ಮಡಿಕೇರಿ: ಕೊಡಗಿನಲ್ಲಿ ಹೋಂಸ್ಟೇ ಉದ್ಯಮ ಬದುಕು ಕಟ್ಟಿಕೊಟ್ಟಿದ್ದು, ಉದ್ಯೋಗ ಸೃಷ್ಟಿಗೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆದರೀಗ ಇಡೀ ಹೋಂಸ್ಟೇ ಉದ್ಯಮಕ್ಕೆ ಕಪ್ಪುಮಚ್ಚೆಯಾಗುವಂತಹ ಘಟನೆಯೊಂದು ನಡೆದಿದ್ದು, ಹೋಂಸ್ಟೇ ಉದ್ಯಮಿಗಳು ಆತಂಕಪಡುವಂತಾಗಿದೆ.. ಇಷ್ಟಕ್ಕೂ ನಡೆದಿದ್ದೇನು? ಎಂದು ನೋಡಿದ್ದೇ ಆದರೆ ಹೋಂಸ್ಟೇನಲ್ಲಿ ಅಮೇರಿಕಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಹೋಂಸ್ಟೇ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಮಾಲೀಕ ಜೈಲು ಪಾಲಾಗಿದ್ದಾರೆ.
ಅಮೆರಿಕಾ ಮೂಲದ ವಾಷಿಂಗ್ಟನ್ ನ ಮಹಿಳೆ ಅತ್ಯಾಚಾರ ನಡೆದ ಕುರಿತು ದೂರು ನೀಡಿದ ಮೇರೆಗೆ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಮತ್ತು ಹೋಂಸ್ಟೇ ಮಾಲೀಕ ವಿಶಾಲ್ ಎಂಬಿಬ್ಬರನ್ನು ಬಂಧಿಸಲಾಗಿದೆ.
ವಾಷಿಂಗ್ಟನ್ ನಿಂದ ಬಂದಿದ್ದ ಮಹಿಳೆ ದಕ್ಷಿಣ ಕೊಡಗಿನ ಕುಟ್ಟದ ಬಳಿಯಿರುವ ವಿಶಾಲ್ ಎಂಬುವವರ ಮಾಲಿಕತ್ವದ ದೇವಿ ವಿಲ್ಲಾ ಎಂಬ ಹೋಂಸ್ಟೇ ಯಲ್ಲಿ ವಾಸ್ತವ್ಯ ಹೂಡಿದ್ದರು. ಏಕಾಂಗಿಯಾಗಿದ್ದ ಈಕೆಯ ಮೇಲೆ ಕಾಮದ ದೃಷ್ಟಿ ಬೀರಿದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಮತ್ತು ಹೋಂಸ್ಟೇ ಮಾಲೀಕ ವಿಶಾಲ್ ಆಕೆಗೆ ಪಾನೀಯ ನೀಡುವಾಗ ಅದಕ್ಕೆ ಮತ್ತು ಬರುವ ಔಷಧಿ ಬೆರೆಸಿ ನೀಡಿ ಆ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು.
ಈ ಘಟನೆ ಬಳಿಕೆ ಆಕೆ ಹೊರಗಿನ ಸಂಪರ್ಕ ಪಡೆಯದಂತೆ ಇಂಟರ್ ನೆಟ್ ಕನೆಕ್ಷನ್ ಕಡಿತ ಮಾಡಿದ್ದರು. ಭಯಗೊಂಡ ಆಕೆ ಅಲ್ಲಿಂದ ಮೂರು ದಿನಗಳ ಬಳಿಕ ಹೊರ ಬಂದಿದ್ದು ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರು.
ಇತ್ತ ತಾವು ಎಸಗಿದ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲ್ಲ ಎಂದು ಆರೋಪಿಗಳು ಖುಷಿಯಾಗಿಯೇ ಇದ್ದರು. ಆದರೆ ಯಾರಿಗೆ ಆ ಮಹಿಳೆ ಮೈಸೂರಿಗೆ ಬಂದ ನಂತರ ತನಗಾದ ಅನ್ಯಾಯದ ಬಗ್ಗೆ ಅಮೆರಿಕದಲ್ಲಿರುವ ರಾಯಬಾರಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮೈಸೂರಿನಲ್ಲಿನಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಇಮೇಲ್ ಮೂಲಕ ಸಂಪರ್ಕಿಸಿದ ಅಮೆರಿಕದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ದೆಹಲಿ ಮತ್ತು ಚೆನ್ನೈ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ . ಆರೋಪಿಗಳಿಗೆ ನ್ಯಾಯಾಲಯ ಮೇ.3ರ ತನಕ ನ್ಯಾಯಾಂಗಬಂಧನಕ್ಕೆ ಒಳಪಡಿಸಿದ್ದಾರೆ.








