ಅಮ್ಮ, ಆಸ್ಪತ್ರೆ ಇನ್ನೂ ಎಷ್ಟು ದೂರ..? ಇದು ಆಸ್ಪತ್ರೆಯಿಲ್ಲದ ಕೊಡಗಿನ ಕುಗ್ರಾಮಗಳ ಕಣ್ಣೀರ ಕಥೆ!
ಸಂತೋಷ್ಕುಮಾರ್ ತಂಗವೇಲು

ಒಂದು ಮುಂಜಾನೆ…
ಕೊಡಗಿನ ತುತ್ತ ತುದಿಯ ಒಂದು ಮೂಲೆಯಲ್ಲಿ, ಮಂಜು ಮುಸುಕಿದ ವಾತಾವರಣದಲ್ಲಿ, ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಒಂದು ಮಗು ಅಳುತ್ತಿತ್ತು. ಅದು ಜೀವಕ್ಕಾಗಿ ಕೊನೆಯ ಕ್ಷಣದ ಹೋರಾಟ. ಆ ಕುಟುಂಬ ವಾಸವಿದ್ದದ್ದು ಒಂದು ಎಸ್ಟೇಟಿನ ಒಳಗೆ, ಜನಸಂಚಾರವೇ ಇಲ್ಲದ ನಿರ್ಜನ ಜಾಗದಲ್ಲಿ. ಮಗುವಿಗೆ ಹಾವು ಕಚ್ಚಿತ್ತು. ಪಕ್ಕದ ಹಳ್ಳಿಯ ಸಣ್ಣ ಆಸ್ಪತ್ರೆಗಲ್ಲ, ದೂರದ ಪಟ್ಟಣದ ಆಸ್ಪತ್ರೆಗೆ ಓಡಬೇಕಾದ ಅನಿವಾರ್ಯತೆ, ಏಕೆಂದರೆ ಸಮೀಪದಲ್ಲಿ ಸಿಗುವ ಸಣ್ಣ ಆಸ್ಪತ್ರೆಯಲ್ಲಿ ಆಂಟಿ ವೆನಮ್ ಚುಚ್ಚುಮದ್ದೇ ಇರಲಿಲ್ಲ. ಆ ಕೆಸರು ರಸ್ತೆಯಲ್ಲಿ, ಆ ಮಂಜಿನ ಕತ್ತಲಲ್ಲಿ, ಆಸ್ಪತ್ರೆಗೆ ಹೋಗುವ ದಾರಿಯಲ್ಲೇ ಆ ಪುಟ್ಟ ಜೀವ ಕೈಜಾರಿ ಹೋಯಿತು. ಈ ಸುದ್ದಿ ಪತ್ರಿಕೆಯ ಒಂದು ಮೂಲೆಯಲ್ಲಿ ಕೆಲವೇ ಸಾಲುಗಳಲ್ಲಿ ಮುಗಿದುಹೋಗುತ್ತದೆ. ಆದರೆ ಆ ತಾಯಿಯ ಎದೆಯಲ್ಲಿ ಉಳಿಯುವ ಆ ನೋವಿಗೆ ಎಂದೂ ಮುಕ್ತಿ ಇಲ್ಲ.
ಚಿಕ್ಕಂದಿನಲ್ಲಿ ನನಗೆ ಜ್ವರ ಬಂದಾಗ ಅಮ್ಮ ನನ್ನನ್ನು ಎತ್ತಿಕೊಂಡು ಓಡಿದ್ದು ನೆನಪಿದೆ. ಪಕ್ಕದ ಸಿಟಿಯ ಸಣ್ಣ ಆಸ್ಪತ್ರೆಗೆ. ಅಲ್ಲಿ ವೈದ್ಯರಿದ್ದರು, ಔಷಧಿ ಸಿಕ್ಕಿತು. ನಾನು ಗುಣಮುಖನಾದೆ. ಆ ದಿನ ನನಗೆ ಗೊತ್ತಿರಲಿಲ್ಲ, ಅಂತಹ ಸಣ್ಣ ಸೌಲಭ್ಯವೂ ಇಂದು ಕೊಡಗಿನ ಎಷ್ಟೋ ಮಕ್ಕಳಿಗೆ ಸಿಗುತ್ತಿಲ್ಲ ಎಂದು. ಇಂದು ದೊಡ್ಡವನಾಗಿ ಆ ದಿನಗಳನ್ನು ನೆನಪಿಸಿಕೊಂಡಾಗ ಒಂದೇ ಪ್ರಶ್ನೆ ಕಾಡುತ್ತದೆ. ನನ್ನ ನಾಡಿನ ಇಂದಿನ ಮಕ್ಕಳಿಗೆ, ಇಂದಿನ ತಾಯಂದಿರಿಗೆ ಆ ಭರವಸೆ ಇನ್ನೂ ಇದೆಯೇ?

ಒಂದು ಎಸ್ಟೇಟ್ ಮನೆಯ ದೃಶ್ಯ ಕಲ್ಪಿಸಿಕೊಳ್ಳಿ. ಒಬ್ಬ ಎಂಬತ್ತು ವರ್ಷದ ಅಜ್ಜ ಎದೆ ಹಿಡಿದುಕೊಂಡು ನೆಲದ ಮೇಲೆ ಕುಸಿಯುತ್ತಾರೆ. ಮನೆಯಲ್ಲಿ ಇರುವುದು ಒಬ್ಬ ಮೊಮ್ಮಗ ಮಾತ್ರ. ಆತ ಫೋನ್ ಕೈಗೆತ್ತಿಕೊಂಡು ನೂರಾರು ಬಾರಿ ಆಂಬ್ಯುಲೆನ್ಸ್ಗೆ ಕರೆ ಮಾಡುತ್ತಾನೆ. ಸಿಗ್ನಲ್ ಸರಿಯಿಲ್ಲ, ಕರೆ ಕಟ್ ಆಗುತ್ತದೆ. ಕೊನೆಗೂ ಸಂಪರ್ಕ ಸಿಕ್ಕಾಗ ಗೊತ್ತಾಗುವುದು, ಹತ್ತಿರದ ಅಂಬ್ಯುಲೆನ್ಸ್ ಇರುವುದೇ ಮೂವತ್ತು ಕಿಲೋಮೀಟರ್ ದೂರದಲ್ಲಿ. ಅಜ್ಜ ಮೊಮ್ಮಗನ ಕೈ ಹಿಡಿದು ಪಿಸುಗುಟ್ಟುತ್ತಾರೆ, “ಹೆದರಬೇಡ ಮಗು”. ಆದರೆ ಮೊಮ್ಮಗನ ಕಣ್ಣಲ್ಲಿ ಕಂಡದ್ದು ಭಯ ಮಾತ್ರ. ಇಂತಹ ಸಾವಿರಾರು ಕ್ಷಣಗಳು ಕೊಡಗಿನ ಎಸ್ಟೇಟ್ ಮನೆಗಳಲ್ಲಿ ಪ್ರತಿ ವಾರ ನಡೆಯುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ.
ಇನ್ನೊಂದು ದೃಶ್ಯ. ಹಾವು ಕಡಿತಕ್ಕೊಳಗಾದ ಒಬ್ಬ ಕೂಲಿ ಕಾರ್ಮಿಕ ಮಹಿಳೆಯನ್ನು ಆಕೆಯ ಸಹೋದ್ಯೋಗಿಗಳೇ ಹೆಗಲ ಮೇಲೆ ಹೊತ್ತು ಕಾಲುದಾರಿಯಲ್ಲಿ ನಡೆಸಿಕೊಂಡು ಬಂದ ಘಟನೆಗಳನ್ನು ನಾನು ಕೇಳಿದ್ದೇನೆ. ಏಕೆಂದರೆ ಆ ತೋಟಕ್ಕೆ ವಾಹನ ಹೋಗುವ ರಸ್ತೆಯೇ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪುವಷ್ಟರಲ್ಲಿ ವಿಷ ಇಡೀ ದೇಹಕ್ಕೆ ಹರಡಿರುತ್ತದೆ. ಅಲ್ಲಿ ತಲುಪಿದ ಮೇಲೂ ಆಂಟಿ ವೆನಮ್ ಸಿಗುತ್ತದೋ ಇಲ್ಲವೋ ಎಂಬುದು ಇನ್ನೊಂದು ಜೂಜು. ಇದು ಕಥೆಯಲ್ಲ, ಇದು ಕೊಡಗಿನ ಎಸ್ಟೇಟ್ ಕಾರ್ಮಿಕರ ದಿನನಿತ್ಯದ ವಾಸ್ತವ.

ಈ ಎಲ್ಲಾ ಘಟನೆಗಳ ಹಿಂದೆ ಒಂದೇ ಬೇರು ಅಡಗಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ಕೊಡಗು ಜಿಲ್ಲೆಯಲ್ಲಿ ಇಪ್ಪತ್ತೇಳು ತಜ್ಞ ವೈದ್ಯರ ಹುದ್ದೆಗಳ ಪೈಕಿ ಕೇವಲ ಹನ್ನೊಂದು ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ತಜ್ಞ, ಸ್ತ್ರೀರೋಗ ತಜ್ಞ, ಮೂಳೆ ತಜ್ಞ, ಅರಿವಳಿಕೆ ತಜ್ಞ ಇವರೆಲ್ಲರ ಕೊರತೆ ತೀವ್ರವಾಗಿದೆ. ಭಾಗಮಂಡಲ, ಹುದಿಕೇರಿ, ಮಾದಾಪುರ, ನಾಪೋಕ್ಲುವಿನಂತಹ ಕೇಂದ್ರಗಳಲ್ಲಿ ಇಬ್ಬರು ವೈದ್ಯರ ಜಾಗದಲ್ಲಿ ಒಬ್ಬರೇ ಕೆಲಸ ಮಾಡುತ್ತಿದ್ದಾರೆ. ಆ ಒಬ್ಬ ವೈದ್ಯರ ಮೇಲೆ ಇಡೀ ಗ್ರಾಮದ ಜೀವ ಭಾರ ಬಿದ್ದಿದೆ ಎಂದರೆ ಅವರ ಮನಸ್ಸಿನ ಮೇಲಿನ ಒತ್ತಡವನ್ನು ಊಹಿಸಿಕೊಳ್ಳಿ. ಒಬ್ಬ ವೈದ್ಯರೇ ಹೇಳಿದಂತೆ, ಪಂಚಾಯತ್ ಒತ್ತಡ, ರೋಗಿಗಳ ನಿರೀಕ್ಷೆ, ಸಿಬ್ಬಂದಿ ಕೊರತೆ ಇವೆಲ್ಲದರ ನಡುವೆ ಪ್ರತಿದಿನ ದುಡಿಯುವುದೇ ಒಂದು ಸಮರ.
ಈಗ ಮಳೆಗಾಲದ ಕಥೆಗೆ ಬರೋಣ. 2018ರ ಆಗಸ್ಟ್ ತಿಂಗಳ ಆ ದಿನಗಳನ್ನು ಕೊಡಗು ಎಂದೂ ಮರೆಯದು. ನೂರೈದು ಭೂಕುಸಿತಗಳು, ಇಪ್ಪತ್ತು ಜೀವಗಳ ಬಲಿ, ನಾಲ್ಕು ಸಾವಿರದ ಐವತ್ತಾರು ಮನೆಗಳ ನಾಶ, ಹದಿನೆಂಟು ಸಾವಿರ ಜನರ ಸ್ಥಳಾಂತರ. ತಲಕಾವೇರಿಯ ಬಳಿ ಬ್ರಹ್ಮಗಿರಿ ಬೆಟ್ಟದಲ್ಲಿ ಒಂದು ಅರ್ಚಕರ ಕುಟುಂಬದ ಮನೆಯೇ ಕುಸಿದು ನಾಲ್ಕು ಜನ ಕಾಣೆಯಾದರು. ಸಂಪರ್ಕ ಕಡಿತವಾಗಿತ್ತು, ರಸ್ತೆ ಮಾಯವಾಗಿತ್ತು. ಆ ಸಂಶೋಧನಾ ವರದಿಯೊಂದು ಸ್ಪಷ್ಟವಾಗಿ ಹೇಳುತ್ತದೆ.

ಮೊದಲೇ ಸಿದ್ಧವಿದ್ದ ಯೋಜನೆಗಳ ಹೊರತಾಗಿಯೂ ರಕ್ಷಣಾ ಕಾರ್ಯದಲ್ಲಿ ಗಂಭೀರ ಲೋಪಗಳಿದ್ದವು ಎಂದು. ಬದುಕುಳಿದ ಜನರೇ ಹೇಳಿದಂತೆ, ಎಷ್ಟೋ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಲೇ ಇಲ್ಲ. ಒಂದು ಕಥೆ ಈಗಲೂ ಎದೆ ಕಲಕುತ್ತದೆ. ಮಡಿಕೇರಿಯ ಸಮೀಪದ ಒಂದು ಹಳ್ಳಿಯ ಜನ ಎಂಟು ಕಿಲೋಮೀಟರ್ ದೂರ ಕೆಸರಿನಲ್ಲಿ ನಡೆದು ಸುರಕ್ಷಿತ ಪ್ರದೇಶ ತಲುಪಿದ್ದರು. ಅವರೊಂದಿಗೆ ಇದ್ದ ಒಬ್ಬ ವೃದ್ಧೆಯ ರಕ್ತದೊತ್ತಡ ಏರಿಕೆಯಾಗಿತ್ತು, ಆದರೆ ಆಸ್ಪತ್ರೆ ದೂರವಿತ್ತು, ಔಷಧಿಯಿಲ್ಲದೆ ಆಕೆ ದಾರಿಯಲ್ಲೇ ಕುಸಿದುಬಿದ್ದರು. ಇಂತಹ ಕಥೆಗಳಿಗೆ ಪುಸ್ತಕದಲ್ಲಿ ಜಾಗವಿಲ್ಲ, ಆದರೆ ಆ ಕುಟುಂಬಗಳ ಎದೆಯಲ್ಲಿ ಶಾಶ್ವತ ಸ್ಥಾನ.
ಇನ್ನೂ ಒಂದು ದೊಡ್ಡ ಪರೀಕ್ಷೆ ಕೊಡಗಿನ ಆರೋಗ್ಯ ವ್ಯವಸ್ಥೆಗೆ ಎದುರಾಗಿದ್ದು ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ, ಇಡೀ ಜಗತ್ತು ಆಸ್ಪತ್ರೆಗಳಿಗಾಗಿ ಪರದಾಡುತ್ತಿದ್ದ ಆ ದಿನಗಳಲ್ಲಿ, ಈ ಪುಟ್ಟ ಜಿಲ್ಲೆಯ ಸ್ಥಿತಿ ಇನ್ನೂ ಸಂಕಟಮಯವಾಗಿತ್ತು. ಆಮ್ಲಜನಕದ ಸಿಲಿಂಡರ್ ಗಳಿಗಾಗಿ ಸಾಲಿನಲ್ಲಿ ಕಾದ ಕುಟುಂಬಗಳು, ಐಸಿಯು ಹಾಸಿಗೆ ಇಲ್ಲದೆ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಆಂಬ್ಯುಲೆನ್ಸ್ನಲ್ಲಿ ತಿರುಗಿದ ರೋಗಿಗಳು, ಮೈಸೂರು ಮಂಗಳೂರುಗಳಿಗೆ ಸಾಗಿಸಬೇಕಾದ ಅನಿವಾರ್ಯತೆಯಲ್ಲಿ ದಾರಿಯಲ್ಲೇ ಜೀವ ಕಳೆದುಕೊಂಡವರು, ಈ ಎಲ್ಲಾ ದೃಶ್ಯಗಳಿಗೆ ಕೊಡಗು ಸಾಕ್ಷಿಯಾಯಿತು.
ಎಸ್ಟೇಟ್ ಪ್ರದೇಶಗಳ ಕೂಲಿ ಕಾರ್ಮಿಕರಿಗೆ ಕೊರೊನಾ ಪರೀಕ್ಷೆಯೇ ಸಕಾಲದಲ್ಲಿ ಸಿಗದೆ ಸೋಂಕು ಮನೆಮನೆಗೆ ಹರಡಿತು. ಒಬ್ಬ ವೈದ್ಯರು ಆ ಸಮಯದಲ್ಲಿ ಪತ್ರಿಕೆಗೆ ಹೇಳಿದ ಮಾತು ನನ್ನ ಕಿವಿಯಲ್ಲಿ ಇನ್ನೂ ಗುಂಯ್ ಎನ್ನುತ್ತಿದೆ. “ಒಬ್ಬರಿಗೆ ಚಿಕಿತ್ಸೆ ಕೊಡುತ್ತಿರುವಾಗ ಇನ್ನೊಬ್ಬರು ಕಾಯುತ್ತಾ ಕುಳಿತಿರುತ್ತಾರೆ, ಯಾರಿಗೆ ಉಳಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಬೇಕಾದ ಸ್ಥಿತಿ ವೈದ್ಯನಿಗೆ ಬರಬಾರದು.” ಆ ಸಮಯದಲ್ಲಿ ವಿಶ್ರಾಂತಿ ಇಲ್ಲದೆ ದುಡಿದ ವೈದ್ಯರು ಮತ್ತು ದಾದಿಯರ ತ್ಯಾಗವನ್ನು ನಾವು ಮರೆಯಬಾರದು, ಆದರೆ ಆ ವ್ಯವಸ್ಥೆಯ ಲೋಪಗಳಿಂದ ಪ್ರಾಣ ಕಳೆದುಕೊಂಡ ಸಾಮಾನ್ಯರ ಕಥೆಗಳನ್ನೂ ಮರೆಯಬಾರದು.

ಪ್ರತಿ ವರ್ಷ ಆಚರಿಸುವ ಡೆಂಗ್ಯೂ ಜ್ವರ, ಇಲಿ ಜ್ವರ, ಲೆಸ್ಟೋಸ್ಟ್ರೋಸಿಸ್ನಂತಹ ಮಳೆಗಾಲದ ಕಾಯಿಲೆಗಳು ಇನ್ನೊಂದು ಸಂಕಟ. ಎಸ್ಟೇಟ್ ಕೆಲಸಗಾರರು ಕೆಸರಿನಲ್ಲಿ ಬರಿಗಾಲಿನಲ್ಲಿ ಕೆಲಸ ಮಾಡಿ ಈ ಸೋಂಕುಗಳಿಗೆ ತುತ್ತಾಗುತ್ತಾರೆ. ಪ್ರತಿ ಮಳೆಗಾಲದಲ್ಲೂ ಡೆಂಗ್ಯೂ ಪ್ರಕರಣಗಳು ಜಿಲ್ಲಾ ಆಸ್ಪತ್ರೆಗೆ ಬರುತ್ತವೆ, ಆದರೆ ಸಾಕಷ್ಟು ಹಾಸಿಗೆಯಿಲ್ಲ, ಸಾಕಷ್ಟು ಸಿಬ್ಬಂದಿಯಿಲ್ಲ. ರಸ್ತೆ ಅಪಘಾತದ ಕಥೆಯೂ ಇದೇ. ಮಳೆಗಾಲದಲ್ಲಿ ಜಾರಿಬಿದ್ದ ಬೈಕ್ ಸವಾರರು, ಬೆಟ್ಟದ ಇಳಿಜಾರಿನಲ್ಲಿ ಉರುಳಿದ ಕಾರುಗಳು, ಎಲ್ಲರೂ ತಲುಪಬೇಕಾದ ಆ ಒಂದೇ ಜಿಲ್ಲಾ ಆಸ್ಪತ್ರೆಗೆ ಮತ್ತು ಅಲ್ಲಿ ಸಿಗಬೇಕಾದ ಆ ಒಬ್ಬ ಮೂಳೆ ತಜ್ಞನಿಗಾಗಿ ಗಂಟೆಗಟ್ಟಲೆ ಕಾಯುತ್ತಾರೆ.
ಇಂದಿಗೂ ಆ ಭಯ ಮಾಸಿಲ್ಲ. ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆ ಗುರುತಿಸಿದಂತೆ ಕೊಡಗಿನಲ್ಲಿ ನೂರನಾಲ್ಕು ಭೂಕುಸಿತ ಪೀಡಿತ ಪ್ರದೇಶಗಳಿವೆ. ಸುಮಾರು ಎರಡು ಸಾವಿರದ ತೊಂಬತ್ತೈದು ಕುಟುಂಬಗಳು ಅಪಾಯದಲ್ಲಿವೆ. ಪ್ರತಿ ಮಳೆಗಾಲ ಬಂದಾಗ ಪೊಲೀಸ್ ಇಲಾಖೆ ವಿಶೇಷ ರಕ್ಷಣಾ ತಂಡ ರಚಿಸುತ್ತದೆ, ಪರಿಹಾರ ಕೇಂದ್ರ ಸಿದ್ಧಪಡಿಸುತ್ತದೆ. ಇದು ಒಳ್ಳೆಯ ಹೆಜ್ಜೆ. ಆದರೆ ಆ ತಂಡ ಸ್ಥಳ ತಲುಪುವ ಮೊದಲೇ, ಆ ಒಂಟಿ ಮನೆಯ ಮೊಮ್ಮಗ ಅಜ್ಜನ ಕೈ ಹಿಡಿದು ಕುಳಿತೇ ಇರುತ್ತಾನೆ, ಸಹಾಯ ಬರುತ್ತದೆಯೋ ಇಲ್ಲವೋ ಎಂಬ ಕಾಯುವಿಕೆಯಲ್ಲಿ.

ಆದರೂ ಒಂದು ಸಣ್ಣ ಬೆಳಕಿನ ಕಿರಣವಿದೆ. ಕೊಡಗಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಪ್ರಸ್ತಾಪ ಇಟ್ಟಿದ್ದಾರೆ. ಇದು ನನಸಾದರೆ ನಮ್ಮ ಮಣ್ಣಿನ ಮಕ್ಕಳೇ ವೈದ್ಯರಾಗಿ ಬೆಳೆದು ಇದೇ ನೆಲದ ಋಣ ತೀರಿಸಬಹುದು. ಆದರೆ ಆ ಕಾಲೇಜು ಕಟ್ಟಡ ಎದ್ದು ನಿಂತು, ಮೊದಲ ಬ್ಯಾಚ್ ಪದವಿ ಪಡೆದು, ಹಳ್ಳಿಗಳಿಗೆ ಬರುವವರೆಗೆ ಎಷ್ಟು ವರ್ಷ ಬೇಕಾಗಬಹುದು? ಅಷ್ಟು ವರ್ಷ ಆ ಎಂಬತ್ತು ವರ್ಷದ ಅಜ್ಜ, ಆ ಹಾವು ಕಡಿತದ ಕಾರ್ಮಿಕ ಮಹಿಳೆ ಕಾಯಬೇಕೇ?
ನಾನು ಈ ಪ್ರಶ್ನೆಯನ್ನು ಯಾರಿಗೆ ಕೇಳಬೇಕು ಎಂದು ನನಗೆ ಗೊತ್ತಿಲ್ಲ. ಆರೋಗ್ಯ ಇಲಾಖೆಗೋ, ಜನಪ್ರತಿನಿಧಿಗಳಿಗೋ, ಅಥವಾ ನಮಗೆಲ್ಲರಿಗೋ. ಆದರೆ ಇಷ್ಟು ಮಾತ್ರ ಗೊತ್ತು. ಬೆಟ್ಟದ ತುದಿಯಲ್ಲಿ ಹುಟ್ಟಿದ ಮಗುವಿಗೂ, ನಗರದ ದೊಡ್ಡ ಆಸ್ಪತ್ರೆಯ ಪಕ್ಕದಲ್ಲಿ ಹುಟ್ಟಿದ ಮಗುವಿಗೂ ಬದುಕುವ ಹಕ್ಕು ಸಮಾನ. ಆ ಸಮಾನತೆ ಬರೀ ಪುಸ್ತಕದ ಮಾತಾಗಿ ಉಳಿಯದೆ, ಪ್ರತಿ ಎಸ್ಟೇಟ್ ಮನೆಯ ಬಾಗಿಲಿಗೂ ತಲುಪುವ ದಿನ ಎಂದು ಬರುತ್ತದೋ, ಅಂದೇ ನಾನು ಈ ಲೇಖನ ಬರೆದದ್ದು ಸಾರ್ಥಕ ಎಂದು ಭಾವಿಸುತ್ತೇನೆ.








