ಹುಣಸೂರು: ತನ್ನ ಮನೆಯಲ್ಲಿ ಅಕ್ರಮವಾಗಿ ಜಿಂಕೆಯನ್ನು ಕಟ್ಟಿ ಹಾಕಿದ್ದನ್ನು ಪತ್ತೆ ಹಚ್ಚಿದ ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ನಾಗರಹೊಳೆ ಉದ್ಯಾನದ ಬೀಟ್ ಗಾರ್ಡ್ ನ್ನು ಬಂಧಿಸಿ ಆತನ ಬಳಿಯಿದ್ದ ಅಕ್ರಮ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.
ನಾಗರಹೊಳೆ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದ ಬೀಟ್‌ಗಾರ್ಡ್ ಪೊನ್ನಪ್ಪ ಬಂಧಿತ ಆರೋಪಿ, ಈತನ ಮನೆಯಲ್ಲಿದ್ದ ಸ್ನೇಹಿತರ ಬಂದೂಕನ್ನು ಸಹ ವಶಕ್ಕೆ ಪಡೆಯಲಾಗಿದೆ. ಆರೋಪಿ ಪೊನ್ನಪ್ಪ ಉದ್ಯಾನದಂಚಿನಲ್ಲೇ ತನ್ನ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಅಲ್ಲಿ ಜಿಂಕೆಯನ್ನು ಸಾಕುತ್ತಿರುವ ಹಾಗೂ ಈತ ಕೆಲವರೊಂದಿಗೆ ಸೇರಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದಾನೆಂದು ಬೆಂಗಳೂರಿನ ಅರಣ್ಯ ಸಂಚಾರಿ ದಳಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಆತನ ಮನೆ ಮೇಲೆ ದಾಳಿ ನಡೆಸಲಾಗಿಗೆ ಈ ವೇಳೆ ಮನೆಯ ಕೊಟ್ಟಿಗೆಯಲ್ಲಿ ಜಿಂಕೆ ಇರುವುದು ಹಾಗೂ ಮತ್ತೊಬ್ಬರಿಗೆ ಸೇರಿದ ಬಂದೂಕು ಪತ್ತೆಯಾಗಿದೆ. ಆದರೆ ಯಾವುದೇ ಮಾಂಸ ಪತ್ತೆಯಾಗಿಲ್ಲ.
ಈ ಬಗ್ಗೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ ಪಿ.ಎ.ಸೀಮಾರಿಗೆ ಸಂಚಾರಿ ದಳದ ಅಧಿಕಾರಿಗಳು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಎಸಿಎಫ್ ಲಕ್ಷ್ಮಿಕಾಂತ್, ಆರ್‌ಎಫ್‌ಓ ಸುಬ್ರಮಣ್ಯರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಬೀಟ್‌ಗಾರ್ಡ್ ಪೊನ್ನಪ್ಪ ಜಿಂಕೆಗೆ ಗಾಯವಾಗಿದ್ದರಿಂದ ಕಳೆದ ಮೂರು ತಿಂಗಳಿನಿಂದ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಗಾಯಗೊಂಡಿರುವ ಜಿಂಕೆಯನ್ನು ರಕ್ಷಿಸಿ ಕೂರ್ಗಳ್ಳಿ ವನ್ಯಜೀವಿ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಬೀಟ್‌ಗಾರ್ಡ್ ಪೊನ್ನಪ್ಪ ಜಿಂಕೆ ಸಾಕುತ್ತಿರುವುದು, ಮನೆಯಲ್ಲಿ ಬಂದೂಕು ಹೊಂದಿರುವುದು ಅಪರಾಧವಾಗಿದೆ. ಆದರೆ ಮನೆಯಲ್ಲಿ ಯಾವುದೇ ಪ್ರಾಣಿ ಮಾಂಸ ಪತ್ತೆಯಾಗಿಲ್ಲ ಇದೀಗ ಬಂದೂಕು ವಶಕ್ಕೆ ಪಡೆದು ಆತನನ್ನು ಬಂಧಿಸಲಾಗಿದ್ದು, ಆತನ ವಿರುದ್ದ ಇಲಾಖೆ ವಿಚಾರಣೆ ನಡೆಸಲಾಗುವುದೆಂದು ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.








