LatestMysoreState

ಅಂತರರಾಜ್ಯ ಶರಣ ಸಂಗಮ… ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತ್ಯುತ್ಸವ

ತಮಿಳುನಾಡಿನ ಈರೋಡ್ ಜಿಲ್ಲೆ, ಹಂದಿಯೂರು ತಾಲ್ಲೂಕಿನ ಬರಗೂರು ಸಮೀಪವಿರುವ ದ್ರೋಣಗಿರಿ ಮಠದಲ್ಲಿ  ಚಾಮರಾಜನಗರ ಜಿಲ್ಲಾ ಬಸವ ಕೇಂದ್ರ ಹಾಗೂ ಹನೂರು ತಾಲ್ಲೂಕು ಬಸವ ಕೇಂದ್ರ ಸಹಯೋಗದೊಂದಿಗೆ ನಡೆದ ಶರಣ ಸಂಗಮ, ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 111ನೇ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರು ದೇಶಾದ್ಯಂತ ಕೋಟ್ಯಂತರ ಬಡವರ ಬದುಕಿನಲ್ಲಿ ಶಿಕ್ಷಣದ ಬೆಳಕನ್ನು ಮೂಡಿಸಲು ಶ್ರಮಿಸಿದ ಮಹಾನ್ ಚೇತನ. ಮಠದ ಜವಾಬ್ದಾರಿ ವಹಿಸಿಕೊಂಡ ಬಳಿಕ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಆಶಯದಿಂದ ಶಾಲಾ-ಕಾಲೇಜುಗಳನ್ನು ಆರಂಭಿಸಿ, ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಿದರು.

ವಿದ್ಯಾರ್ಥಿಗಳು ಸಮಾಜದ ಜವಾಬ್ದಾರಿಯುತ ಸತ್ಪ್ರಜೆಗಳಾಗುವಂತೆ ಅವರ ವ್ಯಕ್ತಿತ್ವ ರೂಪಿಸಿದರು. ಜನರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆಗಳನ್ನು ಸ್ಥಾಪಿಸಿ, ಜನಸಾಮಾನ್ಯರಿಗೆ ಆರೋಗ್ಯ ಸೇವೆ ತಲುಪಿಸುವುದರ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಕಾರಣರಾದರು. ಪ್ರವಚನಗಳು, ಸಾಮೂಹಿಕ ಲಿಂಗದೀಕ್ಷೆಗಳ ಮೂಲಕ ಇಷ್ಟಲಿಂಗ ಪೂಜೆ ಹಾಗೂ ನೈತಿಕತೆಯನ್ನು ಬಿತ್ತಿದರು. ಕೃಷಿ ಪರಿಕರಗಳ ವಸ್ತುಪ್ರದರ್ಶನ ಹಾಗೂ ರೈತಪರ ಕಾರ್ಯಕ್ರಮಗಳ ಮೂಲಕ ರೈತಾಪಿ ವರ್ಗದ ಅಭಿವೃದ್ಧಿಗೂ ಶ್ರಮಿಸಿದರು. ಸುತ್ತೂರು ಮಠದ ಈ ಸೇವಾ ಪರಂಪರೆ ಇಂದಿಗೂ ಅನುಕರಣೀಯ ಎಂದರು.

ಶರಣು ವಿಶ್ವವಚನ ಫೌಂಡೇಷನ್‌ನ ಸಂಸ್ಥಾಪಕ ವಚನ ಕುಮಾರಸ್ವಾಮಿ ಅವರು  ಉಪನ್ಯಾಸ ನೀಡಿ ಮನುಷ್ಯ ತನ್ನ ನಡೆ- ನುಡಿ, ಆಚಾರ-ವಿಚಾರಗಳ ಮೂಲಕವೇ ಸ್ವರ್ಗ- ನರಕವನ್ನು ಕಾಣಬೇಕು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಭಾಷೆ, ಜಾತಿ, ಪ್ರದೇಶದ ಗಡಿಗಳನ್ನು ಮೀರಿದ ಜ್ಞಾನಕೇಂದ್ರವಾಗಿತ್ತು. ಆಫ್ಘಾನಿಸ್ತಾನದಿಂದ ಮರುಳ ಶಂಕರದೇವರು, ಕಾಶ್ಮೀರದ ಮೋಳಿಗೆ ಮಾರಯ್ಯ ದಂಪತಿ, ತಮಿಳುನಾಡಿನ ಮಾದಾರ ಚೆನ್ನಯ್ಯ, ಕೇರಳದ ಧೂಪದ ಗೊಗ್ಗವ್ವೆ, ಮಹಾರಾಷ್ಟ್ರದ ಸಿದ್ಧರಾಮೇಶ್ವರರು ಸೇರಿದಂತೆ 770ಅಮರ ಗಣಂಗಳು ಇಲ್ಲಿ ವಿಚಾರ ವಿನಿಮಯ ನಡೆಸಿದ್ದರು. ಬಸವಕಲ್ಯಾಣದಲ್ಲಿ 1,96,000 ಶರಣರು ಒಂದೆಡೆ ಸೇರಿದ್ದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದರು.

ರಾಜವೈಭವವತ್ಯಜಿಸಿ, ಬಸವಕಲ್ಯಾಣಕ್ಕೆ ಬಂದು ಕೊಡಲಿ ಹಿಡಿದು ಕಟ್ಟಿಗೆ ಕಡಿದು ಕಾಯಕಜೀವಿಯಾದ ಮೋಳಿಗೆ ಮಾರಯ್ಯ ಮತ್ತು ಮಹಾದೇವಿಯವರ ಬದುಕು ಕಾಯಕತತ್ತ್ವಕ್ಕೆ ಹಿಡಿದ ಕನ್ನಡಿಯಾಗಿದೆ. “ಆನೆ ಕುದುರೆ ಭಂಡಾರವಿದ್ದಡೇನು ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು. ಮಲಗುವುದರ್ಧ ಮಂಚ, ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜ. ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದು. ವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ. ಸಾವಿಂಗೆ ಸಂಗಡ ಯಾರೂ ಇಲ್ಲ ಕಾಣ, ನಿಃಕಳಂಕ ಮಲ್ಲಿಕಾರ್ಜುನ ಎಂಬ ವಚನದ ಮೂಲಕ ಭೌತಿಕ ಸುಖ ಶಾಶ್ವತವಲ್ಲ, ಸಾವಿನ ನಂತರ ಉಳಿಯುವುದು ನಮ್ಮ ಸತ್ಕಾರ್ಯಗಳು ಮಾತ್ರ ಎಂದು ಮನವರಿಕೆ ಮಾಡಿಕೊಟ್ಟರು.

ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಹಾಗೂ ಸಂಸ್ಥಾಪಕರಾದ ಎನ್ರಿಚ್ ಮಹದೇವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಬಸವಕೇಂದ್ರ ಯಾವುದೇ ಸದಸ್ಯತ್ವವನ್ನು ಮಾಡದೇ ಕೇವಲ  ಬಸವತತ್ತ್ವವನ್ನು ನಾಡಿನಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಿಗೂ ಪ್ರಚಾರ ಮಾಡಿ ಜನಸಾಮಾನ್ಯರಿಗೆ ತಲುಪಿಸುವ ಮುಖ್ಯ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ. ಬಸವತತ್ತ್ವವು ಸಮಾನತೆ, ಮಾನವೀಯತೆ, ಪ್ರಾಮಾಣಿಕ ದುಡಿಮೆ ಮತ್ತು ದಾಸೋಹವನ್ನು ಪ್ರತಿಪಾದಿಸುವ ಸಾರ್ವತ್ರಿಕ ಜೀವನದರ್ಶನವಾಗಿದೆ. ಶರಣರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು, ಬಸವತತ್ವದ ಪ್ರಸಾರ ಮತ್ತು ಅಂತರರಾಜ್ಯ ಶರಣರ ನಡುವೆ ಪರಸ್ಪರ ಸೌಹಾರ್ದತೆ ಹಾಗೂ ಸಹಕಾರವನ್ನು ಬೆಳೆಸುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ ಎಂದರು.

ಮಾಜಿ ಬಸವ ಬಳಗ ಒಕ್ಕೂಟದ ಅಧ್ಯಕ್ಷ ಮರಿಸ್ವಾಮಿ  ಮಾತನಾಡಿ, ಗ್ರಾಮೀಣ ಹಾಗೂ ಬಡ ಮಕ್ಕಳ ಭವಿಷ್ಯ ರೂಪಿಸಲು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳು ಸ್ಥಾಪಿಸಿದ ವಿದ್ಯಾರ್ಥಿನಿಲಯಗಳು ಹಾಗೂ ಶೈಕ್ಷಣಿಕ ಸೇವೆಗಳು ಎಂದೆಂದಿಗೂ ಸ್ಮರಣೀಯ ಎಂದು ಕೊಂಡಾಡಿದರು. ವಿದ್ಯಾರ್ಥಿ ಪೃಥ್ವಿಕ್ ಶರಣರ ವಿಚಾರಧಾರೆಯ ಬಗ್ಗೆ ನುಡಿನಮನ ಸಲ್ಲಿಸಿದರು.

ಹನೂರು ತಾಲ್ಲೂಕು ಬಸವ ಕೇಂದ್ರದ ಅಧ್ಯಕ್ಷ  ಕಣ್ಣೂರು ವೃಷಬೇಂದ್ರಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಮಿಳುನಾಡಿನ ಕಾಡಿನ ಮಧ್ಯದಲ್ಲಿರುವ ದ್ರೋಣಗಿರಿ ಮಠದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿ ವಚನ ಸಾಹಿತ್ಯವನ್ನು ಆಲಿಸುತ್ತಿರುವುದು ಸಂತೋಷದ ಸಂಗತಿ. ಬಸವತತ್ತ್ವವು ಯಾವೊಂದು ಗಡಿಗೂ ಸೀಮಿತವಲ್ಲದೆ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ ಎಂದರು.

ದ್ರೋಣಗಿರಿ ಮಠದ ಪೂಜ್ಯ ಶ್ರೀ ಅಶೋಕರಾಜೇಂದ್ರ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿ, ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಾಗದೆ ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ, ಸಂಸ್ಕಾರ ಬೆಳೆಸುವ ಹಾಗೂ ಸದ್ವಿಚಾರ ಬಿತ್ತುವ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಶ್ರೀಮಠದಲ್ಲಿ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿ ಶ್ರೀ ಮಠ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮೀಜಿ ಅವರು ದಿವ್ಯಸಾನ್ನಿಧ್ಯ ವಹಿಸಿದ್ದರು. ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಭಕ್ತರು ಅಹೋರಾತ್ರಿ ಶರಣರ ವಚನಗಳು ಮತ್ತು ಭಜನೆಗಳನ್ನು ನಡೆಸಿಕೊಟ್ಟಿದ್ದು, ಮಠದ ವಾತಾವರಣವನ್ನು ಸಂಪೂರ್ಣ ಭಕ್ತಿಮಯವಾಗಿಸಿತು.

ಕಾರ್ಯಕ್ರಮದಲ್ಲಿ ಸಂತೆಮರಳ್ಳಿಯ ಎಂ. ವೇದಮೂರ್ತಿ, ತಿಮ್ಮರಾಜಿಪುರದ  ಪುಟ್ಟಣ್ಣ, ಒಡೆಯರ ಪಾಳ್ಯದ ಸೋಮಶೇಖರ್, ಚಾಮರಾಜನಗರ ತಾಲೂಕು ಬಸವಕ ಕೇಂದ್ರದ ಅಧ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ ಕೊಳ್ಳೇಗಾಲ ತಾಲೂಕು ಬಸವ ಕೇಂದ್ರದ ಅಧ್ಯಕ್ಷ ದನಗೆರೆ ಗುರುಸ್ವಾಮಿ ಕೇಂದ್ರದ ಅಧ್ಯಕ್ಷ ಹಾಗೂ ಹನೂರು ತಾಲೂಕು ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಾತೃಭೂಮಿ ಮೂರ್ತಿ, ಶರಣು ವಿಶ್ವವಚನ ಫೌಂಡೇಷನ್ ಉಪಾಧ್ಯಕ್ಷ ಶಿವಪುರ ಉಮಾಪತಿ, ಸಂಚಾಲಕ ಗುರುಪಾದಸ್ವಾಮಿ, ದತ್ತಿ ದಾಸೋಹಿ ಕಾಗಲವಾಡಿ ಶಿವಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗುಂಡ್ಲುಪೇಟೆ ಬಸವ ಕೇಂದ್ರದ ಗೌರವಾಧ್ಯಕ್ಷ ಶ್ಯಾನಾಡ್ರಳ್ಳಿ ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು

ಬರಗೂರು ಬೆಟ್ಟಗಳ ಸಾಲಿನಲ್ಲಿ ಬರುವ ವಿವಿಧ ಹಳ್ಳಿಗಳ ಪಟಗಾರರು ಹಾಗೂ ಚಾಮರಾಜನಗರ ಜಿಲ್ಲೆಯ ಬಸವತತ್ವದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಶರಣ ಸಂಸ್ಕೃತಿ, ಬಸವತತ್ವ ಹಾಗೂ ಆಧ್ಯಾತ್ಮಿಕ ಪರಂಪರೆಯ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು

admin
the authoradmin

ನಿಮ್ಮದೊಂದು ಉತ್ತರ