ಸಾಲಿಗ್ರಾಮ(ಸಂಘಟನೆ ಮಂಜುನಾಥ್): ದಾರ್ಶನಿಕರ ಹಾಗೂ ಮಹನೀಯರುಗಳ ಆದರ್ಶ ಗುಣಗಳನ್ನು ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಂಪಿ ಹೇಮಕೂಟ ಗಾಯಿತ್ರಿ ಪೀಠದ ಶ್ರೀ ಶ್ರೀ ದಯಾನಂದಪುರಿ ಸ್ವಾಮೀಜಿ ಅವರು ಹೇಳಿದರು.
ಅವರು ತಾಲೂಕಿನ ಹರದನಹಳ್ಳಿಯಲ್ಲಿ ಶ್ರೀ ಚೌಡೇಶ್ವರಿ ದೇವಾಂಗ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜಯಂತ್ಯುತ್ಸವ ಕಾರ್ಯಕ್ರಮಗಳನ್ನು ಮಾಡುವಂತಹ ಸಂದರ್ಭದಲ್ಲಿ ಸರ್ವರು ಒಟ್ಟಾಗಿ ಸೇರಿ ಆಚರಣೆ ಮಾಡುವ ಮೂಲಕ ಮಹನೀಯರುಗಳಿಗೆ ಗೌರವವನ್ನು ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಹರದನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಂಗ ಸಂಘದವರು ಮಾಡಿಕೊಂಡು ಬರುತ್ತಿರುವ ದೇವತಾ ಕಾರ್ಯ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಪ್ರತಿಯೊಬ್ಬರೂ ಪ್ರೀತಿ ವಿಶ್ವಾಸದೊಂದಿಗೆ ಬೆರೆತು ಸಹ ಬಾಳ್ವೆಯ ಜೀವನ ನಡೆಸಬೇಕು ಎಂದರು.
ದೇವಾಂಗ ಸಮುದಾಯದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಈ ನಾಡಿಗೆ ಸತ್ಪ್ರಜೆಗಳನ್ನ ನೀಡಬೇಕು. ಸಮುದಾಯದ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಶ್ರದ್ಧೆಯಿಂದ ಕಲಿತು ಉನ್ನತ ಸ್ಥಾನಮಾನಗಳನ್ನು ಅಲಂಕರಿಸುವ ಮೂಲಕ ಸಮುದಾಯಕ್ಕೆ, ಹೆತ್ತವರಿಗೆ, ಹುಟ್ಟಿದ ಊರಿಗೆ ಹಾಗೂ ನಾಡಿಗೆ ಕೀರ್ತಿಯನ್ನು ತರಬೇಕು ಎಂದು ಕಿವಿಮಾತು ಹೇಳಿದರು.

ಶ್ರೀ ದೇವರ ದಾಸಿಮಯ್ಯ ಅವರ ಭಾವಚಿತ್ರ ಹಾಗೂ ಹಂಪಿ ಹೇಮಕೂಟ ಗಾಯಿತ್ರಿ ಪೀಠದ ಜಗದ್ಗುರು ಶ್ರೀಶ್ರೀ ದಯಾನಂದಪುರಿ ಸ್ವಾಮೀಜಿ ಅವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೇರಳದ ಮಂಗಳವಾದ್ಯ, ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ಪೂರ್ಣ ಕುಂಭ ಕಳಸಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯನ್ನು ಮಾಡಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಯವರನ್ನು ಹಾಗೂ ಇತರ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಪ್ರಸಾದ ವಿನಿಯೋಗವನ್ನು ಮಾಡಲಾಯಿತು.
ಸಮಾರಂಭದಲ್ಲಿ ಶ್ರೀ ಚೌಡೇಶ್ವರಿ ದೇವಾಂಗ ಸಂಘದ ಯಜಮಾನರುಗಳು, ಆಡಳಿತ ಮಂಡಳಿಯವರು, ಜನಪ್ರತಿನಿಧಿಗಳು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.








