ಬೆಂಗಳೂರು: ಅಮೇರಿಕಾದಲ್ಲಿ “ಬಸವ ದಿವಸ್” ಘೋಷಣೆಯಾಗಿರುವುದು ಬಸವಣ್ಣನವರ ತತ್ವಗಳು ಸಾರ್ವಕಾಲಿಕ ಹಾಗೂ ವಿಶ್ವಮಾನವೀಯ ಮೌಲ್ಯಗಳನ್ನು ಒಳಗೊಂಡಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ನಗರದ ಹೊಂಗಸಂದ್ರದಲ್ಲಿ ಶ್ರೀ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸಬ್ ಕೆ ಸಾಥ್, ಸಬ್ ಕೆ ವಿಕಾಸ್’ ಎಂಬ ಅಭಿವೃದ್ದಿ ಪರಿಕಲ್ಪನೆಗೆ ಬಸವಣ್ಣನವರ ಸಮಾನತೆಯ ತತ್ವವೇ ಪ್ರೇರಣೆಯಾಗಿದೆ ಎಂದು ಹೇಳಿರುವುದು ಬಸವ ತತ್ವಗಳ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ.

ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾಜದಲ್ಲಿ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಜಾರಿಗೆ ತರುವ ಮೂಲಕ ಮಾನವೀಯತೆ ಹಾಗೂ ಆರ್ಥಿಕ ಚಿಂತನೆಗೆ ಹೊಸ ದಿಕ್ಕು ನೀಡಿದ ಮಹಾನ್ ದಾರ್ಶನಿಕರು. “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ಸಂದೇಶ ಇಂದಿನ ಯುವಜನತೆಗೆ ಬದುಕಿನ ಮೌಲ್ಯಗಳನ್ನು ತಿಳಿಸುವ ದೀಪಸ್ತಂಭವಾಗಿದೆ. ಕಲ್ಯಾಣ ಕ್ರಾಂತಿಯ ಮೂಲಕ ಶ್ರಮಕ್ಕೆ ಗೌರವ, ಅನ್ನಕ್ಕೆ ಹಕ್ಕು ಮತ್ತು ಸಮಾನ ಬದುಕಿನ ಆಶಯವನ್ನು ಬಸವಣ್ಣನವರು ಜಗತ್ತಿಗೆ ಸಾರಿದರು ಎಂದರು.

ಕನಕಪುರ ದೇಗುಲ ಮಠದ ಡಾ. ಶ್ರೀ ಚೆನ್ನಬಸವಸ್ವಾಮಿಗಳು ಆಶೀರ್ವಚನ ನೀಡಿ ಕರ್ನಾಟಕದ ವಿವಿಧ ಗ್ರಾಮೀಣ ಪ್ರದೇಶಗಳಿಂದ ಉದ್ಯೋಗ, ಬದುಕು ಮತ್ತು ಕಾಯಕದ ಹಾದಿ ಹುಡುಕಿಕೊಂಡು ಬೆಂಗಳೂರಿಗೆ ಬಂದ ಜನರು, ನಗರ ಜೀವನದ ಮಧ್ಯೆಯೂ ಬಸವಣ್ಣನವರ ಕಾಯಕ ತತ್ವ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಮರೆಯದೆ ಇಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ಬಸವಜಯಂತಿಯನ್ನು ಆಚರಿಸಿಕೊಂಡು ಬರುತ್ತಿರುವುದು ಅತ್ಯಂತ ಸಂತಸದ ಸಂಗತಿ.

ಬಸವಣ್ಣನವರ ತತ್ವಗಳು ಕೇವಲ ಪುಸ್ತಕಗಳಲ್ಲಿ ಉಳಿಯದೇ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹೊಂಗಸಂದ್ರದ ಭಕ್ತರು ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಜೀವನದ ಮೂಲಕ ತೋರಿಸುತ್ತಿದ್ದಾರೆ. ಗ್ರಾಮೀಣ ಸಂಸ್ಕೃತಿ, ಶರಣರ ಚಿಂತನೆ ಮತ್ತು ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಬಸವಜಯಂತಿಯನ್ನು ನಿರಂತರವಾಗಿ ಆಚರಿಸುತ್ತಿರುವುದು ಶ್ಲಾಘನೀಯ.

ನಗರದ ವೇಗದ ಬದುಕಿನಲ್ಲಿಯೂ ಬಸವ ಚಿಂತನೆಗೆ ಯುವಪೀಳಿಗೆ ಸ್ಪಂದಿಸುತ್ತಿರುವುದು ಬಸವ ತತ್ವಗಳ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹೆಬ್ಬಣಿ ಶ್ರೀ ನಿರ್ವಾಹಣೇಶ್ವರ ಮಠದ ಶ್ರೀ ಶಂಭುಲಿಂಗಸ್ವಾಮಿಗಳು, ಮಾಜಿ ನಗರ ಪಾಲಿಕೆ ಸದಸ್ಯ ಟಿ. ರಾಮಚಂದ್ರ, ಶ್ರೀ ಬಸವೇಶ್ವರ ಸೇವಾಸಮಿತಿಯ ಗೌರವಾಧ್ಯಕ್ಷ ಎಂ. ಶಂಕರಪ್ಪ, ನಿಂಗಪ್ಪ, ಅಧ್ಯಕ್ಷ ಎಂ.ಎಂ ಶಿವಸ್ವಾಮಿ, ಉಪಾಧ್ಯಕ್ಷ ಶಿವಶಂಕರ್, ಎಚ್.ಸಿ ಸಿದ್ಧಲಿಂಗಯ್ಯ, ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಎಸ್ ಟಿ ಸೋಮಶೇಖರ,

ಖಜಾಂಚಿ ಷಣ್ಮುಗೇಶ್, ಸಹ ಕಾರ್ಯದರ್ಶಿ ಎಚ್.ಆರ್ ನಾಗರಾಜ, ಜಂಟಿಕಾರ್ಯದರ್ಶಿ ಬಿ.ಎಂ ಕುಮಾರ, ಜಂಟಿ ಕಾರ್ಯದರ್ಶಿ ಎಸ್ ದಾನೇಶ್, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಅವಾರಿ, ಎಚ್ ದೊಡ್ಡಬಸವನಗೌಡ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಭಾಗ್ಯ, ಶಿವಪ್ಪ ಉಪಸ್ಥಿತರಿದ್ದರು.








