ್ಲಾ ದೇಶ ಧರ್ಮ ತ್ಯಜಿಸಿ ನನಗೊಬ್ಬನಿಗೆ ಶರಣಾಗು, ನಿನ್ನ ಸಕಲ ಪಾಪಕರ್ಮದಿಂದ ನಿನಗೆ ಮುಕ್ತಿ ನೀಡುವೆ, ಆದ್ದರಿಂದ ನೀನು ದು:ಖಿಸಬೇಡ”

ವೇದೋಪನಿಷತ್‍ಗಳಲ್ಲಿ ಶಿವನ ಮಹಿಮೆಯನ್ನು ಹೀಗೆ ಕೊಂಡಾಡಿದ್ದಾರೆ.. ಯಂ ಬ್ರಹ್ಮಾ ವರುಣೇಂದ್ರ ರುದ್ರಮರುತಃ ಸ್ತುನ್ವಂತಿ ದಿವೈಯಃ ಸ್ತವೈಃ//ವೇದೈಃ ಸಾಂಗಪದಕ್ರಮ ಉಪನಿಷದೈಃ ಗಾಯಂತಿ ಯಃ ಯೋಗಿನೋ// ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಃ ಸಾಮಗಾಃ//  ಯಸ್ಯಾಂತಃ ನ ವಿದುಃ  ಸುರಾಸುರ ಗಣಾದೇವಾಯ ತಸ್ಮೈನಮಃ”

ಇದರ ಕನ್ನಡ ತಾತ್ಪರ್ಯ ‘ಯಾರನ್ನು : ಬ್ರಹ್ಮ ವರುಣ ಇಂದ್ರ ರುದ್ರ ಮಾರುತ ಗಣಗಳು ತಮ್ಮ ದಿವ್ಯ ಮಂತ್ರಗಳಿಂದ ಕಿರು ಭಕ್ತಿಯಿಂದ ಸ್ತುತಿಸುವರೊ; ಯಾರನ್ನು : ಸಾಮಗರು ಅಂಗ-ಪದಕ್ರಮ, ಉಪನಿಷತ್ತು, ವೇದಗಳಿಂದ ಹಾಡುವರೊ; ಯಾರನ್ನು :  ಯೋಗಿಗಳು ಧ್ಯಾನಸ್ಥಿತಿಯಲ್ಲಿ ತಲ್ಲೀನರಾದ ಮನಸ್ಸಿಂದ ಕಾಣುವರೋ; ಯಾರ ಅಂತ್ಯವನ್ನು ಸುರಾಸುರರು ಅರಿಯಲು ಅಸಾಧ್ಯವೊ ಅಂಥ ಪರಮಾತ್ಮನಿಗೆ ಅನಂತ ವಂದನೆಗಳು!

ವಚನಕಾರರೆಲ್ಲರು ಶಿವನಭಕ್ತರೆಂಬುದು ಅದ್ಭುತಾಶ್ಚರ್ಯ! ಇವರು ಕೇವಲ ತಮ್ಮ ರಚನೆಗಳಿಂದ ಶಿವನನ್ನು ಹಾಡಿ ಹೊಗಳಿದವರಷ್ಟೆ ಅಲ್ಲ, ದಿಟ ಭಕ್ತಿಯಿಂದ ಶಿವನನ್ನು ಸಾಕ್ಷಾತ್ಕಾರ ಮಾಡಿಕೊಂಡ ಪರಮಪಾವನರೂ ಹೌದು! ಬಸವಣ್ಣನವರ ಉಳ್ಳವರು ದೇವಾಲಯ ಮಾಡುವರು…..” ಕಳಬೇಡ, ಕೊಲಬೇಡ….” “ಕಾಯಕವೇ ಕೈಲಾಸ”

ಮುಂತಾದ ವಚನಾಮೃತಗಳಿಂದ ವೈದಿಕ ಧರ್ಮದ ಮೂಢ ನಂಬಿಕೆ ವಿರುದ್ಧ ವೈಚಾರಿಕ ಕ್ರಾಂತಿ ಮಾಡಿದ್ದು ಇತಿಹಾಸ! ತನ್ಮೂಲಕ ಮಾನವೀಯತೆ-ಜಾತ್ಯಾತೀತ ಸಮಾಜದ ರೂವಾರಿಯಾದರು. ಆಗಿನ ಕಾಲಕ್ಕೆ ಅದು ಸಾಧ್ಯವಾಗಿದ್ದು ಕೂಡಲ ಸಂಗಮದೇವನ ಕೃಪೆಯಿಂದಲೆ ಎಂಬುದು ಅಣ್ಣನವರ ವಿಶ್ವಾಸ ಮಾತ್ರವಲ್ಲ ಪ್ರತಿಯೊಬ್ಬ ಶಿವಭಕ್ತನ ನಂಬಿಕೆಯೂ ಆಗಿತ್ತು! ಬಸವಣ್ಣನ ಅಚಲ ವಿಶ್ವಾಸಕ್ಕೆ ಉತ್ತಮ ಉಧಾಹರಣೆ ಹೀಗಿದೆ..

ಎನಗೆ ನಿಮ್ಮ ನೆನಪಾದಾಗಲೆ ಉದಯ!

ಎನಗೆ ನಿಮ್ಮ ಮರೆವಾದಾಗಲೆ ಅಸ್ತಮಾನ!

ಎನಗೆ ನಿಮ್ಮ ನೆನಪೇ ಜೀವ!

ಎನಗೆ ನಿಮ್ಮ ನೆನಪೇ ಪ್ರಾಣ ಕಾಣ ತಂದೆ!

ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆ ನೊತ್ತಯ್ಯ!

ವದನದಲಿ ಷಡಕ್ಷರಿಯ ಬರೆಯಯ್ಯಸ್ವಾಮಿ

ಕೂಡಲಸಂಗಮದೇವಾ….!”

ಶಿವಶರಣೆ ಅಕ್ಕಮಹಾದೇವಿ ವಚನಗಳಲ್ಲಿ ಶಿವನನ್ನು ಹೊಗಳಿರುವುದು ಹೀಗೆ.. ಶರಣೆಂಬೆ ನಾ ಶಶಿಭೂಷಣ, ಗೌರಿಪ್ರಿಯ ಜಗನ್ಮೋಹನ// ಕೆಂಜೆಡೆ ಮುಡಿಯ ಕಾಪಾಲಿಕನೆ, ನಂಜುನುಂಗಿದ ನಂಜುಂಡೇಶನೆ// ನಂಬಿದ ಬಾಲನ ಅಪ್ಪಿಮುದ್ದಾಡಿದ, ಮೃತ್ಯುಂಜಯ ನೀ ದಯಾಮಯ // ಬೇಡರಕಣ್ಣನ ಪೂಜೆಗೆ ನೀನೊಲಿದೆ, ಅಲ್ಲಮಪ್ರಭುವಾಗಿ ಮಾಯೆಯ ಗೆಲಿದೆ//  ಬಲ್ಲಿದ ಬಸವಂಗೆ ಕುಲದೈವ ನೀನಾದೆ// ಮಹಾದೇವಿ ಅಕ್ಕನ ಚೆನ್ನಮಲ್ಲಿಕಾರ್ಜುನ”.

ಎರಡನೇದಾಗಿ, ಕಾಯಾ-ವಾಚಾ-ಮನಸಾ ತನ್ನನ್ನು ಶಿವನಿಗೆ ಸಮರ್ಪಿಸಿಕೊಂಡು ಶಿವಕ್ತರು ಹೇಗಿರಬೇಕೆಂದು ಸೂಚಿಸಿದ್ದಾರೆ ಹೀಗೆ: “ತನುಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು//  ಮನಕರಗದವರಲ್ಲಿ ಗಂಧಾಕ್ಷತೆಯನು ಒಲ್ಲೆಯಯ್ಯ ನೀನು//  ಅರಿವು ಕಣ್ತೆರೆಯದವರಲ್ಲಿ ಆರತಿಯನು ಒಲ್ಲೆಯಯ್ಯ ನೀನು// ಭಾವಶುದ್ಧ ಇಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು//  ಹರ ನಾಮಿಗಳಲ್ಲದವರಲ್ಲಿ ನೈವೇದ್ಯವ ಒಲ್ಲೆಯಯ್ಯ ನೀನು// ಹೃದಯಕಮಲ ಇಲ್ಲದವರಲ್ಲಿ ಇರಲೊಲ್ಲಯ್ಯ ನೀನು// ಎನ್ನಲ್ಲಿ ಏನುಂಟೆಂದು ಕರಸ್ಥಲದಲ್ಲಿ ಇಂಬುಗೊಂಡೆ, ಹೇಳಾ ಚೆನ್ನಮಲ್ಲಿಕಾರ್ಜುನ….”  ಈ ವಚನದ ಗೂಢಾರ್ಥ:-

ಶಿವನನ್ನು ಒಲಿಸಲು ಬಣ್ಣಬಣ್ಣದ ಹೂಮಾಲೆ ತುಳಸಿ ಕರ್ಪೂರ ಗಂಧದಕಡ್ಡಿ ಹಣ್ಣು ಹಂಪಲು ಷಡ್ರಸ ನೈವೇದ್ಯ ಡೋಲು ಢಮರುಗ ತಮಟೆ ನಾದಸ್ವರ ಒಡವೆ ವಸ್ತ್ರ ಒನಪು ವಯ್ಯಾರ ಅಂತಸ್ತು ಆಡಂಬರ ಡೌಲು ಢಂಬಾಚಾರ ಗೊಡ್ಡುಭಕ್ತಿ ಶಿವನಿಗೆ ಒಲ್ಲದ್ದು, ಬದಲಿಗೆ ಕಿಂಚಿತ್ ದೃಢಭಕ್ತಿಯಿಂದ ಒಂದೇಒಂದು ಬಿಲ್ವಪತ್ರೆ ಅರ್ಪಿಸಿದರು ಸಾಕು!

ಭಾರತ/ವಿಶ್ವದಾದ್ಯಂತ ಪ್ರತಿಯೊಂದು ಶಿವದೇವಾಲಯದಲ್ಲು ಅನನ್ಯ ಭಕ್ತಿಯಿಂದ ಓಂ ನಮಃಶಿವಾಯ ಮಂತ್ರದೊಡನೆ ಶಿವಲಿಂಗಕ್ಕೆ 11/101/1001 ಬಿಲ್ವಪತ್ರೆ ಅರ್ಪಿಸುವರು. ಇಡೀ ರಾತ್ರಿ ಅರ್ಚನೆ ಭಜನೆ ಸಂಭ್ರಮ ನಿರಂತರ ಮೊಳಗುತ್ತದೆ. ಮಹಾಶಿವಯಾಗ, ರುದ್ರಾಭಿಷೇಕ, ಭಕ್ತಿಪಾರಾಯಣ, ಕೀರ್ತನೆ ಶಿವಕಥೆ ಶಿವಲೀಲಾಮೃತ ಗೀತಗಾಯನ ನಟರಾಜನೃತ್ಯ ಸಂಗೀತ ನಾಟಕ ಸಿನಿಮ ಮುಂತಾದ ಭಕ್ತಿಪ್ರಧಾನ ಕಾರ್ಯಕ್ರಮವನ್ನು ಅವರವರ ಮನೆಯಲ್ಲಿ ಆಚರಿಸುವುದರ ಜತೆಗೆ ದೇವಾಲಯದಲ್ಲೂ ಆಚರಿಸುತ್ತಾರೆ. ಆಸ್ತಿಕರಾದಿಯಾಗಿ ಎಲ್ಲರೂ ಕೈಗೊಳ್ಳುವ “ಉಪವಾಸ ಜಾಗರಣೆ ಶಿವಧ್ಯಾನ” ಇವುಗಳ ತ್ರಿವೇಣಿ ಸಂಗಮವೆ ಮಹಾಶಿವರಾತ್ರಿ ಧ್ಯೇಯೋದ್ದೇಶ!

ಒಮ್ಮೆ ಕೈಲಾಸದಲ್ಲಿ  ಪರಶಿವನ ಪತ್ನಿಯರಾದ ಗಂಗೆ-ಗೌರಿಯರು ಸ್ವಪ್ರತಿಷ್ಠೆಗಾಗಿ ಕಾದಾಡಿಕೊಂಡು ಶಿವನಮೇಲೆ ಆಣೆಮಾಡಿ ಪರಸ್ಪರ ಶಪಿಸಿಕೊಂಡು ಭೂಲೋಕದಲ್ಲಿ ಜನಿಸುತ್ತಾರೆ. ಗಂಗೆ ಮತ್ತು ಗೌರಿ ಭೂಲೋಕ ವಾಸಿಯಾದರು ಎಂಬುದನ್ನು ತಿಳಿದು ಈಶ್ವರನೂ ಸಹ ಭೂಲೋಕದಲ್ಲಿ ಮಾನವ ಜನ್ಮ ತಾಳುವನು. ಗೌರಿಯುರಾಜಕುಮಾರಿಯಾಗಿ, ಗಂಗೆಯುಮೀನುಗಾರ್ತಿಯಾಗಿ ಜನಿಸುತ್ತಾರೆ. ಸುದೈವದಿಂದ ಇಬ್ಬರೂ ಒಂದಾಗಿ ಸೇರಿಕೊಂಡು ಶಿವರಾತ್ರಿಯಂದು ಉಪವಾಸ-ಜಾಗರಣೆ-ಭಜನೆ ಮಾಡುತ್ತಾ ಶಿವನನ್ನು ಅನನ್ಯ ಆರಾಧಿಸುತ್ತಾರೆ. ವ್ರತ ಆಚರಿಸಿದ ಫಲದಿಂದ ಶಾಪ ವಿಮೋಚನೆಯಾಗಿ ಕೈಲಾಸಕ್ಕೆ ಹಿಂದಿರುಗುವರು. ಇದೇ ಕತೆ ಆಧಾರದಿಂದ 1967ರಲ್ಲಿ ಬಿ.ಆರ್.ಪಂತುಲು ರಾಜ್‍ಕುಮಾರ್ ಲೀಲಾವತಿ ಭಾರತಿ ತಾರಾಗಣದ ಗಂಗೆ-ಗೌರಿ ಫಿಲಂ  ತೆರೆ ಕಂಡಿತ್ತು.

ಇತ್ತೀಚಿನ ವರ್ಷಗಳಲ್ಲಿ ಕಿಡಿಗೇಡಿಗಳು ಜಾಗರಣೆ ನೆಪದಲ್ಲಿ ರಾತ್ರಿಯಿಡೀ ಮನೆಯ ಒಳಗೆ-ಹೊರಗೆ ಮದ್ಯಪಾನ, ನಡುರಸ್ತೇಲಿ ಜೂಜು, ಅಶ್ಲೀಲಚಿತ್ರ ಪ್ರ-ದರ್ಶನ, ದೇವಸ್ಥಾನ ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ, ಬೈಕ್‍ ವೀಲಿಂಗ್, ಅಡ್ಡಾ ದಿಡ್ಡಿ ‍ಡ್ರೈವಿಂಗ್, ನಿಯಮ ಮೀರಿ “ಕಾನೂನು-ಸುವ್ಯವಸ್ಥೆ” ಉಲ್ಲಂಘನೆ ಮಾಡಿ ಮೆರೆಯುತ್ತಾರೆ? ಇಂಥ ಸಮಾಜಘಾತುಕ ಚಟುವಟಿಕೆಗಳಿಂದ ಪಬ್ಲಿಕ್/ಪ್ರೈವೇಟ್ ಆಸ್ತಿಪಾಸ್ತಿ ನಷ್ಟ, ಸಮಾಜದ ಶಾಂತಿ-ನೆಮ್ಮದಿಗೆ ಭಂಗ, ಮುಂತಾದವು ಶಿಕ್ಷಾರ್ಹ ಅಪರಾಧ!

ನಾಡನ್ನು ಕಾಪಾಡಲು ಹಗಲುರಾತ್ರಿ ಶ್ರಮಿಸುತ್ತಿರುವ ಆರಕ್ಷಕರು, ಆರೋಗ್ಯಾಧಿಕಾರಿ, ಇನ್ನಿತರ ನಿಸ್ವಾರ್ಥ ಅಧಿಕಾರಿಗಳೊಡನೆ ಸಮಾಜಘಾತುಕರು ಉಡಾಫೆಯಿಂದ ವರ್ತಿಸುವುದು ಖಂಡನೀಯ. ಕೆಲವು ಪುಂಡರೂ ಪುಢಾರಿಗಳೂ ದುರ್ವರ್ತನೆ ಯಿಂದ ನಡೆದುಕೊಳ್ಳುವುದು ಅಸಹ್ಯ ಅಸಹನೀಯ. ಸಾಮಾಜಿಕ ಅಶಾಂತಿಗೆ ಕಾರಣವಾಗುವ ಮತ್ತು ಉದ್ಧಟತನದಿ ಕಾನೂನು ಕೈಗೆತ್ತಿಕೊಳ್ಳುವವರು ಯಾರೇಆಗಲಿ ಅಂಥವರನ್ನು

ಕಠಿಣಶಿಕ್ಷೆಗೆ ಗುರಿಪಡಿಸಬೇಕು. ಈವಿಷಯದಲ್ಲಿ ಎಲ್ಲರ ಸಹಾಯ ಸಹಕಾರ ಇರಬೇಕು. ಬೇಡರಕಣ್ಣಪ್ಪ, ಭಕ್ತಸಿರಿಯಾಳ, ಶಿವರಾತ್ರಿಮಹಾತ್ಮೆ, ಶ್ರೀಮಂಜುನಾಥ, ಮುಂತಾದ ಶಿವಲೀಲೆ ಮಹಿಮೆಯುಳ್ಳ ಸಿನಿಮ-ನಾಟಕ ಮೂಲಕ ಪ್ರತಿಯೊಬ್ಬರೂ ಕಂಡು ಕೇಳುವ ರೀತಿ ಆಚರಿಸೋಣ. ತನ್ಮೂಲಕ ಶಿವರಾತ್ರಿ ಮಹಾತ್ಮೆ/ ವ್ರತ ನಂಬಿದಂಥ ಭಕ್ತರೂ ಆಸ್ತಿಕರೂ ಮಹಾಶಿವರಾತ್ರಿ ಯಂದು ಯಥಾಶಕ್ತಿ ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಇಂದಲ್ಲ ನಾಳೆ ಪ್ರತಿಫಲ ದೊರಕುತ್ತದೆ? ಈಶ್ವರ ಅಲ್ಲಾ ತೇರೆ ನಾಮ್, ಸಬ್‍ಕೊ ಸನ್ಮತಿ ದೇ ಭಗವಾನ್….!

admin
the authoradmin

Leave a Reply

Translate to any language you want