ಸಮ ಸಮಾಜದ ಹರಿಕಾರ.. ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ
ಏಪ್ರಿಲ್ 20, ಬಸವ ಜಯಂತಿ ತನ್ನಿಮಿತ್ತ ವಿಶೇಷ ಲೇಖನ

ಜಾತಿ ನಡುವಿನ ಮೇಲು ಕೀಳಿಗೆ ಕೊನೆಗಾಣಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ಅಂತಃಕರಣವನ್ನು ಬಿತ್ತಿದ ಬಸವಣ್ಣರವರ ಕುರಿತಂತೆ ಬರಹಗಾರರಾದ ಮೈ.ನಾ.ಲೋಕೇಶ್ ಇಲ್ಲಿ ಬರೆದಿದ್ದಾರೆ…
ನೆಲನೊಂದೆ , ಹೊಲಗೇರಿ, ಶಿವಾಲಯಕ್ಕೆ..
ಜಲವೊಂದೇ ಶೌಚಾಚಮನಕ್ಕೆ..
ಕುಲವೊಂದೇ ತನ್ನ ತಾನರಿವದಂಗೆ..
ಫಲವೊಂದೇ ಷಡುದರ್ಶನ ಮುಕ್ತಿಗೆ..
ನಿಲುವೊಂದೇ.. ಕೂಡಲಸಂಗಮದೇವ
ನಿಮ್ಮನರಿದವಂಗೆ…
–ಬಸವಣ್ಣ
ಶಿವಾಲಯಕ್ಕೆ ಹೋಗುವುದಕ್ಕೂ ಹೊಲಗೇರಿಗೆ ಹೋಗುವುದಕ್ಕೂ ಒಂದೇ ನೆಲ , ಭೂಮಿ. ಶುದ್ದಿ ಕ್ರಿಯೆಗೆ ಎಲ್ಲರೂ ಬಳಸುವ ನೀರು ಒಂದೇ, ಆಗಿರಲು, ತನ್ನ ಆತ್ಮವನ್ನು ಅರಿತವನಿಗೆ ಒಂದೇ ಕುಲ. ಆತ್ಮಜ್ಞಾನದಿಂದಲೇ ಮುಕ್ತಿ. ಕೂಡಲಸಂಗನ ನಿಜಸ್ವರೂಪವನ್ನು ಅರಿತವನಿಗೆ ಎಲ್ಲವೂ ಒಂದೇ.. ಎಂಬ ಉದಾತ್ತ ಮೌಲ್ಯವನ್ನು ಸಾರುತ್ತದೆ ಬಸವಣ್ಣನವರ ಈ ವಚನ.

ಕರ್ನಾಟಕದ ಭಕ್ತಿ ಚಳವಳಿಯ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನವು ಮಹತ್ವದ ತಿರುವು ಪಡೆದ ಕಾಲಘಟ್ಟ. ಈ ಸಮಯದಲ್ಲಿ ಮಹಾನ್ ಸಮಾಜ ಸುಧಾರಕರಾದ ಬಸವಣ್ಣ ಅವರು ಸ್ಥಾಪಿಸಿದ ಮಾನವತಾ ಧರ್ಮವು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ಬಿತ್ತಿದ ಮಹತ್ತರ ಚಳವಳಿಯಾಗಿದೆ.
ಅಂದು ಸಮಾಜವು ಜಾತಿ, ವರ್ಣ ಮತ್ತು ಅಸಮಾನತೆಯ ಬಂಧನಗಳಲ್ಲಿ ಬಂಧಿಯಾಗಿತ್ತು. ಸಮಾಜದಲ್ಲಿ ಮನೆ ಮಾಡಿದ್ದ ಅಸ್ಪೃಶ್ಯತೆ, ಅಜ್ಞಾನ, ಮೂಢನಂಬಿಕೆಗಳನ್ನು ತೊಲಗಿಸಿ, ಸಮಸಮಾಜದ ನಿರ್ಮಾಣಕ್ಕೆ ಅಹರ್ನಿಶಿ ದುಡಿದರು, ಬಸವಾದಿ ಶರಣರು. ವಚನ ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಗೆ ನಾಂದಿ ಹಾಡಿದರು. ಧರ್ಮವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅದನ್ನು ಜೀವನದ ನೈತಿಕ ಮೌಲ್ಯಗಳೊಂದಿಗೆ ಜೋಡಿಸಿದರು.

ವರ್ಣಾಶ್ರಮ ವ್ಯವಸ್ಥೆಯ ಜಾತಿ ಪದ್ಧತಿಯನ್ನು ವಿರೋಧಿಸಿ, ಎಲ್ಲರೂ ಸಮಾನರು.. ಹುಟ್ಟಿನಿಂದ ಯಾರೂ ಮೇಲು -ಕೀಳಲ್ಲ,. ಜಾತಿ, ಲಿಂಗ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಗೌರವ ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು.. ಕಾಯಕವೇ ಕೈಲಾಸ , ಕೆಲಸವೇ ಪೂಜೆ ಎಂಬ ತತ್ವ. ಯಾವ ಕೆಲಸವೂ ಹೀನವಲ್ಲ, ಪ್ರಾಮಾಣಿಕವಾಗಿ ಮಾಡಿದ ಶ್ರಮವೇ ದೇವರ ಸೇವೆ. ಈ ತತ್ವವು ಸಮಾಜದ ಎಲ್ಲಾ ಕಾಯಕಗಳ ವೃತ್ತಿ ಗೌರವವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿತು.
ದಾಸೋಹ ಎಂಬ ಅದ್ಭುತ ಪರಿಕಲ್ಪನೆ, ಸಂಪತ್ತನ್ನು ಹಂಚಿಕೊಳ್ಳುವ ಸಂಸ್ಕೃತಿ. ಸಮಾಜದ ಒಳಿತಿಗಾಗಿ ಬದುಕುವ ಮನೋಭಾವ. ಭಕ್ತಿ ಮತ್ತು ನೈತಿಕತೆ, ಆಚಾರ-ವಿಚಾರಗಳಲ್ಲಿ ಶುದ್ಧತೆ, ಸತ್ಯ ಮತ್ತು ನೀತಿ ಪಾಲನಾ ತತ್ವಗಳ ಅನುಸರಣೆ ಗೆ ಮಹತ್ವ ನೀಡಿದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಪ್ರಜಾಪ್ರಭುತ್ವ ಸಭೆಯಾಗಿ , ಇಲ್ಲಿ ಶರಣರು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಸಮಾಜದ ಎಲ್ಲಾ ವರ್ಗದವರಿಗೂ ಇಲ್ಲಿ ಸಮಾನ ಅವಕಾಶವಿತ್ತು.

ಅಕ್ಕ ಮಹಾದೇವಿ, ಅಲ್ಲಮ ಪ್ರಭು , ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ ಡೋಹರ ಕಕ್ಕಯ್ಯ ಅಂಬಿಗರ ಚೌಡಯ್ಯ, ಸೇರಿದಂತೆ ಅನೇಕ ಶರಣರು ತಮ್ಮ ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸಿದರು. ಬ್ರಾಹ್ಮಣ ಕುಲದ ಮಧುವರಸರು, ಶರಣರಾಗಿ ಮೇಲ್ಜಾತಿಯ ಅಹಂಕಾರದಿಂದ ಮುಕ್ತರಾದರೆ, ಪಾದರಕ್ಷೆ ಹೊಲೆಯುವ, ಸಮಗಾರ ಹರಳಯ್ಯ ಶರಣರಾಗಿ, ಕೆಳಜಾತಿಯ ಕೀಳರಿಮೆ ಯಿಂದ ಮುಕ್ತರಾದರು..
ಈ ಸಂದರ್ಭದಲ್ಲಿ, ಕುಲವನರಸುವರೆ, ಶರಣರಲ್ಲಿ, ಜಾತಿ ಸಂಕರವಾದ ಬಳಿಕ ?.. ಎಂಬ ಬಸವಣ್ಣನವರ ಪ್ರಶ್ನೆ ಚಿಂತನಾರ್ಹವಾಗಿದೆ. ಈ ಮೂಲಕ ಕಲ್ಯಾಣವು ವೈಚಾರಿಕ ಕ್ರಾಂತಿಯ ಕೇಂದ್ರವಾಯಿತು. ಶರಣರ ವಚನಗಳು ಇಂದಿಗೂ ಸರ್ವಸ್ಪರ್ಶಿ, ಸರ್ವವ್ಯಾಪಿ ಯಾಗಿವೆ. ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಆತ್ಮ ಜ್ಞಾನ ಮತ್ತು ಸಾಮಾಜಿಕ ನೀತಿ ಯನ್ನು ಮನೆ -ಮನಕ್ಕೆ ತಲುಪಿಸುವ ಸಾರ್ಥಕ ಕಾರ್ಯವನ್ನು ನಿರ್ವಹಿಸಿದರು.

ಬಸವಣ್ಣನವರ ಮಾನವತಾ ಧರ್ಮವು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಜಾತಿ, ಧರ್ಮ, ವರ್ಣದ ಹೆಸರಿನಲ್ಲಿ ನಡೆಯುವ ವಿಭಜನೆಗಳನ್ನು ನಿವಾರಿಸಲು ಬಸವ ಚಿಂತನೆಗಳು ಮಾರ್ಗದರ್ಶಕವಾಗಿವೆ. ಸಹಾನುಭೂತಿ, ಸಮಾನತೆ ಮತ್ತು ಸಹಬಾಳ್ವೆ ಎಂಬ ಮೌಲ್ಯಗಳನ್ನು ಬೆಳೆಸಲು ಈ ಧರ್ಮವು ಮಹತ್ವದ ಪಾತ್ರವಹಿಸುತ್ತದೆ. ಅವರು ಕೇವಲ ಮನುಷ್ಯರಲ್ಲದೇ ಪ್ರಾಣಿ ,ಪಕ್ಷಿ ,ಪರಿಸರ ಪ್ರೇಮವನ್ನು ಸಹ ಬೋಧಿಸಿದರು. ಸಕಲ ಜೀವಾತ್ಮರಿಗೆ ಲೇಸನ್ನ ಬಯಸುವವನೇ ನಿಜವಾದ ಶರಣ ಎಂಬುದು ಬಸವಣ್ಣನವರ ಆದರ್ಶವಾಗಿತ್ತು..
ಬಸವಾದಿ ಶರಣರು ಕಟ್ಟಿದ ಮಾನವತಾ ಧರ್ಮವು ಕೇವಲ ಧಾರ್ಮಿಕ ಚಳವಳಿಯಲ್ಲ. ಅದೊಂದು ಸಾಮಾಜಿಕ ಕ್ರಾಂತಿ. ಶರಣರು ಎಂದರೆ ‘ಅರಿವು” ಮತ್ತು ‘ಆಚಾರ’ ಒಂದಾದವರು. ಅವರು ವಾಸ್ತವವಾದಿಗಳಷ್ಟೇ ಅಲ್ಲದೆ ವೈಜ್ಞಾನಿಕ ಪ್ರಜ್ಞೆವುಳ್ಳವರಾಗಿದ್ದರು. ಅವರು ವೇದ, ಶಾಸ್ತ್ರ, ಪುರಾಣ, ಆಗಮ ಗಳಿಂದ ದೂರವಿದ್ದರೂ, ಅವರ ಇಂದ್ರಿಯ ಮನಸ್ಸು ಬುದ್ಧಿಯ ಚಿಂತನ- ಮಂಥನದ ನಿಕಷಕ್ಕೆ ಒಳಪಟ್ಟ ಅಮೃತ ನುಡಿಗಳೇ. ವಚನಗಳು. ವೈಚಾರಿಕ ಚಿಂತನೆಯ ಬಸವಣ್ಣನವರ ಈ ವಚನ ಹೆಚ್ಚು ಪ್ರಸ್ತುತವೆನಿಸುತ್ತದೆ.

ವೇದಕ್ಕೆ ಒಲೆಯ ಕಟ್ಟುವೆ. ಶಾಸ್ತ್ರಕ್ಕೆ. ನಿಗಳವನ್ನಿಕ್ಕುವೆ,, ತರ್ಕದ ಬೆನ್ನ ಬಾರನ್ನೆತ್ತುವೆ.. ಆಗಮದ ಮೊಗ ಕೊಯುವೆ.. ನೋಡಯ್ಯಾ .. ಮಹಾದಾನಿ ಕೂಡಲಸಂಗಮದೇವ.. ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ… ಪ್ರಶ್ನಿಸುವ ಮೂಲಕ ಸತ್ಯವನ್ನು ಶೋಧಿಸುವ ವಿಜ್ಞಾನದ ಪ್ರಯೋಗವನ್ನೇ ವಚನಗಳಲ್ಲಿ ಸಹ ಕಾಣಬಹುದು.
ಮಾನವೀಯ ಮೌಲ್ಯಗಳನ್ನು ಪ್ರತಿಷ್ಠಾಪಿಸಿ, ಸಮಾನತೆಯ ಸಮಾಜವನ್ನು ನಿರ್ಮಿಸಲು ಬಸವಣ್ಣನವರು ಮಾಡಿದ ಪ್ರಯತ್ನಗಳು ಅನನ್ಯವಾದವು. ಅವರ ಚಿಂತನೆಗಳು ಸದಾಕಾಲವೂ ಪ್ರೇರಣೆಯಾಗಿದ್ದು, ಮಾನವಕುಲಕ್ಕೆ ದಾರಿ ತೋರಿಸುತ್ತವೆ. ಬಸವಾದಿ ಶರಣರ ಸರಳ, ಅರ್ಥಗರ್ಭಿತ ವಚನಗಳನ್ನು , ಅವಲೋಕಿಸಿದಾಗ, ಶರಣರು ನಿಂತ ನೆಲೆ , ಏರಿದ ಎತ್ತರ, ಅನುಭಾವದ ಆಳ ಅರಿವಿಗೆ ಬರುತ್ತಾ ಹೋಗುತ್ತದೆ.

“ಮಾನವ ಸೇವೆಯೇ ಈಶ ಸೇವೆ” ಎಂಬ ಬಸವ ತತ್ವವು ನಮ್ಮ ಜೀವನದ ಮಾರ್ಗದೀಪವಾಗಲಿ….








