ಮೈಸೂರು(ಹೆಚ್.ಪಿ.ನವೀನ್ ಕುಮಾರ್): ಹಾವುಗಳು ಪರಿಸರ ಸಮತೋಲನಕ್ಕೆ ಅಗತ್ಯವಾದ, ಮೂಢನಂಬಿಕೆಗಳಿಂದಾಗಿ ಅನಗತ್ಯ ಭಯಕ್ಕೆ ಒಳಗಾಗಿರುವ ಸರೀಸೃಪಗಳು. ಇವು ಕೃಷಿಕರ ಮಿತ್ರರಾಗಿದ್ದು, ಇಲಿ, ಕೀಟಗಳನ್ನು ತಿಂದು ಬೆಳೆಗಳನ್ನು ರಕ್ಷಿಸುತ್ತವೆ. ಮೂರು ಸಾವಿರಕ್ಕೂ ಹೆಚ್ಚು ಪ್ರಭೇದಗಳಿರುವ ಹಾವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ವಿಷಕಾರಿ. ಸರಿಯಾದ ಜಾಗೃತಿ, ಅರಣ್ಯ ಸಂರಕ್ಷಣೆ ಮತ್ತು ಹಾವು ಕಂಡಾಗ ಸಂಯಮದಿಂದ ವರ್ತಿಸುವುದರಿಂದ ಪ್ರಾಣ ಹಾನಿಯನ್ನು ತಡೆಯಬಹುದು ಎಂದು ನಗರ ಪಾಲಿಕೆ ಮಾಜಿ ಸದಸ್ಯರೂ ಆದ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಮಕ್ಕಳಿಗೆ ಮಾಹಿತಿ ನೀಡಿದರು.

ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ಫೌಂಡೇಷನ್ ನಿಂದ ಮಕ್ಕಳಿಗೆ ಆಯೋಜಿಸಿರುವ ವಸತಿ ಸಹಿತ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಇತ್ತೀಚೆಗೆ ಉರಗ ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾವುಗಳು ಪರಿಸರ ವ್ಯವಸ್ಥೆಯಲ್ಲಿ ಬೇಟೆಗಾರನಾಗಿ, ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಲಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಕೃಷಿಗೆ ಸಹಾಯ ಮಾಡುತ್ತವೆ. ಹಾವುಗಳು ತಂಪು ಮತ್ತು ಕತ್ತಲೆಯಾದ ಸ್ಥಳಗಳನ್ನು ಇಷ್ಟಪಡುತ್ತವೆ. ತೋಟ, ಮನೆಯ ಸುತ್ತಮುತ್ತಲಿನ ಪೊದೆಗಳು, ಕಸದ ರಾಶಿಗಳು ಇವುಗಳ ಆಶ್ರಯ ತಾಣವಾಗಿದೆ. ಹಾವಿನ ವಿಷ ಮನುಷ್ಯನ ನರಮಂಡಲ ಅಥವಾ ರಕ್ತ ಪರಿಚಲನೆ ಮೇಲೆ ಪರಿಣಾಮ ಬೀರುತ್ತವೆ. ಹಾವುಗಳನ್ನು ಕೊಲ್ಲುವುದು ಕಾನೂನುಬಾಹಿರ. ಮನುಷ್ಯರು ವಾಸ ಮಾಡುವ ಪ್ರದೇಶದಲ್ಲಿ ಹಾವುಗಳನ್ನು ನೋಡಿದ ತಕ್ಷಣ ಹಾವು ಸಂರಕ್ಷಣೆ ಮಾಡುವವರಿಂದ ಸಹಾಯ ಪಡೆಯಬೇಕು ಎಂದು ತಿಳಿಸಿದರು.

ನಾವು ವಾಸ ಮಾಡುವ ಸುತ್ತಮುತ್ತಲ ಪರಿಸರವನ್ನು ಸಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಹಾವುಗಳನ್ನು ನಿಯಂತ್ರಿಸಬೇಕು. ಮನೆಯ ಸುತ್ತಮುತ್ತ ಕಸ, ಕಡ್ಡಿ, ಹಳೆಯ ವಸ್ತುಗಳನ್ನು ಸಂಗ್ರಹಿಸಬೇಡಿ. ತೋಟದ ಸುತ್ತಲೂ ಸ್ಲಿಪರಿ ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಸುವುದರಿಂದ ಹಾವುಗಳು ಬರುವುದನ್ನು ತಡೆಯಬಹುದು. ಬೇಸಿಗೆಯಲ್ಲಿ ಹಾವುಗಳು ತಂಪಾದ ಜಾಗ ಹುಡುಕುತ್ತಾ ಬರುತ್ತವೆ, ಆದ್ದರಿಂದ ಎಚ್ಚರವಿರಲಿ. ಹಾವುಗಳು ಮನುಷ್ಯನ ಶತ್ರುಗಳಲ್ಲ, ಅವು ಪರಿಸರದ ಅವಿಭಾಜ್ಯ ಅಂಗ. ಭಯ ಪಡುವ ಬದಲು, ಜಾಗರೂಕತೆಯಿಂದ ಇರುವುದೇ ಸೂಕ್ತ ಎಂದು ಸಲಹೆ ನೀಡಿದರು. ಇದೇ ವೇಳೆ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಇದೇ ಸಂದರ್ಭದಲ್ಲಿ ಆಟೋಟದಲ್ಲಿ ಪಾಲ್ಗೊಂಡು ಗೆದ್ದ ಶಿಬಿರಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಮ್, ಅಕ್ಷರ ಫೌಂಡೇಷನ್ ಅಧ್ಯಕ್ಷ ಡಾ.ಸುನೀಲ್, ಬೇಸಿಗೆ ಶಿಬಿರದ ಮಕ್ಕಳು ಇದ್ದರು.








