LatestNews

ಕೂಡಿಗೆಯಲ್ಲಿ ನನ್ನ ವೃತ್ತಿ ನನ್ನ ಆಯ್ಕೆ, ಜಿಲ್ಲಾ ವೃತ್ತಿ  ಶಿಕ್ಷಣ ಮೇಳ… ವಿದ್ಯಾರ್ಥಿ ಭವಿಷ್ಯ ರೂಪಿಸಲು ಸಹಕಾರಿ

ಕುಶಾಲನಗರ(ಹೆಬ್ಬಾಲೆ ರಘು): ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರದ ಸರಿಯಾದ ವೃತ್ತಿ ಮಾರ್ಗವನ್ನು ಆರಿಸಿಕೊಳ್ಳಲು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗ ಕಂಡುಕೊಳ್ಳಲು ವೃತ್ತಿ ಶಿಕ್ಷಣ ಮತ್ತು ಪ್ರದರ್ಶನ ಮೇಳ ಆಯೋಜನೆ ಮಾಡಿ ಮಾಹಿತಿ ನೀಡುತ್ತಿರುವುದು ಭವಿಷ್ಯ ರೂಪಿಸಿಕೊಳ್ಳಲು  ಸಹಕಾರಿಯಾಗಿದೆ.ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ಹಹಕಾಧಿಕಾರಿ ಆನಂದ್ ಪ್ರಕಾಶ್ ಮೀನ ಶುಕ್ರವಾರ ಕರೆ ನೀಡಿದರು.

ಸಮಗ್ರ ಶಿಕ್ಷಣ-ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯಸಂಯುಕ್ತಾಶ್ರಯದಲ್ಲಿ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ  ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ವತಿಯಿಂದ ಶುಕ್ರವಾರ ನನ್ನ ವೃತ್ತಿ ನನ್ನ ಆಯ್ಕೆ ಎಂಬ ಶೀರ್ಷಿಕೆಯಡಿ ಏರ್ಪಡಿಸಿದ್ದ ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ವೃತ್ತಿಮೇಳದ ಮಾಹಿತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಂಡು ತಮ್ಮ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ತಮ್ಮ‌ ಮುಂದಿನ‌ ಶಿಕ್ಷಣದ ಆಯ್ಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪೋಷಕರು ಕೂಡ ತಮ್ಮ ಮಕ್ಕಳ ಅಭಿರುಚಿಗೆ ತಕ್ಕಂತಹ ಓದಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಮಾತನಾಡಿ, ವಿದ್ಯಾರ್ಥಿಗಳು 10ನೇ ಮತ್ತು ಪಿಯುಸಿ ನಂತರ ಮುಂದೇನು ಹಾಗೂ ವೃತ್ತಿಪರ ಕೋರ್ಸ್ ಗಳ ಆಯ್ಕೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ಮತ್ತು‌ ಮಾರ್ಗದರ್ಶನ ನೀಡಲು ಸರ್ಕಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಘಟಕವನ್ನು ಆರಂಭಿಸಲಾಗಿದ್ದು, ಈ ಘಟಕದ ವತಿಯಿಂದ ವೃತ್ತಿ ಮಾರ್ಗದರ್ಶನ ಮಾಹಿತಿ ನೀಡಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಹಾಗೂ ಹೆಚ್ಚಿನ ಅವಕಾಶ ಕಲ್ಪಿಸಲು ಪ್ರೌಢಶಾಲೆ ಹಾಗೂ ಪದವಿಪೂರ್ವ ಹಂತದ‌‌ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗ ಅವಕಾಶಗಳ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನವನ್ನು ಈ ಮೇಳದಲ್ಲಿ‌ ನೀಡಲಾಗುವುದು ಎಂದರು.

ಈ ವೃತ್ತಿಪರ ಮೇಳದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದಿನ ವೃತ್ತಿ ಜೀವನದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ರಾಮಚಂದ್ರರಾಜೇ ಅರಸ್ ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಆರ್.ವಿಜಯ್ ಮಾತನಾಡಿ, ಇಂತಹ ವೃತ್ತಿಪರ ಮೇಳಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಆರ್.ಕೆ.ಬಾಲಚಂದ್ರ, ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಹಾಗೂ ಬ್ಯಾಂಕ್ ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ  ಕುರಿತು ಮಾಹಿತಿ ನೀಡಿದರು.ವಿದ್ಯಾರ್ಥಿಗಳು ಸರ್ಕಾರಿ‌ ನೌಕರಿ ಸಿಗುವ ಕೋರ್ಸ್‌ಗಳು ಮಾತ್ರವಲ್ಲದೆ ಸ್ವಯಂ ಉದ್ಯೋಗ ಸ್ಥಾಪಿಸಿ ಇತರರಿಗೆ ನೌಕರಿ ಕೊಡುವಂತಹ ವೃತ್ತಿಪರ ಕೋರ್ಸ್‌ಗಳನ್ನೂ ಓದಬೇಕು ಎಂದರು.

ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ ಎನ್.ಎಸ್.ಸತೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆಯ ಪ್ರವೇಶ ಹಾಗೂ ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಿದರು. ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಎಚ್.ಎಚ್.ಸತೀಶ್,ವೃತ್ತಿಮೇಳದ ಉದ್ದೇಶ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಭಾರತ್ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ‌ ಸಂಸ್ಥೆಯ   ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ, ಡಿವೈಪಿಸಿಗಳಾದ ಸೌಮ್ಯ ಪೊನ್ನಪ್ಪ, ಎಂ.ಕೃಷ್ಣಪ್ಪ,  ಬಿಇಓಗಳಾದ ಎಂ.ಕೃಷ್ಣಪ್ಪ, ಆರ್.ಪಿ.ಮಹೇಶ್, ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎನ್.ವಿ.ಸ್ವಾಮಿ, ಬಿ.ಎನ್.ಪುಷ್ಪ, ಆರ್. ಹೇಮಂತರಾಜ್,  ಉಪನ್ಯಾಸಕರಾದ   ವಿ.ವಿಜಯ್, ಕೆ.ಎಸ್.ನಳಿನಾಕ್ಷಿ, ಜಗದೀಶ್, ಗೀತಾ, ಗಾಯತ್ರಿ, ಬಿ ಆರ್ ಸಿ ಎಂ.ವಿ.ಮಂಜೇಶ್, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಆರ್.ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,ಮಡಿಕೇರಿ ಐ.ಟಿ.ಐ. ಸಂಸ್ಥೆಯ ತರಬೇತಿಯ ಸಂಯೋಜಕ ಸಿ.ಕೆ.ಇಂದ್ರೇಶ್,ಸಿಪಾಯಿ ಕೆ.ಎಸ್. ಅಕ್ಷಯ್ ,ಕೂಡಿಗೆ ವೈದ್ಯಾಧಿಕಾರಿ ಡಾ ಪೂರ್ಣ  ಇತರರು ಪಾಲ್ಗೊಂಡಿದ್ದರು.

ಶಿಕ್ಷಕ ಎಸ್.ಪಿ.ಪರಮೇಶ್ ನಿರ್ವಹಿಸಿದರು. ಶಿಕ್ಷಕ ಬಸವರಾಜ್ ಬಡಿಗೇರ್ ಗೀತೆ ಹಾಡಿದರು. ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ : ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ ಎನ್.ಎಸ್.ಸತೀಶ್ , ಸಿಇಟಿ, ನೀಟ್ ಮತ್ತು ಜೆಇಇ ಪ್ರವೇಶ  ಪರೀಕ್ಷೆ ಹಾಗೂ ತಾಂತ್ರಿಕ ಕೋರ್ಸ್ ಗಳ ಕುರಿತು, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ್ , ಉದ್ಯೋಗಾವಕಾಶಗಳ ಕುರಿತು, ಮಡಿಕೇರಿ ಐ.ಟಿ.ಐ. ಸಂಸ್ಥೆಯ ತರಬೇತಿಯ ಸಂಯೋಜಕ ಸಿ.ಕೆ.ಇಂದ್ರೇಶ್, ಐ.ಟಿ.ಐ. ವೃತ್ತಿಪರ ಕೋರ್ಸ್ ಗಳ  ಬಗ್ಗೆ ಮಾಹಿತಿ ನೀಡಿದರು.

ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಆಯ್ಕೆಯಾಗಿರುವ  ಸಿಪಾಯಿ ಕೆ.ಎಸ್.ಅಕ್ಷಯ್  ಸೇನಾ ಅಧಿಕಾರಿಗಳ ಹುದ್ದೆಗೆ ಸೇರುವ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿದರು. ವೃತ್ತಿಮೇಳದಲ್ಲಿ ವಿವಿಧ ಇಲಾಖೆ,ಸಂಸ್ಥೆಗಳಿಂದ 15 ಮಳಿಗೆಗಳಲ್ಲಿ ವಿವಿಧ ವೃತ್ತಿಪರ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಲಾಯಿತು. ಮೇಳದಲ್ಲಿ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು , ಪೋಷಕರು ಸೇರಿದಂತೆ 600 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಮೇಳದ ಸದುಪಯೋಗ ಪಡೆದುಕೊಂಡರು.

 

admin
the authoradmin

Leave a Reply

Translate to any language you want