ಮೈಸೂರು: ಇದೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಗಳಿಗೆ ಇಸಿಜಿ ಪರೀಕ್ಷೆಯನ್ನು ಮಾಡಲಾಗಿದೆ. ಆ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಆಯ್ಕೆ ಪ್ರಕ್ರಿಯೆಗೆ ಅರಣ್ಯ ಇಲಾಖೆ ಚಾಲನೆ ನೀಡಿದ್ದು, ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಆನೆಗಳಿಗೆ ಇಸಿಜಿ ಪರೀಕ್ಷೆ ನಡೆಸುವ ಮೂಲಕ ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಅ.11 ರಿಂದ ಆರಂಭಗೊಂಡು, ಅ.21ರಂದು ವಿಜಯದಶಮಿ ಜಂಬೂಸವಾರಿಯೊಂದಿಗೆ ಸಂಪನ್ನಗೊಳ್ಳಲಿದೆ. ದಸರಾ ಹಿನ್ನೆಲೆಯಲ್ಲಿ ಆಗಸ್ಟ್ ಎರಡನೇ ವಾರದಲ್ಲಿ ಗಜಪಡೆಯ ಅಧಿಕೃತ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸದ್ಯ ಆನೆಗಳ ಫಿಟ್ನೆಸ್ ಪರಿಶೀಲನೆ ಮಾಡಲಾಗುತ್ತಿದೆ.
ಇನ್ನು ಆನೆಗಳಿಗೆ ಇಸಿಜಿ ಮಾಡಿಸಲು ಕಾರಣಗಳಿದ್ದು ಅದೇನೆಂದರೆ, ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳು ಮೈಸೂರಿನ ಜನಜಂಗುಳಿ, ವಾಹನ ದಟ್ಟಣೆ ಹಾಗೂ ನಗರದ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇದಲ್ಲದೆ ತಾಲೀಮು ಹಾಗೂ ಜಂಬೂಸವಾರಿಯ ದಿನದಂದು ಒಟ್ಟು 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ಈ ಭಾರಿ ಶಬ್ದಕ್ಕೆ ಆನೆಗಳು ವಿಚಲಿತಗೊಳ್ಳದೆ ಗಟ್ಟಿಯಾಗಿ ನಿಲ್ಲಬೇಕಾದರೆ ಅವುಗಳ ಹೃದಯದ ಆರೋಗ್ಯ ಉತ್ತಮವಾಗಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಗರಹೊಳೆಯ ಮತ್ತಿಗೋಡು, ಕೊಡಗಿನ ದುಬಾರೆ ಹಾಗೂ ಬಂಡೀಪುರದ ರಾಮ್‌ಪುರ ಆನೆ ಶಿಬಿರಗಳ ಒಟ್ಟು 20ಕ್ಕೂ ಹೆಚ್ಚು ಆನೆಗಳಿಗೆ ಮೊದಲ ಹಂತದಲ್ಲಿ ಇಸಿಜಿ ಪರೀಕ್ಷೆ ನಡೆಸಿ, ಹೃದಯ ಹಾಗೂ ಉಸಿರಾಟದ ಸ್ಥಿತಿಗತಿ ಪರೀಕ್ಷಿಸಲಾಗಿದೆ.

ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲಾಗಿದೆ ಏಕೆಂದರೆ? 2923ರ ದಸರಾ ವೇಳೆ ರಾಮ್ ಪುರ ಕ್ಯಾಂಪ್ ನ ಲಕ್ಷ್ಮಿ ಎಂಬ ಹೆಣ್ಣಾನೆ ಅರಮನೆ ಆವರಣದಲ್ಲೇ ಗಂಡು ಮರಿಗೆ ಜನ್ಮ ನೀಡಿತ್ತು. ಗರ್ಭಿಣಿ ಆನೆಯನ್ನು ಕರೆತಂದು ತಾಲೀಮಿನ ಹೆಸರಿನಲ್ಲಿ ಕಿರುಕುಳ ನೀಡಲಾಗಿದೆ ಎಂದು ಆಗ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಈ ಬಾರಿ ಹೆಣ್ಣಾನೆಗಳಿಗೆ ಕಡ್ಡಾಯವಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸುವ ಮೂಲಕ ಗರ್ಭಧರಿಸಿರುವುದನ್ನು ಮುಂಚಿತವಾಗಿಯೇ ಪತ್ತೆಹಚ್ಚಲು ಕ್ರಮ ಕೈಗೊಂಡಿದೆ.
ಈ ಬಾರಿ ದಸರಾ ಮಹೋತ್ಸವ ಅಕ್ಟೋಬರ್ ತಿಂಗಳ ದ್ವಿತೀಯಾರ್ಧದಲ್ಲಿ ಬರುವುದರಿಂದ ಗಜಪಡೆ ಆಯ್ಕೆ ಪ್ರಕ್ರಿಯೆಯನ್ನು ಸುಮಾರು ೨೦ ದಿನಗಳ ಕಾಲ ತಡವಾಗಿ ಆರಂಭಿಸಲಾಗಿದೆ. ಆಗಸ್ಟ್ ಎರಡನೇ ವಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಷ್ಟರೊಳಗೆ ಇಸಿಜಿ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವರದಿಗಳು ಲಭ್ಯವಾಗಲಿವೆ. ಹಿರಿಯ ಪಶುವೈದ್ಯಾಧಿಕಾರಿಗಳು ಹಾಗೂ ತಜ್ಞರ ವರದಿಯನ್ನು ಆಧರಿಸಿ ಅಂತಿಮವಾಗಿ ದಸರಾ ಗಜಪಡೆಯನ್ನು ಘೋಷಿಸಲಾಗುತ್ತದೆ.
ಮೈಸೂರು ವನ್ಯಜೀವ ವಿಭಾಗದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, ದಸರಾ ಗಜಪಡೆ ಆಯ್ಕೆಗಾಗಿ ಆನೆಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕುಶಾಲತೋಪಿನ ಭಾರಿ ಶಬ್ದವನ್ನು ತಡೆದುಕೊಳ್ಳಲು ಆನೆಗಳ ಹೃದಯದ ಆರೋಗ್ಯ ಮುಖ್ಯವಾಗಿರುವುದರಿಂದ ಇದೇ ಮೊದಲ ಬಾರಿಗೆ ಇಸಿಜಿ ಪರೀಕ್ಷೆ ಮಾಡಿಸಲಾಗಿದೆ. ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಲಾಗಿದ್ದು, ವರದಿ ಬಂದ ತಕ್ಷಣವೇ ಅಂತಿಮ ಗಜಪಡೆಯನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.








