CinemaLatest

ಅನಂತನಾಗ್…. ಡಾಕ್ಟರ್ ಆಗಬೇಕಾಗಿದ್ದವರು ಆಕ್ಟರ್ ಆದ ಇಂಟರೆಸ್ಟಿಂಗ್ ಸ್ಟೋರಿ!

ಇಳಿವಯಸ್ಸಿನಲ್ಲಿಯೂ ನಟನೆ ಮೂಲಕ ಪಾತ್ರಗಳಿಗೆ ಜೀವ ತುಂಬುತ್ತಿರುವ ಅನಂತನಾಗ್  ನಾಯಕ ಮಾತ್ರವಲ್ಲದೆ, ಎಲ್ಲ ರೀತಿಯ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾದ ನಟ… ಇವರ ಸಿನಿ ಬದುಕಿನ ಕಥೆಯನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಇಲ್ಲಿ ತೆರೆದಿಟ್ಟಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆ ಭಟ್ಕಳದ ನಾಗರಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಿದ್ದ ಕೊಂಕಣಿ ಕುಟುಂಬವು ಕಾರಣಾಂತರದಿಂದ ಭಾರತದ ಸ್ವಾತಂತ್ರ್ಯಕ್ಕು ಮುನ್ನ ಬಾಂಬೆ ನಗರಕ್ಕೆ ಶಿಫ್ಟ್  ಆಗಬೇಕಾಯಿತು. ಹೀಗಾಗಿ 4.9.1948ರಂದು ಮುಂಬೈ ನಗರದ ಚೌಪಾಟಿಯಲ್ಲಿ ಅನಂತ ನಾಗರಕಟ್ಟೆ ಉರುಫ್ ಅನಂತನಾಗ್ ಜನಿಸಿದರು. ಪೋಷಕರ ಅಪೇಕ್ಷೆಯಂತೆ ಡಾಕ್ಟರ್ ಆಗಬೇಕಾಗಿದ್ದ ಈತ ಆಕ್ಟರ್ ಆದರು.

ಕಾಲಕ್ರಮೇಣ ತಾನು ವೈದ್ಯನಾಗುವ ಆಸೆಯನ್ನು ಕಿತ್ತುಬಿಸಾಕಿದ ನವಯುವಕ ತನಗೆ ರಕ್ತಗತವಾಗಿ ಬಾರದ ಅಥವ ಅಭ್ಯಾಸವಿರದ ಅಭಿನಯ ಕಲೆಯನ್ನು ರೂಢಿಸಿಕೊಳ್ಳಲು ಮನಸು ಮಾಡಿದರು. ಕೇವಲ ನಟನಾಗುವುದಕ್ಕಲ್ಲ ಏಕ್ದಂ ನಾಯಕನಟನಾಗುವ ಕನಸು ಹೊತ್ತು ಬಾಂಬೆ, ಹೈದ್ರಾಬಾದ್, ಮದ್ರಾಸು, ಬೆಂಗಳೂರು ನಗರಗಳಲ್ಲಿದ್ದ ನಿರ್ಮಾಪಕ ನಿರ್ದೇಶಕರ ಮನೆ ಬಾಗಿಲಿಗೆ ಎಡತಾಕಿ ಗೋಗರೆದ ದಿನಗಳು ನೂರಾರು. ಅದೇಕೋ ಏನೋ ಈ ನವಯುವಕನಿಗೆ ಯಾರೊಬ್ಬರೂ ಮಣೆ ಹಾಕಲಿಲ್ಲ.

ಕೆಲವರಂತೂ ಈತನನ್ನು ಹಂಗಿಸುತ್ತ ನಿನ್ನ ಕೋರೆಹಲ್ಲು ಮೆಡ್ಡಗಣ್ಣು ಸೊರಗಿದ ಮುಖ ಇವೆಲ್ಲವೂ ಹಾಲಿವುಡ್‌ನ ಡ್ರ್ಯಾಕುಲಾ ಪಾತ್ರಧಾರಿ ಕ್ರಿಸ್ಟೊಫರ್ ಲೀ ಥರವಿದೆ ಎಂದೆಲ್ಲ ಅಣಕಿಸಿ ಗದರಿಸಿ ಹೊರತಳ್ಳಿದಾಗ ಹೀರೋ ಆಗುವ ಆಶಾಶಿಖರ ಗಾಳಿಗೋಪುರವಾಗಿ ತೂರಿಹೋಯಿತು! ಯಾವಾಗಲೂ ಚಿತ್ರೋದ್ಯಮಿಗಳಿಂದ ಗೆಟೌಟ್ ಎನಿಸಿಕೊಂಡು ಎಲ್ಲರಿಂದ ರಿಜೆಕ್ಟ್ ‌ಆಗಿದ್ದ ಸಣಕಲ ಹುಡುಗನನ್ನು ಬಣ್ಣದ ಲೋಕದೊಳಕ್ಕೆ ಬರಮಾಡಿಕೊಂಡವರು ಮೈಸೂರು ವಿಶ್ವವಿದ್ಯಾನಿಲಯ ಮಹಾರಾಜ ಕಾಲೇಜು ಹಿಂದಿ ಪ್ರೊಫ಼ೆಸರ್ ಪಿ.ವಿ.ನಂಜರಾಜೆಅರಸ್.

ಇವರಿ‌ಗೆ ಚಿಕ್ಕಂದಿನಿಂದಲೂ ಸಿನಿಮಾ- ಡ್ರಾಮ ಹುಚ್ಚುಹೆಚ್ಚು! ತನ್ನದೇ ಸ್ವಂತದ ಒಂದಾದರೂ ಫಿಲಂ ತಯಾರಿಸಬೇಕೆಂದು ಬಹುಕಾಲದಿಂದ ಹಂಬಲಿಸಿ ಹಾತೊರೆಯುವಂಥ ಪ್ರೊ.ಪಿವಿಎನ್ ಪರಿಸ್ಥಿತಿಗೆ ಇಂಬುಕೊಡಲು ಸಿಕ್ಕಿದ್ದೇ ಅನಂತನಾಗ್!  ಅರಸ್ ಬಳಗದಲ್ಲಿದ್ದ ಸಹೋದ್ಯೋಗಿಗಳು ಇವರನ್ನು ಅಮೆಚೂರ್ ನಾಟಕ, ಸಿನಿಮ ಕರ್ತೃ ಎಂದು ಬಿಂಬಿಸಿದರೆ ಇನ್ನುಕೆಲವು ಸ್ನೇಹಿತರು ನಂಮೇಷ್ಟ್ರು ನೀಳಗಡ್ಡದ ಅರಸು ಎಂದೂ ಸಹ ಬ್ರಾಂಡ್ ಮಾಡಿದ್ದರು!

ಪಿ.ವಿ.ನಂಜರಾಜೆಅರಸ್ ನಿರ್ಮಾಣ-ನಿರ್ದೇಶನದ ’ಸಂಕಲ್ಪ’ಅನಂತನಾಗ್ ನಟಿಸಿದ ಮೊಟ್ಟಮೊದಲ ಚಿತ್ರವಾಗಿ 1973ರಲ್ಲಿ ತೆರೆಕಂಡು ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಗಳಿಸಿದ್ದು ಇತಿಹಾಸ! ಬೇರೆಲ್ಲಾ ರೀತಿಯ ಯಶಸ್ಸು ಕಾಣದ ಸಂಕಲ್ಪ ಪ್ರಯೋಗಾತ್ಮಕ ಚಿತ್ರವೆಂದು ಬ್ರಾಂಡ್‌ಆಗಿ ರಾಷ್ಟ್ರಮಟ್ಟದ ಮತ್ತು ಅಂತರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆಯಿತು. ಇದಾದ ನಂತರ ಈತ ನಟಿಸಿದ ಹಲವು ಚಿತ್ರಗಳಿಗೆ ರಾಜ್ಯ, ರಾಷ್ಟ್ರ, ಫಿಲಂಫ಼ೇರ್ ಪ್ರಶಸ್ತಿಯ ಸುರಿಮಳೆಆಯ್ತು.

ಕಾಲಕ್ರಮೇಣ ಉನ್ನತ ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಹಿಂದಿ ಮರಾಠಿ ನಾಟಕರಂಗ ಸೇರಿದ ಅನಂತನಾಗ್ 1973 ರಲ್ಲಿ ತೆರೆಕಂಡ ಖ್ಯಾತ ನಿರ್ಮಾಪಕ, ನಿರ್ದೇಶಕ ಶ್ಯಾಂ ಬೆನಗಲ್‌ರ ಅಂಕುರ್ ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಸಿನಿಮಾದಲ್ಲಿ ನಟಿಸಿದ ಕನ್ನಡದ ಚೊಚ್ಚಲ ಹೀರೊ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಇಷ್ಟಾದರೂ ಇವರಿಗೆ ಶೇ.99ರಷ್ಟು ಸಿನಿಮಾಗಳಲ್ಲಿ ಡ್ಯಾನ್ಸ್, ಫ಼ೈಟ್, ಡುಯಟ್ ಸೀನ್ ಗಳು ಇರದಂತೆ ನಿಗಾವಹಿಸುವ ಜವಾಬ್ಧಾರಿ ಹೊರುತ್ತಿದ್ದರು. ಬಹುತೇಕ ನಿರ್ಮಾಪಕ, ನಿರ್ದೇಶಕರು?! ಈ ಕಾರಣಕ್ಕೆ ಚಂದನವನದ ಸಾಫ್ಟ್ ಸ್ಟಾರ್ ಎಂದು ಸಹ ಇವರನ್ನು ಬ್ರ್ಯಾಂಡ್ ಮಾಡಲಾಯ್ತು. ಅದೃಷ್ಟವಂತ ಆಗಿದ್ದರಿಂದ ಮಿನುಗು ತಾರೆ ಕಲ್ಪನ ನಟಿಸಿದ ಬಯಲುದಾರಿ ಬ್ಲಾಕ್ ಬಸ್ಟರ್ ಚಿತ್ರದ ಮೂಲಕ ತಮ್ಮ ಸಿನಿಬದುಕು ಕಟ್ಟಿಕೊಂಡು ಅಲ್ಲಿಂದ ಹಿಂದಿರುಗಿ ನೋಡಲೇ ಇಲ್ಲ.

ಲಕ್ಷ್ಮಿ ಅಭಿನಯದ ಚಂದನದಗೊಂಬೆ ಚಿತ್ರದಿಂದ ಟರ್ನಿಂಗ್ ‌ಪಾಯಿಂಟ್ ದೊರಕಿತು. ಅನಂತನಾಗ್-ಲಕ್ಷ್ಮಿ ಜೋಡಿ ಬೊಂಬಾಟ್‌ ಎನಿಸಿ ಇವರಿಬ್ಬರ ಫಿಲಂಸ್ ಗ್ರ್ಯಾಂಡ್ ಸಕ್ಸಸ್ ಕಂಡು ಸತತ 12 ಚಿತ್ರಗಳಲ್ಲಿ ನಟಿಸುವ ಮೂಲಕ ಚಂದನವನದಲ್ಲಿ ತಳಊರಿದರು! ಕಾಲಕ್ರಮೇಣ ಹಿಂದಿ ಮರಾಠಿ ಕೊಂಕಣಿ ತುಳು ತಮಿಳು ತೆಲುಗು ಮಲೆಯಾಳಂ ಬಂಗಾಳಿ ಚಿತ್ರಗಳಲ್ಲು ನಟಿಸಿ ಕನ್ನಡದ ಬಹುಭಾಷಾ ನಟ ಎನಿಸಿದರು!

ಅನಿರೀಕ್ಷಿತ ಆಶ್ಚರ್ಯದ ಕಾಲಘಟ್ಟ ಒದಗಿಬಂದ ಪ್ರಯುಕ್ತ 1980ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣಹೆಗ್ಡೆ ಅವರ  ಆಶೀರ್ವಾದದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟು 1994ರಲ್ಲಿ ಬೆಂಗಳೂರು ಮಲ್ಲೇಶ್ವರದ ಎಂ.ಎಲ್‌.ಎ.ಆಗಿ ಚುನಾಯಿತರಾಗಿ ಜೆ.ಹೆಚ್.ಪಟೇಲ್ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ಸಚಿವರೂ ಆದರು! ಶಂಕರ್‌ನಾಗ್ ಸಹಕಾರದ ಮಾಲ್ಗುಡಿ ಡೇಸ್ , ಒಂದಾನೊಂದು ಕಾಲದಲ್ಲಿ ಮುಂತಾದ ಚಿತ್ರಗಳಲ್ಲಿ ಮಿಂಚಿದರು.

ನಾರದವಿಜಯ ಹಂಸಗೀತೆ ಶಾಂತಿಕ್ರಾಂತಿ ಗಣೇಶನಮದುವೆ ಹಾಗೂ ಗೋಲ್‌ಮಾಲ್ ಸೀರಿಯಲ್ಸ್‌ಗಳಲ್ಲಿ ತಮ್ಮದೆ ಆದ ವಿಶಿಷ್ಟ ಛಾಪು ಮೂಡಿಸಿದರು.  ವೃದ್ಧ, ಹಾಸ್ಯ, ಖಳನಟ, ಮುಂತಾದ   ವೈವಿಧ್ಯಮಯ ಪಾತ್ರದಲ್ಲೂ ಪ್ರಬುದ್ಧತೆ ಮೆರೆದರು. ಖ್ಯಾತ ನಟಿ ಗಾಯತ್ರಿ ಅವರನ್ನು ಮದುವೆಯಾಗಿ ತಾರಾ-ದಂಪತಿ ಪಟ್ಟಿಗೆ ಸೇರಿದರು!

ಕಳೆದ 55 ವರ್ಷದಿಂದ ಕ್ರಿಯಾಶೀಲರಾಗಿ ಚಿತ್ರರಂಗದಲ್ಲಿ ತೊಡಗಿದ್ದು ತಾವು ಬಯಸಿದ ಎಲ್ಲವನ್ನು ಗಳಿಸಿದರು. ಖ್ಯಾತನಟಿ ಗಾಯತ್ರಿಯನ್ನು ಮದುವೆಯಾಗಿ ತಾರಾ-ದಂಪತಿ ಪಟ್ಟಿಗೆ ಸೇರಿ, 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದಾಖಲೆ ಸೃಷ್ಟಿಸಿದರು. ಇವರ ಇತ್ತೀಚಿನ ಕೆಲವು ಉತ್ತಮ ಚಿತ್ರಗಳು.. ರಾಜಕುಮಾರ, ಕೆಜಿಎಫ್, ಗೋಧಿಬಣ್ಣಸಾಧಾರಣ ಮೈಕಟ್ಟು, ಮುಂಗಾರುಮಳೆ, ಗಾಳಿಪಟ, ಅರಮನೆ, ಮುಂತಾದ ಚಿತ್ರಗಳ ಮನೋಜ್ಞ ಅಭಿನಯದಿಂದ ಕನ್ನಡಿಗರ ತನುಮನ ಸೂರೆಗೊಳ್ಳುವುದರ ಜತೆಗೆ ಹಲವಾರು ಪ್ರಶಸ್ತಿಯನ್ನೂ ಗೆದ್ದರು.

ಚಿತ್ರರಂಗದ ಇತಿಹಾಸದಲ್ಲಿ ಡ್ಯಾನ್ಸ್, ಫ಼ೈಟ್, ಡುಯಟ್ ಬಾರದೆ ಮಾಡದೇ ನೂರಾರು ಚಿತ್ರಗಳಲ್ಲಿ ನಟಿಸಿ ಕೀರ್ತಿ ಪ್ರಶಸ್ತಿ ಗಳಿಸಿರುವ ಏಕೈಕ ಹೀರೊ ಎಂಬ ಹೆಗ್ಗಳಿಕೆಯ ಅನಂತನಾಗ್ ಕೆಲವು ಟಿ.ವಿ. ಧಾರಾವಾಹಿಯಲ್ಲೂ ಅಭಿನಯಿಸಿದರು. ಇವರ ಪುತ್ರಿ ಅದಿತಿನಾಗ್ ಕೂಡ ಇತ್ತೀಚೆಗೆ ಬಣ್ಣದಲೋಕಕ್ಕೆ ಎಂಟ್ರಿ ನೀಡಿದ್ದಾರೆ?!

 

admin
the authoradmin

Leave a Reply