ಶರಣರ ಅನುಭಾವದ ನುಡಿಗಳು ನೃತ್ಯದ ರೂಪ ತಾಳಿದಾಗ ಭಕ್ತವೃಂದ ಆಧ್ಯಾತ್ಮದ ಸಾಗರದಲ್ಲಿ ಮಿಂದೆದ್ದಿತು. ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ದಂಪತಿಗಳ ಸುಪುತ್ರಿ ಕುಮಾರಿ ವಚನ ಇತ್ತೀಚೆಗೆ ಬಸವಕಲ್ಯಾಣ ಮತ್ತು ಬೀದರ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ವಚನ ನೃತ್ಯ ಪ್ರದರ್ಶಿಸಿ ಸಾವಿರಾರು ಜನರ ಮನ ಗೆದ್ದಿದ್ದಾರೆ.
ಬಸವಕಲ್ಯಾಣದ ಗುಣತೀರ್ಥವಾಡಿ ದಾನಮ್ಮದೇವಿ ಉತ್ಸವದಲ್ಲಿ ಆಧ್ಯಾತ್ಮಿಕ ರಸದೌತಣ ನೀಡಿ ಎಲ್ಲರ ಗಮನಸೆಳೆದಿದ್ದಾರೆ.. ಬಸವಣ್ಣನವರ ಕಾಯಕ ಭೂಮಿಯಾದ ಬಸವಕಲ್ಯಾಣದ ಗುಣತೀರ್ಥವಾಡಿಯಲ್ಲಿ ಜರುಗಿದ ಶರಣೆ ವರದಾನಿ ದಾನಮ್ಮದೇವಿ ಉತ್ಸವದಲ್ಲಿ ಕುಮಾರಿ ವಚನ ಅವರು ಪ್ರದರ್ಶಿಸಿದ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ಸುಶ್ರಾವ್ಯ ಗಾಯನ ಸಿನಿಮಾ ಹಿನ್ನೆಲೆ ಗಾಯಕ ಹೇಮಂತ್, ‘ವಚನ ಕೋಗಿಲೆ’ ಖ್ಯಾತಿಯ ವಿಜಯಲಕ್ಷ್ಮಿ ಲಿಂಗಾಯತ್ ಹಾಗೂ *ಶೈಲಾ ಸಿದ್ದರಾಮಪ್ಪ ಅವರು ಹಾಡಿದ ವಚನಗಳಿಗೆ ವಚನ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಪ್ರಮುಖ ವಚನಗಳು ಅಲ್ಲಮಪ್ರಭುಗಳ ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ, ತನುವ ತೋಂಟವ ಮಾಡಿ ಹಾಗೂ ಅಕ್ಕಮಹಾದೇವಿಯವರ ನಚ್ಚುಗೆ ಮನ ನಿಮ್ಮಲ್ಲಿ ವಚನಗಳು ಮತ್ತು ವಚನ ಕುಮಾರಸ್ವಾಮಿ ಅವರ ಸಾಹಿತ್ಯದ ಶರಣು ಗೀತೆಯ ಭಾವಕ್ಕೆ ತಕ್ಕಂತೆ ಅದ್ಭುತ ನೃತ್ಯ ಪ್ರದರ್ಶಿಸುವ ಮೂಲಕ ನೆರೆದಿದ್ದ ಸಾವಿರಾರು ಭಕ್ತರನ್ನು ಆಧ್ಯಾತ್ಮಿಕ ಸಾಗರದಲ್ಲಿ ಮಿಂದೇಳುವಂತೆ ಮಾಡಿದರು.

ಶ್ರೀಗಳ ಆಶೀರ್ವಾದ ಹಾಗೂ ಶ್ಲಾಘನೆ
ಬೈಲೂರು ನಿಷ್ಕಲ ಮಂಟಪದ ಪೂಜ್ಯ ಶ್ರೀ ನಿಜಗುಣಾನಂದಸ್ವಾಮೀಜಿಯವರು ಕುಮಾರಿ ವಚನ ಅವರ ನೃತ್ಯ ಪ್ರದರ್ಶನವನ್ನು ವೀಕ್ಷಿಸಿ, ಕಲೆ ಮತ್ತು ಭಕ್ತಿಯ ಅಪೂರ್ವ ಸಂಗಮದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ವಚನಗಳ ಸಾರವನ್ನು ನೃತ್ಯದ ಮೂಲಕ ಮನಮುಟ್ಟುವಂತೆ ಪ್ರದರ್ಶಿಸಿದ ಬಾಲಪ್ರತಿಭೆಯನ್ನು ಶ್ರೀಗಳು ಹರಸಿ ಆಶೀರ್ವದಿಸಿದರು.

ಬಸವಕಲ್ಯಾಣದ ಯಶಸ್ವಿ ಪ್ರದರ್ಶನದ ನಂತರ, ಅದೇ ದಿನ ಸಂಜೆ ಬೀದರ್‌ನ ಬಸವಕೇಂದ್ರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿಯೂ ವಚನ ನೃತ್ಯ ಪ್ರದರ್ಶಿಸಲಾಯಿತು. ಶರಣರ ತತ್ವಗಳನ್ನು ಕಲೆಯ ಮೂಲಕ ಜನರಿಗೆ ತಲುಪಿಸಿದ ಈ ಪುಟಾಣಿ ಪ್ರತಿಭೆಯ ಕೌಶಲ್ಯಕ್ಕೆ ಅಲ್ಲಿನ ಪ್ರೇಕ್ಷಕರು ಮಾರು ಹೋದರು.

ಗೌರವ ಸಮರ್ಪಣೆ
ಎರಡೂ ಕಾರ್ಯಕ್ರಮಗಳಲ್ಲಿ ಕುಮಾರಿ ವಚನ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಗೌರವ ಸಮರ್ಪಣೆ ಮಾಡಲಾಯಿತು. ಕಿರಿಯ ವಯಸ್ಸಿನಲ್ಲಿಯೇ ಶರಣ ಸಂಸ್ಕೃತಿಯನ್ನು ನೃತ್ಯದ ಮೂಲಕ ಪಸರಿಸುತ್ತಿರುವ ವಚನ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿರುವುದರ ಜೊತೆಗೆ ಅಂತರ್ಜಾಲದಲ್ಲಿ ಕೂಡಾ ವೀಡಿಯೋ ನೋಡಿ ಸಾವಿರಾರು ಜನ ಮೆಚ್ಚುಗೆ ಸೂಚಿಸಿ ಕಮೆಂಟ್ ಮೂಲಕ ಹರಸಿದ್ದಾರೆ.








