ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ರಾಜ್ಯ ಕಬ್ಬುಬೆಳೆಗಾರರ ಸಂಘದಿಂದ ಮೌನಪ್ರತಿಭಟನೆ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಈ ಭಾಗದ ರೈತರ ಜೀವನಾಡಿ ಎನಿಸಿದ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭವಾಗದೇ ಇರುವುದಕ್ಕೆ ಕಾರಣ ತಿಳಿಸಿ ಸಭೆ ಕರೆಯುವಂತೆ ಒತ್ತಾಯಿಸಿ ಹಾಗೂ ತಮ್ಮ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಕಬ್ಬುಬೆಳೆಗಾರರ ಸಂಘದ ತಾಲೂಕು ಸಮಿತಿಯಿಂದ ತಾಲೂಕು ಕಛೇರಿ ಎದುರು ಮೌನಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ರಾಜ್ಯ ಕಬ್ಬುಬೆಳೇಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿತಿಮ್ಮಪ್ಪ ರಾಜ್ಯಸರಕಾರ ನಿಗದಿ ಮಾಡಿರುವ ಪ್ರಸಕ್ತ ಸಾಲಿನ ಕಬ್ಬಿನ ಬಾಕಿ ಮತ್ತು ಸಕ್ಕರೆಕಾರ್ಖಾನೆ ಮಾಲೀಕರು ಹಾಗೂ ಸರಕಾರ ನೀಡಬೇಕಾಗಿರುವ 50×50 ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು. ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭವಾಗದೇ ಇರುವುದಕ್ಕೆ ಕಾರಣ ತಿಳಿಸಿ ಸಭೆ ಕರೆಯಬೇಕು, ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ರಚನೆಯಾಗಬೇಕು ಎಂದು ಒತ್ತಾಯಿಸಿದರು.
ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿಗೊಳಿಸಬೇಕು, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಗ್ರಾಮಾಂತರ ಬ್ಯಾಂಕ್ ಗಳಲ್ಲಿ ಕೃಷಿ ಸಾಲದಮೇಲೆ ಚಿನ್ನದ ನವೀಕರಣಕ್ಕೆ ಸಿಬಿಲ್ ಸ್ಕೋರ್ ಕೇಳಬಾರದು, ಅಸಲು ಮತ್ತು ಬಡ್ಡಿಯನ್ನು ಒಟ್ಟಿಗೆ ಕಟ್ಟಿ ಎಂದು ರೈತರಿಂದ ಸಾಲ ನವೀಕರಣಕ್ಕೆ ಒತ್ತಾಯಿಸದೆ ಬಡ್ಡಿಯನ್ನು ಕಟ್ಟಿಸಿಕೊಂಡು ಸಾಲ ನವೀಕರಣಗೊಳಿಸಬೇಕು, ಕೃಷಿಪತ್ತಿನ ಸಹಕಾರ ಸಂಘಗಳ ಮೂಲಕ ಪ್ರತಿ ಎಕರೆಗೆ ಕೃಷಿ ಸಾಲವನ್ನು ಎರಡು ಲಕ್ಷಕ್ಕೇರಿಸಿ ಮಾನದಂಡ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಿಂದ ಕಬ್ಬನ್ನು ತೆಗೆದುಕೊಂಡು ಹೋಗಿರುವ ಕೆ.ಆರ್.ಪೇಟೆಯ ಐಸಿಎಲ್, ಪಾಂಡವಪುರದ ನಿರಾಣಿಷುಗರ್ಸ್ ನಂಜನಗೂಡಿನ ಬನ್ನಾರಿ, ಶ್ರೀನಿವಾಸಪುರದ ಚಾಮುಂಡೇಶ್ವರಿ ಕಾರ್ಖಾನೆಗಳಿಂದ ಸರಕಾರ ನಿಗದಿ ಮಾಡಿರುವ 50×50 ರೂಪಾಯಿ ಹಣ ಸುಮಾರು ಐದು ಕೋಟಿಯಿಂದ ಆರು ಕೋಟಿಯವರೆಗೆ ಬರಬೇಕಾಗಿದ್ದು ಇದನ್ನು ಕೂಡಲೆ ಕೊಡಿಸಬೇಕು ಎಂದು ಮನವಿ ಮಾಡಿದರು.
ಹಿಂದಿನ ಸರಕಾರ ನಿಗದಿ ಮಾಡಿರುವ ಟನ್ ಒಂದಕ್ಕೆ 150 ರೂಪಾಯಿ ಬಾಕಿಹಣ ಬಿಡುಗಡೆಗೊಳಿಸಬೇಕು, ಕಾಡು ಪ್ರಾಣಿಯಿಂದ ರೈತರು ಮೃತಪಟ್ಟರೆ ಮೃತರ ಕುಟುಂಬಕ್ಕೆ 50ಲಕ್ಷ ಪರಿಹಾರ ಮತ್ತು ಸರಕಾರಿ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿ ಅವರು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ರೈತರೊಡಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ರೈತಘಟಕದ ಅಧ್ಯಕ್ಷೆ ಮಂಜುಳಾ, ಮುಖಂಡರಾದ ಟಿ.ಸಿ.ಬಸವರಾಜು, ಬಿ.ಕೆ.ದಿನೇಶ್, ಕಾಳೇಗೌಡ, ಶಿವಣ್ಣ, ಮಾಯಿಗೌಡ, ತಿಪ್ಪೂರುಲೋಕೇಶ್, ನಿರ್ಮಲಾ, ವೀಣಾ, ವಿನೋದ ಮತ್ತಿತರರು ಪಾಲ್ಗೊಂಡಿದ್ದರು.







